ಬೆಂಗಳೂರು: ನ್ಯಾಯಮೂರ್ತಿ ಸ್ಥಾನಕ್ಕೆ ಹೈಕೋರ್ಟ್‌ನ ಕೊಲಿಜಿಯಂ ಶಿಫಾರಸು ಮಾಡುವ ಅಭ್ಯರ್ಥಿಗಳ ಜತೆ ಸುಪ್ರೀಂಕೋರ್ಟ್ ಕೊಲಿಜಿಯಂ ಸಮಾಲೋಚನೆ ನಡೆಸುವ ಪದ್ಧತಿ ಕಡ್ಡಾಯವಾಗಬೇಕು ಎಂದು ಜ.15ರಂದು ನಿವೃತ್ತಿ ಹೊಂದುತ್ತಿರುವ ಹೈಕೋರ್ಟ್ ಹಿರಿಯ ನ್ಯಾ. ಎಚ್.ಜಿ. ರಮೇಶ್ ಅಭಿಪ್ರಾಯಪಟ್ಟಿದ್ದಾರೆ.
ಹೈಕೋರ್ಟ್‌ನ ಕೋರ್ಟ್ ಹಾಲ್ 1ರಲ್ಲಿ ಸೋಮವಾರ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ನ್ಯಾಯಾಂಗದ ಘನತೆ ಎತ್ತಿ ಹಿಡಿಯಲು ಈ ರೀತಿಯ ಸಮಾಲೋಚನಾ ಪದ್ಧತಿ ಕಡ್ಡಾಯಗೊಳಿಸಬೇಕಾಗಿದೆ. ಹಲವು ಹೈಕೋರ್ಟ್‌ಗಳ ಕೊಲಿಜಿಯಂ ಶಿಫಾರಸು ಮಾಡಿದ್ದ ಅಭ್ಯರ್ಥಿಗಳೊಂದಿಗೆ ಸುಪ್ರೀಂಕೋರ್ಟ್ ಕೊಲಿಜಿಯಂ ಸಮಾಲೋಚಿಸಿದೆ.
ಆದರೆ ರಾಜ್ಯ ಹೈಕೋರ್ಟ್ ಕೊಲಿಜಿಯಂ ಶಿಫಾರಸು ಮಾಡಿದವರ ಜೊತೆ ಸಮಾಲೋಚನೆ ನಡೆಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನ್ಯಾಯಾಂಗಕ್ಕೆ ಪ್ರಾಮಾಣಿಕ, ದಕ್ಷ ಹಾಗೂ ಸಮರ್ಥ ವಕೀಲರನ್ನು ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಬೇಕಾಗಿದೆ. ಇದು ಬಲಿಷ್ಠ ನ್ಯಾಯಾಂಗ ಮತ್ತು ಪ್ರಜಾಪ್ರಭುತ್ವವನ್ನು ಬಲಗೊಳಿಸುವುದಲ್ಲದೆ, ಕಾನೂನುಗಳನ್ನು ಪಾಲಿಸುವಂತೆ ಮಾಡುತ್ತದೆ.
ಆದ್ದರಿಂದ ನ್ಯಾಯಮೂರ್ತಿ ಸ್ಥಾನಕ್ಕೆ ಹೈಕೋರ್ಟ್ ಕೊಲಿಜಿಯಂ ಶಿಫಾರಸು ಮಾಡುವ ಅಭ್ಯರ್ಥಿಗಳೊಂದಿಗೆ ಸುಪ್ರೀಂನ ಕೊಲಿಜಿಯಂ ಸಮಾಲೋಚನೆ ನಡೆಸಬೇಕು. ಆಗ ಶಿಫಾರಸುಗೊಂಡವರು ಆ ಸ್ಥಾನಕ್ಕೆ ಸೂಕ್ತರೇ ಎಂದು ತಿಳಿಯುತ್ತದೆ. ಅಲ್ಲದೇ ಸಮಾಲೋಚನೆ ನಡೆದರೆ ತಮ್ಮ ವಿರುದ್ಧದ ಆಕ್ಷೇಪಗಳು, ನಕಾರಾತ್ಮಕ ಟೀಕೆಗಳಿದ್ದರೆ ಅದಕ್ಕೆ ಸ್ಪಷ್ಟೀಕರಣ ನೀಡಲು, ತಿದ್ದಿಕೊಳ್ಳಲು ಸಹಾಯಕವಾಗುತ್ತಿದೆ ಎಂದು ನ್ಯಾ. ರಮೇಶ್ ಪ್ರತಿಪಾದಿಸಿದರು.
ಇದೇ ವೇಳೇ ಮಾತನಾಡಿದ ಮುಖ್ಯ ನ್ಯಾ. ದಿನೇಶ್ ಮಹೇಶ್ವರಿ, 16 ವರ್ಷಗಳ ಕಾಲ ನ್ಯಾಯಾಂಗದಲ್ಲಿ ಸೇವೆ ಸಲ್ಲಿಸಿದ ನ್ಯಾ. ರಮೇಶ್, ನ್ಯಾಯದಾನದಲ್ಲಿ ಅಷ್ಟೇ ಅಲ್ಲ, ಆಡಳಿತಾತ್ಮಕ ವಿಷಯಗಳಲ್ಲೂ ಸಾಕಷ್ಟು ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾ àಸಿದರು. ಈ ವೇಳೆ ಹೈಕೋರ್ಟ್ ನ್ಯಾಯಮೂರ್ತಿಗಳು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ಕೃಷ್ಣಪ್ಪ ಭೀಮಪ್ಪ ನಾಯಕ್ ಮತ್ತಿತರರು ಇದ್ದರು.
ವಕೀಲರ ಸಂಘದಿಂದ ಬೀಳ್ಕೊಡುಗೆ: ನ್ಯಾಯಾಂಗದ ಭವಿಷ್ಯ ಯುವ ವಕೀಲರ ಕೈಯಲ್ಲಿದೆ. ವಿಷಯಗಳನ್ನು ಅರಿತುಕೊಂಡು ಸಾಕಷ್ಟು ಪೂರ್ವ ಸಿದ್ಧತೆ ಮಾಡಿಕೊಂಡು ಕೇಸುಗಳನ್ನು ನಡೆಸಬೇಕು. ಕಠಿಣ ಪರಿಶ್ರಮ ಹಾಗೂ ತಾಳ್ಮೆ ಮುಖ್ಯ ಎಂದು ಯುವ ವಕೀಲರಿಗೆ ಈ ವೇಳೆ ಮಾತನಾಡಿದ ನ್ಯಾ. ರಮೇಶ್ ಕಿವಿಮಾತು ಹೇಳಿದರು.
ಇದೇ ವೇಳೆ ಬೆಂಗಳೂರು ವಕೀಲರ ಸಂಘದಿಂದ ಹೈಕೋರ್ಟ್ ಸಭಾಂಗಣದಲ್ಲಿ ನ್ಯಾ. ರಮೇಶ್ ಅವರಿಗೆ ಬೀಳ್ಕೊಡುಗೆ ನೀಡಲಾಯಿತು. ಮುಖ್ಯ ನ್ಯಾ. ದಿನೇಶ್ ಮಹೇಶ್ವರಿ, ಅಡ್ವೋಕೇಟ್ ಜನರಲ್ ಉದಯ ಹೊಳ್ಳ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ. ರಂಗನಾಥ್ ಮಾತನಾಡಿದರು. ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.