Advertisement

ಚಳಿ ಚಳಿ ಮಿಂಚುಳ್ಳಿ

11:47 AM Nov 22, 2017 | |

ಬೆಳಗ್ಗೆಯಾದರೂ ಹಾಸಿಗೆ ಬಿಟ್ಟೇಳದ ಮನಸ್ಸು, ವಾಕಿಂಗ್‌, ಜಿಮ್‌ನತ್ತ ಮೂಡುವ ಮುನಿಸು, ಕೈ ಕಾಲು, ತುಟಿಯ ಮೇಲಿನ ಬಿರುಕು, ಉರಿ ಉರಿ ಅನಿಸುತ್ತ ಸೋರುವ ಮೂಗು, ಒಣಗಿದ ಎಲೆಯಂತೆ ಉದುರುವ ಕೂದಲು, ಕೆಮ್ಮು- ಕಫ‌, ಕಿರಿಕಿರಿ, ಬೇಸರ, ಸುದೀರ್ಘ‌ ರಾತ್ರಿ, ಮೊಟಕಾದ ಹಗಲು, ಸ್ವೆಟರ್‌, ಟೊಪ್ಪಿ, ಕಾಲಿಲ, ವ್ಯಾಸಲಿನ್‌ ಡಬ್ಬಿ… ಚಳಿಗಾಲಕ್ಕೆ ಇನ್ನೂ ಎಷ್ಟೋ ಮುಖಗಳು. ನಮಗಷ್ಟೇ ಅಲ್ಲ, ಸೂರ್ಯನಿಗೂ ಮಂಕು ಬಡಿಸುತ್ತದೆ ಈ ಚಳಿ. ವಾರ್ಡ್‌ರೋಬ್‌ನ ಬಟ್ಟೆಗಳನ್ನೆಲ್ಲ ಮೈ ಮೇಲೆ ಎಳೆದುಕೊಳ್ಳುವಂತೆ ಮಾಡುವ ಈ ಕಾಲವನ್ನು ಎದುರಿಸುವುದು ಹೇಗೆ? ಚಳಿಗಾಲದಲ್ಲಿ ಎಂಥ ಆಹಾರ ಸೇವಿಸಿದರೆ ಉತ್ತಮ? ಚಳಿಗಾಲದ ಜೀವನಕ್ರಮ ಹೇಗಿರಬೇಕು ಎಂಬಿತ್ಯಾದಿ ಸರಳ ಟಿಪ್ಸ್‌ಗಳನ್ನು ಇಲ್ಲಿ ನಿಮಗಾಗಿ ನೀಡಿದ್ದೇವೆ…

Advertisement


ಚಳಿಗಾಲದ ವೈರಿಗಳು

1. ಅಸ್ತಮಾ
ವಾತಾವರಣದಲ್ಲಿ ಚಳಿ ಹೆಚ್ಚುತ್ತಿದ್ದಂತೆ ಅಸ್ತಮಾ ತೊಂದರೆಯೂ ಬಿಗಡಾಯಿಸುತ್ತದೆ. ನಿಮಗೆ ಅಸ್ತಮಾ ಅಥವಾ ಉಸಿರಾಟ ಸಂಬಂಧೀ ತೊಂದರೆಗಳಿದ್ದರೆ ಆದಷ್ಟು ಬೆಚ್ಚಗೆ ಇರಿ. ಮೂಗು ಮತ್ತು ಬಾಯಿಯನ್ನು ಸ್ಕಾಫ್ìನಿಂದ ಕವರ್‌ ಮಾಡಿ. ಬಾಳೆಹಣ್ಣು, ಮಜ್ಜಿಗೆ, ಐಸ್‌ ಬೆರೆಸಿದ ಜ್ಯೂಸ್‌ನಂಥ ಪದಾರ್ಥಗಳನ್ನು ಸೇವಿಸದೇ ಇರುವುದು ಉತ್ತಮ. 

2. ಫ್ಲೂ ವೈರಸ್‌ 
ಚಳಿಗಾಲದ ಒಣಹವೆಯಲ್ಲಿ ವೈರಸ್‌ಗಳು ಬೇಗ ಹರಡುತ್ತವೆ. ಅದರಲ್ಲೂ ಫ‌ೂÉ ವೈರಸ್‌ ಹರಡುವಿಕೆ ಚಳಿಗಾಲದಲ್ಲಿಯೇ ಹೆಚ್ಚಾಗಿದ್ದು, ಜ್ವರ ಕಂಡುಬಂದಲ್ಲಿ ನಿರ್ಲಕ್ಷಿಸುವುದು ಸರಿಯಲ್ಲ. 

3. ತೂಕದಲ್ಲಿ ಹೆಚ್ಚಳ
ಚಳಿಗಾಲದಲ್ಲಿ ಹಾಸಿಗೆ ಬಿಟ್ಟು ಏಳುವುದೇ ಸಾಹಸದ ಕೆಲಸ. ಜೊತೆಗೆ ಚಳಿಚಳಿಯೆಂದು ಬಜ್ಜಿ, ಬೋಂಡಾದಂಥ ಕುರುಕಲುಗಳನ್ನು ತಿಂದರಂತೂ ಮುಗಿದೇ ಹೋಯಿತು. ತೂಕವನ್ನು ಇಳಿಸುವ ನಿಮ್ಮ ಕನಸು ಈಡೇರುವುದೇ ಇಲ್ಲ. ಚಳಿಗಾಲದಲ್ಲಿ ವ್ಯಾಯಾಮವನ್ನು ಪೂರ್ತಿಯಾಗಿ ಕೈ ಬಿಡುವುದಕ್ಕಿಂತ ಮನೆಯೊಳಗಿದ್ದುಕೊಂಡೇ ಯೋಗಾಸನ ಮಾಡುವುದು ಉತ್ತಮ.  

