Advertisement

G-20: ಹೋಟೆಲ್‌ಗ‌ಳಿಗೆ ನೀಡಲಾಗಿತ್ತು ಕೋಡ್‌ವರ್ಡ್‌!

09:27 PM Sep 12, 2023 | Team Udayavani |

ನವದೆಹಲಿ: ಬಹು ನಿರೀಕ್ಷಿತ ಜಿ20 ರಾಷ್ಟ್ರಗಳ ಸಮ್ಮೇಳನ ಅದ್ಧೂರಿಯಾಗಿ ಮತ್ತು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಸೇರಿದಂತೆ ಪ್ರಮುಖರು ತಂಗಿದ್ದ ಹೋಟೆಲ್‌ಗ‌ಳಿಗೆ ಬಿಗಿ ಭದ್ರತೆ ನೀಡಿದ್ದು ಈಗ ಹಳೆಯ ಕತೆ. ಹೊಸ ವಿಷಯವೇನೆಂದರೆ, ಭದ್ರತೆಯ ದೃಷ್ಟಿಯಿಂದ ವಿವಿಐಪಿಗಳು ವಾಸ್ತವ್ಯ ಹೂಡಿದ್ದ ಹೋಟೆಲ್‌ಗ‌ಳು, ಸಮ್ಮೇಳನ ನಡೆದಿದ್ದ ಭಾರತ ಮಂಟಪಂಗೆ ವಿವಿಧ ರೀತಿಯ ಕೋಡ್‌ವರ್ಡ್‌ಗಳನ್ನೂ ನೀಡಲಾಗಿತ್ತು ಎಂಬ ಅಂಶ ಈಗ ಬೆಳಕಿಗೆ ಬಂದಿದೆ.

Advertisement

ಕೇಂದ್ರ ಗೃಹ ಸಚಿವಾಲಯದ ಸಂಪರ್ಕ ವಿಭಾಗ ಮತ್ತು ದೆಹಲಿ ಪೊಲೀಸರು ಜಂಟಿಯಾಗಿ ಕೋಡ್‌ವರ್ಡ್‌ಗಳನ್ನು ರೂಪಿಸಿದ್ದರು. ಅಮೆರಿಕ ಅಧ್ಯಕ್ಷ ಬೈಡೆನ್‌ ತಂಗಿದ್ದ ಮೌರ್ಯ ಶೆರ್ಯಟನ್‌ಗೆ “ಪಂಡೋರಾ’, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಇದ್ದ ಹೋಟೆಲ್‌ಗೆ “ಸಮರ’ ಎಂಬ ಹೆಸರು ಇರಿಸಲಾಗಿತ್ತು. ಮಹಾತ್ಮಾ ಗಾಂಧೀಜಿಯವರ ಸಮಾಧಿ ರಾಜ್‌ಘಾಟ್‌ಗೆ “ರುದ್ರಪುರ’, ಪ್ರಗತಿ ಮೈದಾನ್‌ಗೆ “ನಿಕೇತನ್‌’, ಲಿ ಮೆರೆಡಿಯನ್‌ ಹೋಟೆಲ್‌ಗೆ “ಮಹಾಬೋಧಿ’, ತಾಜ್‌ಮಾನ್‌ ಸಿಂಗ್‌ ಹೋಟೆಲ್‌ಗೆ “ಪಾರಮೌಂಟ್‌’ ಎಂಬ ಸಂಕೇತದ ಹೆಸರುಗಳನ್ನು ನೀಡಲಾಗಿತ್ತು.

ವಿಶೇಷ ಭದ್ರತಾ ಪಡೆಗಳು, ಇತರ ಭದ್ರತಾ ಪಡೆಗಳು ಅತಿಥಿಗಳ ಸಂಚಾರದ ಸಂದರ್ಭದಲ್ಲಿ ಅವುಗಳನ್ನು ಬಳಕೆ ಮಾಡುತ್ತಿದ್ದರು. ಕೇವಲ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಮಾತ್ರ ಈ ಕೋಡ್‌ವರ್ಡ್‌ಗಳು ಗೊತ್ತಿದ್ದವು. ಗಣ್ಯರ ಆಗಮನದ ವೇಳೆ ಭದ್ರತೆಯಲ್ಲಿ ಲವಲೇಶ ಲೋಪವೂ ಆಗಬಾರದು ಎಂಬ ಕಾರಣಕ್ಕೆ ಈ ಎಲ್ಲ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿತ್ತು.

