Advertisement

ಕಟ್ಟಡ ಕಾರ್ಮಿಕರ ಪರಿಹಾರಕ್ಕೆ ಸಂಹಿತೆ ಅಡ್ಡಿ

11:18 AM Apr 10, 2019 | Lakshmi GovindaRaju |

ಬೆಂಗಳೂರು: ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ)ಯಲ್ಲಿ ನಿರ್ಮಾಣ ಹಂತದಲ್ಲಿದ್ದ ಪಾರ್ಕಿಂಗ್‌ ಕಟ್ಟಡದ ಚಾವಣಿ ಕುಸಿದು ಗಾಯಗೊಂಡಿದ್ದ ಬಹುತೇಕ ಕಾರ್ಮಿಕರಿಗೆ ಸೂಕ್ತ ಪರಿಹಾರ ಸಿಕ್ಕಿಲ್ಲ. ಪಾರ್ಕಿಂಗ್‌ ನಿಲ್ದಾಣಕ್ಕಾಗಿ ನಿರ್ಮಿಸಲಾಗುತ್ತಿದ್ದ ಕಟ್ಟಡದ ಎರಡನೇ ಮಹಡಿಗೆ ಕಾಂಕ್ರಿಟ್‌ ಹಾಕುವ ಕೆಲಸ ನಡೆಯುವಾಗ ಸೆಂಟ್ರಿಂಗ್‌ ಸಡಿಲಗೊಂಡಿದ್ದರಿಂದ, ಕಟ್ಟಡ ಚಾವಣಿ ಕುಸಿದಿತ್ತು.

Advertisement

ಈ ಅವಘಡದಲ್ಲಿ ಬಿಹಾರ ಮೂಲದ ರಾಕೇಶ್‌ (21) ಮತ್ತು ರಾಹುಲ್‌ (18) ಎಂಬ ಕಾರ್ಮಿಕರಿಬ್ಬರು ಸಾವಿಗೀಡಾಗಿದ್ದರು. 12 ಮಂದಿ ಗಾಯಗೊಂಡಿದ್ದರು ಅವರನ್ನು ನಂದಿನಿ ಲೇಔಟ್‌ನ ಕಣ್ವ ಶ್ರೀಸಾಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ 9 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ದುರಂತದಲ್ಲಿ ಗಾಯಗೊಂಡವರಿಗೆ ಸಿಕ್ಕಿದ್ದು ಪುಡಿಗಾಸಷ್ಟೇ: ದುರಂತದಲ್ಲಿ ಮೃತಪಟ್ಟ ಇಬ್ಬರೂ ಸೇರಿದಂತೆ ಆಸ್ಪತ್ರೆಯಿಂದ ಬಿಡುಗಡೆಯಾದ 9 ಮಂದಿಗೆ ಎಷ್ಟು ಪರಿಹಾರ ಸಿಕ್ಕಿದೆ ಎನ್ನುವುದರ ಬಗ್ಗೆ ಮಾಹಿತಿ ಇಲ್ಲ. ಎಪಿಎಂಸಿಯಲ್ಲಿ ಗಾಯಗೊಂಡ ಕಾರ್ಮಿಕರೊಬ್ಬರಿಗೆ ಸ್ಟಾರ್‌ ಕನ್ಸಸ್ಟ್ರಕ್ಷನ್‌ ಕಂಪನಿ 20 ಸಾವಿರ ರೂ ನೀಡಿದೆ.

ಇನ್ನೂ ಹಲವರಿಗೆ ಯಾವುದೇ ಸಹಾಯಧನ ಸಿಕ್ಕಿಲ್ಲ ಎನ್ನಲಾಗಿದೆ. ಗಾಯಗೊಂಡ ಕಾರ್ಮಿಕರಲ್ಲಿ ಬಹುತೇಕರು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿಲ್ಲ.

ನೋಂದಾಯಿಸಿಕೊಂಡಿದ್ದರೆ, ಇವರಿಗೆ 12ಕ್ಕೂ ಹೆಚ್ಚು ಸೌಲಭ್ಯಗಳು ಸಿಗುತ್ತಿತ್ತು. ಅಪಘಾತ ಸಂಭವಿಸಿದ ಸಮಯದಲ್ಲಿ ಸಿಗುವ ಸಹಾಯಧನವೂ ಸಿಗುತ್ತಿತ್ತು. ಆದರೆ, ಅದ್ಯಾವುದೂ ಈಗ ಇಲ್ಲವಾಗಿದೆ. ಹಣ ನೀಡುವುದಾಗಿ ಹಲವರು ಭರವಸೆ ನೀಡಿದ್ದರಾದರೂ ಅದು ಕಾರ್ಯರೂಪಕ್ಕೆ ಬರುವುದರ ಬಗ್ಗೆ ಖಾತರಿ ಇಲ್ಲ.

Advertisement

ನೀತಿ ಸಂಹಿತೆಯಿಂದ ಹಿನ್ನಡೆ: ಚುನಾವಣಾ ನೀತಿಸಹಿಂತತೆ ಜಾರಿಯಲ್ಲಿ ಇರುವುದರಿಂದ ಕಟ್ಟಡ ಕಾರ್ಮಿಕರ ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕಾರ್ಮಿಕರು ಅಪಘಾತದಲ್ಲಿ ಮೃತಪಟ್ಟರೆ ಅಥವಾ ಗಾಯಗೊಂಡ ಸಂದರ್ಭದಲ್ಲಿ ಅವರಿಗೆ ಸಿಗಬೇಕಾದ ಪರಿಹಾರ ಸಹ ಸೂಕ್ತ ಸಮಯದಲ್ಲಿ ಸಿಗುತ್ತಿಲ್ಲ.

ಅಪಘಾತ ನೀತಿಸಹಿಂತತೆ ಅಡಿ ಬರುವುದಿಲ್ಲ. ನೋಂದಣಿಯನ್ನು ಮುಂದುವರಿಸಿ, ಪರಿಹಾರನಿಧಿಯನ್ನು ಬೇಗ ನೀಡಬೇಕು ಎಂದು ಹಲವು ಕಾರ್ಮಿಕ ಸಂಘಟನೆಗಳು ಒತ್ತಾಯಿಸಿದ್ದು, ಚುನಾವಣಾ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

“ಚುನಾವಣಾ ಸಮಯದಲ್ಲಿ ನೋಂದಣಿಯನ್ನು ನಿಲ್ಲಿಸಲು ಮುಖ್ಯ ಕಾರಣ ಕೆಲವು ರಾಜಕಾರಣಿಗಳು ತಮ್ಮ ಪಕ್ಷದ ಕಾರ್ಯಕರ್ತರನ್ನು ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ನೋಂದಣಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಇಂತಹ ಪ್ರಕರಣಗಳು ಈ ಹಿಂದೆ ನಡೆದಿದೆ’ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಇಲಾಖೆಯ ಅಧಿಕಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next