ಬೆಂಗಳೂರು: ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆಯೇ, ನೀತಿ ಸಂಹಿತೆಯಿಂದಾಗಿ ಬಾಕಿ ಉಳಿದಿದ್ದ ಕೆಲಸಗಳಿಗೆ ರಾಜ್ಯ ಸರ್ಕಾರ ಚುರುಕು ಮುಟ್ಟಿಸಿದೆ. ರಾಜ್ಯದಲ್ಲಿ ಬರಪರಿಸ್ಥಿತಿ ತೀವ್ರವಾಗಿದ್ದು, ತ್ವರಿತವಾಗಿ ಕುಡಿಯುವ ನೀರಿನ ಕಾಮಗಾರಿ ಕೈಗೊಳ್ಳಬೇಕಿದೆ. ಇದಕ್ಕಾಗಿಯೇ ಈಗಾಗಲೇ ರಚಿಸಲಾಗಿರುವ ಕಾರ್ಯಪಡೆಗಳಿಗೆ ಸಮ ರೋಪಾದಿಯಲ್ಲಿ ಕೆಲಸ ಮಾಡುವಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ರಾಜ್ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಬುಧವಾರ ಕೃಷ್ಣ ಬೈರೇಗೌಡ ಅವರು, ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್.ಕೆ.ಅತೀಕ್ ಒಳಗೊಂಡಂತೆ ಉನ್ನತ ಅಧಿಕಾರಿಗಳ ಸಭೆ ನಡೆಸಿದ್ದಾರೆ. ರಾಜ್ಯದ 176 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿದೆ. ಈ ಪ್ರದೇಶಗಳಲ್ಲಿ ತುರ್ತಾಗಿ ನೀರು ಪೂರೈಕೆ ವ್ಯವಸ್ಥೆಗೆ ಅಗತ್ಯವಾದ ಕ್ರಮ ಕೈಗೊ ಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.
ಏ. 23ರ ನಂತರ ಅಗತ್ಯ ಕಾಮಗಾರಿಗಳಿಗೆ ಟೆಂಡರ್ ಆಹ್ವಾನಿಸಿ ಕಾರ್ಯಾದೇಶ ನೀಡಲು ಹಾಗೂ ಕಾಮಗಾರಿ ಜಾರಿಗೊಳಿಸಲು ಚುನಾವಣಾ ಆಯೋಗ ಒಪ್ಪಿಗೆ ನೀಡಿರುವುದರಿಂದ ತ್ವರಿತವಾಗಿ ಅಲ್ಪಾವಧಿ ಟೆಂಡರ್‌ಗಳನ್ನು ಆಹ್ವಾನಿಸಿ ಕುಡಿಯುವ ನೀರಿನ ಕಾಮಗಾರಿಗಳನ್ನು ಆರಂಭಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವ ಕಡೆ ಹೊಸದಾಗಿ ಕೊಳವೆ ಬಾವಿ ಕೊರೆಯುವ ಅಗತ್ಯತೆ ಪರಿಗಣಿಸಿ ಪ್ರತಿ ತಾಲೂಕಿಗೆ ಒಂದು ಅಥವಾ ಎರಡು ಕೊಳವೆ ಬಾವಿ ಕೊರೆಯುವ ಏಜೆನ್ಸಿಗಳನ್ನು ಟೆಂಡರ್ ಮೂಲಕ ಗುರುತಿಸಲಾಗುತ್ತಿದೆ. ಅವಧಿಯನ್ನು 15 ತಿಂಗಳಿಗೆ ಸಿದ್ಧಪಡಿಸುವಂತೆ ಕೊಳವೆ ಬಾವಿಗಳಿಂದ ಸಂಪರ್ಕ ಕಲ್ಪಿಸಲು ಡಿ.ಸಿ.ಗಳ ಬಳಿಯಿರುವ ಎನ್‌ಡಿಆರ್‌ಎಫ್/ ಎಸ್‌ಡಿಆರ್‌ಎಫ್ ಅಥವಾ ಗ್ರಾಮ ಪಂಚಾಯಿತಿಗಳ ಅನುದಾನ ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಈ ಹಣ ಸಾಕಾಗದಿದ್ದರೆ ಟಾಸ್ಕ್ಫೋರ್ಸ್‌ಗಳಿಗೆ ಒದಗಿಸಲಾದ ಅನುದಾನ ಬಳಸಿಕೊಳ್ಳುವಂತೆಯೂ ತಿಳಿಸಲಾಗಿದೆ. ಅಲ್ಲದೇ ಈ ಸಂಬಂಧ ಅಗತ್ಯ ಸುತ್ತೋಲೆಯನ್ನೂ ಹೊರಡಿಸಲಾಗಿದೆ ಎಂದು ಹೇಳಿದರು.
ಅಧಿಕಾರಿಗಳೇ ಹೊಣೆ
ಒಣಗಿದ ಕೊಳವೆ ಬಾವಿಗಳ ಸಾಮಗ್ರಿಗಳನ್ನು ಶೇಖರಿಸಿ ಹೊಸ ಕೊಳವೆ ಬಾವಿಗಳಿಗೆ ಬೇಕಾದ ಪಂಪ್‌ಸೆಟ್, ಜಿಐ ಪೈಪ್ ಹಾಗೂ ಕೇಬಲ್ಗಳನ್ನು ಕಡ್ಡಾಯವಾಗಿ ಉಪಯೋಗಿಸುವಂತೆ ಸೂಚಿಸಲಾಗಿದೆ. ಹಳೆಯ ವಿದ್ಯುತ್ ಸಂಪರ್ಕವನ್ನು ಹೊಸ ಸಂರ್ಪಕ್ಕೆ ವರ್ಗಾಯಿಸುವಂತೆಯೂ ಸೂಚನೆ ನೀಡಲಾಗಿದೆ. ಆ ಮೂಲಕ ಅನಗತ್ಯ ದುಂದುವೆಚ್ಚ ತಡೆಗೆ ಕ್ರಮ ವಹಿಸಲಾಗಿದೆ. ಈ ಯೋಜನೆಯ ಅನುಷ್ಠಾನದಲ್ಲಿ ಯಾವುದೇ ರೀತಿಯ ಲೋಪ ಕಂಡು ಬಂದರೆ ಸಂಬಂಧಪಟ್ಟ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂಬ ಎಚ್ಚರಿಕೆ ನೀಡಲಾಗಿದೆ ಎಂದು ಸಚಿವರು ಹೇಳಿದರು.