Advertisement

ಬಪ್ಪನಾಡು ಪರಿಸರದಲ್ಲಿ ತೆಂಗಿನಮರಗಳಿಗೆ ಕೀಟ ಬಾಧೆ

12:42 PM Oct 28, 2017 | Team Udayavani |

ಹಳೆಯಂಗಡಿ: ಮೂಲ್ಕಿಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿಯ ಹತ್ತಾರು ಮನೆಗಳ ಕೃಷಿ ತೋಟದ ಪರಿಸರದಲ್ಲಿ ತೆಂಗಿನಮರಗಳಿಗೆ ಕೀಟ ಭಾದೆ ವ್ಯಾಪಿಸಿದ್ದು, ಮರದ ಗರಿಗಳು ಕರಟಿ ಆತಂಕ ಹುಟ್ಟಿಸಿದೆ.

Advertisement

ಗಾಳಿಯಲ್ಲಿಯೇ ಹಾರಾಡುವ ಈ ಬಿಳಿ ಬಣ್ಣದ ಕೀಟಗಳು ನೇರವಾಗಿ ತೆಂಗಿನ ಗರಿಗಳಿಗೆ ಅಂಟಿಕೊಂಡು ಹಂತ ಹಂತವಾಗಿ ತೆಂಗಿನ ಮರಕ್ಕೆ ಹರಡುತ್ತಿವೆ. ಗರಿಗಳು ಕರಟಿದಾಗ ಅದರಿಂದ ಹೊರಹೊಮ್ಮುವ ಕಪ್ಪು ದ್ರಾವಣವು ನೆಲಕ್ಕೆ ಹರಿಯುವಾಗ ಅದು ಕಪ್ಪು ಡಾಮರಿನಂತೆ ತೋರುತ್ತದೆ. ಇದು ಬಿಸಿಲಿಗೆ ಒಣಗಿಸಿರುವ ಬಟ್ಟೆಗಳಿಗೂ ಹರಡುತ್ತಿರುವುದರಿಂದ ಸ್ಥಳೀಯರು ಈ ವಿಚಿತ್ರ ರೋಗದ ಬಗ್ಗೆ ಸ್ಪಷ್ಟವಾದ ಮಾಹಿತಿ ತಿಳಿಯದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಾರುಕಟ್ಟೆಯಲ್ಲಿ ತೆಂಗಿನಕಾಯಿಗೆ ಅಧಿಕ ಬೆಲೆ ಬಂದಿರುವ ಸಮಯದಲ್ಲೇ ಈ ಕೀಟ ಬಾಧೆ ಬಂದಿರುವುದರಿಂದ
ಇಳುವರಿ ಹಾನಿಯ ಭೀತಿಯನ್ನು ಸ್ಥಳೀಯ ರೈತರು ಎದುರಿಸುತ್ತಿದ್ದಾರೆ.

ತೆಂಗು ಮಾತ್ರವಲ್ಲದೆ ಮಾವು, ಪೇರಳೆ ಹಾಗೂ ಜಾಮೂನು ಮರಗಳಿಗೂ ಈ ರೋಗ ಹಬ್ಬುತ್ತಿದೆ ಎಂಬುದು ಸ್ಥಳೀಯರ ದೂರು. ತರಕಾರಿಗಳಾದ ಹರಿವೆ ಸೊಪ್ಪು, ಬಸಳೆ ಮುಂತಾದ ಬೆಳೆಗಳನ್ನೂ ಈ ಕೀಟಗಳು ಬಿಡುತ್ತಿಲ್ಲ. ಬಳ್ಳಿಗಳ ಹಾಗೂ ಕಾಯಿಗಳ ಮೇಲೆ ಕಪ್ಪು ಕಲೆಗಳಾಗುವುದರಿಂದ ತರಕಾರಿಗಳು ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಆಕರ್ಷಿಸಿಸುವುದಿಲ್ಲ. ಕೃಷಿ ಇಲಾಖೆಗೆ ಮಾಹಿತಿ ನೀಡಿದ್ದರೂ ಪ್ರಯೋಜನವಾಗಿಲ್ಲ ಎಂಬುದು ಸ್ಥಳೀಯರ ದೂರು.

ಕಾರ್ನಾಡಿನಲ್ಲಿ ಕೀಟ ಬಾಧೆ ಇತ್ತು
ಆರು ತಿಂಗಳ ಹಿಂದೆ ಇದೇ ರೀತಿಯ ಕೀಟ ಬಾಧೆಯು ಮೂಲ್ಕಿಯ ಕಾರ್ನಾಡು ಧರ್ಮಸಾನ ವಲಯದಲ್ಲಿ ಕಂಡು ಬಂದಿತ್ತು. ಸ್ಥಳಕ್ಕೆ ಕೃಷಿ ತಜ್ಞರು ಭೇಟಿ ನೀಡಿ ಕಾಗದಗಳಿಗೆ ಹರಳೆಣ್ಣೆ ಬಳಿದು ನೇತು ಹಾಕಿದರೆ, ಅದಕ್ಕೆ ಹುಳುಗಳು ಅಂಟಿ ನಾಶವಾಗುತ್ತವೆ ಎಂದಿದ್ದರು.

Advertisement

ಕಹಿಬೇವು ಎಣ್ಣೆ ನೀರಿನೊಂದಿಗೆ ಬೆರಸಿ ಮರಗಳಿಗೆ ಸಿಂಪಡಿಸುವಂತೆಯೂ ಸೂಚಿಸಲಾಗಿತ್ತು. ಮಳೆ ಬಂದ ಸಮಯ ಈ ಕೀಟಗಳು ಸಂಪೂರ್ಣ ನಾಶವಾಗುತ್ತದೆ ಎಂದೂ ಹೇಳಲಾಗಿತ್ತು.

ಪರಿಹಾರಕ್ಕಾಗಿ ಆಗ್ರಹ
ಹಠಾತ್ತಾಗಿ ಬಂದಿರುವ ಈ ಕೀಟಬಾಧೆಯು ನೂರಾರು ತೆಂಗಿನಮರಗಳನ್ನೇ ನಾಶಮಾಡುತ್ತಿದೆ. ಕೃಷಿ ಇಲಾಖೆಗೂ ಮಾಹಿತಿ ನೀಡಿದ್ದೇವೆ. ನಾಲ್ಕು ತಿಂಗಳಿನಿಂದ ಇಂತಹ ಕೀಟಬಾಧೆ ಉಂಟಾಗಿದೆ. ತೆಂಗಿನ ಮರಗಳೊಂದಿಗೆ ಹಣ್ಣು
ಹಂಪಲುಗಳಿಗೂ ಹಾನಿಯಾಗುತ್ತಿದೆ. ಇದಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಆಗ್ರಹಿಸುತ್ತಾರೆ.
ಕಿಶೋರ್‌ ಶೆಟ್ಟಿ, ಕೃಷಿಕ

Advertisement

Udayavani is now on Telegram. Click here to join our channel and stay updated with the latest news.

Next