ಬೆಳ್ತಂಗಡಿ, ಅ. 6: ಅಡಿಕೆ ಬೆಳೆಗೆ ಬಂಗಾರದ ಬೆಲೆ ಬರುವ ಕಾಲದಲ್ಲೇ ಬೆಳ್ತಂಗಡಿ ತಾಲೂಕಿನ ಕೆಲವೆಡೆ ಸುಳಿ ಕೊಳೆ ರೋಗ ಬಾಧಿಸುತ್ತಿರುವ ಮುನ್ಸೂಚನೆ ಗೋಚರಿಸಿದ್ದು ಕೃಷಿಕರನ್ನು ಸಂಕಷ್ಟಕ್ಕೆ ದೂಡು ವಂತೆ ಮಾಡಿದೆ.
ಬೆಳ್ತಂಗಡಿ ತಾಲೂಕಿನ ಎಳನೀರು ವ್ಯಾಪ್ತಿಯಲ್ಲಿ 150ರಿಂದ 200 ಎಕ್ರೆ ಅಡಿಕೆ ಕೃಷಿ ಭೂಮಿಯಲ್ಲಿ ಸುಳಿಕೊಳೆರೋಗ ಬಾಧಿಸಿ ರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಹಿಂಗಾರ, ಎಲೆಗಳು ನಸು ಕಂದುಬಣ್ಣಕ್ಕೆ ತಿರುಗಿ ಮರಗಳು ಸಾಯಲಾರಂಭಿಸಿವೆ.
ಕಳೆದ ವರ್ಷ ಬರ, ಈ ವರ್ಷ ಕೋವಿಡ್ ಮಧ್ಯೆ ಒಂದಷ್ಟು ಅಡಿಕೆ ಬೆಲೆ ಏರಿಕೆಯಾಗುವ ಸಮಯದಲ್ಲಿ ಈ ರೀತಿಯ ಕೊಳೆರೋಗ ಬಾಧಿಸಿರುವುದು ಇಳುವರಿಗೆ ಕುತ್ತು ತಂದಿದೆ. 2019ರ ಮಾರ್ಚ್ ಅವಧಿಯಲ್ಲಿ ಗರಿಷ್ಠ ತಾಪಮಾನ ತಲುಪಿದ ಪರಿಣಾಮ ಸುಳ್ಯ, ಬಂಟ್ವಾಳ, ಬೆಳ್ತಂಗಡಿಯ ಬಹುತೇಕ ಪ್ರದೇಶಗಳಲ್ಲಿ ದಿನಕ್ಕೆ ನಾಲ್ಕು ತಾಸು ನೀರು ಹಾಯಿಸುವ ತೋಟಗಳಲ್ಲೂ(ರೆಡ್‌ಮೈಟ್) ರೋಗ ಬಾಧಿಸಿ ಇಳುವರಿ ಕಡಿಮೆಯಾಗಿತ್ತು. 2019ರಲ್ಲಿ ಜಿಲ್ಲೆಯ 33,595 ಹೆಕ್ಟೇರ್ ಪ್ರದೇಶದಲ್ಲಿ ಶೇ. 33ಕ್ಕಿಂತ ಹೆಚ್ಚು (ಫೈಟೋ ಥೆರಾ ಆರೆಕಿಯಾ) ಕೊಳೆರೋಗವಿರುವ ಪ್ರದೇಶವನ್ನು ಗುರುತಿಸಲಾಗಿತ್ತು. ಜತೆಗೆ ಮೇ ತಿಂಗಳಲ್ಲಿ ಅಡಿಕೆ ಸಸಿಗೆ ರೆಡ್‌ಮೈಟ್ ಬಾಧಿಸುತ್ತಿತ್ತು. ಪ್ರಸಕ್ತ ಮಳೆಗಾಲದಲ್ಲೇ ಅಡಿಕೆ ಸಸಿಗಳು ಕರಟುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಮೂರು ವಿಧದ ಕೊಳೆ ರೋಗ : ಅಡಿಕೆಗೆ ಸಾಮಾನ್ಯವಾಗಿ ಮೂರು ವಿಧದ ಕೊಳೆರೋಗ ಬಾಧಿಸುತ್ತಿವೆ. ಅದನ್ನು ಸುಳಿ ಕೊಳೆರೋಗ, ಕಾಯಿಕೊಳೆರೋಗ, ಬುಡ ಕೊಳೆರೋಗ ಎಂದು ವಿಂಗಡಿಸಲಾಗುತ್ತದೆ ಎಂದು ಸಾವಯವ ಕೃಷಿ ತಜ್ಞ ಪ್ರಭಾಕರ ಮಯ್ಯ ತಿಳಿಸಿದ್ದಾರೆ.
ಭೇಟಿ ನೀಡಿ ಪರಿಶೀಲನೆ : ಎಳನೀರು ಪ್ರದೇಶದ ಅಡಿಕೆ ತೋಟಗಳಿಗೆ ರೋಗ ಆವರಿಸಿರುವ ಕುರಿತು ಮಾಹಿತಿ ಲಭಿಸಿದೆ. ಅ. 7ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಬಳಿಕ ವಷ್ಟೇ ಯಾವ ರೋಗಬಾಧೆ ಹಾಗೂ ಅದಕ್ಕೆ ಅವಶ್ಯವಿರುವ ಕೀಟನಾಶಕ ಬಳಸಲು ಮಾಹಿತಿ ನೀಡಲಾಗುವುದು.
–ಕೆ.ಎಸ್.ಚಂದ್ರಶೇಖರ್, ಹಿರಿಯ ತೋಟಗಾರಿಕೆ ನಿರ್ದೇಶಕ, ಬೆಳ್ತಂಗಡಿ ತೋಟಗಾರಿಕೆ ಇಲಾಖೆ
ಕಳೆದ ವರ್ಷದಿಂದ ಎಳನೀರು ಸುತ್ತಮುತ್ತ ಪ್ರದೇಶದಲ್ಲಿ ರೋಗ ಬಾಧಿಸಿದ್ದು, ಕೃಷಿ ನಾಶವಾಗುವ ಭೀತಿ ಎದುರಾಗಿದೆ. ಪ್ರತಿ ವರ್ಷ 10 ಕ್ವಿಂಟಾಲ್ ಫಸಲು ಬರುತ್ತಿದ್ದಲ್ಲಿ 2 ಕ್ವಿಂಟಾಲ್ ಫಸಲು ಬರುತ್ತಿದೆ. ಇದೀಗ ಸಂಸೆ ಕಡೆಗೂ ರೋಗ ಹರಡುತ್ತಿದೆ.
–ಪ್ರಕಾಶ್ ಕುಮಾರ್ ಜೈನ್, ಎಳನೀರು
–ಚೈತ್ರೇಶ್ ಇಳಂತಿಲ