Advertisement

ಕರಾವಳಿ, ಮಲೆನಾಡು: ಮುಂದುವರಿದ ಮಳೆ, ಹಾನಿ

01:41 AM Sep 04, 2019 | Team Udayavani |

ಮಂಗಳೂರು/ ಉಡುಪಿ/ಮಡಿ ಕೇರಿ: ಕರಾವಳಿ, ಮಲೆನಾಡಿ ನಾದ್ಯಂತ ಮಂಗಳವಾರ ಉತ್ತಮ ಮಳೆ ಸುರಿದಿದ್ದು, ಕೆಲವೆಡೆಗಳಲ್ಲಿ ಹಾನಿಯನ್ನೂ ಉಂಟು ಮಾಡಿದೆ. ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಿಂದ ಚಾರ್ಮಾಡಿ ಭಾಗದಲ್ಲಿ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಕಡಲಬ್ಬರ ಕೂಡ ಅಧಿಕವಾಗಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗಿ ನಿಂದಲೇ ದಿನವಿಡೀ ಆಗಾಗ ಮಳೆ ಸುರಿದಿದೆ. ಕರಾವಳಿಯಲ್ಲಿ ಸೋಮವಾರದಿಂದ ನಾಲ್ಕು ದಿನಗಳ ವರೆಗೆ ಆರೆಂಜ್‌ ಅಲರ್ಟ್‌ ಘೋಷಿಸ ಲಾಗಿತ್ತು. ಅಲರ್ಟ್‌ ಗುರುವಾರದ ತನಕ ಇರಲಿದ್ದು, ಕರಾವಳಿ ಪ್ರದೇಶದಲ್ಲಿ ಉತ್ತಮ ಮಳೆಯಾಗುವ ಸಂಭವವಿದೆ ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಈ ಅವಧಿಯಲ್ಲಿ ತಾಸಿಗೆ 40ರಿಂದ 50 ಕಿ.ಮೀ. ವೇಗದಲ್ಲಿ ಬಲವಾದ ಗಾಳಿಯೂ ಬೀಸಲಿದ್ದು, ಮೀನು ಗಾರರು ಎಚ್ಚರದಿಂದ ಇರಬೇಕು ಎಂದು ಇಲಾಖೆ ಸೂಚಿಸಿದೆ.

ಕೊಡಗಿನಲ್ಲಿ ಮತ್ತೆ ಮಳೆ ಆತಂಕ
ಮಡಿಕೇರಿ: ಆಗಸ್ಟ್‌ ತಿಂಗಳಿನಲ್ಲಿ ಸುರಿದ ಮಹಾಮಳೆಗೆ ಸಾವು, ನೋವುಗಳು ಸಂಭವಿಸಿ ಸಂಕಷ್ಟವನ್ನು ಎದುರಿಸುತ್ತಿರುವ ಕೊಡಗು ಜಿಲ್ಲೆಗೆ ಮತ್ತೆ ಮಳೆಯ ಆತಂಕ ಎದುರಾಗಿದೆ.

ಭಾಗಮಂಡಲ ಮತ್ತು ತಲಕಾವೇರಿ ಯಲ್ಲಿ ಸಾಧಾರಣ ಪ್ರಮಾಣದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ.

Advertisement

ಗುಡ್ಡ ಕುಸಿತದಿಂದ ಹತ್ತಕ್ಕೂ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡ ವಿರಾಜಪೇಟೆ ತಾಲ್ಲೂಕಿನಲ್ಲಿ ಮಳೆಯ ಪ್ರಮಾಣ ಹೆಚ್ಚೇ ಇದೆ. ಪ.ಪಂ. ವ್ಯಾಪ್ತಿಯ ಏಳನೇ ವಾರ್ಡ್‌ನ ತಡೆಗೋಡೆಯೊಂದು ಕುಸಿದು ಬಿದ್ದು, ಅಪಾಯದ ಪರಿಸ್ಥಿತಿ ಎದುರಾಗಿದೆ. ಹತ್ತಕ್ಕೂ ಹೆಚ್ಚು ಕುಟುಂಬಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಇಂದು ಕಾರಜೋಳ ಕೊಡಗಿಗೆ
ಡಿಸಿಎಂ ಮತ್ತು ಲೋಕೋಪಯೋಗಿ ಹಾಗೂ ಸಮಾಜ ಕಲ್ಯಾಣ ಖಾತೆ ಸಚಿವ ಗೋವಿಂದ ಎಂ. ಕಾರಜೋಳ ಸೆ. 4ರಂದು ಮಳೆಹಾನಿ ವೀಕ್ಷಣೆಗೆ ಕೊಡಗು ಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಚಾರ್ಮಾಡಿ: ಮತ್ತೆ ನೆರೆ ಆತಂಕ; ಕೊಚ್ಚಿ ಹೋದ ತಾತ್ಕಾಲಿಕ ಸೇತುವೆ

ಬೆಳ್ತಂಗಡಿ: ಮಲೆನಾಡು ಪ್ರದೇಶದಲ್ಲಿ ಮತ್ತೆ ಮಳೆ ಪ್ರಮಾಣ ಅಧಿಕವಾಗಿರುವುದು ಪ್ರವಾಹದಿಂದ ಬಳಲಿದ ಬೆಳ್ತಂಗಡಿ ತಾಲೂಕಿನಲ್ಲಿ ಆತಂಕಕ್ಕೆ ಕಾರಣವಾಗಿದೆ.

