ಕಾಪು: ರಾಷ್ಟ್ರೀಯ ಹೆದ್ದಾರಿಯನ್ನು ದಾಟುತ್ತಿದ್ದ ನಾಗರ ಹಾವೊಂದು, ರಸ್ತೆ ಬದಿ ನಿಲ್ಲಿಸಿದ್ದ ಟಿಪ್ಪರ್‌ನೊಳಗೆ ಹೊಕ್ಕು ಅವಿತು ಕುಳಿತು ಅವಾಂತರ ಸೃಷ್ಟಿಸಿದ ಘಟನೆ ಪಾಂಗಾಳ – ಕೋತಲಕಟ್ಟೆ ಡೈವರ್ಷನ್ ಬಳಿ ಗುರುವಾರ ಸಂಜೆ ನಡೆದಿದೆ.
ಗದ್ದೆಯಲ್ಲಿದ್ದ ನಾಗರಹಾವು ದಿಢೀರ್ ಎಂದು ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶಿಸಿದ್ದು, ಬಿಸಿಲಿನ ಝಳದಿಂದ ಸಂಚರಿಸಲಾಗದೇ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ದಾಮೋದರ್ ಪಾಂಗಾಳ ಸ್ಥಳೀಯರ ಸಹಕಾರದೊಂದಿಗೆ ಹಾವನ್ನು ಬದಿಗೆ ಸರಿಸಿದ್ದರು.
ಕಾರ್ಯಾಚರಣೆ ವೇಳೆ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಟಿಪ್ಪರ್ ಚಾಲಕ ಗಂಗಾಧರ್ ಟಿಪ್ಪರನ್ನು ಸರ್ವೀಸ್ ರಸ್ತೆಯಲ್ಲಿ ಇರಿಸಿ ನಾಗರ ಹಾವಿನ ರಕ್ಷಣೆಯನ್ನು ವೀಕ್ಷಿಸುತ್ತಿದ್ದರು. ಬದಿಗೆ ಸರಿದ ಹಾವು ನಿಲ್ಲಿಸಿದ್ದ ಟಿಪ್ಪರ್‌ನ ಅಡಿಗೆ ಬಂದು ಟಯರ್‌ನ ಮೂಲಕ ಮೇಲೇರಿ ಟಿಪ್ಪರ್‌ನ ಒಳಗೆ ಪ್ರವೇಶಿಸಿತು. ಅದನ್ನು ಗಮನಿಸಿದ ಸ್ಥಳೀಯರು ಈ ವಿಚಾರವನ್ನು ಚಾಲಕನಿಗೆ ತಿಳಿಸಿದ್ದು ಅವರು ಬಂದು ನೋಡಿದಾಗ ಹಾವು ಟಿಪ್ಪರ್‌ನ ಒಳಗೆ ಅವಿತುಕೊಂಡಿತ್ತು.
ಒಂದು ತಾಸು ಕಾರ್ಯಾಚರಣೆ
ಟಿಪ್ಪರ್ ಚಾಲಕ ಸೇರಿದಂತೆ ಸ್ಥಳೀಯರು ಹಾವನ್ನು ಟಿಪ್ಪರ್‌ನ ಒಳಗಿನಿಂದ ಹೊರಗೆ ತೆಗೆಯಲು ಭಾರೀ ಪ್ರಯತ್ನ ನಡೆಸಿದ್ದರು. ಹಾವನ್ನು ಹೊರಗೆ ತೆಗೆಯಲು ಸಾಧ್ಯವಾಗದೇ ಹೋದಾಗ ಉರಗತಜ್ಞ ಗೋವರ್ಧನ್ ಭಟ್ ಮಜೂರು ಅವರನ್ನು ಕರೆಯಿಸಲಾಯಿತು. ಅವರು ಸುಮಾರು ಅರ್ಧ ಗಂಟೆ ಪ್ರಯತ್ನದ ಬಳಿಕ ಹಾವನ್ನು ಹೊರಗೆ ತೆಗೆಯುವಲ್ಲಿ ಸಫಲರಾದರು.