ಕೋಲಾರ: ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಶಾಸಕ ಕೆ.ವೈ.ನಂಜೇಗೌಡ ದೌರ್ಜನ್ಯ ಹೆಚ್ಚಾಗಿ ಎಂಪಿಸಿಎಸ್ ಮತದಾರರ ಗುರುತಿನ ಚೀಟಿಗಳನ್ನು ಕಿತ್ತು ಕೊಳ್ಳಲಾಗಿದೆ ಎಂದು ಆರೋಪಿಸಿ ಜಿಲ್ಲಾಧಿಕಾರಿ ಮಂಜುನಾಥ್‌ಗೆ ಮಾಜಿ ಶಾಸಕ ಮಂಜುನಾಥ್ ಗೌಡ, ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ದೂರು ನೀಡಿದರು.
ಮಾಲೂರು ತಾಲೂಕಿನಲ್ಲಿ 40ಕ್ಕೂ ಹೆಚ್ಚು ಎಂಪಿಸಿಎಸ್ ಅಧ್ಯಕ್ಷರ ಗುರುತಿನ ಚೀಟಿ, ಡೆಲಿಗೇಟ್ ಫಾರಂಗಳನ್ನು ಶಾಸಕ ನಂಜೇಗೌಡ ಹಾಗೂ ಬೆಂಬಲಿಗರು ದೌರ್ಜನ್ಯದಿಂದ ಕಿತ್ತುಕೊಂಡಿದ್ದಾರೆ. ಮೇ 13ರಂದು ಕೋಚಿಮುಲ್ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಅಭ್ಯರ್ಥಿಯಾಗಿರುವ ಹಾಲಿ ಅಧ್ಯಕ್ಷ, ಶಾಸಕ ಕೆ.ವೈ.ನಂಜೇಗೌಡ ಮತ್ತು ಅವರ ಬೆಂಬಲಿಗರು
ದೌರ್ಜನ್ಯದಿಂದ ಗುರುತಿನ ಚೀಟಿ ಕಿತ್ತುಕೊಂಡು ಹೋಗುತ್ತಿದ್ದು, ಕೇಳುವವರಿಲ್ಲದಾಗಿದೆ ಎಂದು ಡೀಸಿ ಮುಂದೆ ಆರೋಪಿಸಿದರು.
ಮಾಲೂರು ತಾಲೂಕಿನಲ್ಲಿ 88 ಸಂಘಗಳು ಮತದಾನಕ್ಕೆ ಅರ್ಹವಿದ್ದು, ಅವುಗಳಲ್ಲಿ 50ಕ್ಕೂ ಹೆಚ್ಚು ಅಧ್ಯಕ್ಷ ರಿಂದ ಗುರುತಿನ ಚೀಟಿ, ಡೆಲಿಗೇಟ್ ಫಾರಂ ಅನ್ನು ಜೆರಾಕ್ಸ್ ಮಾಡಿಕೊಂಡು ಬರುವುದಾಗಿ ಹೇಳಿ ಪಡೆದುಕೊಂಡು ಇದೀಗ ಮತ ಹಾಕುವಂತೆ, ನಮ್ಮ ಜತೆಗೆ ಪ್ರವಾಸ ಬರುವಂತೆ ಒತ್ತಡ ಹಾಕುತ್ತಿದ್ದು, ಅವರ ಮಾತು ಕೇಳದಿದ್ದರೆ ಅವುಗಳನ್ನು ಹರಿದುಹಾಕುವುದಕ್ಕೂ ಮುಂದಾಗುತ್ತಿದ್ದಾರೆ ಎಂದು ದೂರು. ಈ ಕೂಡಲೇ ನಮಗೆ ಗುರುತಿನ ಚೀಟಿ ಒದಗಿಸಬೇಕು ಎಂದು 12 ಅಧ್ಯಕ್ಷರು ಮಾಜಿ ಶಾಸಕ ಕೆ.ಎಸ್. ಮಂಜುನಾಥಗೌಡ, ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿರೊಂದಿಗೆ ಜಿಲ್ಲಾಧಿ ಕಾರಿಗೆ ಮನವಿ ನೀಡಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಲೂರು ಮಾಜಿ ಶಾಸಕ ಕೆ.