Advertisement

ತೆಂಗಿನ ಕಾಯಿ ಕೀಳುವ ಕಾರ್ಮಿಕರಿಗೆ ಕೇರಾ ವಿಮೆ

03:33 PM Aug 10, 2022 | Team Udayavani |

ಕೋಟ : ತೆಂಗಿನ ಕಾಯಿ ಕೀಳುವಾಗ ಅಥವಾ ನೀರಾ ತೆಗೆಯುವ ಸಂದರ್ಭ ಮರ ದಿಂದ ಬಿದ್ದು ಮೃತಪಟ್ಟರೆ, ಗಾಯ ಅಥವಾ ಅಂಗವೈಕಲ್ಯಕ್ಕೊಳಗಾದರೆ ಪರಿಹಾರದ ಜತೆಗೆ ಆಸ್ಪತ್ರೆ ವೆಚ್ಚ ಮುಂತಾದ ಸೌಕರ್ಯಗಳನ್ನು ನೀಡುವ “ಕೇರಾ ಸುರಕ್ಷ ವಿಮೆ’ ಎನ್ನುವ ಯೋಜನೆಯೊಂದು ತೆಂಗು ಅಭಿವೃದ್ಧಿ ಮಂಡಳಿ ಮೂಲಕ ಚಾಲ್ತಿಯಲ್ಲಿದೆ. ಆದರೆ ಬಹುತೇಕ ಕಾರ್ಮಿಕರಿಗೆ ಈ ಬಗ್ಗೆ ಮಾಹಿತಿಯೇ ಇಲ್ಲದೆ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ.

Advertisement

ಯೋಜನೆಯನ್ನು ತೆಂಗು ಅಭಿವೃದ್ಧಿ ಮಂಡಳಿ ಮತ್ತು ಖಾಸಗಿ ವಿಮಾ ಕಂಪೆನಿಯ ಸಹಯೋಗ ದಲ್ಲಿ ರೂಪಿಸಲಾಗಿದೆ. ವಿಮೆಯ ವಾರ್ಷಿಕ ಮೊತ್ತ 398.65 ರೂ. ಆದರೆ ಇದಕ್ಕೆ ರೈತರಿಂದ ಕೇವಲ 99 ರೂ. ಪಡೆಯಲಾಗುತ್ತದೆ. ಉಳಿದ 299.65 ರೂ. ಮೊತ್ತವನ್ನು ಮಂಡಳಿ ಭರಿಸುತ್ತದೆ. ವಿಮೆಗೆ ಒಳಪಟ್ಟ ಕಾರ್ಮಿಕ ತೆಂಗಿನ ಮರದಿಂದ ಬಿದ್ದು ಮೃತಪಟ್ಟರೆ ಅಥವಾ ಶಾಶ್ವತ ಅಂಗವೈಕಲ್ಯಕ್ಕೊಳಗಾದರೆ 5 ಲಕ್ಷ ರೂ., ಭಾಗಶಃ ಅಂಗವಿಕಲರಾದರೆ 2.50 ಲಕ್ಷ ರೂ., ಗಾಯಾಳುವಾದರೆ ಆಸ್ಪತ್ರೆ ವೆಚ್ಚ 1 ಲಕ್ಷ ರೂ., ಆ್ಯಂಬುಲೆನ್ಸ್‌ ವೆಚ್ಚ 3 ಸಾವಿರ ರೂ. ಹಾಗೂ ಪೂರ್ಣ ಅಂಗವೈಕಲ್ಯಕ್ಕೆ ಆರು ವಾರಗಳಿಗೆ 18 ಸಾವಿರ ರೂ., ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಜತೆಗಾರರಿಗೆ ಸೇವಾ ಶುಲ್ಕವಾಗಿ ಮೂರು ಸಾವಿರ ರೂ. ಮತ್ತು ಅಂತ್ಯಸಂಸ್ಕಾರ ಪರಿಹಾರ ಐದು ಸಾವಿರ ರೂ.ವನ್ನು ನೀಡಲಾಗುತ್ತಿದೆ.

