ಬನ್ನೂರು: ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸುವ ಮೂಲಕ ನಮ್ಮ ಪರಿಸರ ಉಳಿಸಿ ಸಂರಕ್ಷಿಸೋಣ ಎಂದು ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷ ಮಹೇಂದ್ರ ಸಿಂಗ್ ಕಾಳಪ್ಪ ತಿಳಿಸಿದರು.
ಪಟ್ಟಣದಲ್ಲಿರುವ ಬಿಜಿಎಸ್ ಶಿಕ್ಷಣ ಸಂಸ್ಥೆ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದು ಪ್ಲಾಸ್ಟಿಕ್ ಮುಕ್ತ ಮಾಡೋಣ ಎಂಬ ಶೀರ್ಷಿಕೆಯಡಿ ಪರಿಸರ ದಿನ ಆಚರಣೆ ಮಾಡಲಾಗುತ್ತಿದೆ. ಅದರಂತೆ ಎಲ್ಲರೂ ಪರ್ಯಾಯ ಕ್ರಮ ನಡೆಸುವ ಮೂಲಕ ಪ್ಲಾಸ್ಟಿಕ್ ತ್ಯಜಿಸಿ ಪ್ರಕೃತಿ ಉಳಿಸೋಣ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಇಂದು ಅಭಿವೃದ್ಧಿ ಹೆಸರಿನಲ್ಲಿ ಕಾಡು ನಾಶ ಮಾಡಿ ಕೈಗಾರಿಕೆಗಳು ಬೆಳವಣಿಗೆ ಕಂಡಿದ್ದು, ಅದರಿಂದ ಬರುವಂತ ವಿಷಾನಿಲ ನಮ್ಮ ಪರಿಸರವನ್ನು ಹಾಳು ಮಾಡುತ್ತಿದೆ. ಕಾಡನ್ನು ನಾಶ ಮಾಡುತ್ತಿರುವುದರಿಂದ ಪ್ರಕೃತಿಯ ವಿಕೋಪಕ್ಕೆ ಮಾನವ ಬಲಿಯಾಗುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನದಲ್ಲಿ ತುಂಬಾ ಕಷ್ಟದ ಜೀವನ ನಡೆಸುವಂತ ಪರಿಸ್ಥಿತಿ ದೂರವಿಲ್ಲ ಎಂದು ತಿಳಿಸಿದರು.
ನಾವೆಲ್ಲರೂ ಒಗ್ಗಟ್ಟಾಗಿ ಪರಿಸರ ಉಳಿಸುವಂತ ಕೆಲಸಕ್ಕೆ ಪಣ ತೊಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಕೈ ಜೋಡಿಸೋಣ ಎಂದು ಕರೆ ನೀಡಿದರು. ನಂತರ ಪಟ್ಟಣದ ಪ್ರಮುಖ ಬೀದಿಯಲ್ಲಿ ಜಾಥ ನಡೆಯಿತು. ವಿದ್ಯಾರ್ಥಿಗಳು ವಿವಿಧ ಘೋಷಣೆ ಕೂಗುವ ಮೂಲಕ ಪರಿಸರ ರಕ್ಷಣೆಗೆ ಕರೆ ನೀಡಿದರು.
ಉಪನ್ಯಾಸಕ ಅಶ್ವತ್, ಆನಂದ್, ಕುಮಾರ್, ಪೂರ್ಣಿಮಾ, ಪಲ್ಲವಿ, ರಾಜೇಶ್ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕ ವರ್ಗದವರು ಉಪಸ್ಥಿತರಿದ್ದರು.