4. ಮಾನಸಿಕ ಒತ್ತಡ
ಹೊರಗಿನ ವಾತಾವರಣ ನಮ್ಮ ಮನಸ್ಸಿನ ಮೇಲೆ ಪರಿಣಾಮ ಬೀರುವುದು ನಿಮಗೆ ಗೊತ್ತೇ ಇದೆ. ಚಳಿಗಾಲದ “ವಿಂಟರ್‌ ಬ್ಲೂ’ನಿಂದಾಗಿ ಮನಸ್ಸು ಮುದುಡಿ ಕೂರುತ್ತದೆ. ಕೆಲಸದಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಅದನ್ನು ಸೀಸನಲ್‌ ಅಫೆಕ್ಟಿವ್‌ ಡಿಸಾರ್ಡರ್‌ (ಸ್ಯಾಡ್‌) ಎಂದೂ ಕರೆಯುತ್ತಾರೆ. ಸೂರ್ಯನ ಕಿರಣಗಳಲ್ಲಿ ತೀಕ್ಷ್ಣತೆ ಇರದಿರುವುದು ಕೂಡ ಇದಕ್ಕೆ ಕಾರಣ. ಚಳಿ ಎಂದು ಮನೆಯೊಳಗೇ ಬೆಚ್ಚಗೆ ಕುಳಿತರೆ ಖನ್ನತೆ ಇನ್ನಷ್ಟು ಜಾಸ್ತಿಯಾಗುತ್ತದೆ. ಹಾಗಾಗಿ ಬಿಸಿಲು ಚುರುಕಾದ ನಂತರ ಮನೆಯಿಂದ ಹೊರಗೆ ಓಡಾಡಿ ಬನ್ನಿ. 

Advertisement

5. ಹೃದಯಾಘಾತ
ನಿಮಗೆ ಹೃದಯ ಸಂಬಂಧಿ ಕಾಯಿಲೆಗಳಿದ್ದರೆ ಚಳಿಗಾಲದಲ್ಲಿ ಆದಷ್ಟು ಜಾಗ್ರತೆ ವಹಿಸುವುದು ಉತ್ತಮ. ಜಾಸ್ತಿ ಚಳಿಯಿದ್ದ ದಿನಗಳಲ್ಲಿ ಮನೆಯಿಂದ ಹೊರಗೆ ಹೋಗುವಾಗ ಸ್ವೆಟರ್‌, ಟೊಪ್ಪಿ ಧರಿಸಿ. ವಯಸ್ಸಾದವರಲ್ಲಿ ರಕ್ತದೊತ್ತಡ ಹೆಚ್ಚುವ ಸಂಭವವೂ ಚಳಿಗಾಲದಲ್ಲಿ ಹೆಚ್ಚಿರುತ್ತದೆ. 

ನೀರು ಕುಡಿದವಳೇ ಜಾಣೆ!
ಚಳಿಗಾಲದಲ್ಲಿ ನೀರು ಕುಡಿಯಬೇಕು ಅಂತ ಅನ್ನಿಸುವುದೇ ಇಲ್ಲ ಎನ್ನುತ್ತಾರೆ ಹಲವರು. ಏಕೆಂದರೆ, ನಾವು ಚಳಿಗಾಲದಲ್ಲಿ ಜಾಸ್ತಿ ಬೆವರುವುದಿಲ್ಲ, ನಮಗೆ ಸೆಖೆಯಾಗುವುದಿಲ್ಲ. ಹಾಗೆಂದ ಮಾತ್ರಕ್ಕೆ ನಮ್ಮ ದೇಹಕ್ಕೆ ನೀರು ಬೇಡ ಎಂದರ್ಥವಲ್ಲ. ಚಳಿಗಾಲದಲ್ಲಿ ದೇಹಕ್ಕೆ ಜಾಸ್ತಿ ನೀರಿನ ಅವಶ್ಯಕತೆ ಇದೆ. ವಾತಾವರಣದಲ್ಲಿ ಚಳಿ ಇರುವುದರಿಂದ ನೀರು ಕುಡಿಯಲು ನಮಗೆ ಮನಸ್ಸಾಗುವುದಿಲ್ಲ. ಆದರೆ, ಚಳಿಗಾಲದಲ್ಲಿ ದೇಹದ ನೀರಿನಾಂಶ ಶ್ವಾಸದ ಮೂಲಕವೇ ಹೊರ ಹೋಗುತ್ತದೆ. ಅಷ್ಟೇ ಅಲ್ಲದೆ, ಡಿಹೈಡ್ರೇಶನ್‌ ಆಗುವ ಸಾಧ್ಯತೆಗಳು ಹೆಚ್ಚಿರುವುದರಿಂದ ಜಾಸ್ತಿ ನೀರು ಕುಡಿಯುವುದು ಅಗತ್ಯ. ಚಳಿಗಾಲದಲ್ಲಿ ಚರ್ಮ ಒಣಗಿ ಸಿಪ್ಪೆ ಸುಲಿದು ಬರುತ್ತದೆ. ನಮ್ಮ ದೇಹಕ್ಕೆ ನೀರು ಬೇಕು ಎಂಬುದರ ಲಕ್ಷಣವದು. ಚಳಿ ಇರುವ ಕಾರಣದಿಂದ ತಣ್ಣೀರನ್ನು ಕುಡಿಯುವುದು ಕಷ್ಟವಾದರೆ, ನೀರನ್ನು ಬಿಸಿ ಮಾಡಿ ಕುಡಿಯಬಹುದು. ಬೆಳಗ್ಗೆ ಎದ್ದ ಕೂಡಲೆ ಬಿಸಿ ಬಿಸಿ ನೀರು ಕುಡಿದರೆ ದೇಹ ಕಲ್ಮಶಗಳಿಂದ ಮುಕ್ತವಾಗುತ್ತದೆ. ದೇಹಕ್ಕೆ ದಿನಕ್ಕೆ 6-8 ಲೋಟ ನೀರಿನ ಅಗತ್ಯವಿದೆ. ಬಿಸಿ ಸೂಪ್‌, ಜೇನು ಮತ್ತು ಲಿಂಬೆರಸ ಸೇರಿಸಿದ ಬಿಸಿ ನೀರು, ಗ್ರೀನ್‌ ಟೀ ಹಾಗೂ ನೀರಿನ ಅಂಶ ಜಾಸ್ತಿಯಿರುವ ಹಣ್ಣು- ತರಕಾರಿಗಳನ್ನು ಸೇವಿಸಿಯೂ ನೀರಿನಂಶ ಪಡೆಯಬಹುದು.

