Advertisement

ಸೌಂದರ್ಯ ಲಹರಿ: ಕೊಬ್ಬರಿ ಎಣ್ಣೆ ಸೌಂದರ್ಯ ಪ್ರಸಾಧನಗಳು

03:50 AM Mar 24, 2017 | |

ಮನೆಯಲ್ಲಿಯೇ ಕೊಬ್ಬರಿ ಎಣ್ಣೆಯನ್ನು ಬಳಸಿ ಆಧುನಿಕ ವಿಧದ ಸೌಂದರ್ಯ ಪ್ರಸಾಧನಗಳನ್ನು ಹಾಗೂ ಪಾರಂಪರಿಕ ವಿಧಾನದ ಸೌಂದರ್ಯ ಪ್ರಸಾಧನ ಹಾಗೂ ಸೌಂದರ್ಯ ರಕ್ಷಕಗಳನ್ನು ತಯಾರಿಸಬಹುದು.

Advertisement

ಕೊಬ್ಬರಿ ಎಣ್ಣೆಯ ಬಾಡಿಲೋಶನ್‌
ಕೊಬ್ಬರಿ ಎಣ್ಣೆ 2 ಭಾಗ, ಆಲಿವ್‌ ತೈಲ 1 ಭಾಗ, ಎಲೋವೆರಾ ಅಥವಾ ಕುಮಾರೀ ಗಿಡದ ಎಲೆಯ ತಿರುಳು- ಇವೆಲ್ಲವನ್ನೂ ಬೆರೆಸಿ ಮಿಕ್ಸರ್‌ನಲ್ಲಿ ಹಾಕಿ ಬೀಟ್‌ ಮಾಡಬೇಕು. ತದನಂತರ ಸ್ನಾನಕ್ಕೆ 1/4 ಗಂಟೆ ಮೊದಲು ದೇಹ, ಮುಖ, ಕೈಕಾಲುಗಳಿಗೆ ಲೇಪಿಸಿ ಮಾಲೀಶು ಮಾಡಬೇಕು. ಬಳಿಕ ಸ್ನಾನ ಮಾಡಿದರೆ ದೇಹ ಹಾಗೂ ಮೊಗದ ಚರ್ಮ ಮೃದು, ಸ್ನಿಗ್ಧ ಹಾಗೂ ಕಾಂತಿಯುತವಾಗುತ್ತದೆ.

ಕೊಬ್ಬರಿ ಎಣ್ಣೆಯ ಹ್ಯಾಂಡ್‌ ಸ್ಕ್ರಬ್‌
ಕೊಬ್ಬರಿ ಎಣ್ಣೆ  1 ಚಮಚ, 2 ಚಮಚ ಶುದ್ಧ ಜೇನು, 2 ಚಿಟಿಕೆ ಉಪ್ಪು , 1 ಚಮಚ ಸಕ್ಕರೆ, 1 ಚಮಚ ನಿಂಬೆರಸ.
ಇವೆಲ್ಲವುಗಳನ್ನು ಒಂದು ಬೌಲ್‌ನಲ್ಲಿ ತೆಗೆದುಕೊಂಡು ಚೆನ್ನಾಗಿ ಕಲಕಬೇಕು. ತದನಂತರ ಕೈಗಳಿಗೆ ಲೇಪಿಸಿ ಮೃದುವಾಗಿ ಮಾಲೀಶು ಮಾಡಬೇಕು. 10-15 ನಿಮಿಷದ ಬಳಿಕ ತೊಳೆದರೆ, ಕೈಗಳ ಒರಟು ಒಣಗಿದ ಚರ್ಮ ಮೃದುವಾಗಿ, ಕೈಗಳು ಸುಂದರವಾಗುತ್ತವೆ.

