Advertisement

ಸಿಆರ್‌ಝಡ್‌ ಹೊಸ ನಿಯಮ: ಕುದ್ರುಗಳಿಗಿಲ್ಲ ರಿಯಾಯಿತಿ

12:53 AM Sep 26, 2022 | Team Udayavani |

ಮಂಗಳೂರು: ಕರಾವಳಿ ನಿಯಂತ್ರಣ ವಲಯ (ಸಿಆರ್‌ಝಡ್‌) ಸರಳೀಕೃತ ಹೊಸ ನಿಯಮಗಳಲ್ಲಿ ಕುದ್ರು (ನದಿ /ಸಮುದ್ರ ಮಧ್ಯದ ಕಿರು ದ್ವೀಪ)ಗಳಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಸಚಿವಾಲಯ ಯಾವುದೇ ರಿಯಾಯಿತಿ ನೀಡಿಲ್ಲ. ಹಳೆ ನಿಯಮಗಳೇ ಜಾರಿಯಲ್ಲಿರಲಿದ್ದು ಕುದ್ರುಗಳನ್ನು ಪ್ರವಾಸಿ ತಾಣವಾಗಿ ರೂಪಿಸುವ ಯೋಜನೆಗಳಿಗೆ ಹಿನ್ನಡೆಯಾಗಿದೆ.

Advertisement

ಕುದ್ರುಗಳಲ್ಲಿ ಹೊಸ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಆಯಾಯ ರಾಜ್ಯಗಳು ಸಮಗ್ರ ದ್ವೀಪ ಹೊಸ ನಿರ್ವಹಣ ಯೋಜನೆ (ಇಂಟಿಗ್ರೇಟೆಡ್‌ ಐಲ್ಯಾಂಡ್‌ ಮ್ಯಾನೇಜ್‌ಮೆಂಟ್‌ ಪ್ಲಾನ್‌- ಐಐಎಂಪಿ) ರೂಪಿಸಿ ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಸಚಿವಾಲಯಕ್ಕೆ ಸಲ್ಲಿಸಬೇಕಾಗಿದ್ದು ಇದನ್ನು ಪರಿಶೀಲಿಸಿ ಸಚಿವಾಲಯ ರಿಯಾಯಿತಿ ಬಗ್ಗೆ ನಿರ್ಧರಿಸಲಿದೆ.

ಕರ್ನಾಟಕ ರಾಜ್ಯ ಕರಾವಳಿ ವಲಯ ನಿರ್ವಹಣ ಪ್ರಾಧಿಕಾರವು (ಕೆಎಸ್‌ಸಿಝಡ್‌ಎಂಎ) ಸಿಆರ್‌ಝಡ್‌ ಅಧಿಸೂಚನೆ 2019ರಂತೆ ಸಿದ್ಧಪಡಿಸಿದ್ದ ನಕ್ಷೆಯಲ್ಲಿ ಕುದ್ರುಗಳ ಸಿಆರ್‌ಝಡ್‌ ವ್ಯಾಪ್ತಿಯನ್ನು 100 ಮೀಟರ್‌ನಿಂದ 20 ಮೀ.ಗೆ ಇಳಿಸಲು ಕೇಂದ್ರ ಪರಿಸರ ಅರಣ್ಯ ಮತ್ತು ಹವಾಮಾನ ಸಚಿವಾಲಯ ಅನುಮೋದನೆ ನೀಡಿಲ್ಲ.

ಕೇರಳ, ಗೋವಾದಲ್ಲಿದೆ
ನೆರೆಯ ಕೇರಳ ಮತ್ತು ಗೋವಾ ದಲ್ಲಿ 2011ರ ಸಿಆರ್‌ಝಡ್‌ನ‌ಲ್ಲಿ ಕುದ್ರುಗಳಿಗೆ ಸಂಬಂಧಿಸಿದಂತೆ ಹಿನ್ನೀರು ಹಾಗೂ ದ್ವೀಪಗಳ ಪ್ರದೇಶ ದಲ್ಲಿ ಈಗಾಗಲೇ ಇಲ್ಲಿ 100 ಮೀಟರ್‌ ಬದಲು 50 ಮೀ. ವ್ಯಾಪ್ತಿ ಇದೆ. ಹೊಸ ನಕ್ಷೆಯಲ್ಲಿ ಕರ್ನಾಟಕದಲ್ಲಿ ಸಿಆರ್‌ಝಡ್‌ ವ್ಯಾಪ್ತಿಯ ನದಿ ಹಾಗೂ ಹಿನ್ನೀರು ಪ್ರದೇಶಕ್ಕೆ ಸಿಆರ್‌ಝಡ್‌ ವ್ಯಾಪ್ತಿಯನ್ನು 100 ಮೀ. ಬದಲು 50 ಮೀ.ಗೆ ಇಳಿಸಿದ್ದು ಕುದ್ರುಗಳ ಮಿತಿಯನ್ನು 100 ಮೀ. ಉಳಿಸಿಕೊಳ್ಳಲಾಗಿದೆ.