ದೇಹಕ್ಕೆ ಎಣ್ಣೆ ಕುಡಿಸಿ…
ಚಳಿಗಾಲಕ್ಕೂ ಮೊದಲು ಬರುವ ದೀಪಾವಳಿ ಹಬ್ಬದಲ್ಲಿ ಎಣ್ಣೆ ಸ್ನಾನ (ಅಭ್ಯಂಜನ) ಮಾಡುವ ಸಂಪ್ರದಾಯವಿದೆ. ನಮ್ಮ ಹಿರಿಯರು ಚಳಿಗಾಲಕ್ಕೆ ಸಜ್ಜಾಗುತ್ತಿದ್ದ ರೀತಿ ಅದು. ಏಕೆಂದರೆ, ಚಳಿಗಾಲದ ಕುಳಿರ್ಗಾಳಿ ತನ್ನೆಲ್ಲ ಪರಿಣಾಮವನ್ನು ಮೊದಲು ಬೀರುವುದೇ ಚರ್ಮದ ಮೇಲೆ. ಕಾಲು- ಕೈ, ತುಟಿ ಒಡೆಯುವುದು, ಮೈ ಉಜ್ಜಿದಾಗ ಚರ್ಮ ಸುಲಿಯುವುದು, ತಲೆಹೊಟ್ಟು ಇತ್ಯಾದಿ ಸಮಸ್ಯೆಗಳು ಚಳಿಗಾಲದಲ್ಲೇ ನಮ್ಮನ್ನು ಹೆಚ್ಚು ಬಾಧಿಸುತ್ತವೆ. ಹಾಗಾಗಿ ವಾರಕ್ಕೊಮ್ಮೆಯಾದರೂ ಮೈಗೆ ಎಣ್ಣೆ ಸವರಿ ಸ್ನಾನ ಮಾಡುವುದು ಚರ್ಮದ ಆರೋಗ್ಯಕ್ಕೆ ಉತ್ತಮ. ಪ್ರತಿದಿನ ಮಲಗುವಾಗ ತುಟಿಗೆ ಶುದ್ಧ ಕೊಬ್ಬರಿ ಎಣ್ಣೆ, ಬೆಣ್ಣೆ ಅಥವಾ ಕೆನೆ ಸವರಿದರೆ ತುಟಿ ಮೃದುವಾಗುತ್ತದೆ. ರಾತ್ರಿ ಮಲಗುವಾಗ ಮುಖಕ್ಕೆ ಶುದ್ಧ ಕೊಬ್ಬರಿ ಎಣ್ಣೆ ಹಚ್ಚಿ, ಬೆಳಗ್ಗೆ ತೊಳೆದರೆ ಚರ್ಮದ ಕಾಂತಿ ಹೆಚ್ಚುತ್ತದೆ.  

ಕಫ‌ ಶರೀರದವರೇ ಎಚ್ಚರ!
ಆಯುರ್ವೇದದಲ್ಲಿ ಕಾಲಗಳನ್ನು ವಾತ, ಪಿತ್ತ, ಕಫ‌ ಎಂದು ಕೂಡ ಗುರುತಿಸಲಾಗುತ್ತದೆ. ಚಳಿಗಾಲದಲ್ಲಿ ಶರೀರದಲ್ಲಿ ಕಫ‌ ಜಾಸ್ತಿ ಉತ್ಪತ್ತಿಯಾಗುತ್ತದೆ. ಕಫ‌ ಶರೀರದವರು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ಹೆಚ್ಚೇ ಕಾಳಜಿ ವಹಿಸಬೇಕಾಗುತ್ತದೆ. ಬೆಳಗ್ಗೆ ಬಿಸಿ ಬಿಸಿ ನೀರಿಗೆ ಅರ್ಧ ಚಮಚ ಅರಿಶಿನ ಪುಡಿ ಸೇರಿಸಿ ಕುಡಿಯುವುದು ಉತ್ತಮ. ಅತಿ ಮಸಾಲ ಮತ್ತು ಅತಿಯಾದ ಸಿಹಿ ಪದಾರ್ಥಗಳು ಕಫ‌ ಉತ್ಪತ್ತಿಗೆ ಕಾರಣವಾಗುತ್ತವೆ. ಹಾಗಾಗಿ ಅಂಥ ಆಹಾರಗಳಿಂದ ದೂರವಿರಿ. ಬೆಳಗ್ಗೆ ತಿಂಡಿಯ ನಂತರ ಶುಂಠಿ, ಲವಂಗ, ಚಕ್ಕೆ ಸೇರಿಸಿ ಮಾಡಿದ ಕಷಾಯ ಕುಡಿಯುವುದು ಕಫ‌ ನಿವಾರಣೆಗೆ ಸಹಕಾರಿ. ಗೋಧಿ, ಬ್ರೆಡ್‌ ಮತ್ತು ಹಾಲಿನ ಉತ್ಪನ್ನಗಳ ಅತಿಯಾದ ಸೇವನೆಯಿಂದ ಕಫ‌ ಹೆಚ್ಚುತ್ತದೆ. 


