ಮಲೇಬೆನ್ನೂರು: ಪಟ್ಟಣದಲ್ಲಿ ಐಕ್ಯತೆ ಭಾವನೆ ಮೂಡಿಸುವ ಸಲುವಾಗಿ ಒಂದೇ ಗಣಪನನ್ನು ಪ್ರತಿಷ್ಠಾಪಿಸಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಬೇಕೆಂದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ನಡೆದ ಸಭೆಯಲ್ಲಿ ಪಿಎಸ್‌ಐ ಮೇಘರಾಜ್ ಅಭಿಪ್ರಾಯ ವ್ಯಕ್ತಪಡಿಸಿದರು.
ಹಲವಾರು ಗಣಪತಿಗಳನ್ನು ಪ್ರತಿಷ್ಠಾಪಿಸುವುದರ ಬದಲಾಗಿ ಒಂದೇ ಗಣಪತಿಯನ್ನು ಪ್ರತಿಷ್ಠಾಪಿಸಿದಾಗ ಪ್ರತಿಯೊಬ್ಬರೂ ಒಂದೆಡೆ ಸೇರುವುದರಿಂದ ಒಗ್ಗಟ್ಟು ಇರುತ್ತದೆ ಎಂದರು. ಪಟ್ಟಣದ ಪ್ರತಿಭೆಗಳಿಗೆ ಕಲೆ ಅನಾವರಣಕ್ಕೆ ಉತ್ತಮ ವೇದಿಕೆ ದೊರಕುತ್ತದೆ. ಎಷ್ಟೇ ದಿನ ಗಣಪನನ್ನು ಪ್ರತಿಷ್ಠಾಪಿಸಿದರೂ ನಾವು ಭದ್ರತೆ ನೀಡಲು ಸಿದ್ಧ ಎಂದು ಪಿಎಸ್‌ಐ ಮೇಘರಾಜ್ ಸಭೆಯಲ್ಲಿ ತಿಳಿಸಿದರು.
ಈಗಾಗಲೇ ಗಣಪತಿ ತಯಾರಕರಿಗೆ ಮುಂಗಡ ಹಣ ನೀಡಲಾಗಿದ್ದು, ಒಂದೇ ಗಣಪ ಪ್ರತಿಷ್ಠಾಪಿಸಲು ಹೇಗೆ ಸಾಧ್ಯ ಎಂದು ಗಣೇಶೋತ್ಸವ ಮಂಡಳಿ ಪದಾಧಿಕಾರಿಗಳು ತಮ್ಮ ಸಮಸ್ಯೆ ಹೇಳಿದಾಗ, ಹಾಗಿದ್ದಲ್ಲಿ ಈ ಬಾರಿ ಗಣಪನನ್ನು ಪ್ರತಿಷ್ಠಾಪಿಸಿರಿ. ಊರೊಟ್ಟಿನಿಂದ ಒಂದು ಗಣಪ ಇಡೋಣ. ಗಣಪನ ವಿಸರ್ಜನೆ ಮೆರವಣಿಗೆ ಮಾತ್ರ ಎಲ್ಲರೂ ಒಂದೇ ದಿನ ನೆರವೇರಿಸಬೇಕು. ಬೇರೆ ದಿನ ವಿಸರ್ಜಿಸುವವರು ಯಾವುದೇ ರೀತಿಯ ಆಡಂಬರದ ಮೆರವಣಿಗೆ ಮಾಡದೆ ಸರಳವಾಗಿ ವಿಸರ್ಜಿಸಬೇಕು ಎಂದು ಪಿಎಸ್‌ಐ ಸಲಹೆ ನೀಡಿದರು.
ಈಗಾಗಲೇ ಚನ್ನಗಿರಿಯಲ್ಲಿ ಒಂದೇ ಗಣಪ ಪ್ರತಿಷ್ಠಾಪಿಸುವ ಪದ್ಧತಿ ಪ್ರಾರಂಭಿಸಿ ಯಶಸ್ವಿಯೂ ಆಗಿದ್ದಾರೆ. ಇಲ್ಲೂ ಒಂದೇ ಗಣಪ ಪ್ರತಿಷ್ಠಾಪಿಸುವ ಮೂಲಕ ಪೊಲೀಸ್ ಕರೆಗೆ ಕೈ ಜೋಡಿಸಿ ಎಂದು ವಿನಂತಿಸಿದರು. ಸಭೆಯಲ್ಲಿ ಪಟ್ಟಣದ ಎಲ್ಲ ಗಣೇಶೋತ್ಸವ ಸಮಿತಿ ಪದಾಧಿಕಾರಿಗಳು ತಮ್ಮ ಅಭಿಪ್ರಾಯ ತಿಳಿಸಿ ಪೊಲೀಸರ ಕರೆಗೆ ಸಮ್ಮತಿಸಿದರು. ಒಂದೇ ಗಣಪತಿ ಪ್ರತಿಷ್ಠಾಪಿಸಲು ಕಮಿಟಿ ರಚಿಸಬೇಕು. ಕಮಿಟಿ ರಚಿಸುವ ಬಗ್ಗೆ ಚರ್ಚಿಸಲು ಶುಕ್ರವಾರ ಸಭೆ ಸೇರಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಧರ್ಮಣ್ಣ, ಮಂಜಣ್ಣ, ಎಳೇಹೊಳೆ ಕುಮಾರ, ಬೆನಕೊಂಡಿ ರಾಜೇಶ್, ಭಾನುವಳ್ಳಿ ಸುರೇಶ್, ಹಿಟ್ಟಿನ ಗಿರಣಿ ಶಾಂತ್‌ರಾಜ್, ರಂಗನಾಥಾಚಾರ್, ಮಹೇಶ್, ಸುಬ್ಬಿರಾಜಪ್ಪ, ಎ.ಕೆ. ರಂಗನಾಥ್, ನವೀನ, ಲೊಕೇಶ್, ದೊರೆಸ್ವಾಮಿ, ಮಹಲಿಂಗಪ್ಪ, ಬೆಸ್ಕಾಂ, ಪುರಸಭೆ ಅಧಿಕಾರಿಗಳು ಇದ್ದರು.