Advertisement

ಕರಾವಳಿಯಲ್ಲಿ ಮಳೆ ಅನಾಹುತ 200 ಕೋ.ರೂ.ಗೂ ಅಧಿಕ ನಷ್ಟ

12:47 AM Jul 16, 2022 | Team Udayavani |

ಉಡುಪಿ: ನಿರಂತರ ಮಳೆ, ನೆರೆಯಿಂದ ಒಂದು ತಿಂಗಳಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 200 ಕೋ.ರೂ.ಗೂಅಧಿಕ ಮೌಲ್ಯದ ಮೂಲಸೌಕರ್ಯ ನಾಶವಾಗಿದ್ದು, ಉಭಯ ಜಿಲ್ಲೆಗಳ ಶಾಸಕರು ವಿಶೇಷ ಅನುದಾನಕ್ಕಾಗಿ ಸರಕಾರದ ಮೇಲೆ ಒತ್ತಡ ಹೇರಬೇಕಿದೆ.

Advertisement

ಪ್ರಸ್ತುತ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮಾರ್ಗಸೂಚಿಯ ಅನ್ವಯ ಪರಿಹಾರವನ್ನು ನೀಡಲಾಗುತ್ತಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಅನುದಾನ ಇಲ್ಲ. ಜು. 12ರಂದು ಉಭಯ ಜಿಲ್ಲೆಗಳಿಗೆ ತಲಾ 5 ಕೋ.ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ ಇದು ಯಾವುದಕ್ಕೂ ಸಾಕಾಗುತ್ತಿಲ್ಲ.

ಜಿಲ್ಲಾ ವಿಪತ್ತು ನಿರ್ವಹಣ ನಿಧಿಯಲ್ಲೂ ಹೇಳಿಕೊಳ್ಳುವಷ್ಟು ಇಲ್ಲ. ಉಡುಪಿ ಜಿಲ್ಲೆಯಲ್ಲಿ 5.43 ಕೋ.ರೂ., ದಕ್ಷಿಣ ಕನ್ನಡದಲ್ಲಿ 14.87 ಕೋ.ರೂ. ಲಭ್ಯವಿದೆ. ಈ ಹಿನ್ನೆಲೆಯಲ್ಲಿ ವಿಶೇಷ ಅನು ದಾನಕ್ಕಾಗಿ ಉಭಯ ಜಿಲ್ಲೆಗಳಿಂದಲೂ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸರಕಾರವು ತುರ್ತು ಮೂಲಸೌಕರ್ಯ ಕಲ್ಪಿಸಲು ಇಡೀ ರಾಜ್ಯಕ್ಕೆ 500 ಕೋ.ರೂ. ಘೋಷಿಸಿದೆ. ಇದರಲ್ಲಿ ಉಭಯ ಜಿಲ್ಲೆಗಳಿಗೆ ಎಷ್ಟು ಎಂಬುದು ಖಚಿತವಾಗಿಲ್ಲ. ಈಗಲೇ ಉಭಯ ಜಿಲ್ಲೆಗಳ ಜನಪ್ರತಿನಿಧಿಗಳು ಸರಕಾರದ ಬೆನ್ನು ಹತ್ತಿದರೆ ಹೆಚ್ಚಿನ ಅನುದಾನ ಸಿಗಬಹುದು. ಇಲ್ಲವಾದರೆ ಮೂಲಸೌಕರ್ಯ ಕಲ್ಪಿಸಲು ಮತ್ತೆ ಹಣದ ಕೊರತೆ ಉದ್ಭವಿಸಲಿದೆ. ಸದ್ಯ ಕಡಲ್ಕೊರೆತ ಹೊರತುಪಡಿಸಿ ಉಳಿದ ತುರ್ತು ಕಾಮಗಾರಿಗೆ 150- 200 ಕೋ ರೂ. ಉಭಯ ಜಿಲ್ಲೆಗಳಿಗೆ ಬೇಕಿದೆ.