ಕೂದಲಿಗೂ ಚಳಿ ಚಳಿ

1. ಚಳಿಗಾಲದಲ್ಲಿ ಕೂದಲು ಅಷ್ಟು ಸುಲಭಕ್ಕೆ ಒಣಗುವುದಿಲ್ಲ. ಹಾಗಾಗಿ, ನಾವು ಹೇರ್‌ ಡ್ರೈಯರ್‌ನ ಮೊರೆ ಹೋಗುತ್ತೇವೆ. ವಾಸ್ತವದಲ್ಲಿ, ಹೇರ್‌ ಡ್ರೈಯರ್‌ ನಮ್ಮ ಕೂದಲನ್ನು ಇನ್ನಷ್ಟು ಡ್ರೈ ಮತ್ತು ಡಲ್‌ ಮಾಡುತ್ತದೆ. ಕೂದಲನ್ನು ಸ್ವಾಭಾವಿಕವಾಗಿ ಒಣಗಲು ಬಿಟ್ಟರೆ ಒಳ್ಳೆಯದು. ಚಳಿಗಾಲದಲ್ಲಿ ಫ್ರೀ ಹೇರ್‌ ಸ್ಟೈಲ್‌ ಅಷ್ಟೊಂದು ಒಳ್ಳೆಯದಲ್ಲ. 

2. ಚಳಿಗಾಲದಲ್ಲಿ ಕೊಬ್ಬರಿ ಎಣ್ಣೆ ಅಥವಾ ಆಲಿವ್‌ ಎಣ್ಣೆಯನ್ನು ಬಿಸಿ ಮಾಡಿ ಕೂದಲಿನ ಬುಡಕ್ಕೆ ಹಚ್ಚಿ ಸ್ನಾನ ಮಾಡಿ.

3. ಆಲಿವ್‌ ಎಣ್ಣೆ ಜೊತೆಗೆ ಬಾಳೆಹಣ್ಣಿನ ಪೇಸ್ಟ್‌ ಸೇರಿಸಿ ಕೂದಲಿನ ಬುಡಕ್ಕೆ ಹಚ್ಚಿ, ಅರ್ಧ ಗಂಟೆ ಬಿಟ್ಟು ಸ್ನಾನ ಮಾಡಿ. ಬಾಳೆಹಣ್ಣು ಕೂದಲಿಗೆ ಅಗತ್ಯವಿರುವ ಮಾಯಿಶ್ಚರೈಸರ್‌ ಒದಗಿಸುತ್ತದೆ. 

4. ಮೊಟ್ಟೆಯ ಒಳಗಿನ ದ್ರವವನ್ನು ಕೂದಲಿನ ಬುಡಕ್ಕೆ ಹಚ್ಚಿ 1 ಗಂಟೆ ಬಿಟ್ಟು ಸ್ನಾನ ಮಾಡಿ.

5. ಹೊರಗೆ ಹೋಗುವಾಗ ಸ್ಕಾಫ್ì, ಹ್ಯಾಟ್‌ ಅಥವಾ ಕ್ಯಾಪ್‌ ಧರಿಸಿ ಚಳಿ- ಗಾಳಿಯಿಂದ ಕೂದಲಿನ ರಕ್ಷಣೆ ಮಾಡಿ.

6. ಚಳಿಗಾಲದಲ್ಲಿ ಕೂದಲನ್ನು ಆಗಾಗ ಟ್ರಿಮ್‌ ಮಾಡುತ್ತಿದ್ದರೆ ಕೂದಲು ಸೀಳುವುದನ್ನು (ಸ್ಪ್ಲಿಟ್‌ ಎಂಡ್‌) ತಡೆಯಬಹುದು. 

7. ಚಳಿಗಾಲದಲ್ಲಿ ಹೇರ್‌ಕಲರ್‌, ಹೆನ್ನಾ ಬಳಸಬೇಡಿ. ಅವು ಕೂದಲನ್ನು ಇನ್ನಷ್ಟು ಡ್ರೈ ಮಾಡುತ್ತವೆ. 

8. ಚಳಿ ಎಂದು ಅತಿಯಾದ ಬಿಸಿ ನೀರಿನಲ್ಲಿ ತಲೆಗೆ ಸ್ನಾನ ಮಾಡಬೇಡಿ. ಉಗುರು ಬೆಚ್ಚಗಿನ ನೀರು ಬಳಸಿ

9. ಅತಿಯಾದ ಆಲ್ಕೋಹಾಲ್‌ ಅಂಶವಿರುವ ಶ್ಯಾಂಪೂ ಬಳಸಬೇಡಿ. ಕೂದಲಿಗೆ ಎಣ್ಣೆ ಸವರಿ ನಂತರ ಸ್ನಾನ ಮಾಡುವುದು ಉತ್ತಮ.

10. ಸೂರ್ಯನ ಕಿರಣಗಳಿಂದ ಕೂದಲಿನ ರಕ್ಷಣೆಗೆ ಹೇರ್‌ ಸ್ಪ್ರೆà ಬಳಸಬಹುದು. 


ಹೊಟ್ಟೆಗೆ ಏನ್‌ ತಿಂದ್ರೆ ಒಳ್ಳೇದು?

– ಚಳಿಗಾಲದಲ್ಲಿ ಬಿಸಿ- ಬಿಸಿ ಆಹಾರ ಸೇವಿಸುವುದು, ಶುಂಠಿ, ಚಕ್ಕೆಯಂಥ ಮಸಾಲೆ ಪದಾರ್ಥಗಳನ್ನು ಆಹಾರದಲ್ಲಿ ಸೇರಿಸುವುದು, ಶುಂಠಿ ಟೀ ಕುಡಿಯುವುದು ಆರೋಗ್ಯಕಾರಿ.

