ತುಮಕೂರು/ಹಾಸನ: ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಉಂಡೆ ಕೊಬ್ಬರಿ ಖರೀದಿಗೆ ನೋಂದಣಿ ಪ್ರಕ್ರಿಯೆ ಸೋಮವಾರ ದಿಂದ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಸಾವಿರಾರು ರೈತರು ನೋಂದಣಿ ಕೇಂದ್ರಗಳ ಬಳಿ ಬೀಡುಬಿಟ್ಟಿದ್ದು, ನೂಕುನುಗ್ಗಲು ಉಂಟಾಗಿದೆ.
ಈ ಹಿಂದೆ ಕೊಬ್ಬರಿ ಮಾರಾಟ ನೋಂದಣಿ ಕಾರ್ಯದಲ್ಲಿ ಕೆಲವೆಡೆ ರೈತರಿಗೆ ಅನ್ಯಾಯವಾಗಿದೆ ಎಂದು ಕೇಂದ್ರ ಸರಕಾರ ನಫೆಡ್ ನೋಂದಣಿ ಅವಧಿಯನ್ನು ಮೊಟಕುಗೊಳಿಸಿತ್ತು. ಈಗ ಮತ್ತೆ ನೋಂದಣಿಗೆ ಚಾಲನೆ ನೀಡಿದೆ. ಹೀಗಾಗಿ ತುಮಕೂರು, ಹಾಸನ ಜಿಲ್ಲೆಯ ಹಲವೆಡೆ ರವಿವಾರ ಮಧ್ಯಾಹ್ನದಿಂದಲೇ ಸ್ಥಳೀಯ ಎಪಿಎಂಸಿಗಳಿಗೆ ಆಗಮಿಸಿದ ರೈತರು ಸರದಿ ಸಾಲಿನಲ್ಲಿ ರಾತ್ರಿಯಿಡೀ ಕಾದು ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದೂರದ ಊರುಗಳಿಂದ ಬಂದಿದ್ದವರು ಚಾಪೆ, ಹೊದಿಕೆಗಳನ್ನು ತಂದು ರಾತ್ರಿ ಪೂರ್ತಿ ಆವರಣದಲ್ಲಿಯೇ ಮಲಗಿದ್ದು, ಸೋಮವಾರ ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಹೆಸರು ನೋಂದಾಯಿಸಲು ಮುಗಿಬಿದ್ದರು.
ಮುಂದಿನ 45 ದಿನಗಳವರೆಗೆ ಕೊಬ್ಬರಿ ನೋಂದಣಿ ಪ್ರಕ್ರಿಯೆ ಹಾಗೂ ಖರೀದಿಗೆ ಅವಕಾಶ ವಿದೆ ಎಂದು ಅಧಿಕಾರಿಗಳು ತಿಳಿಸಿದರೂ ರೈತರು ಜಾಗ ಬಿಟ್ಟು ಕದಲುತ್ತಿಲ್ಲ. ಕಳೆದ ಬಾರಿಯಂತೆ ನೋಂದಣಿ ಪ್ರಕ್ರಿಯೆ ಬೇಗ ಮುಗಿಯಬಹುದೆಂಬ ಆತಂಕದ ಹಿನ್ನೆಲೆಯಲ್ಲಿ ತೆಂಗು ಬೆಳೆಗಾರರ ರೈತರು ಮಗಿಬಿದ್ದಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ, ಚನ್ನರಾಯಪಟ್ಟಣದ ನೋಂದಣಿ ಕೇಂದ್ರಗಳ ಬಳಿ ಸರದಿ ಸಾಲಿನಲ್ಲಿ ನಿಂತ ರೈತರು ರವಿವಾರ ರಾತ್ರಿಯಿಡೀ ಜಾಗರಣೆ ಮಾಡಿದರು. ತುಮಕೂರು ಜಿಲ್ಲೆಯಲ್ಲೂ ಕೊಬ್ಬರಿ ಖರೀದಿ ಕೇಂದ್ರಗಳ ಮುಂದೆ ರೈತರು ಸರದಿ ಸಾಲಿನಲ್ಲಿ ನಿಂತಿದ್ದರು. ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಕೇಂದ್ರಗಳ ಮುಂದೆ ರವಿವಾರ ದಿಂದಲೇ ರೈತರು ತಮ್ಮ ಗುರುತಿಗಾಗಿ ಕಲ್ಲು ಇಟ್ಟಿಗೆ, ಚಪ್ಪಲಿಗಳನ್ನು ಸಾಲಾಗಿ ಇಟ್ಟಿದ್ದು ಕಂಡು ಬಂತು.
ಹೆಚ್ಚುವರಿ ಕೇಂದ್ರಗಳು
ರೈತರ ಅನುಕೂಲಕ್ಕಾಗಿ ತುಮಕೂರು ಜಿಲ್ಲೆಯಲ್ಲಿ ಉಂಡೆ ಕೊಬ್ಬರಿ ಖರೀದಿಸಲು ಹೆಚ್ಚುವರಿಯಾಗಿ 10 ಕೇಂದ್ರಗಳನ್ನು ತೆರೆಯಬೇಕೆಂದು ಕೃಷಿ ಮಾರಾಟ ಮಂಡಳಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.