Advertisement

ಕರಾವಳಿಯ ಕೆಲವು ಭಾಗಗಳಲ್ಲಿ ತಂಪೆರೆದ ಮಳೆ: ಉಷ್ಣಾಂಶ ಅಲ್ಪ ಇಳಿಕೆ

12:49 AM Apr 11, 2022 | Team Udayavani |

ಮಂಗಳೂರು/ಉಡುಪಿ: ಕರಾವಳಿಯ ಕೆಲವು ಭಾಗಗಳಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿರುವ ಕಾರಣ ರವಿವಾರ ಉಷ್ಣಾಂಶ ಅಲ್ಪ ಪ್ರಮಾಣದಲ್ಲಿ ಕಡಿಮೆಯಾಗಿತ್ತು.

Advertisement

ಕುಂದಾಪುರ, ಕೋಟೇಶ್ವರ, ಕೊಲ್ಲೂರು, ಜಡ್ಕಲ್‌, ಸೆಳ್ಕೋಡು, ಮುದೂರು, ವಂಡ್ಸೆ, ಚಿತ್ತೂರು, ಇಡೂರು, ಮಾರಣಕಟ್ಟೆ, ಮೊಳಹಳ್ಳಿ, ಸಿದ್ದಾಪುರ, ಹೊಸಂಗಡಿ, ಹಳ್ಳಿಹೊಳೆ, ಅಜ್ರಿ, ಅಂಪಾರು, ಶಂಕರ ನಾರಾಯಣ, ಹಾಲಾಡಿ, ಗೋಳಿಯಂ ಗಡಿ, ಬೆಳ್ವೆ ಮಾಡಮಕ್ಕಿ, ಹೆಂಗವಳ್ಳಿ, ಅಮಾಸೆಬೈಲು, ಉಳ್ಳೂರು -74 ಪರಿಸರದಲ್ಲಿ ಭಾರೀ ಗುಡುಗು ಸಹಿತ ಗಾಳಿ ಮಳೆಯಾಗಿದೆ.

ರವಿವಾರ ದ.ಕ. ಜಿಲ್ಲೆಯಲ್ಲಿ ಕನಿಷ್ಠ 22 ಡಿಗ್ರಿ ಹಾಗೂ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು. ಕನಿಷ್ಠ ಉಷ್ಣಾಂಶವು ವಾಡಿಕೆಗಿಂತ 3 ಡಿಗ್ರಿ ಕಡಿಮೆ ಹಾಗೂ ಗರಿಷ್ಠ ಉಷ್ಣಾಂಶವು ವಾಡಿಕೆಗಿಂತ ಶೇ. 1 ಡಿಗ್ರಿ ಸೆಲ್ಸಿಯಸ್ ಕಡಿಮೆ ಇತ್ತು. ಶನಿವಾರ ಜಿಲ್ಲೆಯಲ್ಲಿ ಕನಿಷ್ಠ 26 ಡಿಗ್ರಿ ಹಾಗೂ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿತ್ತು.

ಶನಿವಾರ ರಾತ್ರಿ ಮತ್ತು ರವಿವಾರ ಬೆಳಗ್ಗಿನ ವೇಳೆ ತಂಪು ಗಾಳಿ ಬೀಸಿದ್ದು, ಇದು ತಾಪಮಾನ ತುಸು ಕಡಿಮೆಯಾಗಲು ಕಾರಣವಾಗಿತ್ತು. ಹಾಗಾಗಿ ರವಿವಾರ ಎಂದಿನಂತೆ ಬಿಸಿಲಿನ ಉರಿ ಮತ್ತು ಬೇಗೆ ಇರಲಿಲ್ಲ. ಒಂದಿಷ್ಟು ತಂಪು ವಾತಾವರಣ ಇದ್ದು, ದೇಹಕ್ಕೆ ಮತ್ತು ಮನಸ್ಸಿಗೆ ಹಿತವನ್ನು ಉಂಟು ಮಾಡಿತ್ತು.

ಪೆರಾಜೆ: ಹಲವು ಮನೆ, ಕೃಷಿಗೆ ಹಾನಿ
ಸುಳ್ಯ: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಗ್ರಾಮವಾದ ಪೆರಾಜೆಯಲ್ಲಿ ಶನಿವಾರ ರಾತ್ರಿ ಬೀಸಿದ ಗಾಳಿ ಸಹಿತ ಮಳೆಯಿಂದಾಗಿ ವ್ಯಾಪಕ ಹಾನಿ ಸಂಭವಿಸಿ ಲಕ್ಷಾಂತರ ರೂ.ಗಳ ನಷ್ಟ ಸಂಭವಿಸಿದೆ.

