Advertisement

ಬಯಲು ಸೀಮೆಯಲ್ಲಿ ಕಾಫಿ ಬೆಳೆದು ರೈತ ಯಶಸ್ಸು

12:01 PM Apr 20, 2019 | keerthan |

ಶ್ರೀರಂಗಪಟ್ಟಣ: ಕೊಡಗಿನಂತಹ ಹೆಚ್ಚು ಮಳೆ ಬೀಳುವ ಪ್ರದೇಶದಲ್ಲಿ ಬೆಳೆಯ ಬಹುದಾದ ಕಾಫಿ ಬೆಳೆಯನ್ನು ಕಡಿಮೆ ಮಳೆ ಬೀಳುವ ಪ್ರದೇಶವಾದ ಮಂಡ್ಯದ ಬಯಲು ಸೀಮೆಯಲ್ಲಿ ರೈತರೊಬ್ಬರು ಯಶಸ್ವಿಯಾಗಿ ಬೆಳೆದಿದ್ದಾರೆ.

Advertisement

ತಾಲೂಕಿನ ಪಾಲಹಳ್ಳಿ ಗ್ರಾಮದ ರೈತ ಸಿ.ದೇವರಾಜು ತಮ್ಮ ಒಂದೂವರೆ ಎಕರೆ ಪ್ರದೇಶದಲ್ಲಿ ಕಾಫಿ ಬೆಳೆ ಬೆಳೆಯುತ್ತಿದ್ದಾರೆ. ರೊಬಸ್ಟಾ ಮತ್ತು ಅರೇಬಿಕಾ-ಎರಡೂ ತಳಿಯ 1300ಕ್ಕೂ ಹೆಚ್ಚು ಗಿಡಗಳನ್ನು ಇವರು ಬೆಳೆದಿದ್ದು ಮೊದಲ ಕೊಯ್ಲು ಕಾಫಿ ಬೀಜ ತೆಗೆದ ಖುಷಿಯಲ್ಲಿದ್ದಾರೆ. ತಾವು ಬೆಳೆದ ಮೊದಲ ಫ‌ಸಲು 4 ಮೂಟೆ ಕಾಫಿ ಬೀಜಗಳನ್ನು ದೇವರಾಜು ಕುಶಾಲನಗರದಲ್ಲಿ ಮಾರಾಟ ಮಾಡಿ ಹಣ ಎಣಿಸಿಕೊಂಡಿದ್ದಾರೆ.

ಕಪ್ಪು- ಕೆಂಪು ಮಿಶ್ರಿತ ಮಣ್ಣಿನ ತಮ್ಮ ಜಮೀನಿನಲ್ಲಿ 3 ವರ್ಷಗಳ ಹಿಂದೆ ಕಾಫಿ ಗಿಡಗಳನ್ನು ನೆಟ್ಟಿದ್ದು ಎಲ್ಲಾ ಗಿಡಗಳು ಹುಲುಸಾಗಿ ಬೆಳೆದಿವೆ. ಕಾಫಿ ಅಗತ್ಯವಾದ ನೆರಳು, ತೇವಾಂಶ ಸೃಷ್ಟಿಸಿ ತಮ್ಮ ಪ್ರಯೋ ಗದಲ್ಲಿ ಯಶಸ್ಸು ಕಂಡಿದ್ದಾರೆ. ಸುಲಭ ವಾದ ಹಾಯಿ ನೀರು ಪದ್ಧತಿಯಲ್ಲಿಯೇ ಕಾಫಿ ಕೃಷಿ ನಡೆಯುತ್ತಿರುವುದು ಇಲ್ಲಿನ ವಿಶೇಷ.

ಬಹು ಬೆಳೆ ಪದ್ಧತಿ: ದೇವರಾಜು ಅವರ ಕಾಫಿ ತೋಟದ ನಡುವೆ ಹತ್ತಕ್ಕೂ ಹೆಚ್ಚು ಬಗೆಯ ತೋಟಗಾರಿಕಾ ಬೆಳೆಗಳಿವೆೆ. 300 ಪಚ್ಚಬಾಳೆ, 100 ಅಡಕೆ, 60 ಸಪೋಟ (ಚಿಕ್ಕು), 60 ತೆಂಗು, 100 ಪಪ್ಪಾಯ, 50 ಏಲಕ್ಕಿ ಬಾಳೆ, 50 ಕಾಳು ಮೆಣಸು, 10 ಸೀಬೆ (ಪೇರಲ), 10 ನಿಂಬೆ, 10 ಕಿತ್ತಳೆ, 6 ಬಟರ್‌ ಫ‌್ರೂಟ್, ಎರಡು ಮಾವು, ಎರಡು ದಾಳಿಂಬೆ ಹಾಗೂ ಏಲಕ್ಕಿ ಗಿಡಗಳಿವೆ. ಈ ಪೈಕಿ ಅಡಕೆ, ತೆಂಗು, ಸಪೋಟ, ಕಾಳು ಮೆಣಸು, ಪಪ್ಪಾಯ, ಮಾವು ಫ‌ಲ ಕೊಡುತ್ತಿವೆ. 100 ತೇಗ, 60 ಸಿಲ್ವರ್‌ ಮರಗಳು ಇಲ್ಲಿ ಬೆಳೆಯುತ್ತಿವೆ.