4,100 ಕೋಟಿ ರೂ. ವೆಚ್ಚ
ಎರಡು ದಿನಗಳ ಸಮ್ಮೇಳನಕ್ಕೆ ಕೇಂದ್ರ ಸರ್ಕಾರ 4,100 ಕೋಟಿ ರೂ. ವೆಚ್ಚ ಮಾಡಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಈ ಪೈಕಿ ದೆಹಲಿ ಪೊಲೀಸ್‌ ಇಲಾಖೆಗೆ 340 ಕೋಟಿ ರೂ., ನವದೆಹಲಿ ಮುನಿಸಿಪಲ್‌ ಕಾರ್ಪೊರೇಷನ್‌ಗೆ 60 ಕೋಟಿ ರೂ., ದೆಹಲಿ ಅಭಿವೃದ್ಧಿ ಪ್ರಾಧಿಕಾರಕ್ಕೆ 18 ಕೋಟಿ ರೂ., ಕೇಂದ್ರ ಭೂಸಾರಿಗೆ ಸಚಿವಾಲಯಕ್ಕೆ 26 ಕೋಟಿ ರೂ., ಲೋಕೋಪಯೋಗಿ ಇಲಾಖೆಗೆ 45 ಕೋಟಿ ರೂ., ದೆಹಲಿ ಮಹಾನಗರ ಪಾಲಿಕೆಗೆ 5 ಕೋಟಿ ರೂ., ಅರಣ್ಯ ಇಲಾಖೆಗೆ 16 ಕೋಟಿ ರೂ., ವಿದೇಶಾಂಗ ಸಚಿವಾಲಯಕ್ಕೆ 75 ಲಕ್ಷ ರೂ. ನೀಡಲಾಗಿದೆ.

ಕರ್ನಾಟಕದಲ್ಲಿ ತಯಾರಾದ ಕದಂಬ ಪೆಟ್ಟಿಗೆ ಉಡುಗೊರೆ
ಶೃಂಗಸಭೆಗೆ ಆಗಮಿಸಿದ್ದ ವಿಶ್ವ ನಾಯಕರಿಗೆ ಕಾಶ್ಮೀರಿ ಕೇಸರಿ, ಪಶ್ಮಿನಾ(ಕಾಶ್ಮೀರದ ಸಾಂಪ್ರದಾಯಿಕ ಶಾಲು), ಡಾರ್ಜಿಲಿಂಗ್‌ ಮತ್ತು ನೀಲಗಿರಿ ಟೀ, ಅರಕು ಕಾಫಿ, ಜಿಘ್ರಾನಾ ಸುಗಂಧ ದ್ರವ್ಯ, ಭಾರತೀಯ ಕುಶಲಕರ್ಮಿಗಳು ತಯಾರಿಸಿದ ಕಲಾಕೃತಿಗಳು ಸೇರಿದಂತೆ ಅಮೂಲ್ಯ ವಸ್ತುಗಳನ್ನು ಭಾರತ ಉಡುಗೊರೆಯಾಗಿ ನೀಡಿತ್ತು. ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರ ಪತ್ನಿ ಅಕ್ಷತಾ ಮೂರ್ತಿ ಅವರಿಗೆ ಬನಾರಸ್‌ ರೇಷ್ಮೆ ದುಪ್ಪಟ್ಟಾವನ್ನು ನೀಡಲಾಗಿತ್ತು. ಈ ದುಪ್ಪಟ್ಟಾವನ್ನು ಸಂಪ್ರದಾಯಿಕ ಕದಂಬ ಮರದ ಪೆಟ್ಟಿಗೆಯಲ್ಲಿಟ್ಟು ನೀಡಲಾಯಿತು. ಭಾರತದ ಸಂಸ್ಕೃತಿ ಮತ್ತು ಕಲಾ ಪರಂಪರೆಯನ್ನು ಪ್ರತಿಬಿಂಬಿಸುವ ಈ ಕದಂಬ ಪಟ್ಟಿಗೆಯನ್ನು ಕರ್ನಾಟಕ ಕುಶಲಕರ್ಮಿಗಳು ತಯಾರಿಸಿದ್ದಾರೆ. ಇದನ್ನು ಕದಂಬ ವೃಕ್ಷದಿಂದ ಕೆತ್ತಲಾಗುತ್ತದೆ. ಇದೇ ರೀತಿ ಸಂಡೂಕ್‌(ನಿಧಿ ಇಡುವ ಪೆಟ್ಟಿಗೆ), ಶೀಶಮ್‌(ರೋಸ್‌ವುಡ್‌ನಿಂದ ತಯಾರಿಸಿದ ಕೆತ್ತನೆ), ಸುಂದರ್‌ಬನ್‌ ಕಾಡುಗಳಿಂದ ಸಂಗ್ರಹಿಸಿದ ಜೇನುತುಪ್ಪ, ಖಾದಿ ಸ್ಕಾಫ್ì, ನಾಣ್ಯ ಸಂಗ್ರಹಿಸುವ ಪೆಟ್ಟಿಗೆ ಸೇರಿದಂತೆ ಅನೇಕ ಅಮೂಲ್ಯ ವಸ್ತುಗಳನ್ನು ಜಿ20 ಪ್ರತಿನಿಧಿಗಳಿಗೆ ಉಡುಗೊರೆಯಾಗಿ ನೀಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next