Advertisement

Terrorism: ಉಗ್ರ ಕೃತ್ಯಕ್ಕೆ ಒಗ್ಗಟ್ಟು?: ಕೇಂದ್ರ ಗುಪ್ತಚರ ಸಂಸ್ಥೆಗಳ ವರದಿಯಲ್ಲಿ ಉಲ್ಲೇಖ

09:41 PM Aug 16, 2023 | Pranav MS |

ನವದೆಹಲಿ: ನಿಷೇಧಿತ ಉಗ್ರ ಸಂಘಟನೆಗಳು ಬೇರೆ ಬೇರೆ ರೂಪದಲ್ಲಿ ಒಂದೇ ವೇದಿಕೆಯಲ್ಲಿ ಸೇರಿಕೊಂಡು ಉಗ್ರ ಕೃತ್ಯಕ್ಕೆ ಮುಂದಾಗಿರುವ ಆತಂಕಕಾರಿ ಬೆಳವಣಿಗೆ ವರದಿಯಾಗಿದೆ.

Advertisement

ಐಸಿಸ್‌, ಸಿಮಿ, ಇಂಡಿಯನ್‌ ಮುಜಾಹಿದೀನ್‌ ಒಂದೇ ವೇದಿಕೆ ವ್ಯಾಪ್ತಿಯಲ್ಲಿ “ಉಗ್ರ ಕೆಲಸ’ ಮಾಡುತ್ತಿವೆ ಎಂದು ಕೇಂದ್ರ ತನಿಖಾ ಸಂಸ್ಥೆಗಳ ವರದಿಗಳು ಖಚಿತಪಡಿಸಿವೆ. ಪುಣೆಯಲ್ಲಿ ಜು.18ರಂದು ಅಲ್ಲಿನ ಎಟಿಎಸ್‌ ಬಯಲಿಗೆ ಎಳೆದ ಉಗ್ರ ಸಂಚಿನಲ್ಲಿ ಈಗ ಎಲ್ಲಾ ಘಾತಕ ಸಂಘಟನೆಗಳು ಜತೆಯಾಗಿ ಕುಕೃತ್ಯಗಳನ್ನು ನಡೆಸಲು ಒಂದೇ ವೇದಿಕೆಯಡಿ ಬರತೊಡಗಿವೆ ಎಂಬ ಬಗ್ಗೆ ಶಂಕೆಗಳು ಮೂಡಲಾರಂಭಿಸಿವೆ.

ಮಹಾರಾಷ್ಟ್ರದ ಪುಣೆಯ ಕೊರ್ತುಡ್‌ ಎಂಬಲ್ಲಿ ಇಸ್ಲಾಮಿಕ್‌ ಸ್ಟೋಟ್‌ ಖೊರೊಸಾನ್‌ ಪ್ರಾವಿನ್ಸ್‌ (ಐಎಸ್‌ಕೆಪಿ) ಪರವಾಗಿ ಕೆಲಸ ಮಾಡುತ್ತಿದ್ದವರಿಗೂ ಉತ್ತರ ಪ್ರದೇಶದ ಹಜಾರಿಬಾಗ್‌ನ ಸಾಕಿಬ್‌ ನಚಾನ್‌ ಎಂಬಾತನಿಗೂ ನೇರ ಲಿಂಕ್‌ಗಳು ಇವೆ ಎನ್ನುತ್ತವೆ ತನಿಖಾ ಸಂಸ್ಥೆಗಳ ವರದಿಗಳು. ಈತ 2002-2003ರಲ್ಲಿ ಮುಂಬೈನಲ್ಲಿ ನಡೆದಿದ್ದ ಸ್ಫೋಟ ಪ್ರಕರಣದಲ್ಲಿ ಹತ್ತು ವರ್ಷ ಜೈಲು ಶಿಕ್ಷೆ ಅನುಭವಿಸಿದ್ದ.

ಬಂಧನಕ್ಕೆ ಒಳಗಾದ ಶಹನವಾಜ್‌ ಆಲಂ ಎಂಬಾತನೇ 2002-2003ರ ಮೂರು ಬಾಂಬ್‌ ಸ್ಫೋಟಕ್ಕೆ ಪ್ರಧಾನ ಸೂತ್ರಧಾರ ಎಂದು ತಿಳಿಯಲಾಗಿತ್ತು. ಜತೆಗೆ ಉಗ್ರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಹಳೆಯ ಸಂಘಟನೆಗಳು ತಮ್ಮ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ್ದವು ಎಂದು ನಂಬಲಾಗಿತ್ತು. ಆದರೆ, ಇತ್ತೀಚಿನ ದಿನಗಳಿಂದ ಅವುಗಳೆಲ್ಲ ಮತ್ತೆ ಹಳೆಯ ಚಾಳಿಗಳ ಮೂಲಕ ಪ್ರವರ್ಧಮಾನಕ್ಕೆ ಬರಲು ಯತ್ನಿಸುತ್ತಿವೆ ಎಂದು ಹೇಳಲಾಗಿದೆ. ಕೇಂದ್ರ ಗುಪ್ತಚರ ಸಂಸ್ಥೆಗಳ ಕಣ್ಣು ತಪ್ಪಿಸಿ ಕೆಲವೊಂದು ಸಂಚು ರೂಪಿಸುವಲ್ಲಿ ಯಶಸ್ವಿಯಾಗಿದೆ ಎಂದು ಗೊತ್ತಾಗಿವೆ.