– ಅನೇಕರು ಕಿತ್ತಳೆ ತಿಂದರೆ, ಶೀತ ಆಗುತ್ತದೆ ಎಂದುಕೊಂಡಿದ್ದಾರೆ. ಆದರೆ, ಕಿತ್ತಳೆಯಲ್ಲಿರುವ ವಿಟಮಿನ್‌ “ಸಿ’ ಕೆಮ್ಮು, ಶೀತದ ವಿರುದ್ಧ ಹೋರಾಡುತ್ತದೆ. 

– ನೆಲಗಡಲೆಯನ್ನು ಹುರಿದು, ಬೇಯಿಸಿ ಮತ್ತು ಹಸಿಯಾಗಿಯೂ ತಿನ್ನಬಹುದು. ಇದು ಅಗತ್ಯ ಪೋಷಕಾಂಶಗಳನ್ನು ಒದಗಿಸಿ, ದೇಹವನ್ನು ಬೆಚ್ಚಗಿಡುತ್ತದೆ.

– ಸೀಬೆಕಾಯಿ ಹೊಟ್ಟೆಯ ಹಾಗೂ ಮೂಳೆಗಳ ಆರೋಗ್ಯಕ್ಕೆ ಒಳ್ಳೆಯದು. ಚಳಿಗಾಲದಲ್ಲಿ ಹೆಚ್ಚಾಗಿ ಕಾಡುವ ಸಂಧಿ ನೋವು ತಡೆಯುವಲ್ಲಿಯೂ ಸೀಬೆಕಾಯಿ ಸಹಕಾರಿ.

– ಕ್ಯಾರೆಟ್‌ನಲ್ಲಿ ವಿಟಮಿನ್‌ ಬಿ, ಸಿ, ಡಿ ಮತ್ತು ಕೆ ಅಂಶವಿರುವುದರಿಂದ ಚಳಿಗಾಲದಲ್ಲಿ ಇದನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಲು ಮರೆಯಬೇಡಿ.

– ಕಿವಿಹಣ್ಣಿನಲ್ಲಿ ವಿಟಮಿನ್‌ “ಎ’, “ಸಿ’ ಇದೆ. ಕಿವಿ ಹಣ್ಣನ್ನು ಕತ್ತರಿಸಿ ಚಿಟಿಕೆಯಷ್ಟು ಉಪ್ಪು ಹಾಕಿ ತಿಂದರೆ ರುಚಿಯೂ ಸಿಗುತ್ತೆ, ಆರೋಗ್ಯಕ್ಕೂ ಒಳ್ಳೆಯದು.

– ಜ್ವರ ಬಂದು ಸುಸ್ತಾದಾಗ ಚಿಕನ್‌ ಸೂಪ್‌ ಕುಡಿದರೆ, ಸುಸ್ತು ತಕ್ಷಣ ಮಾಯವಾಗುತ್ತದೆ. ಚಳಿಗಾಲದಲ್ಲಿ ಚಿಕನ್‌ ಸೂಪ್‌ ಅನ್ನು ವಾರದಲ್ಲಿ ಎರಡು ಬಾರಿಯಾದರೂ ಸೇವಿಸಿದರೆ ಒಳ್ಳೆಯದು.

– ಹೃದಯದ ಆರೋಗ್ಯಕ್ಕೆ ಕೋಕಾ ತಂಬಾ ಒಳ್ಳೆಯದು. ಊಟದ ನಂತರ ಕೋಕಾ ಕುಡಿಯುವುದರಿಂದ ಜೀರ್ಣಕ್ರಿಯೆ ಸರಾಗವಾಗುತ್ತದೆ ಹಾಗೂ ಆರೋಗ್ಯ ವೃದ್ಧಿಸುತ್ತದೆ. 

– ಚಳಿಗಾಲದಲ್ಲಿ ಕುರುಕಲು ತಿಂಡಿಗಳನ್ನು ಬಿಸಿ- ಬಿಸಿಯಾಗಿ ತಿನ್ನಲು ಇಷ್ಟಪಡುತ್ತೇವೆ. ಇವುಗಳನ್ನು ತಿಂದರೆ ದೇಹದ ತೂಕ ಹೆಚ್ಚುತ್ತದೆ. ಅದರ ಬದಲು ಕರಿದ ಬೀಜಗಳನ್ನು ತಿಂದರೆ ಬಾಯಿಗೂ ರುಚಿ, ಆರೋಗ್ಯಕ್ಕೂ ಒಳ್ಳೆಯದು.

– ಚಳಿಗಾಲದಲ್ಲಿ ಸೊಪ್ಪನ್ನು ಆಹಾರಕ್ರಮದಲ್ಲಿ ಹೆಚ್ಚಾಗಿ ಸೇರಿಸಬೇಕು. ಪಾಲಕ್‌ ಸೊಪ್ಪು ತಿನ್ನುವುದರಿಂದ ದೇಹಕ್ಕೆ ಅಗತ್ಯ ಪೋಷಕಾಂಶಗಳು ದೊರೆಯುತ್ತವೆ.