ಅಭಿವೃದ್ಧಿಗೊಳ್ಳಲಿರುವ ಕುದ್ರುಗಳು
ದಕ್ಷಿಣ ಕನ್ನಡದಲ್ಲಿ ಜಪ್ಪಿನಮೊಗರು ಕಡೆಕಾರು ಬಳಿ ನೇತ್ರಾವತಿ ನದಿಯಲ್ಲಿರುವ ಕುದ್ರು, ಹಳೆ ಬಂದರು ಬಳಿಯಲ್ಲಿ ಫಲ್ಗುಣಿ ನದಿ ಮಧ್ಯದಲ್ಲಿರುವ ಕುದ್ರು, ತಣ್ಣೀರುಬಾವಿ ಬೀಚ್‌ ಬಳಿಯ ಕುಡ್ಲಕುದ್ರು ಸೇರಿದಂತೆ ಮಂಗಳೂರು ಸುತ್ತಲಿನ 4 ಕುದ್ರುಗಳನ್ನು ಅಭಿವೃದ್ಧಿ ಪಡಿಸಿ ಪ್ರವಾಸಿ ತಾಣಗಳಾಗಿ ರೂಪಿಸಲು ನಿರ್ಧರಿಸಲಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಒಟ್ಟು 9 ಕುದ್ರುಗಳಿದ್ದು ಪ್ರಮುಖವಾಗಿರುವ ಸೈಂಟ್‌ ಮೆರೀಸ್‌, ಬಹದ್ದೂರುಗಢ ಹಾಗೂ ದಿಂಡಿ ದ್ವೀಪಗಳನ್ನು ಪ್ರವಾಸಿ ತಾಣಗಳಾಗಿ ಹೆಚ್ಚು ಆಕರ್ಷಣೀಯಗೊಳಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆ ರೂಪಿಸಲು ನಿರ್ಧರಿಸಲಾಗಿದೆ.

Advertisement

ಕೇರಳದಲ್ಲಿ ವೈಪಿನ್‌ ದ್ವೀಪ, ಗುಂಡು ದ್ವೀಪ, ವಿಲಿಂಗ್ಟನ್‌ ದ್ವೀಪ, ಬೊಲ್ಗಟ್‌ ದ್ವೀಪ, ಧರ್ಮಾದಂ ಐಲ್ಯಾಂಡ್‌, ಕವ್ವಯಿ ದ್ವೀಪ, ಕಕ್ಯ ತುರ್ತು ದ್ವೀಪ, ಪೂವರ್‌ ದ್ವೀಪ, ಪೊನ್ನುಂತುರುತು ದ್ವೀಪ, ಮುನ್ರೊ ç
ದ್ವೀಪ ಸೇರಿದಂತೆ ಸುಮಾರು 8 ಸಣ್ಣ ದ್ವೀಪಗಳು ಪ್ರವಾಸೋದ್ಯಮ ಕೇಂದ್ರಗಳಾಗಿ ಅಭಿವೃದ್ಧಿ ಹೊಂದಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ.

ಅಭಿವೃದ್ಧಿಗೆ ಅವಕಾಶ
ದ.ಕ., ಉಡುಪಿ ಜಿಲ್ಲೆಗಳಲ್ಲಿ ಸುಂದರ ಕುದ್ರುಗಳಿದ್ದು ಕೇರಳದಂತೆ ಪ್ರವಾಸಿ ತಾಣಗಳಾಗಿ ರೂಪಿಸಬಹು ದಾಗಿದೆ. ಮೆರಿಟೈಮ್‌ ಬೋರ್ಡ್‌ ನಲ್ಲಿ ಸಾಗರ ತೀರಗಳ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಲು ಅವಕಾಶಗಳಿವೆ. ಉಭಯ ಡಿಸಿಗಳು ಬೋರ್ಡ್‌ ಸದಸ್ಯರಾಗಿರುತ್ತಾರೆ. ಈ ಅವಕಾಶಗಳನ್ನು ಬಳಸಿಕೊಂಡು ಸಮುದ್ರತೀರ ಪ್ರದೇಶಗಳನ್ನು ಹಾಗೂ ಕುದ್ರುಗಳನ್ನು ಪ್ರವಾಸಿತಾಣಗಳಾಗಿ ಅಭಿವೃದ್ಧಿಪಡಿಸಬಹುದು.

ಹೊಸ ನಿಯಮಾವಳಿಯಲ್ಲಿ ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಬರುವ ಕುದ್ರು, ದ್ವೀಪಗಳಿಗೆ ಸಂಬಂಧಿಸಿ ಹಳೆಯ ನಿಯಮಗಳನ್ನೇ ಉಳಿಸಿಕೊಳ್ಳ ಲಾಗಿದೆ. ಇವುಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಸಮಗ್ರ ದ್ವೀಪ ನಿರ್ವಹಣ ಯೋಜನೆ ಸಿದ್ಧಪಡಿಸಬೇಕಾಗಿದೆ.
– ಡಾ| ದಿನೇಶ್‌ ಕುಮಾರ್‌,
ಪ್ರಾದೇಶಿಕ ನಿರ್ದೇಶಕರು ಪರಿಸರ (ಪ್ರಭಾರ)

Advertisement

Udayavani is now on Telegram. Click here to join our channel and stay updated with the latest news.

Next