ಪಾಟ್ನಾ:ಬಿಹಾರ ವಿಧಾನಸಭಾ ಮೊದಲ ಹಂತದ ಚುನಾವಣಾ ಕಣ ರಂಗೇರುತ್ತಿರುವ ನಡುವೆಯೇ ಕೇಂದ್ರ ಮೀಸಲು ಪೊಲೀಸ್ ತಂಡದ “ಕೋಬ್ರಾ” ಪಡೆ ಮತ್ತು ನಕ್ಸಲೀಯರ ನಡುವೆ ಘರ್ಷಣೆ ನಡೆದಿರುವ ಘಟನೆ ಬಿಹಾರ ಗಯಾ ಜಿಲ್ಲೆಯ ಚಕ್ರಬಂಧಾ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸಂಭವಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಮುಂಜಾನೆ ಕೋಬ್ರಾ ಪಡೆಯನ್ನು ಗಮನಿಸುತ್ತಿದ್ದಂತೆಯೇ ಮಾವೋವಾದಿಗಳು ಗುಂಡಿನ ದಾಳಿ ನಡೆಸಿದ್ದು, ಎರಡು ಕಡೆಗಳಲ್ಲಿಯೂ ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ವರದಿ ಹೇಳಿದೆ.
ನಕ್ಸಲೀಯರು ದಟ್ಟ ಅರಣ್ಯದೊಳಗೆ ಪರಾರಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ 28ರಂದು ಬಿಹಾರ ವಿಧಾನಸಭಾ ಮೊದಲ ಹಂತದ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ನಕ್ಸಲ್ ಪೀಡಿತ ಐದು ಜಿಲ್ಲೆಗಳಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ ಎಂದು ವರದಿ ವಿವರಿಸಿದೆ.
ಇದನ್ನೂ ಓದಿ:ನಟ ಯಶ್ ಅಭಿವೃದ್ದಿ ಪಡಿಸಿದ ತಲ್ಲೂರ ಕೆರೆ! ರೈಲ್ವೆ ಗುತ್ತಿಗೆದಾರರ ಎಡವಟ್ಟಿಗೆ ಕೆರೆ ಭಣಭಣ
ಅರಣ್ಯದಲ್ಲಿ ಮಾವೋವಾದಿಗಳ ವಿರುದ್ಧ 205 ಕೋಬ್ರಾ ಬೆಟಾಲಿಯನ್ ನಡೆಸಿದ ಕೂಂಬಿಂಗ್ ಕಾರ್ಯಾಚರಣೆ ಸಂದರ್ಭದಲ್ಲಿ ಹಲವಾರು ದಾಖಲೆಗಳು ಹಾಗೂ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ಸಿಕ್ಕಿರುವುದಾಗಿ ವರದಿ ತಿಳಿಸಿದೆ. ಮೊದಲ ಹಂತದಲ್ಲಿ ನಕ್ಸಲೀಯರಿಂದ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಅರೆಸೇನಾಪಡೆ ಸೇರಿದಂತೆ 1200 ಸಿಆರ್ ಪಿಎಫ್ ಯೋಧರನ್ನು ನಿಯೋಜಿಸಲಾಗಿದೆ ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ, ಗಯಾ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ನಕ್ಸಲೀಯರು ಪೋಸ್ಟರ್ ಮೂಲಕ ತಾವು ಇನ್ನೂ ಕೂಡಾ ಸಕ್ರಿಯವಾಗಿದ್ದೇವೆ ಎಂಬುದನ್ನು ತೋರಿಸಲು ಕುಗ್ರಾಮಗಳಲ್ಲಿ ಸ್ಫೋಟ ನಡೆಸುವುದಾಗಿ ಪ್ರಚಾರ ನಡೆಸುತ್ತಿರುವುದಾಗಿ ತಿಳಿದು ಬಂದಿದೆ. ಮತದಾನನದಿಂದ ದೂರ ಉಳಿಯುವಂತೆ ನಕ್ಸಲೀಯರು ಕರೆ ನೀಡಿರುವುದಾಗಿ ವರದಿ ವಿವರಿಸಿದೆ.