ಬೆಚ್ಚಗಿಡುವ ಬಿಸಿಬಿಸಿ ಸೂಪ್‌

1. ಬಸಳೆ ಸೂಪ್‌
ಬೇಕಾಗುವ ಸಾಮಗ್ರಿ: ಹೆಚ್ಚಿಟ್ಟ ಬಸಳೆ ಎಲೆಗಳು 1 ಬೌಲ್‌, ಜೀರಿಗೆ 1 ಚಮಚ, ತುಪ್ಪ 1 ಚಮಚ, ಅರ್ಧ ಹೋಳು ಜಾಯಿಕಾಯಿ, ಮುಕ್ಕಾಲು ಕಪ್‌ ತೆಂಗಿನಕಾಯಿ ತಿರುಳು ಅಥವಾ ಸೊಯಾಬೀನ್‌, 3 ಲೋಟ ನೀರು (ಸೋಯಾ ಬಳಸಿದರೆ 2 ಲೋಟ ಸಾಕು), ಉಪ್ಪು ಮತ್ತು ಕಾಳುಮೆಣಸಿನ ಪುಡಿ ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಪಾತ್ರೆಯಲ್ಲಿ ತುಪ್ಪ ಹಾಕಿ, ಅದರಲ್ಲಿ ಜೀರಿಗೆಯನ್ನು ಹುರಿಯಿರಿ. ಅದಕ್ಕೆ ಬಸಳೆ ಎಲೆ ಹಾಗೂ ನೀರು ಸೇರಿಸಿ ಚೆನ್ನಾಗಿ ಕುದಿಸಿ. ನಂತರ ಅದಕ್ಕೆ ಕಾಯಿ ತಿರುಳು ಹಾಗೂ ಜಾಯಿಕಾಯಿ ಸೇರಿಸಿ ಮೂರು ನಿಮಿಷ ಕುದಿಸಿ. ಬಸಳೆ ಎಸಳುಗಳು ದೊಡ್ಡದಾಗಿದ್ದರೆ ಅದನ್ನು ಸೋಸಿ, ಅದಕ್ಕೆ ಉಪ್ಪು ಮತ್ತು ಕಾಳುಮೆಣಸು ಸೇರಿಸಿ. ಆರೋಗ್ಯಕರ ಬಸಳೆ ಸೂಪ್‌ ರೆಡಿ. 

2. ತರಕಾರಿ ಸೂಪ್‌
ಬೇಕಾಗುವ ಸಾಮಗ್ರಿ: 1/2 ಕಪ್‌ ಕತ್ತರಿಸಿದ ಕ್ಯಾರೆಟ್‌, 1/4 ಕಪ್‌ ಬೀ®Õ…, 1/2 ಕಪ್‌ ಬಟಾಣಿ, 2 ಟೊಮೆಟೊ, 1 ಚಮಚ ಬೆಳ್ಳುಳ್ಳಿ ಪೇಸ್ಟ್, 1 ಚಮಚ ಶುಂಠಿ ಪೇಸ್ಟ್, ಸ್ವಲ್ಪ ಕೊತ್ತಂಬರಿ ಸೊಪ್ಪು, 3 ಚಮಚ ಬೆಣ್ಣೆ, 3 ಲೋಟ ನೀರು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಪ್ರಶರ್‌ ಕುಕ್ಕರ್‌ನಲ್ಲಿ ಬೆಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಶುಠಿ ಮತ್ತು ಬೆಳ್ಳುಳ್ಳಿ ಪೇÓr… ಸೇರಿಸಿ. ನಂತರ ಉಳಿದ ತರಕಾರಿಗಳನ್ನು ಹಾಕಿ ಸ್ವಲ್ಪ ಹೊತ್ತು ಬಿಸಿ ಮಾಡಿ. ಈ ಮಿಶ್ರಣಕ್ಕೆ ಉಪ್ಪು, ನೀರು ಸೇರಿಸಿ ಕುಕ್ಕರ್‌ನ ಮುಚ್ಚಳ ಹಾಕಿ 5-6 ನಿಮಿಷ ಬೇಯಿಸಿ. ನಂತರ ಅದಕ್ಕೆ ಕೊತ್ತಂಬರಿ ಸೊಪ್ಪು ಸೇರಿಸಿ 2-3 ನಿಮಿಷ ಬೇಯಿಸಬೇಕು. ಈಗ ಸ್ವಲ್ಪ ತುಪ್ಪ ಸೇರಿಸಿದರೆ ರುಚಿರುಚಿಯಾದ, ಆರೋಗ್ಯಕರ ಸೂಪ್‌ ಸವಿಯಲು ಸಿದ್ಧವಾಗುತ್ತದೆ. 

3. ಈರುಳ್ಳಿ- ಬೆಳ್ಳುಳ್ಳಿ ಸೂಪ್‌
ಬೇಕಾಗುವ ಸಾಮಗ್ರಿ: 2 ಈರುಳ್ಳಿ, 10 ಬೆಳ್ಳುಳ್ಳಿ ಎಸಳು, ಒಂದು ಇಂಚಿನಷ್ಟು ಉದ್ದದ ಶುಂಠಿ,  2 ಚಮಚ ತುಪ್ಪ,  1/2 ಚಮಚ ಅರಿಶಿನ ಪುಡಿ, 1 ಚಮಚ ಸಕ್ಕರೆ, 1 ಚಮಚ ಕಾಳು ಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 10 ಚಮಚ ಹಾಲು.
ಮಾಡುವ ವಿಧಾನ: ಈರುಳ್ಳಿಯನ್ನು ಉದ್ದುದ್ದವಾಗಿ ಕತ್ತರಿಸಿ. ಬಾಣಲೆಯಲ್ಲಿ ತುಪ್ಪ ಹಾಕಿ ಅದರಲ್ಲಿ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ ತುಂಡು ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ನಂತರ ಈ ಮಿಶ್ರಣದ ಜೊತೆ ಕಾಲು ಚಮಚ ಅರಿಶಿಣ ಪುಡಿ ಹಾಕಿ ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ನಂತರ ಅದನ್ನು ಪಾತ್ರೆಗೆ ಹಾಕಿ ಸೂಪ್‌ ಹದಕ್ಕೆ ಬರುವಷ್ಟು ನೀರು ಸೇರಿಸಿ ಕುದಿಸಿ. ಈರುಳ್ಳಿ ಮಿಶ್ರಣ ಕುದಿಯುತ್ತಿರುವಾಗ 10 ಚಮಚ ಹಾಲು, ಉಪ್ಪು, ಸಕ್ಕರೆ, ಕಾಳುಮೆಣಸಿನ ಪುಡಿ ಬೆರೆಸಿ 2-3 ನಿಮಿಷ ಕುದಿಸಬೇಕು. ಈ ಸೂಪ್‌ ಬಿಸಿಬಿಸಿಯಾಗಿರುವಾಗಲೇ ಕುಡಿದರೆ ರುಚಿಯಷ್ಟೇ ಅಲ್ಲದೆ ನೆಗಡಿ, ಗಂಟಲು ನೋವು, ಶೀತ ನಿವಾರಣೆಯಾಗುತ್ತದೆ. 

