ಕೊಯಮತ್ತೂರು : ಇಲ್ಲಿ ನಡೆದ ಕಾರ್ ಸಿಲಿಂಡರ್ ಬ್ಲಾಸ್ಟ್ ನಲ್ಲಿ ಮೃತಪಟ್ಟ ಜಮೇಶಾ ಮುಬಿನ್ ನಿವಾಸದಿಂದ ಪೊಲೀಸರು 50 ಕೆಜಿ ಅಮೋನಿಯಂ ನೈಟ್ರೇಟ್, ಪೊಟ್ಯಾಸಿಯಮ್, ಸೋಡಿಯಂ, ಫ್ಯೂಸ್ ವೈರ್ ಮತ್ತು 7 ವೋಲ್ಟ್ ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ. ಇದನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ತನಿಖೆಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಕ್ಟೋಬರ್ 21 ರಂದು, ಜಮೇಶಾ ಮುಬಿನ್ ಐಸಿಸ್ ಬೆಂಬಲಿತ ವಾಟ್ಸಾಪ್ ಸ್ಟೇಟಸ್ ಅನ್ನು ಪೋಸ್ಟ್ ಮಾಡಿದ್ದ. 5 ಮಂದಿಯನ್ನು ಏಕೆ ಬಂಧಿಸಿದ್ದಾರೆ ಎನ್ನುವುದನ್ನು ಪೊಲೀಸರು ಹೇಳಿಲ್ಲ. ಈ ಸ್ಫೋಟದ ಬಗ್ಗೆ ತಮಿಳುನಾಡು ಬಿಜೆಪಿ ಪರವಾಗಿ ನಾವು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದಿದ್ದೇವೆ. ಇದನ್ನು ‘ಆತ್ಮಾಹುತಿ ದಾಳಿ’ ಎಂದು ಪೊಲೀಸರು ಒಪ್ಪಿಕೊಳ್ಳಬೇಕು ಎಂದು ಕೆ.ಅಣ್ಣಾಮಲೈ ಹೇಳಿದ್ದಾರೆ.
ಬ್ಲಾಸ್ಟ್ ಸಂಬಂಧ ಐವರನ್ನು ಬಂಧಿಸಿದ್ದೇವೆ. ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಕೊಯಮತ್ತೂರು ಎಸ್ ಪಿ ವಿ.ಬಾಲಕೃಷ್ಣನ್ ಹೇಳಿದ್ದಾರೆ.
ಮನೆಯಲ್ಲಿ ಭಾರೀ ಪ್ರಮಾಣದ ಸ್ಫೋಟಕಗಳು ಪತ್ತೆಯಾದ ನಂತರ ಭಾನುವಾರ ಕೊಯಮತ್ತೂರಿನ ದೇವಸ್ಥಾನದ ಬಳಿ ಕಾರಿನಲ್ಲಿ ನಡೆದ ಗ್ಯಾಸ್ ಸಿಲಿಂಡರ್ ಸ್ಫೋಟಕ್ಕೆ ಭಯೋತ್ಪಾದಕ ಸಂಬಂಧಗಳ ಕುರಿತು ರಾಜ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
2019 ರಲ್ಲಿ ಐಸಿಸ್ ಸಂಪರ್ಕವಿದೆ ಎಂದು ಆರೋಪಿಸಿ ಕೇಂದ್ರ ಭಯೋತ್ಪಾದನಾ ನಿಗ್ರಹ ಸಂಸ್ಥೆ ಮುಬಿನ್ ನನ್ನು ವಿಚಾರಣೆಗೊಳಪಡಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಇಂಜಿನಿಯರಿಂಗ್ ಪದವೀಧರನ ಐವರು ಸಹಚರರನ್ನು ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು, ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.