ಕಾರ್ಮಿಕರಿಗೆ ಮಾಹಿತಿ ಕೊರತೆ
ತೆಂಗಿನ ಕಾಯಿ ಕೀಳುವ ಕಾರ್ಮಿಕರ ಜೀವನಕ್ಕೆ ಭದ್ರತೆ ನೀಡುವ ಉದ್ದೇಶದಿಂದ ವಿಮಾ ಸೌಲಭ್ಯ ಇದೆ. ಆದರೆ ಬಹುತೇಕ ಕಾರ್ಮಿಕರಿಗೆ ಇದರ ಮಾಹಿತಿ ಇಲ್ಲ. ಆ ಕಾರಣದಿಂದ ಇಂತಹ ಕಾರ್ಮಿಕರು ಎಷ್ಟು ಜನ ಇದ್ದಾರೆ ಎಂಬ ಅಧಿಕೃತ ಮಾಹಿತಿಯೂ ಇಲಾಖೆಯ ಬಳಿ ಇಲ್ಲ. ಕಾರ್ಮಿಕರು ತಾವಾಗಿಯೇ ಮುಂದೆ ಬಂದು ನೋಂದಾಯಿಸಿಕೊಂಡರೆ ಮಾತ್ರ ಫ‌ಲಾನುಭವಿಗಳಾಗಬಹುದು. ಪ್ರಸ್ತುತ ದಾಖಲೆಗಳ ಪ್ರಕಾರ ದ.ಕ. ಹಾಗೂ ಉಡುಪಿ ಜಿಲ್ಲೆಗಳ ಕೇವಲ 337 ಮಂದಿ ಮಾತ್ರ ಯೋಜನೆಗೆ ಒಳಪಟ್ಟಿದ್ದಾರೆ. ಉಡುಪಿ ಜಿಲ್ಲೆಯವರು 77 ಮಂದಿ ಮಾತ್ರ. ಪ್ರಸ್ತುತ ಗ್ರಾಮಸಭೆಗಳಲ್ಲಿ ತೋಟಗಾರಿಕೆ ಇಲಾಖೆಯವರು ಈ ಕುರಿತು ಕಿರು ಮಾಹಿತಿ ನೀಡುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ ಕೆವಿಕೆ ವತಿಯಿಂದ ತೆಂಗಿನ ಮರ ಏರುವ ತರಬೇತಿ ಪಡೆಯುವವರಿಗೆ ವಿಮೆ ಮಾಡಿಸಲಾಗುತ್ತಿದೆ.

ಸೌಲಭ್ಯಕ್ಕೆ ಪಡೆಯುವ ವಿಧಾನ
ತೆಂಗಿನ ಕಾಯಿ ಕೀಳುವ ಅಥವಾ ನೀರಾ ಕಾರ್ಮಿಕ ಎನ್ನುವುದಕ್ಕೆ ದಾಖಲೆಯಾಗಿ ಗ್ರಾ.ಪಂ. ಅಧ್ಯಕ್ಷರ ದೃಢೀಕರಣ ಪತ್ರವೊಂದಿದ್ದರೆ ಸಾಕು. ಅನಂತರ www.coconutboard.gov.in ನಿಂದ ನಿಗದಿತ ಅರ್ಜಿ ನಮೂನೆ ಪಡೆದು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ, ವಿಮಾ ಕಂತಿನ ಮೊತ್ತ 99 ರೂ.ಗಳನ್ನು ತೆಂಗು ಅಭಿವೃದ್ಧಿ ಮಂಡಳಿಗೆ ಪಾವತಿಯಾಗುವಂತೆ ಡಿಡಿ/ನೆಲ್‌/ಭೀಮ್‌/ಫೋನ್‌ ಪೇ /ಗೂಗಲ್‌ ಪೇ /ಪೇಟಿಎಂ ಮೂಲಕ ಪಾವತಿಸಿ ದಾಖಲೆಯನ್ನು ತೋಟಗಾರಿಕೆ ಇಲಾಖೆಯ ತಾಲೂಕು ಕಚೇರಿಗೆ ಹಸ್ತಾಂತರಿಸಿ ಸ್ವೀಕೃತಿ ಪಡೆಯಬೇಕು ಮತ್ತು ಪಾಲಿಸಿ ಬಾಂಡ್‌ ಪಡೆಯಬೇಕು. ಅಪಘಾತ ಸಂಭವಿಸಿ ಸಾವು ಸಂಭವಿಸಿದಲ್ಲಿ ಅಥವಾ ಅಂಗವೈಕಲ್ಯ ಹೊಂದಿದಲ್ಲಿ 7 ದಿನಗಳ ಒಳಗಾಗಿ ಮಂಡಳಿಗೆ ತಿಳಿಸಿ ಯೋಜನೆಯ ಪ್ರಯೋಜನ ಪಡೆಯಬಹುದು.

ಕೇರಾ ವಿಮೆ ಬಗ್ಗೆ ಗ್ರಾಮಸಭೆಗಳಲ್ಲಿ ಹಾಗೂ ಕೆವಿಕೆ ಮೂಲಕ ಮಾಹಿತಿ ನೀಡಲಾಗುತ್ತಿದೆ. ಅರ್ಹ ಕಾರ್ಮಿಕರು ಇಲಾಖೆ ಮೂಲಕ ಯೋಜನೆಯ ಪ್ರಯೋಜನ ಪಡೆಯಬಹುದು.
– ಭುವನೇಶ್ವರೀ, ಎಚ್‌.ಆರ್‌. ನಾಯ್ಕ , ಉಪ ನಿದೇರ್ಶಕರು ತೋಟಗಾರಿಕೆ ಇಲಾಖೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆ

Advertisement

– ರಾಜೇಶ್‌ ಗಾಣಿಗ ಅಚ್ಲಾಡಿ

Advertisement

Udayavani is now on Telegram. Click here to join our channel and stay updated with the latest news.

Next