ಮನೆಯಲ್ಲೇ ತಯಾರಿಸಬಹುದಾದ ಹಲ್ಲುಜ್ಜುವ ಪೇಸ್ಟ್‌
ಕೊಬ್ಬರಿ ಎಣ್ಣೆ 1 ಚಮಚ, ಅಷ್ಟೇ ಪ್ರಮಾಣದ ಬೇಕಿಂಗ್‌ ಸೋಡಾ ಬೆರೆಸಬೇಕು. ಇದಕ್ಕೆ 4 ಹನಿ ಪೆಪ್ಪರ್‌ಮಿಂಟ್‌ ತೈಲ ಬೆರೆಸಬೇಕು. ಇದರಿಂದ ಹಲ್ಲುಜ್ಜಿದರೆ ಹಲ್ಲು ಹಾಗೂ ಒಸಡುಗಳು ಆರೋಗ್ಯಕರವೂ ಸುಂದರವೂ ಶುಭ್ರವೂ ಆಗುವುದು.

ಕೊಬ್ಬರಿ ಎಣ್ಣೆಯಿಂದ ಸನ್‌ಸ್ಕ್ರೀನ್‌ ಲೋಶನ್‌
ಸೂರ್ಯನ ಬಿಸಿಲಿಗೆ ಹೋಗುವ ಮೊದಲು ಕೊಬ್ಬರಿ ಎಣ್ಣೆಯಿಂದ ಮುಖವನ್ನು ಚೆನ್ನಾಗಿ ಮಾಲೀಶು ಮಾಡಿ. ತದನಂತರ ಚಂದನದ ಪೌಡರನ್ನು ಲೇಪಿಸಿದರೆ ಬಲು ಪರಿಣಾಮಕಾರಿ.

Advertisement

ಬಿಸಿಲುಗಂದು ಉಂಟಾದಾಗ ಕೊಬ್ಬರಿ ಎಣ್ಣೆಯಲ್ಲಿ ಮುಲ್ತಾನಿ ಮಿಟ್ಟಿ ಬೆರೆಸಿ ಲೇಪಿಸಿ ಮಾಲೀಶು ಮಾಡಿ. 20 ನಿಮಿಷ ಬಿಡಬೇಕು. ತದನಂತರ ತೊಳೆದು ಕೊಬ್ಬರಿ ಎಣ್ಣೆ 1 ಚಮಚ, 2 ಚಮಚ ಸೌತೆಕಾಯಿ ತಿರುಳಿನ ರಸ ಬೆರೆಸಿ ಲೇಪಿಸಿದರೆ ಬಿಸಿಲುಗಂದು ನಿವಾರಣೆಯಾಗುತ್ತದೆ.

ಮಸಾಜ್‌ತೈಲ ಅಥವಾ ಅಭ್ಯಂಗಕ್ಕಾಗಿ ಕೊಬ್ಬರಿ ಎಣ್ಣೆ
ನಿತ್ಯ ಅಥವಾ ವಾರಕ್ಕೊಮ್ಮೆಯಾದರೂ ಎಣ್ಣೆಯಿಂದ ಮಾಲೀಶು ಮಾಡಿ ಸ್ನಾನ ಮಾಡುವ “ಅಭ್ಯಂಗ’ಕ್ಕೆ ಪಾರಂಪರಿಕ ಮಹತ್ವವಿದೆ.

ಅಭ್ಯಂಗಕ್ಕಾಗಿ ಎರಡು ಬಗೆಯ ತೈಲಗಳನ್ನು ಮನೆಯಲ್ಲೇ ತಯಾರಿಸಬಹುದು.
ಕೊಬ್ಬರಿ ಎಣ್ಣೆ 1/4 ಕಪ್‌, ಎಳ್ಳೆಣ್ಣೆ 1/4 ಕಪ್‌, 10 ಚಮಚ ಹಾಲು- ಇವೆಲ್ಲವನ್ನು ಬೆರೆಸಿ ಚೆನ್ನಾಗಿ ಕುದಿಸಬೇಕು. ತದನಂತರ ಬೆಚ್ಚಗಿರುವಾಗಲೇ ಈ ತೈಲದಿಂದ ಮಾಲೀಶು ಮಾಡಬೇಕು. ಅರ್ಧ ಗಂಟೆ ಬಳಿಕ ಸ್ನಾನ ಮಾಡಿದರೆ ಮಾಂಸಖಂಡಗಳು ಬಲಯುತವಾಗುತ್ತವೆ, ಕೂದಲಿನ ಕಾಂತಿ ವರ್ಧಿಸುತ್ತದೆ. ಚರ್ಮವೂ ತಾಜಾ ಆಗಿ ಸ್ನಿಗ್ಧವಾಗಿ ಹೊಳೆಯುತ್ತದೆ. ಈ ಬಗೆಯ ತೈಲವನ್ನು ಅಭ್ಯಂಗಕ್ಕಾಗಿ ಎಲ್ಲರೂ ಸಾಮಾನ್ಯವಾಗಿ ಬಳಸಬಹುದು.