ಮಂಗಳೂರು ಕುಕ್ಕರ್‌ ಸ್ಫೋಟದಲ್ಲಿ ವಿದೇಶಿ ಕೈವಾಡದ ನೆರಳು
ಕಳೆದ ವರ್ಷ ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್‌ ಬಾಂಬ್‌ ಸ್ಫೋಟದಲ್ಲಿ ವಿದೇಶಿ ಕೈವಾಡ ಇರುವ ಸಾಧ್ಯತೆಗಳ ಶಂಕೆಗಳು ವ್ಯಕ್ತವಾಗಿದ್ದವು. ಅದಕ್ಕೆ ಪೂರಕವಾಗಿ ಚಿತ್ರೋಘಡ ಎಂಬಲ್ಲಿಂದ ಸ್ಫೋಟಕಗಳನ್ನು ವಶಪಡಿಸಿಕೊಂಡದ್ದು ಆ ಶಂಕೆಯನ್ನು ಪುಷ್ಟೀಕರಿಸಿವೆ. ಈ ಎರಡು ಪ್ರಕರಣಗಳಲ್ಲಿ ಭಾಗಿಯಾದವರು ಮಾತ್ರವಲ್ಲ, 2016ರಲ್ಲಿ ರತ್ಲಾಂನಲ್ಲಿ ಬೆಳಕಿಗೆ ಬಂದ ಐಸಿಸ್‌ ಜಾಲ ಮತ್ತು ಹಳೆಯ ಸಿಮಿ ಸಂಘಟನೆಯಲ್ಲಿ ಕೆಲಸ ಮಾಡಿದ್ದವರೆಲ್ಲ ಒಂದೇ ವೇದಿಕೆಯಡಿ ಬರುವುದು ಖಚಿತವಾಗತೊಡಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

Advertisement

ಗುಪ್ತಚರ ಸಂಸ್ಥೆಗಳ ವರದಿಯಲ್ಲಿರುವ ಅಂಶ
– ಮಾಹಿತಿ ತಂತ್ರಜ್ಞಾನ, ಸೈಬರ್‌ ತಂತ್ರಜ್ಞಾನ ಸುಧಾರಿತ ಸ್ಫೋಟಕಗಳ ಬಳಕೆಯಲ್ಲಿ ತರಬೇತಿ ಪಡೆದವರು. ಜತೆಗೆ ಅವರೆಲ್ಲ ಕಟ್ಟರ್‌ ಉಗ್ರರೇ.
– ಹಿಂದಿನ ಸಂದರ್ಭಗಳಲ್ಲಿ ಐಸಿಸ್‌, ಸಿಮಿ, ಇಂಡಿಯನ್‌ ಮುಜಾಹಿದೀನ್‌ ಸಂಘಟನೆಗಳ ನಡುವೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿದ್ದವು. ಸದ್ಯ ಅದನ್ನೆಲ್ಲ ಮರೆತು ಒಂದಾಗಿ ಕೆಲಸ ಮಾಡಲು ತೀರ್ಮಾನ.
– ಇರಾಕ್‌ ಅಥವಾ ಸಿರಿಯಾದಿಂದ ಒಗ್ಗಟ್ಟಾಗಿ ಕೆಲಸ ಮಾಡುವ ಅವರನ್ನೆಲ್ಲ ನಿಯಂತ್ರಣಕ್ಕೆ ಒಬ್ಬ ಹ್ಯಾಂಡ್ಲರ್‌.
– ಪುಣೆ ಪ್ರಕರಣದಲ್ಲಿ ಪ್ರತಿಯೊಬ್ಬರಿಗೂ ವಿವಿಧ ಹಂತದಲ್ಲಿ ಉಗ್ರ ಸಂಘಟನೆ ಐಸಿಸ್‌ ಶೈಲಿಯಲ್ಲಿ ವಿತ್ತೀಯ ನೆರವು ನೀಡಲಾಗಿತ್ತು. ಅವರೆಲ್ಲರಿಗೆ ನಿಯಮಿತವಾಗಿ ವಿದೇಶಗಳಿಂದ ಹಣಕಾಸಿನ ನೆರವು ಪೂರೈಕೆ.

Advertisement

Udayavani is now on Telegram. Click here to join our channel and stay updated with the latest news.

Next