ಎಸ್.ಮಂಜುನಾಥ್ ಗೌಡ, ಶಾಸಕರಾಗಿ ಆಯ್ಕೆಯಾಗಿ ವರ್ಷವೂ ಪೂರೈಸದ ನಂಜೇಗೌಡರು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕ್ಷೇತ್ರದಲ್ಲಿ ಹಾಳು ಮಾಡಿದ್ದಾರೆ. ದಲಿತರು, ಬಡವರು, ಹಿರಿಯರು ಎಂದು ನೋಡದೆ ಎಂಪಿಸಿಎಸ್ ಅಧ್ಯಕ್ಷರ ಬಳಿ ಡೆಲಿಗೇಟ್‌ಫಾರಂ, ಗುರುತಿನ ಚೀಟಿಗಳನ್ನು ಬೆದರಿಸಿ ಕಿತ್ತುಕೊಂಡು ಮತ ಹಾಕದಂತೆ ತಡೆದಿದ್ದು, 40ಕ್ಕೂ ಹೆಚ್ಚು ಅಧ್ಯಕ್ಷರು ಅಂಗಲಾಚುವ ಪರಿಸ್ಥಿತಿಗೆ
ಬಂದಿದ್ದಾರೆ ಎಂದು ಆರೋಪಿಸಿದರು. ಈಗಾಗಲೇ 4 ದೂರು ನೀಡಲಾಗಿದ್ದು, ಅದರಿಂದ
3 ಕಾರ್ಡ್‌ಗಳು ವಾಪಸ್ ಬಂದಿವೆ. ಪೊಲೀಸರನ್ನೂ ಶಾಸಕರೇ ವರ್ಗಾವಣೆ ಮಾಡಿಸಿಕೊಂಡು ಬಂದಿರುವು¨ ರಿಂದ ಅವರು ಬೇರೆಯವರ ಮಾತು ಕೇಳುವುದಿಲ್ಲ. ಅಧ್ಯಕ್ಷರಿಗೆ ನ್ಯಾಯ ಕೊಡುವುದಕ್ಕಾಗಿಯೇ ನಾವು ಬಂದಿರುವುದಾಗಿ ಹೇಳಿದರು.
ಜಿಲ್ಲಾಧಿಕಾರಿ ಆಗಮಿಸಿ ಮಾಹಿತಿ ಪಡೆದು, 4 ಗುರುತಿನ ಚೀಟಿಗಳು ಕಳೆದುಹೋಗಿರುವ ಬಗ್ಗೆ ದೂರು ನೀಡುತ್ತಿದ್ದಂತೆಯೇ 3 ವಾಪಸ್ಸಾಗಿವೆ. ಇನ್ನು ಕೆಲವರದ್ದು ಕಳೆದುಹೋಗಿರುವ ಬಗ್ಗೆ ತಮ್ಮ ಗಮನಕ್ಕೆ ಬಂದಿದ್ದು, ಪರ್ಯಾಯ ವ್ಯವಸ್ಥೆ ಕಲ್ಪಿಸಿ ಮತದಾನಕ್ಕೆ
ಮುಕ್ತ ಅವಕಾಶ ಕಲ್ಪಿಸಲಾಗುವುದು. ಆ ನಂತರ ಪ್ರಕರಣದ ಬಗ್ಗೆ ತನಿಖೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುವ ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು. ಮಾಲೂರು ಶಾಸಕ ಕೆ.ವೈ.ನಂಜೇಗೌಡ ಎಂಪಿಸಿಎಸ್ ಮತದಾರರ ಗುರುತಿನ ಚೀಟಿ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿ ಡಿ.ಸಿ.ಗೆ ಮಾಜಿ ಶಾಸಕ ಮಂಜುನಾಥ್‌ಗೌಡ, ಮುನಿಸ್ವಾಮಿ ದೂರು ನೀಡಿದರು.