ಮಡಿಕೇರಿ: ಕೃಷಿ ಉತ್ಪಾದನೆಗೆ ತಾತ್ಕಾಲಿಕವಾಗಿ ಬಳಕೆಯಾದ ವಿದ್ಯುತ್ ಸಂಪರ್ಕದ ಶುಲ್ಕವನ್ನು ಬಲತ್ಕಾರವಾಗಿ ವಸೂಲಿ ಮಾಡಲು ಮುಂದಾಗಿರುವುದಲ್ಲದೆ ತುಂತುರು ನೀರಾವರಿ ಪಂಪ್‌ಸೆಟ್‌ಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲು ಮುಂದಾಗಿರುವ ಚೆಸ್ಕಾಂ ಕ್ರಮವನ್ನು ವಿರೋಧಿಸಿ ರೈತ ಸಮುದಾಯಗಳ ಬಳಗ ಮತ್ತು ಕಾಫಿ ಕೃಷಿಕರ ಉತ್ಪಾದಕರ ಕೂಟ ನಗರದಲ್ಲಿ ಪ್ರತಿಭಟನೆ ನಡೆಸಿದವು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ರೈತರು ಹಾಗೂ ಬೆಳೆಗಾರರು ಚೆಸ್ಕಾಂ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮಂಡ್ಯ, ಹಾಸನ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕೃಷಿ ಉತ್ಪಾದನೆಗೆ ವಿದ್ಯುತ್ ಶುಲ್ಕವನ್ನು ಕೈಬಿಟ್ಟಿರುವ ಸರಕಾರ, ಕೊಡಗಿನ ಬಗ್ಗೆ ಮಲತಾಯಿ ಧೋರಣೆ ತಾಳಿದೆ. ಕಳೆದ ಅತಿವೃಷ್ಟಿಯಿಂದ ಬೆಳೆಗಾರರು ಕಂಗಾಲಾಗಿದ್ದಾರೆ. ಕಾಫಿ, ಕರಿಮೆಣಸು ಫಸಲು ಕೈಕೊಟ್ಟಿದೆ, ದರ ಕುಸಿತದಿಂದ ರೈತರ ಬದುಕು ಅತಂತ್ರವಾಗಿದೆ. ಹೀಗಿರುವಾಗ ಬೆಳೆಗಾರರು ಕೇವಲ 3 ತಿಂಗಳ ಕಾಲ ಬಳಸುವ ಪಂಪ್‌ಸೆಟ್‌ನ ವಿದ್ಯುತ್ ಶುಲ್ಕವನ್ನು ವಸೂಲಿ ಮಾಡುವುದು ಸರಿಯಲ್ಲ ಎಂದು ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದರು. ವಾರ್ಷಿಕ ಮೂರು ಬೆಳೆ ಬೆಳೆಯುವ ಹೊರ ಜಿಲ್ಲೆಯ ರೈತರಿಗೆ ವಿದ್ಯುತ್ ಶುಲ್ಕದಲ್ಲಿ ವಿನಾಯಿತಿ ನೀಡುವ ಸರ್ಕಾರ, ಕೊಡಗಿನ ಬೆಳೆಗಾರರಿಗೆ ಯಾಕೆ ಬರೆ ಹಾಕುತ್ತಿದೆ ಎಂದು ಪ್ರಶ್ನಿಸಿದರು.
ಸರಕಾರದ ಮುಂದಿನ ಆದೇಶದವರೆಗೆ ವಿದ್ಯುತ್ ಸಂಪರ್ಕ ಕಡಿತಕ್ಕೆ ಮುಂದಾಗುವುದಿಲ್ಲವೆಂದು ಅಧಿಕಾರಿಗಳು ಭರವಸೆ ನೀಡಿದರು. ವಿದ್ಯುತ್ ಶುಲ್ಕದ ವಿನಾಯಿತಿಯಿಂದ ಚೆಸ್ಕಾಂಗೆ ಆಗುವ ನಷ್ಟದ ಮೊತ್ತದ ವಿವರವನ್ನು ಕಾಫಿ ಮಂಡಳಿಗೆ ಸಲ್ಲಿಸಬೇಕು, ಚೆಸ್ಕಾಂ ನೀಡುವ ಪ್ರಸ್ತಾವನೆಗೆ ಅನುಗುಣವಾಗಿ ಅನುದಾನವನ್ನು ಸರಕಾರದ ಬಜೆಟ್ ಮೂಲಕ ಪಡೆದು ಚೆಸ್ಕಾಂಗೆ ಭರ್ತಿ ಮಾಡುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸಲಹೆ ನೀಡಿದರು. ಕೂಟದ ಎನ್.ಸಿ.ಪೊನ್ನಪ್ಪ ಕ್ಲೆçವಾ, ಎಂ.ಎ.ನಂದಾ ಬೆಳ್ಯಪ್ಪ, ಕೆಜಿಎಫ್ ಸಂಘದ ವಿಶ್ವನಾಥ್, ರಮೇಶ್ ದಾಸಂಡ, ಸತೀಶ್ ಜಿ.ಜಿ.ಗರಗಂದೂರು, ಅರ್ಪಿತ್ ಪೂವಣ್ಣ ಅಂದಗೋವೆ, ಚಂದ್ರಶೇಖರ್, ಗೌತಮ್ ಕಲ್ಲೂರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿ ಸ್ಪಂದನೆ
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಸಲ್ಲಿಸಿದ ಪ್ರಮುಖರು ಇತರ ಜಿಲ್ಲೆಗಳಲ್ಲಿ 10 ಹೆಚ್‌ಪಿ ಪಂಪ್‌ಸೆಟ್‌ಗೆ ನೀಡುತ್ತಿರುವ ವಿನಾಯಿತಿಯನ್ನು ಪ್ರವಾಹ ಪೀಡಿತ ಕೊಡಗಿನ ಕಾಫಿ ಬೆಳೆಗಾರರಿಗೂ ನೀಡಬೇಕು. ಈ ಬಗ್ಗೆ ಸರಕಾರಕ್ಕೆ ಶಿಫಾರಸ್ಸು ಮಾಡಬೇಕೆಂದರು.
ಸಣ್ಣ ಬೆಳೆಗಾರರಿಗೂ ಲಕ್ಷಾಂತರ ರೂ. ವಿದ್ಯುತ್ ಬಿಲ್ ಪಾವತಿಸುವಂತೆ ಒತ್ತಡ ಹೇರಲಾಗುತ್ತಿದೆ, ಈ ಬೆಳವಣಿಗೆಯನ್ನು ತಡೆಯಬೇಕೆಂದು ಒತ್ತಾಯಿಸಿದರು.
ಪ್ರತಿಭಟನಕಾರರ ಮನವಿಗೆ ಸ್ಪಂದಿಸಿದ ಜಿಲ್ಲಾಧಿ ಕಾರಿಗಳು ಚೆಸ್ಕಾಂ, ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ ಸೇರಿದಂತೆ ಸಂಬಂಧಿಸಿದ ಇಲಾಖಾಧಿಕಾರಿಗಳ ಸಮ್ಮುಖದಲ್ಲಿ ಬೆಳೆಗಾರರ ಹಾಗೂ ರೈತರ ಸಭೆ ನಡೆಸಿ ಚರ್ಚಿಸಿದರು.