4. ಟೊಮೇಟೊ ಸೂಪ್‌
ಬೇಕಾಗುವ ಸಾಮಗ್ರಿ: ಟೊಮೇಟೋ 4, ಕ್ಯಾರೆಟ್‌ ಮತ್ತು ಬೀಟ್‌ರೂಟ್‌ 2- 3 ತುಂಡು, ಬೆಳ್ಳುಳ್ಳಿ 4 ಎಸಳು, ದಾಲಿcàನಿ ಎಲೆ 1, ಕಾಳುಮೆಣಸಿನ ಪುಡಿ 1 ಚಮಚ , ಉಪ್ಪು ರುಚಿಗೆ ತಕ್ಕಷ್ಟು , ಸಕ್ಕರೆ 1 ಚಮಚ , ಬೆಣ್ಣೆ 1 ಚಮಚ , ಗೋಧಿ ಹಿಟ್ಟು 1 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ.
ಮಾಡುವ ವಿಧಾನ: ಪಾತ್ರೆಗೆ ಬೆಣ್ಣೆ ಹಾಕಿ ಬಿಸಿ ಮಾಡಿ, ಅದರಲ್ಲಿ ಬೆಳ್ಳುಳ್ಳಿಯನ್ನು ಕೆಂಪಗಾಗುವವರೆಗೆ ಹುರಿಯಿರಿ. ಇದರ ಜೊತೆಗೆ ನೀರು, ಟೊಮೇಟೊ, ಬೀಟ್‌ರೂಟ್‌, ಕ್ಯಾರೆಟ್‌, ದಾಲಿcàನಿ ಎಲೆ ಹಾಕಿ ಕುಕರ್‌ನಲ್ಲಿ 2 ವಿಶಲ್‌ ಆಗುವವರೆಗೆ ಬೇಯಿಸಿ. ತಣ್ಣಗಾದ ಮೇಲೆ ಟೊಮೆಟೋದ ಸಿಪ್ಪೆಯನ್ನು ನಿಧಾನವಾಗಿ ಸುಲಿದು, ದಾಲಿcàನಿ ಎಲೆಯೊಂದನ್ನು ಬಿಟ್ಟು ಉಳಿದುದನ್ನು ಮಿಕ್ಸರ್‌ಗೆ ಹಾಕಿ (ಬೇಯಿಸಿದ ನೀರನ್ನೇ ಬಳಸಿ) ತಿರುಗಿಸಿ.  ನಂತರ ಮಿಶ್ರಣವನ್ನು ಸೋಸಿ, ಟೊಮೆಟೊ ಬೀಜಗಳನ್ನು ಬೇರ್ಪಡಿಸಿ. 
ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ, ದಾಲಿcàನಿ ಎಲೆ, ಉಪ್ಪು ಮತ್ತು ಸ್ವಲ್ಪ ನೀರು ಹಾಕಿ 8-10 ನಿಮಿಷ ಕುದಿಸಿ. ಸೂಪ್‌ ಸ್ವಲ್ಪ ಗಟ್ಟಿಯಾಗುತ್ತಾ ಬಂದಾಗ ಗೋಧಿ ಹಿಟ್ಟನ್ನು ಸೇರಿಸಿ, 2 ನಿಮಿಷ ಕುದಿಸಿ. ನಂತರ ಅದಕ್ಕೆ ಕಾಳುಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು ಸೇರಿಸಿದರೆ ಸೂಪ್‌ ರೆಡಿ.


ಚಳಿಗಾಲದಲ್ಲೇನುಡಲಿ?

ಚಳಿಗಾಲದಲ್ಲಿ ತ್ವಚೆಯ ಆರೋಗ್ಯ ಕಾಪಾಡಲು ಕೇವಲ ಆಹಾರ, ಮುಲಾಮುಗಳು ಸಾಲದು. ಬದಲಿಗೆ ಚರ್ಮವನ್ನು ಕಾಪಾಡುವ ಸರಿಯಾದ ದಿರಿಸೂ ಅಷ್ಟೇ ಮುಖ್ಯ. ಟೋಪಿ, ಮಫ್ಲರ್‌, ಕೋಟು, ಬೂಟು ಕೇವಲ ವೆಸ್ಟರ್ನ್ ಉಡುಗೆಗಳಿಗಷ್ಟೇ ಮ್ಯಾಚ್‌ ಆಗುತ್ತದೆ ಎನ್ನುವುದು ಹಲವರ ನಂಬಿಕೆ. ಆದರೆ ಅವು ಸೀರೆ, ಚೂಡಿದಾರದಂಥ ಸಾಂಪ್ರದಾಯಿಕ ಉಡುಪುಗಳಿಗೂ ಹೊಂದಿಕೆಯಾಗುತ್ತದೆ. ಹೇಗೆ ಎನ್ನುತ್ತೀರಾ? ಇಲ್ಲಿವೆ ನೋಡಿ, ಚಳಿಗಾಲದ ಸ್ಟೈಲ… ಸ್ಟೇಟ್‌ಮೆಂಟ್‌. 