ಸೋಮವಾರದ ಮಳೆಗೆ ಮೃತ್ಯುಂಜಯ ಹೊಳೆ ಮತ್ತು ನೇತ್ರಾವತಿ ನದಿ ಉಕ್ಕಿ ಹರಿದಿದ್ದು, ನಿವಾಸಿಗಳಲ್ಲಿ ಆತಂಕ ಮೂಡಿತ್ತು. ಮಂಗಳವಾರ ನೀರು ಸಹಜ ಸ್ಥಿತಿಗೆ ಮರಳಿದ್ದರೂ ಮಳೆ ಹೆಚ್ಚಾದಲ್ಲಿ ಮತ್ತೆ ಉಕ್ಕುವ ಆತಂಕ ಎದುರಾಗಿದೆ.

ಅಂತರ, ಅರಣೆಪಾದೆ ಸಂಪರ್ಕ ಆ. 9ರ ಪ್ರವಾಹಕ್ಕೆ ಕಡಿದಿತ್ತು. ಬಳಿಕ ಮರುಸ್ಥಾಪಿಸಿದರೂ ಸೋಮವಾರ ಸಂಜೆ 3.30ಕ್ಕೆ ಒಮ್ಮಿಂದೊಮ್ಮೆ ಏರಿದ ನೀರಿನಿಂದಾಗಿ ಸಂಪರ್ಕ ಮತ್ತೆ ಕಡಿತಗೊಂಡಿದೆ.

ಕೊಚ್ಚಿಹೋದ ತಾತ್ಕಾಲಿಕ ಪಾಲ
ಸೇತುವೆ ಕೊಚ್ಚಿ ಹೋಗಿರುವ ಅನಾರು ಮತ್ತು ಸಮೀಪದ ನಿವಾಸಿ ಗಳಿಗಾಗಿ ನಳೀಲಿನಲ್ಲಿ ತಾತ್ಕಾಲಿಕ ಸಂಪರ್ಕವನ್ನು ಎಸ್ಕೆಎಸ್‌ಎಸ್‌ಎಫ್‌ನ ವಿಖಾಯ ತಂಡದ 25ಕ್ಕೂ ಅಧಿಕ ಸದಸ್ಯರು ಸ್ಥಳೀಯರ ಸಹಕಾರ ದೊಂದಿಗೆ ರವಿವಾರ ನಡೆಸಿದ್ದರು. ಪ್ರವಾಹದೊಂದಿಗೆ ಬಂದಿದ್ದ ದೊಡ್ಡ ಮರವನ್ನೇ ಹೊಳೆಗೆ ಅಡ್ಡಲಾಗಿ ಹಾಕಿ ತಾತ್ಕಾಲಿಕ ಸಂಪರ್ಕ ಕಲ್ಪಿಸಿದ್ದರು. ಆದರೆ ಸೋಮವಾರ ನೆರೆಗೆ ಅದು ಕೊಚ್ಚಿ ಹೋಗಿದೆ.

ಗಾಯಾಳು ಸ್ಥಳಾಂತರ
ಮಹಡಿಯಿಂದ ಬಿದ್ದು ಕಾಲು ಮುರಿತಕ್ಕೊಳಗಾಗಿ ಮನೆಯಲ್ಲಿದ್ದ ಚಾರ್ಮಾಡಿ ಮುಗುಳಿದಡ್ಕ ನಿವಾಸಿ ವಿನೋದ್‌ ಗೌಡ ಅವರನ್ನು ಆಸ್ಪತ್ರೆಗೆ ಸಾಗಿಸಬೇಕಾಗಿತ್ತು. ನೆರೆ ಹೆಚ್ಚಾದ ಹಿನ್ನೆಲೆಯಲ್ಲಿ ಸೋಮವಾರ ಕುರ್ಚಿಯಲ್ಲಿ ಕುಳ್ಳಿರಿಸಿ ಪ್ರವೀಣ್‌, ಜಗದೀಶ್‌, ನಾರಾಯಣ ಇತರರ ಸಹಾಯದಿಂದ ಕೊಳಂಬೆಗೆ ಕರೆತರಲಾಯಿತು. ಮತ್ತೂಂದೆಡೆ ಕಾಲುನೋವಿನಿಂದ ಬಳಲು ತ್ತಿದ್ದ ಮರುವದಡಿ ನಿವಾಸಿ ಗೀತಾ ಅವರನ್ನು ಆಸ್ಪತ್ರೆಗೆ ದಾಖಲಿಸಲು ಸ್ಥಳೀಯ ಯುವಕರು ಹೊತ್ತುಕೊಂಡು ನದಿ ದಾಟಿಸಿ ಮಾನವೀಯತೆ ಮೆರೆದರು.

Advertisement

Udayavani is now on Telegram. Click here to join our channel and stay updated with the latest news.

Next