Advertisement

ಪೆರಾಜೆ ಭಾಗದಲ್ಲಿ ಭಾರೀ ಗಾಳಿ ಬೀಸಿದೆ ಮತ್ತು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ನಿಡ್ಯಮಲೆಯಲ್ಲಿ ಮರ ಬಿದ್ದು ನಾಲ್ಕು ಮನೆಗಳಿಗೆ ಹಾನಿ ಸಂಭವಿಸಿರುವುದಲ್ಲದೆ ಅಪಾರ ಕೃಷಿ ನಾಶವಾಗಿದೆ.

ನಿಡ್ಯಮಲೆಯಲ್ಲಿ ಎನ್‌.ಎಂ. ರಾಮಣ್ಣ, ರಮೇಶ, ಎನ್‌.ಎ. ಗೋಪಾಲ, ಎನ್‌.ಎಸ್‌. ಮನೋಜ್‌ ಅವರ ಮನೆ ಮೇಲೆ ಮರಬಿದ್ದು ಹಾನಿಯಾಗಿದೆ.ವೆಂಕಪ್ಪ ಎನ್‌.ಬಿ., ಶೇಷಪ್ಪ ಎನ್‌.ಎ.,ಎನ್‌.ಡಿ. ರವಿಚಂದ್ರ, ಎನ್‌.ಎ. ದಾಮೋದರ, ಪಾರ್ಶ್ವನಾಥ ಪೆರುಮುಂಡ, ದೇರಪ್ಪ ನಿಡ್ಯಮಲೆ, ಕಾಚೇಲು ಚಂದ್ರಶೇಖರ ಅವರ ಅಡಿಕೆ, ತೆಂಗು, ಬಾಳೆ, ಗೇರುಮರ, ರಬ್ಬರ್‌ ಮರ ಮುರಿದು ಬಿದ್ದು ಲಕ್ಷಾಂತರ ರೂ. ನಷ್ಟ ಸಂಭವಿಸಿದೆ.

ಬೆಳ್ತಂಗಡಿ ಸುತ್ತಮುತ್ತ ಕೃಷಿ ಹಾನಿ, ವಿದ್ಯುತ್‌ ಅಸ್ತವ್ಯಸ್ತ
ಬೆಳ್ತಂಗಡಿ: ಸಂಜೆಯಾಗುತ್ತಲೆ ಸುರಿಯುವ ಮಳೆ- ಗಾಳಿಯ ಪರಿಣಾಮ ಕೃಷಿ ಹಾನಿಯ ಜತೆಗೆ ವಿದ್ಯುತ್‌ ಕಂಬಗಳು ಧರೆಗುರುಳಿ ವಿದ್ಯುತ್‌ ವ್ಯತ್ಯಯವಾಗುತ್ತಿದೆ. ಶನಿವಾರ ಸಂಜೆ ಗಾಳಿಯ ಪರಿಣಾಮ ತಾಲೂಕಿನ ಹಲವೆಡೆ ಕೃಷಿ ಹಾನಿ ಉಂಟಾಗಿದ್ದು, ವಿದ್ಯುತ್‌ ಪೂರೈಕೆ ಅಸ್ತವ್ಯಸ್ತಗೊಂಡಿದೆ.

ರಾಧಾ ಜಿ. ಹೆಬ್ಟಾರ್‌ ಅವರ ತೋಟದಲ್ಲಿ 55 ಅಡಿಕೆ ಮರ, ಯೋಗೀಶ್‌ ಪ್ರಭು-30, ನರಸಿಂಹ ಪ್ರಭು-28, ಗೋಪಾಲಕೃಷ್ಣ ಜೋಶಿ-45 ವಿಶ್ವನಾಥ ಬೆಂಡೆ-44, ಶ್ರೀರಂಗ ಬಂಡೆ 40, ಕಲ್ಮಂಜ ಗ್ರಾಮದ ಕುಡೆಂಚಿಯ ವಿಷ್ಣು ಹೆಬ್ಟಾರ್‌-36, ಗಣೇಶ ಗೋಖಲೆ-12, ಪ್ರಭಾಕರ ಪಟವರ್ಧನ್‌-10, ವಿ.ಜಿ. ಪಟವರ್ಧನ್‌-15 ಅಡಿಕೆ ಮರ ಸೇರಿದಂತೆ ಗ್ರಾಮಗಳ ಅನೇಕ ಅಡಿಕೆ ಮರ, ರಬ್ಬರ್‌ ಗಿಡಗಳು, ಫಲಭರಿತ ಬಾಳೆ ಗಿಡಗಳು ಮುರಿದು ಬಿದ್ದಿವೆ.