ವರ್ಷಕ್ಕೆ ಲಕ್ಷ ರೂ.: ದೇವರಾಜು ಅವರ ತೋಟದಲ್ಲಿ ಕಾಫಿ ಪ್ರಧಾನ ಬೆಳೆ. ಮೊದಲ ಫ‌ಸಲಿನಿಂದ 15 ಸಾವಿರ ರೂ.,ಆದಾಯ ಸಿಕ್ಕಿದೆ. ತೆಂಗಿನ ಕಾಯಿ, ಎಳನೀರಿನಿಂದ ವರ್ಷಕ್ಕೆ 60 ಸಾವಿರ ರೂ. ಆದಾಯ ಪಡೆಯುತ್ತಿದ್ದಾರೆ. ಸಪೋಟ ಗಿಡಗಳನ್ನು ವರ್ಷಕ್ಕೆ 30 ಸಾವಿರಕ್ಕೆ ಗುತ್ತಿಗೆ ನೀಡಿದ್ದಾರೆ. ರೆಡ್‌ ಲೇಡಿ ತಳಿ ಪಪ್ಪಾಯ ಗಿಡಗಳು ಇದುವರೆಗೆ 20 ಸಾವಿರ ರೂ.ಹಣ ತಂದು ಕೊಟ್ಟಿವೆ. ಅಡಕೆ ಮತ್ತು ಅವುಗಳಿಗೆ ಹಬ್ಬಿರುವ ಕಾಳು ಮೆಣಸು ಬಳ್ಳಿಗಳು ಗೊಂಚಲಾಗಿ ಫ‌ಲ ನೀಡಲಾರಂಭಿಸಿವೆ.

Advertisement

ಸ್ಪ್ರಿಂಕ್ಲರ್‌ ನೀರು: ‘ಮರಗಳ ನೆರಳು ಮತ್ತು ತೇವಾಂಶ ಭರಿತ ವಾತಾವರಣ ಇದ್ದರೆ ಬಯಲು ಸೀಮೆಯಲ್ಲಿಯೂ ಕಾಫಿ ಬೆಳೆಯಬಹುದು. ನಿಗದಿತ ಪ್ರಮಾಣದಲ್ಲಿ ನೀರು ಮತ್ತು ಗೊಬ್ಬರ ಕೊಟ್ಟರೆ ಮಣ್ಣು ಮೃಧುವಾಗುವ ಜತೆಗೆ ವಾತಾವರಣದಲ್ಲಿ ಆದ್ರರ್ತೆ ತನ್ನಿಂತಾನೆ ಸೃಷ್ಟಿಯಾಗುತ್ತದೆ. ಸ್ಪ್ರಿಂಕ್ಲರ್‌ ಪದ್ಧತಿ ನೀರಿನ ವ್ಯವಸ್ಥೆ ಕಾಫಿ ಬೆಳೆಗೆ ಹೆಚ್ಚು ಸೂಕ್ತ’ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಚಂದ್ರು.

‘ಕಾಫಿ ಗಿಡಗಳನ್ನು ನಾಟಿ ಮಾಡಿದ ಆರಂಭದ ದಿನಗಳಲ್ಲಿ ಬೆಳೆ ಬರುತ್ತ ದೆಯೋ ಇಲ್ಲವೋ ಎಂಬ ಆತಂಕ ಉಂಟಾಗಿತ್ತು. ಸದ್ಯ ಕಾಫಿ ಗಿಡಗಳು ಚೆನ್ನಾಗಿ ಬೆಳೆಯುತ್ತಿದ್ದು, ರೋಗಭಾದೆ ಯಿಂದ ಮುಕ್ತವಾಗಿವೆ. ಸದ್ಯಕ್ಕೆ 2-3 ಮೂಟೆ ಕಾಫಿ ಬೀಜ ಸಿಗುತ್ತಿದ್ದು, ಹಂತ ಹಂತವಾಗಿ ಇಳುವರಿ ಹೆಚ್ಚಲಿದೆ. ಇರುವ ಎಲ್ಲಾ ಬೆಳೆಯಿಂದ ವರ್ಷಕ್ಕೆ 1 ಲಕ್ಷ ರೂ., ಆದಾಯ ಬರುತ್ತಿದೆ. ಇನ್ನು 10 ವರ್ಷ ಕಳೆದರೆ ತೇಗ ಮತ್ತು ಸಿಲ್ವರ್‌ ಓಕ್‌ ಮರಗಳಿಂದಲೇ 20 ಲಕ್ಷ ರೂ. ಸಿಗಲಿದೆ’ ಎಂದು ದೇವರಾಜು ವಿಶ್ವಾಸ ವ್ಯಕ್ತ ಪಡಿಸುತ್ತಾರೆ. ಮಾಹಿತಿಗೆ ಮೊ.99643 64350ಕ್ಕೆ ಸಂಪರ್ಕಿಸಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next