ದಾಖಲೆ ಮಳೆ
ಉಡುಪಿಯಲ್ಲಿ ಜು. 12ರ ವರೆಗೆ ಪ್ರತೀ ವರ್ಷ ಸರಾಸರಿ 1,860 ಮಿ.ಮೀ. ಮಳೆಯಾಗುತ್ತದೆ. ಆದರೆ ಈ ವರ್ಷ 2,460 ಮಿ.ಮೀ. ಮಳೆ ಯಾಗಿದೆ. ಅಂದರೆ ವಾಡಿಕೆಗಿಂತ ಪ್ರತಿ ಶತ ಶೇ. 32ರಷ್ಟು ಹೆಚ್ಚು ಮಳೆ ಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1,646 ಮಿ.ಮೀ. ಸರಾಸರಿ ಮಳೆ ಯಾಗುತ್ತಿದ್ದು, ಈ ವರ್ಷ 2,161 ಮಿ.ಮೀ. ಮಳೆ ಯಾಗಿ ವಾಡಿಕೆಗಿಂತ ಪ್ರತಿಶತ ಶೇ. 31ರಷ್ಟು ಹೆಚ್ಚು ಮಳೆಯಾಗಿದೆ.

ಕೇಂದ್ರದ ಅನುದಾನಕ್ಕೂ ಆಗ್ರಹ
ಉಭಯ ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದ 200 ಕೋ.ರೂ.ಗಳಿಗೂ ಅಧಿಕ ಮೌಲ್ಯದ ಮೂಲ ಸೌಕರ್ಯಗಳಿಗೆ ಹಾನಿಯಾಗಿದೆ. ರಾಜ್ಯ ಸರಕಾರದಿಂದ ಜಿಲ್ಲೆಗೆ ತಲಾ 5 ಕೋ.ರೂ. ಬಿಡುಗಡೆ ಮಾಡಲಾ ಗಿದೆ. ಮೂಲಸೌಕರ್ಯ ಒದಗಿ ಸುವ ನಿಟ್ಟಿ ನಲ್ಲಿ ತುರ್ತು ಕಾಮಗಾರಿಗೆ ಕೋಟ್ಯಂತರ ರೂಪಾಯಿ ಅನು ದಾನದ ಆವಶ್ಯಕತೆಯಿದ್ದು, ಸಂಸದೆ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲು ಕೇಂದ್ರ ಸರಕಾರದಿಂದ ಕರಾವಳಿ ಜಿಲ್ಲೆಗಳಿಗೆ ಮಳೆ ಹಾನಿ ತುರ್ತು ಕಾಮಗಾರಿಗಳಿಗಾಗಿ ಶೀಘ್ರ ಅನುದಾನ ತೆಗೆದುಕೊಂಡು ಬರುವ ಪ್ರಯತ್ನ ಮಾಡಬೇಕು ಎಂಬ ಆಗ್ರಹವೂ ಜನರಿಂದ ಕೇಳಿಬರುತ್ತಿದೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 146 ಕೋಟಿ ರೂ.ಗಳಷ್ಟು ನಷ್ಟವಾಗಿದ್ದು, ಹೆಚ್ಚಿನ ಅನುದಾನಕ್ಕೆ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ.
– ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.

ಉಡುಪಿ ಜಿಲ್ಲೆಯಲ್ಲಿ ಆಗಿರುವ ಹಾನಿಯ ವರದಿಯನ್ನು ನಿತ್ಯವೂ ಸರಕಾರಕ್ಕೆ ಸಲ್ಲಿಸುತ್ತಿದ್ದೇವೆ. ಮನೆ ಹಾನಿ, ಬೆಳೆ ಹಾನಿ ಇತ್ಯಾದಿ ಪರಿಹಾರ ನೇರವಾಗಿ ಸಂತ್ರಸ್ತರ ಖಾತೆಗೆ ಹೋಗುತ್ತದೆ. ಮೂಲ ಸೌಕರ್ಯಕ್ಕೆ ಪ್ರತ್ಯೇಕ ಅನುದಾನ ಸಿಗಲಿದೆ.
– ಕೂರ್ಮಾ ರಾವ್‌ ಎಂ.
ಜಿಲ್ಲಾಧಿಕಾರಿ, ಉಡುಪಿ

- ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next