Advertisement
ಯಕ್ಷಗಾನ ಆಟ ಉತ್ತರಕನ್ನಡ, ಉಡುಪಿ, ದಕ್ಷಿಣಕನ್ನಡದಲ್ಲಿ ಅತಿ ಹೆಚ್ಚು ಪ್ರದರ್ಶಿತವಾಗುತ್ತದೆ. ಚುನಾವಣಾ ನೀತಿಸಂಹಿತೆ ಜಾರಿಯಾದ ದಿನದಿಂದ ಫಲಿತಾಂಶ ಬರುವವರೆಗೆ ತಿಂಗಳ ಕಾಲ ಆಟ ಪ್ರದರ್ಶನಕ್ಕೆ ಪರವಾನಗಿ ಕೊಡುವುದಿಲ್ಲ. ಕಲಾಧರ ಯಕ್ಷಗಾನ ಮಂಡಳಿ ಕಳೆದವಾರ ಅರ್ಧಕ್ಕೆ ಆಟ ನಿಲ್ಲಿಸಬೇಕಾಗಿ ಬಂತು. ಯಕ್ಷಗಾನ ಪಾತ್ರಧಾರಿಯೊಬ್ಬ ದೇಶಭಕ್ತಿಯ ಮಾತನ್ನಾಡಿದ್ದಕ್ಕೆ ಆತನ ಮೇಲೆ ಮೊಕದ್ದಮೆ ದಾಖಲಾಯಿತು. ವೃತ್ತಿಮೇಳಗಳಾದ ಸಾಲಿಗ್ರಾಮ, ಪೆರ್ಡೂರು, ಕಲಾಧರ ಮೇಳಗಳುಆಟ ನಿಲ್ಲಿಸಿ ತಿಂಗಳಾಗುತ್ತ ಬಂತು. ವಾಹನ ಬಾಡಿಗೆ, ಕಾರ್ಮಿಕರ ಪಗಾರು, ಕೊಡಲೇ ಬೇಕು. ಕಲಾವಿದರಿಗೆ ಕೊಡುವುದು ಕಷ್ಟ.
ಕೇಳುವವರಿಲ್ಲ. ಯಕ್ಷಗಾನ ಮೇಳಗಳು ಪೌರಾಣಿಕ ಪ್ರಸಂಗ ಪ್ರದರ್ಶಿಸುತ್ತವೆ. ಅವಿದ್ಯಾವಂತರಾದರೂ ಪ್ರಜ್ಞಾವಂತರೇ ಆಟ ನೋಡುತ್ತಾರೆ. ಕ್ರಿಮಿನಲ್‌ಗಳು ಆಟಕ್ಕೆ ಬರುವುದಿಲ್ಲ. ಅದಲ್ಲದೆ ಯಕ್ಷಗಾನ ಈ ರಾಜ್ಯದ ಸಾಂಸ್ಕೃತಿಕ ಪ್ರಾತಿನಿಧಿ ಕ ಕಲೆ. ಆಟ ನಿಂತರೆ ಮೇಳಕ್ಕೆ ನಿತ್ಯ ಕನಿಷ್ಠ 25ಸಾವಿರ ರೂ. ಖರ್ಚಿದೆ ಎಂದು ವಿದ್ಯಾಧರ ಜಲವಳ್ಳಿ, ಕಿಶನ್‌ಕುಮಾರ್ ಹೆಗಡೆ, ನೀಲ್ಕೋಡ ಶಂಕರ
ಹೆಗಡೆ, ಮೊದಲಾದವರು ಬೇಸರ ವ್ಯಕ್ತಪಡಿಸಿದ್ದಾರೆ. ಸಂಸ್ಕಾರ ನೀಡುವ ಯಕ್ಷಗಾನ ಬಂದ್ ಮಾಡುವ ಚುನಾವಣಾ ಆಯೋಗ ಹೊಡೆದಾಟಕ್ಕೆ ಕಾರಣವಾಗುವ ವೈನ್ ಶಾಪ್ ಗಳನ್ನು ಯಾಕೆ ನೀತಿ ಸಂಹಿತೆ ದಿನದಿಂದ ಬಂದ್ ಮಾಡುವುದಿಲ್ಲ. ಮತದಾರರನ್ನು ಆಕರ್ಷಿಸಲು ನಾಚ್, ಕ್ಯಾಬರೆ ನಡೆಯುತ್ತದೆ. ಎಲ್ಲ ಥೇಟರ್‌ಗಳಲ್ಲಿ ಸಿನಿಮಾದ ಮೂರು ಪ್ರದರ್ಶನವಿರುತ್ತದೆ. ಸಿನಿಮಾ ಮತ್ತು ಖಾಸಗಿ ಚಾನೆಲ್‌ಗಳ ಧಾರವಾಹಿಗಳಲ್ಲಿ ಹಿಂಸೆ
ವಿಜೃಂಭಿಸುವ ಕಥೆಗಳಿರುತ್ತವೆ. ಇವೆಲ್ಲ ನಡೆಯುವಾಗ ನೀತಿಸಂಹಿತೆ ಅನ್ವಯಿಸಲು ಯಕ್ಷಗಾನ ಯಾವ ತಪ್ಪು ಮಾಡಿದೆ ಎಂದು ಕಲಾವಿದರು, ಸಂಘಟಕರು ಕೇಳುತ್ತಾರೆ. ಕಳೆದ ವರ್ಷ ವಿಧಾನಸಭಾ ಚುನಾವಣೆ. ಈ ಬಾರಿ ಲೋಕಸಭಾ ಚುನಾವಣೆ, ಮುಂದೆ ಬೇಸಿಗೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ.
