ಮಡಿಕೇರಿ: ಕಳೆದ ಕೆಲವು ವರ್ಷಗಳಿಂದ ಕಾಫಿ ಸೇರಿದಂತೆ ವಿವಿಧ ಬೆಳೆಗಳನ್ನು ಬೆಳೆಯಲಾಗುತ್ತಿದ್ದ ಜಮೀನಿಗೆ ಏಕಾಏಕಿ ಅರಣ್ಯ ಅಧಿಕಾರಿಗಳು ದಾಳಿ ಮಾಡಿ ಫಸಲು ನೀಡುತ್ತಿರುವ ಗಿಡಗಳನ್ನು ನಾಶ ಮಾಡಿರುವ ಘಟನೆ ಮಡಿಕೇರಿ ತಾಲೂಕಿನ ಕೆ. ನಿಡುಗಣೆ ಗ್ರಾ.ಪಂ ವ್ಯಾಪ್ತಿಯ ಹೆಬ್ಬೆಟ್ಟಗೇರಿ ಗ್ರಾಮದಲ್ಲಿ ನಡೆದಿದೆ.
ಗಾಳೀಬೀಡು ಸಮೀಪದ ಹಹೆಬ್ಬೆಟ್ಟಗೇರಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ತಬ್ರ ಕಾಲೋನಿಯಲ್ಲಿರುವ ಸುಮಾರು 40ಕ್ಕೂ ಅಧಿಕ ಕುಟುಂಬಗಳು ಕಳೆದ ಹಲವು ವರ್ಷಗಳಿಂದ ವಾಸವಾಗಿವೆ. ಕೆಲವು ಕುಟುಂಬಗಳು ಸರ್ಕಾರಿ ಜಮೀನಿನಲ್ಲಿ ಸಣ್ಣ ಪ್ರಮಾಣದಲ್ಲಿ ಕಾಫಿ ಕೃಷಿ ಮಾಡಿಕೊಂಡು ಜೀವನಸಾಗಿಸುತ್ತಿದ್ದರೆ, ಹಲವು ಕುಟುಂಬಗಳು ಹಕ್ಕುಪತ್ರ ಪಡೆದು ವಾಸವಾಗಿದ್ದಾರೆ.
ಯಾವುದೇ ಮಾಹಿತಿ ನೀಡದೆ ಇಲ್ಲಿನ 4-5 ಕ ಕುಟುಂಬಗಳ ತೋಟಕ್ಕೆ ನುಗ್ಗಿದ ಅರಣ್ಯ ಇಲಾಖೆ ಸಿಬ್ಬಂದಿಗಳು ಏಕಾಏಕಿ ಕಾಫಿಗಿಡಗಳನ್ನು ನಾಶ ಮಾಡಿದ್ದಾರೆ. ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಂಗಳವಾರ ಇಲ್ಲಿನ ಕೆಲವು ನಿವಾಸಿಗಳ ಬಳಿ ಬಂದ ಅರಣ್ಯ ಇಲಾಖೆ ಸಿಬ್ಬಂದಿತೋಟಕ್ಕೆ ಸಂಬಂಧಂತೆ ಇಲಾಖೆಗೆ ಕೆಲವು ಸೂಕ್ತ ದಾಖಲೆ ಒದಗಿಸುವಂತೆ ಸೂಚಿಸಿದ್ದರು. ಆದರೆ ಬುಧವಾರ ಬೆಳಗ್ಗೆಯೇ ದಾಳಿ ಮಾಡಿದ ಸಿಬ್ಬಂದಿಗಳು ಕಾಫಿ, ಕರಿಮೆಣಸು, ವಿವಿಧ ಹಣ್ಣುಗಳ ಗಿಡವನ್ನು ನಾಶ ಮಾಡಿದ್ದಾರೆ. ಗುಡ್ಡ ಪ್ರದೇಶದಲ್ಲಿ ನೀರಿನ ಕೊರತೆಯ ನಡುವೆ ಕಷ್ಟಪಟ್ಟು ಬೆಳೆಯಲಾಗಿದ್ದ ಗಿಡಗಳನ್ನು ಕುತ್ತು ಹಾಕಲಾಗಿದೆ.
ಗುರುವಾರ ಮತ್ತೆ ಎಸಿಎಫ್ ಸ್ಥಳಕ್ಕೆ ಭೇಟಿ ನೀಡಿದ್ದು, ಈ ಸಂದರ್ಭ ಗ್ರಾಮಸ್ಥರು ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿದ್ದಾರೆ. ತಹಶೀಲ್ದಾರ್ ಅವರನ್ನು ಕರೆಸಿ ಪರಿಶೀಲನೆ ನಡೆಸಲಾಗುವುದು ಎಂದು ಎಸಿಎಫ್ ಪ್ರತಿಕ್ರಿಯಿಸಿದ್ದು, ಇದ್ದ ಗಿಡಗಳನ್ನೂ ನಾಶ ಮಾಡಿದ ಮೇಲೆ ಪರಿಶೀಲನೆ ಮಾಡುವುದು ಯಾಕೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ನಮಗೆ ನ್ಯಾಯ ದೊರೆಯಬೇಕಿದ್ದು, ಇಲ್ಲಿಯವರೆಗೆ ಕಷ್ಟಪಟ್ಟು ಬೆಳೆಸಿದ ಕಾಫಿ ಗಿಡಗಳನ್ನು ನಾಶ ಮಾಡಿದ್ದಕ್ಕೆ ಸೂಕ್ತ ಪರಿಹಾರವನ್ನು ಅರಣ್ಯ ಇಲಾಖೆಯೇ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.