ವಿದ್ಯುತ್‌ ಪೂರೈಕೆ ಅಸ್ತವ್ಯಸ್ತ
ಉಜಿರೆ ಮೆಸ್ಕಾಂ ಉಪ ವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್‌ ಪೂರೈಕೆ ಅಸ್ತವ್ಯಸ್ತಗೊಂಡಿದೆ. ಮುಂಡಾಜೆಯ ಕುರುಡ್ಯದಲ್ಲಿ ಹಲಸಿನಮರ ಉರುಳಿ ವಿದ್ಯುತ್‌ ಪರಿವರ್ತಕಕ್ಕೆ ಹಾನಿಯಾಗಿದೆ. ಹಲವೆಡೆ ಎಚ್‌.ಟಿ. ಲೈನ್‌ ತುಂಡಾಗಿ ಬಿದ್ದಿದೆ. ಎಲ್‌.ಟಿ. ಲೈನ್‌ ಮೇಲೆ ಮರಗಳು, ಅಡಿಕೆ ಗಿಡಗಳು ಉರುಳಿವೆ.

ಮೆಸ್ಕಾಂಗೆ 12 ಲಕ್ಷ ರೂ. ನಷ್ಟ
ಉಜಿರೆ ಉಪ ವಿಭಾಗ ವ್ಯಾಪ್ತಿಯಲ್ಲಿ ಶನಿವಾರ 12 ಎಲ್‌.ಟಿ. ಹಾಗೂ 9ಎಚ್‌.ಟಿ. ಕಂಬಗಳು ತುಂಡಾಗಿವೆ. ಕಳೆದ ರವಿವಾರ ಈ ಉಪವಿಭಾಗದಲ್ಲಿ 8 ಎಚ್‌.ಟಿ. ಹಾಗೂ 41 ಎಲ್‌.ಟಿ. ಕಂಬಗಳು ಮುರಿದಿದ್ದವು. ಎರಡು ಬಾರಿಯ ಗಾಳಿಯಿಂದ ಈಗಾಗಲೇ ಇಲಾಖೆಗೆ 12 ಲಕ್ಷ ರೂ.ಗಿಂತ ಅಧಿಕ ನಷ್ಟ ಉಂಟಾಗಿದೆ. ಗ್ರಾಮೀಣ ಭಾಗಗಳ ಹಲವೆಡೆ ನಿರಂತರ ಎರಡು ದಿನಗಳಿಂದ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ.

ಕಕ್ಕಿಂಜೆ ಸಬ್‌ ಸ್ಟೇಷನ್‌ನಿಂದ ಶನಿವಾರ ರಾತ್ರಿ ಮಳೆಯ ಬಳಿಕ ಪರೀûಾರ್ಥ ವಿದ್ಯುತ್‌ ಪೂರೈಸಿದಾಗ ಮುಂಡಾಜೆ ರಾಷ್ಟ್ರೀಯ ಹೆದ್ದಾರಿ ಸಮೀಪ ತಂತಿ ತುಂಡಾಗಿ ಮರವೊಂದಕ್ಕೆ ಬೆಂಕಿ ಹತ್ತಿಕೊಂಡ ಘಟನೆ ನಡೆಯಿತು.

ನೂಜಿಬಾಳ್ತಿಲ ಪರಿಸರದಲ್ಲಿ ಹಾನಿ
ಸುಬ್ರಹ್ಮಣ್ಯ: ಕಡಬ ತಾಲೂಕಿನ ಹಲವೆಡೆ ಶನಿವಾರ ಸಂಜೆ ಗಾಳಿ ಸಹಿತ ಭಾರೀ ಮಳೆಯಾಗಿದ್ದು ನೂಜಿಬಾಳ್ತಿಲ ಪರಿಸರದ ಹಲವೆಡೆ ಹಾನಿ ಸಂಭವಿಸಿದೆ.

ನೂಜಿಬಾಳ್ತಿಲ ಗ್ರಾಮದ ಮಂಜೋಳಿ ಮಲೆ, ಮಿತ್ತಂಡೇಲು, ಪಳಯಮಜಲು ಭಾಗದಲ್ಲಿ ಗಾಳಿಯಿಂದಾಗಿ ವಿದ್ಯುತ್‌ ಕಂಬ, ಮರಗಳು ಧರೆಗುರುಳಿವೆ. ಕೆಲವೆಡೆ ಮರಗಳು ರಸ್ತೆಗೆ ಬಿದ್ದಿವೆ. ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ ಉಂಟಾಯಿತು. ಮೆಸ್ಕಾಂ ಸಿಬಂದಿ ದುರಸ್ತಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಹಲವರ ತೋಟಗಳಲ್ಲಿ ಅಡಿಕೆ ಮರಗಳು ಮುರಿದು ಬಿದ್ದಿವೆ.

Advertisement

Udayavani is now on Telegram. Click here to join our channel and stay updated with the latest news.

Next