– ಚಳಿಯಾಗುತ್ತಿದೆ ಎಂದು ಸೀರೆಯ ಮೇಲೆ ಶಾಲು ಹೊದ್ದುಕೊಂಡರೆ ಸೀರೆಯ ಅಂದಗೆಡುತ್ತದೆ ಮತ್ತು ನೀವು ದಪ್ಪ ಕಾಣಿಸುವ ಸಾಧ್ಯತೆಯೂ ಇರುತ್ತದೆ. ಬದಲಿಗೆ ಸೊಂಟದವರೆಗಿನ ಉದ್ದದ ಮಕ್ಮಲ… ಅಥವಾ ರೇಷ್ಮೆ ಜಾಕೆಟ್‌ಗಳನ್ನೇ ರವಿಕೆಯಂತೆ ಸೀರೆಯ ಜೊತೆ ತೊಟ್ಟರೆ ಚಳಿಯೂ ಆಗುವುದಿಲ್ಲ, ದಪ್ಪವೂ ಕಾಣಿಸುವುದಿಲ್ಲ. ಜಾಕೆಟ್‌ನ ತೋಳಿಗೆ ಕಸೂತಿ ಮಾಡಿದರೆ ಇನ್ನಷ್ಟು ಮೆರಗು.  

ಜಾಕೆಟ್‌ ಭಾರ ಎನಿಸಿದರೆ ಸ್ವೆಟರ್‌ ಅನ್ನು ರವಿಕೆಯಂತೆ ತೊಡಬಹುದು. ಜಾಕೆಟ್‌ಕಿಂತ ಹಗುರವೂ ಇರುತ್ತದೆ ಮತ್ತು ಫಿಟ್ಟಿಂಗ್‌ ಕೂಡ ಚೆನ್ನಾಗಿರುತ್ತದೆ. 

– ಅನಾರ್ಕಲಿ, ಚೂಡಿದಾರ ಮತ್ತು ಸಲ್ವಾರ್‌ ಕಮೀಜ್‌ ತೊಡುವಾಗಲೂ ಮೊಣಕಾಲಿನ ಗಂಟಿಗಿಂತಲೂ ಉದ್ದದ ಕುರ್ತಾ ಆಯ್ಕೆ ಮಾಡಿ. ಅದರಲ್ಲೂ ಇಡೀ ತೋಳಿನ, ಮಕ್ಮಲ… ಅಥವಾ ಖಾದಿ ಬಟ್ಟೆಯ ಕುರ್ತಾ ತೊಡುವುದರಿಂದ ಚಳಿಯಿಂದ ರಕ್ಷಣೆ ಸಿಗುತ್ತದೆ, ಸ್ಟೈಲಿಶ್‌ ಆಗಿಯೂ ಕಾಣುತ್ತೀರಿ. 

– ಲಂಗ ದಾವಣಿಯಂತೂ ಈಗ ಲೆಗ್ಗಿಂಗ್‌ ದಾವಣಿಯಾಗಿದೆ. ಲಂಗದ ಬದಲಿಗೆ, ರವಿಕೆಯ ಬಣ್ಣದ್ದೇ ಲೆಗಿಂಗ್‌ ತೊಟ್ಟು ಅದರ ಜೊತೆ ಸೀರೆಯ ಸೆರಗಿನಂತೆ ದುಪಟ್ಟಾ ಅಥವಾ ಶಾಲು ಉಟ್ಟರಾಯಿತು.

–  ಸೀರೆಯ ಸೆರಗನ್ನು ಮಫ್ಲರ್‌, ಶಾಲು ಅಥವಾ ಸ್ಕಾಫ್ìನಂತೆಯೂ ಬಳಸಬಹುದು. ಸೋನಿಯಾ ಗಾಂಧಿಯವರು ಈ ಶೈಲಿಯಲ್ಲಿ ಕಾಣಿಸುತ್ತಿರುತ್ತಾರೆ. ಇನ್ನು ನಟಿ ಶ್ರೀದೇವಿ “ಇಂಗ್ಲಿಷ್‌ ವಿಂಗ್ಲಿಷ್‌’ ಚಿತ್ರದಲ್ಲಿ ಸೀರೆಯ ಮೇಲೆ ಟ್ರೆಂಚ್‌ ಕೋಟ್‌ ತೊಟ್ಟಂತೆ ನೀವು ಚೂಡಿದಾರ, ಉದ್ದ ಲಂಗ ಮತ್ತು ಸೀರೆಯ ಮೇಲೆ ಉದ್ದನೆಯ ಟ್ರೆಂಚ್‌ ಕೋಟ್‌ ತೊಟ್ಟು ನೋಡಿ.

– ದೊಡ್ಡ ಗಾತ್ರದ ಬೆಲ್ಟ… ಅನ್ನು ಸೀರೆಯ ಮೇಲೆ ಉಟ್ಟರೆ, ಕಾರ್ಸೆಟ್‌ನಂತೆ ಫಿಟ್ಟಿಂಗ್‌ ಹಾಗೂ ಚಳಿಯಿಂದ ರಕ್ಷಣೆ ನೀಡುತ್ತದೆ. ಇನ್ನು ಬೂಟುಗಳನ್ನು ಎಲ್ಲ ಉಡುಪಿನ ಜೊತೆ ಧರಿಸಲಾಗದು. ಆದ್ದರಿಂದ ಉದ್ದ ಲಂಗ, ಲೆಗಿಂಗ… ಮತ್ತು ಪಲಾಝೊà ಪ್ಯಾಂಟ್‌ ತೊಟ್ಟಾಗ ಅವುಗಳ ಬಣ್ಣಕ್ಕೆ ಹೋಲುವ ಅಥವಾ ಕಂದು, ಕಪ್ಪಿನಂಥ ನ್ಯೂಟ್ರಲ… ಬಣ್ಣದ ಬೂಟುಗಳನ್ನು ಧರಿಸಿ.

ಬರೆದವರು: ಮೇಘಾ ಬ. ಗೊರವರ,  ಪ್ರಿಯಾಂಕಾ ನಟಶೇಖರ್‌, ಅದಿತಿಮಾನಸ ಟಿ.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next