ಚಿಕ್ಕನಾಯಕನಹಳ್ಳಿ: ತೆಂಗಿನ ಮರ ಹತ್ತುವ, ತೆಂಗಿನ ಕಾಯಿ ಕೀಳುವವರು ಮರ ಹತ್ತುವಾಗ ಮೃತಪಟ್ಟರೆ ಅಥವಾ ಅಂಗವಿಕಲರಾದರೆ ಆಸ್ಪತ್ರೆ, ಆ್ಯಂಬುಲೆನ್ಸ್ ವೆಚ್ಚವನ್ನು ತೆಂಗು ಅಭಿವೃದ್ಧಿ ಮಂಡಳಿ ನೀಡಲಿದೆ. ಇಂತಹ ಉಪಯುಕ್ತ ಯೋಜನೆಗಳು ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈತರಿಗೆ ತಿಳಿಯದಂತಾಗಿರುವುದು ನಿಜಕ್ಕೂ ದುರಾದೃಷ್ಟಕರ.
ಕೇರಾ ಸುರಕ್ಷಾ ವಿಮಾ ಯೋಜನೆ ಹಾಗೂ ತೆಂಗು ಅಭಿವೃದ್ಧಿ ಮಂಡಳಿಯು ವಿಮಾ ಕಂಪನಿ ಸಹಯೋಗದಲ್ಲಿ ತೆಂಗಿನ ಮರ ಹತ್ತುವಾಗ ಮೃತಪಟ್ಟರೆ 5 ಲಕ್ಷ, ಅಂಗವಿಕಲರಾದರೆ 2.50 ಲಕ್ಷ, ಸಣ್ಣ ಪುಟ್ಟ ಗಾಯವಾದರೆ ಆಸ್ಪತ್ರೆ ವೆಚ್ಚ 1 ಲಕ್ಷ ರೂ, ಆ್ಯಂಬಲೆನ್ಸ್ ವೆಚ್ಚ 3 ಸಾವಿರ, ವಾರದ ಪರಿಹಾರ 18 ಸಾವಿರ ಹೀಗೆ ಹಲವು ಸೌಲಭ್ಯ ಕೇರಾ ಸುರಕ್ಷಾ ವಿಮಾ ಯೋಜನೆ ಹಾಗೂ ತೆಂಗು ಅಭಿವೃದ್ಧಿ ಸಹಯೋಗದಲ್ಲಿ ನೀಡಲಾಗುತ್ತಿದೆ. ಯೊಜನೆಯ ಪ್ರಚಾರದ ಕೊರತೆಯಿಂದ ಯಾರೊಬ್ಬರಿಗೂ ತಿಳಿಯದಂತಾಗಿದೆ.
ಅಧಿಕಾರಿಗಳ ಉದಾಸೀನ: ಅನೇಕರು ಮರ ಹತ್ತುವುದು, ತೆಂಗಿನ ಕಾಯಿ ಕೀಳುವುದನ್ನು ವೃತ್ತಿ ಮಾಡಿಕೊಂಡಿದ್ದು, ಭಯದಲ್ಲೇ ಇಂತಹ ಅಪಾಯಕಾರಿ ಕೆಲಸ ಮಾಡುತ್ತಿದ್ದಾರೆ. ಇವರ ಜೀವನಕ್ಕೆ ಭದ್ರತೆ ನೀಡುವ ಉದ್ದೇಶದಿಂದ ತೆಂಗು ಅಭಿವೃದ್ಧಿ ನಿಗಮ ವಿಮಾ ಸೌಲಭ್ಯ ನೀಡಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಹುತೇಕ ತೆಂಗಿನ ಕಾಯಿ ಕೀಳುವವರಿಗೆ ಇದರ ಮಾಹಿತಿ ಇಲ್ಲ. ತಾಲೂಕಿನಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಎಷ್ಟು ಜನಕ್ಕೆ ಇದರ ಬಗ್ಗೆ ಮಾಹಿತಿ ನೀಡಿದ್ದಾರೆ. ಎಷ್ಟು ಜನರಿಗೆ ವಿಮಾ ಸೌಲಭ್ಯ ನೀಡಿದ್ದಾರೆ ಎಂಬ ಅಂಕಿ- ಆಂಶವೇ ಸಿಗದಂತಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ವಿಮೆ ಮಾಡಿಸುವ ವಿಧಾನ: ವಾರ್ಷಿಕ ವಿಮಾ ಒಟ್ಟು ಕಂತು 398.65 ರೂ.ಗಳಾಗಿದ್ದು, ಈ ಪೈಕಿ ರೈತರಿಂದ ಕೇವಲ 99 ರೂ. ಪಡೆಯಲಾಗುತ್ತದೆ. ಉಳಿದ 298.65 ರೂ. ಹಣವನ್ನು ತೆಂಗು ಅಭಿವೃದ್ಧಿ ಮಂಡಳಿ ನೀಡುತ್ತದೆ.ಮಾಹಿತಿಯನ್ನು ತೋಟಗಾರಿಕೆ ಇಲಾಖೆ ಕಚೇರಿ ಅಥವಾ ಇಲಾಖೆ ಜಾಲತಾಣದಲ್ಲಿ ಪಡೆಯಬಹುದಾಗಿದೆ. ಇಂತಹ ಹಲವು ಉಪಯುಕ್ತ ಯೋಜನೆಗಳನ್ನು ಸರ್ಕಾರ, ನಿಗಮ ಮಂಡಳಿಗಳು ರೈತ ಹಾಗೂ ಕುಶಲಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಅನುಷ್ಠಾನಗೊಳಿಸಿದೆ.
ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಉದಾಸೀನ ಮನೋಭಾವದಿಂದ ಜನರಿಗೆ ತಲುಪುತ್ತಿಲ್ಲ. ಚಿ.ನಾ.ಹಳ್ಳಿ ತಾಲೂಕಿನಲ್ಲಿ ಬಹುತೇಕರು ಕೃಷಿಯನ್ನು ಮುಖ್ಯ ಕಸುಬು ಮಾಡಿಕೊಂಡಿದ್ದಾರೆ. ಅದರಲ್ಲಿ ತೆಂಗು ಹೆಚ್ಚಾಗಿ ಬೆಳೆದಿದ್ದು, ನಿತ್ಯ ತೆಂಗಿನ ಕಾಯಿ ಕೀಳುವ ಪ್ರಕ್ರಿಯೆ ಸಾಮಾನ್ಯವಾಗಿದ್ದು, ಅವಘಾಡಗಳು ಸಂಭವಿಸುತ್ತಿವೆ. ಹೀಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇಂತಹ ಉಪಯುಕ್ತ ಯೋಜನೆಗಳನ್ನು ರೈತರಿಗೆ ತಲುಪಿಸುವ ಪ್ರಯತ್ನ ಮಾಡಿದರೆ, ಅನುಕೂಲವಾಗುತ್ತದೆ.
ಇದನ್ನೂ ಓದಿ;- ಸಿಂದಗಿ : ಎಲ್ಲ ಮತದಾರರು ಕೋವಿಡ್ ಲಸಿಕೆ ಪಡೆಯಲು ಸೂಚನೆ
ಪ್ರತಿಕ್ರಿಯೆ ನೀಡದ ಇಲಾಖೆ ಅಧಿಕಾರಿಗಳು ರೈತರಿಗೆ ತೊಂದರೆಯಾದರೆ ತೆಂಗು ಅಭಿವೃದ್ಧಿ ಮಂಡಳಿ ಮತ್ತು ಕೇರಾ ಸುರಕ್ಷಾ ವಿಮಾ ಯೋಜನೆ ಮೂಲಕ ಪರಿಹಾರ ಕಲ್ಪಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ತೆಂಗಿನ ಕಾಯಿ ಕೀಳುವವರಿಗೆ ಜಾರಿಯಾಗಿರುವ ಯೋಜನೆ ಕುರಿತು ಪ್ರತಿಕ್ರಿಯೆಗಾಗಿ ತೋಟಗಾರಿಕೆ ಇಲಾಖೆ ಅಧಿಕಾರಿಗಳನ್ನು ಉದಯವಾಣಿ ಸಂಪರ್ಕಿಸಿದಾಗ, ಅಧಿಕಾರಿಗಳು ಪತ್ರಿಕೆಗಳಿಗೆ ಯಾವುದೇ ರೀತಿಯ ಹೇಳಿಕೆ ನೀಡಬಾರದು ಎಂದು ಉನ್ನತ ಮಟ್ಟದ ಅಧಿಕಾರಿಗಳು ಹೇಳಿರುವುದಾಗಿ ತಿಳಿದುಬಂದಿದೆ.
ಸರ್ಕಾರ ಜಾರಿಗೊಳಿಸುವ ಯೋಜನೆ ರೈತರಿಗೆ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು, ತಾಲೂಕಿನಲ್ಲಿ ತೆಂಗಿನ ಕಾಯಿ ಕೀಳುವಾಗ ಅನೇಕ ಅವಘಡಗಳು ಸಂಭವಿಸಿದೆ. ಆದರೆ, ಇಂತಹ ಯೋಜನೆಗಳು ರೈತರಿಗೆ ತಲುಪದೆ ಪ್ರಯೋಜನ ಇಲ್ಲದಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕಚೇರಿ ಕುರ್ಚಿ ಬಿಟ್ಟು ರೈತರ ಮನೆಗಳಿಗೆ ಯೋಜನೆ ತಲುಪಿಸಬೇಕು.
-ಹರ್ಷ, ಪ್ರಧಾನ ಕಾರ್ಯದರ್ಶಿ,
ಬಿಜೆಪಿ ತಾಲೂಕು ರೈತ ಮೋರ್ಚಾ
-ಚೇತನ್