ಇದಲ್ಲದೆ ನೋವಿರುವ ಸಮಯದಲ್ಲಿ ಕೊಬ್ಬರಿ ಎಣ್ಣೆಗೆ (1/4 ಕಪ್‌), 1/4 ಕಪ್‌ ಎಳ್ಳೆಣ್ಣೆ ಬೆರೆಸಿ ಬೆಚ್ಚಗೆ ಮಾಡಿ, ಒಲೆಯಿಂದ ಕೆಳಗಿಳಿಸಿದ ಬಳಿಕ ಆರತಿ ಕರ್ಪೂರ ಅಥವಾ ಪಚ್ಚ ಕರ್ಪೂರ ಹುಡಿ 1/2 ಚಮಚ ಬೆರೆಸಿ ಇಡಬೇಕು. ಇದನ್ನು ಮೈಕೈ ನೋವಿಗೆ, ಗುಂಟು ನೋವಿರುವಾಗ ಹಚ್ಚಿ ಲೇಪಿಸಿ ಮಾಲೀಶು ಮಾಡಿ ಸ್ನಾನ ಮಾಡಿದರೆ, ಈ ಬಗೆಯ ಅಭ್ಯಂಗದಿಂದ ನೋವು ನಿವಾರಣೆಯಾಗುತ್ತದೆ.

ವಿಧಾನ 2: ಕೊಬ್ಬರಿ ಎಣ್ಣೆ 1/2 ಕಪ್‌ಗೆ 5-6 ಹನಿ ಲ್ಯಾವೆಂಡರ್‌ ತೈಲ ಅಥವಾ ಪೆಪ್ಪರ್‌ಮಿಂಟ್‌ ತೈಲ ಬೆರೆಸಿ ಮಾಲೀಶು ಮಾಡಬೇಕು. ಇದು ಪರಿಮಳಯುಕ್ತವಾದ ತೈಲ. ಇದರಿಂದ ಮಾಂಸಖಂಡಗಳ ನೋವು ಶಮನವಾಗುತ್ತದೆ ಹಾಗೂ ಮನಸ್ಸು ಸಹ ಪ್ರಫ‌ುಲ್ಲವಾಗುತ್ತದೆ.

ಕೊಬ್ಬರಿ ಎಣ್ಣೆ 1/4 ಕಪ್‌ಗೆ 1/4 ಕಪ್‌ ಒಂದೆಲಗ ಅಥವಾ ಉರಗ/ಬ್ರಾಹ್ಮಿà ಎಲೆಯ ರಸ ಬೆರೆಸಿ ಚೆನ್ನಾಗಿ ಕುದಿಸಿ ಆರಿದ ಬಳಿಕ ಬಾಟಲಲ್ಲಿ ಸಂಗ್ರಹಿಸಿಡಬೇಕು. ಇದರಿಂದ ಚೆನ್ನಾಗಿ ತಲೆಕೂದಲಿಗೆ ಮಾಲೀಶು ಮಾಡಿ ಅರ್ಧ-ಒಂದು ಗಂಟೆಯ ಬಳಿಕ ಸ್ನಾನ ಮಾಡಿದರೆ ನಿದ್ರಾಕಾರಕ, ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ, ಒತ್ತಡ ನಿವಾರಕ ಹಾಗೂ ತಂಪು.

ಡಾ| ಅನುರಾಧಾ ಕಾಮತ್‌

Advertisement

Udayavani is now on Telegram. Click here to join our channel and stay updated with the latest news.

Next