Advertisement

ಕರಾವಳಿ: ಸುಗಮ ಮತದಾನಕ್ಕೆ ಹವಾಮಾನದ ಸಾಥ್‌

02:29 AM Apr 18, 2019 | Team Udayavani |

ಮಂಗಳೂರು: ರಾಜ್ಯದಲ್ಲಿ ಮೊದಲ ಹಂತವಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಗುರುವಾರ ಮತದಾನ ನಡೆಯಲಿದೆ. ಹವಾಮಾನ ತಜ್ಞರ ಪ್ರಕಾರ ಕರಾವಳಿಯ ಭಾಗದಲ್ಲಿ ಈ ದಿನ ಬಿಲಿಸಿನ ತೀವ್ರತೆ ಜಾಸ್ತಿಯಿದ್ದರೂ ಮತದಾನಕ್ಕೆ ಬಹುತೇಕ ಅನುಕೂಲಕರ ವಾತಾವರಣವಿರುವ ಸಾಧ್ಯತೆಯಿದೆ.

Advertisement

ಹವಾಮಾನ ವರದಿಯ ಪ್ರಕಾರ, ಎ.18ರಂದು ಮಳೆ ಬರುವ ಸಾಧ್ಯತೆ ಕಡಿಮೆ. ಮಧ್ಯಾಹ್ನದ ವೇಳೆ ಬಿಸಿಲಿನ ತೀವ್ರತೆ ಹೆಚ್ಚಿರಲಿದ್ದು, ಸುಮಾರು 38 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಕೆಲವು ಕಡೆಗಳಲ್ಲಿ ಸಂಜೆ ಮೋಡ ಕವಿದ ವಾತಾವರಣ ಇರಬಹುದು. ಈಗ ಲಭ್ಯವಿರುವ ಹವಾಮಾನ ಮುನ್ಸೂಚನೆ ಪ್ರಕಾರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮತದಾನಕ್ಕೆ ಅನುಕೂಲಕರ ಹವಾಮಾನ ಇರಲಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಗರಿಷ್ಠ ತಾಪಮಾನ ಏರಿಕೆಯಾಗುತ್ತಿದೆ. ಕರಾವಳಿ ಪ್ರದೇಶದಲ್ಲಿ ಗರಿಷ್ಠ ಉಷ್ಣಾಂಶದ ಪ್ರಮಾಣ ಸುಮಾರು 38 ಡಿ.ಸೆ. ತಲುಪುತ್ತಿದೆ. ಇದೇ ರೀತಿಯ ಉರಿ ಬಿಸಿಲು ಕಳೆದ ಲೋಕಸಭಾ ಚುನಾವಣೆ ವೇಳೆಯೂ ಇತ್ತು.

2014ರ ಎ.17ರಂದು ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 38.8 ಡಿ.ಸೆ.,ಉಡುಪಿ ಜಿಲ್ಲೆಯಲ್ಲಿ 38.8 ಡಿ.ಸೆ. ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ 37.5 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಈ ಬಾರಿಯೂ ಇದೇ ರೀತಿ ಇರುವ ಸಾಧ್ಯತೆ ಹೆಚ್ಚಿದೆ.

ಸಾಮಾನ್ಯವಾಗಿ ಎಪ್ರಿಲ್‌ ತಿಂಗಳಿನಲ್ಲಿ ಇಷ್ಟೊಂದು ಉರಿ ಬಿಸಿಲು ಇರುವುದಿಲ್ಲ.ಹವಾಮಾನ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ಸದ್ಯ ಉತ್ತರ ಭಾಗದಿಂದ ಬಿಸಿ ಗಾಳಿ ಬೀಸುತ್ತಿದ್ದು, ಈ ಪರಿಣಾಮ ಮುಂದಿನ ಕೆಲವು ದಿನಗಳಲ್ಲಿ ತಾಪಮಾನದಲ್ಲಿ ಮತ್ತಷ್ಟು ಏರಿಕೆಯಾಗಬಹುದು.

Advertisement

ಕರಾವಳಿಯ ಈ ಅಧಿಕ ತಾಪಮಾನ ರಾಜಕೀಯ ಪ್ರಚಾರಕ್ಕೂ ತಲೆನೋವಾಗಿ ಪರಿಣಮಿಸಿತ್ತು. ಕೆಲವು ದಿನಗಳಿಂದ ತಾಪಮಾನದಲ್ಲಿ ಏರಿಕೆಯಾಗಿ, ಮಧ್ಯಾಹ್ನ ಹೊತ್ತು ಮನೆಯಿಂದ ಹೊರಬರುವುದೇ ಕಷ್ಟ ಎನಿಸಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆ ಮತ್ತು ಸಂಜೆಯ ಹೊತ್ತು ಮತದಾನ ಪ್ರಮಾಣ ಹೆಚ್ಚಿದ್ದು, ಮಧ್ಯಾಹ್ನ ಕಡಿಮೆ ದಾಖಲಾಗುವ ಸಾಧ್ಯತೆ ಇದೆ.

ಸೋಷಿಯಲ್‌ ಮೀಡಿಯಾಕ್ಕೆ ಆದ್ಯತೆ
ಕಳೆದ ಬಾರಿಯ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಸಾಮಾಜಿಕ ಜಾಲತಾಣಗಳ ಪ್ರಚಾರಕ್ಕೆ
ಹೆಚ್ಚಿನ ಮಹತ್ವ ನೀಡಲಾಗಿತ್ತು. ಬಿಸಿಲಿನ ಬೇಗೆಯಿಂದ ಪ್ರಚಾರ ಕಡಿಮೆಯಾಗಬಾರದು ಎಂಬ ದೃಷ್ಟಿಯಿಂದ ಸೋಷಿಯಲ್‌ ಮೀಡಿಯಾ ಪ್ರಚಾರಕ್ಕೆ ಎಲ್ಲ ಪಕ್ಷಗಳ ಮುಖಂಡರು ಆದ್ಯತೆ ನೀಡಿದ್ದರು.

ಕಳೆದ ಬಾರಿಗೆ ಹೋಲಿಸಿದರೆ ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಹೆಚ್ಚಿನ ಉಷ್ಣಾಂಶ ದಾಖಲಾಗಿದೆ. ಉತ್ತರ ಭಾಗದಿಂದ ಬಿಸಿ ಗಾಳಿ ಬೀಸುತ್ತಿದ್ದು, ಮುಂದಿನ ದಿನಗಳು ಕೂಡ ಇದೇ ರೀತಿ ಗರಿಷ್ಠ ಉಷ್ಣಾಂಶದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.
-ಶ್ರೀನಿವಾಸ ರೆಡ್ಡಿ, ಕೆಎಸ್‌ಎನ್‌ಡಿಎಂಸಿ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next