ಬೇಸಿಗೆಯ 4ತಿಂಗಳು ಮಾತ್ರ ನಡೆಯುವ ಯಕ್ಷಗಾನ ಎರಡು ತಿಂಗಳು ನಿಂತರೆ ಈ ಕ್ಷೇತ್ರಕ್ಕೆ ತೊಡಗಿಸಿದ ಕೋಟ್ಯಾಂತರ ರೂಪಾಯಿಯಲ್ಲಿ ಬಡ್ಡೆ ಹುಟ್ಟುವುದಿಲ್ಲ.
Related Articles
ತನ್ನ ಮೂವರು ಮಕ್ಕಳನ್ನು ಕಳೆದುಕೊಂಡೆ..ಮತ್ತೆ ಯುದ್ಧಕ್ಕೆ ಕಳಿಸಲು ಇನ್ನೊಬ್ಬ ಮಗನಿಲ್ಲ ಎಂದು ಅಳುತ್ತಾಳೆ. ಈ ಪಾತ್ರಧಾರಿ ಮೇಲೆ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.
Advertisement
1957ರ ನಂತರ ವರ್ಷವೂ ಒಂದಲ್ಲ ಒಂದು ಚುನಾವಣೆ ಬರುತ್ತಲೇ ಇದೆ. ಕುಂಬ್ಳೆ ಸುಂದರರಾಯರು ಯಕ್ಷಗಾನ ವೇಷದಲ್ಲಿ ಪೌರಾಣಿಕಕಥೆಯನ್ನು ಸಮಕಾಲೀನ ರಾಜಕೀಯಕ್ಕೆ ಹೋಲಿಸಿ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ಎಲ್ಲ ಪಕ್ಷದ ಜನ ಖುಷಿ ಪಡುತ್ತಿದ್ದರು. ಸುಂದರರಾಯರು ಒಂದು ಅವಧಿಗೆ ಶಾಸಕರಾದರು. ಇಷ್ಟು ವರ್ಷ ಇಲ್ಲದ್ದು ಇತ್ತೀಚಿನ ವರ್ಷಗಳಲ್ಲಿ ನೀತಿಸಂಹಿತೆ ಹೆಸರಿನಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ತಡೆ ಒಡ್ಡುತ್ತಿರುವುದು ನ್ಯಾಯವಲ್ಲ.
ಅಭಿವ್ಯಕ್ತಿ ಸ್ವಾತಂತ್ರ್ಯದ, 48 ಮೇಳಗಳ ಮತ್ತು ನೂರಾರು ಹವ್ಯಾಸಿ ಕಲಾವಿದರ, ಅವರನ್ನು ಅವಲಂಭಿಸಿದವರ ಅನ್ನದ ಪ್ರಶ್ನೆಯೂ ಹೌದು. ಚುನಾವಣಾ ನೀತಿಸಂಹಿತೆ ಕಾನೂನಿನ ಹೆಸರಿನಲ್ಲಿ ನಾಡಿನ ಶ್ರೇಷ್ಠ ಕಲೆಗೆ ಕಂಟಕವಾಗುತ್ತಿದೆ. ಇದನ್ನು ಕಲಾವಿದರು, ಮೇಳಗಳು ಪ್ರಶ್ನಿಸಬೇಕು, ಮತ ಪಡೆಯಲು ಬಂದವರನ್ನು ಜನ
ಕೇಳಬೇಕು, ಚುನಾವಣಾ ಆಯೋಗ ಯಕ್ಷಗಾನ ಪ್ರದರ್ಶನಕ್ಕೆ ಪರವಾನಗಿ ಕೊಡಬೇಕು. ಜೀಯು, ಹೊನ್ನಾವರ