Advertisement

ಕರಾವಳಿ: ಪೆಟ್ರೋಲ್‌ಗೆ 5 ದಿನಗಳಲ್ಲಿ 80 ಪೈಸೆ ಏರಿಕೆ

11:04 PM Dec 05, 2020 | mahesh |

ಮಂಗಳೂರು/ಉಡುಪಿ: ಕೆಲವು ದಿನಗಳಿಂದ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ನಿರಂತರ ಹೆಚ್ಚುತ್ತಲೇ ಇದೆ. 2018ರ ಬಳಿಕ ಶುಕ್ರವಾರ (ಡಿ. 5) ಗರಿಷ್ಠ ಬೆಲೆ ದಾಖಲಾಗಿದೆ.

Advertisement

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರುತ್ತಿರುವ ಪರಿಣಾಮ ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೇರುತ್ತಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬಿದ್ದಿದೆ. ದೈನಂದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯ ಜತೆಗೆ ತೈಲ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಡಿಸೆಂಬರ್‌ ಆರಂಭದಿಂದ ಇಂದಿನ ವರೆಗೆ ನೋಡಿದರೆ ಐದೇ ದಿನಗಳಲ್ಲಿ ಒಂದು ಲೀಟರ್‌ ಪೆಟ್ರೋಲ್‌ಗೆ ದ.ಕ.ದಲ್ಲಿ 82 ಪೈಸೆ, ಉಡುಪಿಯಲ್ಲಿ 80 ಪೈಸೆ, ಡೀಸೆಲ್‌ ಬೆಲೆ ದ.ಕ.ದಲ್ಲಿ 96 ಪೈಸೆ, ಉಡುಪಿಯಲ್ಲಿ 94 ಪೈಸೆ ಏರಿಕೆ ಕಂಡಿದೆ.

ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಡೀಸೆಲ್‌ಗಿಂತ ಪೆಟ್ರೋಲ್‌ ಅಧಿಕ ಮಾರಾಟವಾಗುತ್ತದೆ. ಮಾರಾಟಗಾರರು ಹೇಳುವ ಪ್ರಕಾರ, ಒಂದು ತಿಂಗಳಿನಲ್ಲಿ 15 ಲಕ್ಷ ಲೀಟರ್‌ ಪೆಟ್ರೋಲ್‌ ಮತ್ತು 25 ಲಕ್ಷ ಲೀಟರ್‌ ಡೀಸೆಲ್‌ ಮಾರಾಟವಾಗುತ್ತದೆ. ಆದರೆ ಕೊರೊನಾ ಲಾಕ್‌ಡೌನ್‌ ಸಡಿಲವಾದರೂ ನಗರದ ಎಲ್ಲ ಚಟುವಟಿಕೆಗಳು ಸಹಜಸ್ಥಿತಿಗೆ ಬಂದಿಲ್ಲ. ಇದೇ ಕಾರಣಕ್ಕೆ ಪೆಟ್ರೋಲ್‌ಗೆ ಹೋಲಿಕೆ ಮಾಡಿದರೆ ಡೀಸೆಲ್‌ ಮಾರಾಟ ಈಗಲೂ ಕಡಿಮೆ ಇದೆ.

ಪೆಟ್ರೋಲ್‌ಗೆ 90 ರೂ.?
ಪೆಟ್ರೋಲ್‌ ಮತ್ತು ಡೀಸೆಲ್‌ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಏರಿಕೆಯೇ ಇದಕ್ಕೆ ಕಾರಣ. ಮುಂದಿನ ದಿನಗಳಲ್ಲಿ ಪೆಟ್ರೋಲ್‌ ಬೆಲೆ 90 ರೂ. ತಲುಪುವ ಸಾಧ್ಯತೆ ಇದೆ. ವಾಹನಗಳಿಗೆ ಸಿಎನ್‌ಜಿ ವ್ಯವಸ್ಥೆ ಬಂದ ಬಳಿಕ ತೈಲ ಬೆಲೆ ಇಳಿಕೆ ಕಾಣಬಹುದು. ಲಾಕ್‌ಡೌನ್‌ನಿಂದ ಪೆಟ್ರೋಲ್‌ ಮಾರಾಟ ಯಥಾಸ್ಥಿತಿಯತ್ತ ಬಂದಿದ್ದು, ಡೀಸೆಲ್‌ ಮಾರಾಟ ಇನ್ನೂ ಸಹಜತೆಗೆ ಬಂದಿಲ್ಲ. – ವಾಮನ ಪೈ, ದ.ಕ. ಜಿಲ್ಲಾ ಪೆಟ್ರೋಲ್‌ ವ್ಯಾಪಾರಿಗಳ ಸಂಘದ ಮಾಜಿ ಅಧ್ಯಕ್ಷ

Advertisement

ಅಬಕಾರಿ ಶುಲ್ಕ ಇಳಿಸಿದರೆ ಸೂಕ್ತ
ಕೋವಿಡ್‌ ಸಂದರ್ಭ ಕೇಂದ್ರ ಸರಕಾರ ಇಂಧನದ ಮೇಲಿನ ಅಬಕಾರಿ ಶುಲ್ಕವನ್ನು 13 ರೂ. ಹೆಚ್ಚಿಸಿದೆ. ಇದರ ಪ್ರಮಾಣವನ್ನು ಇಳಿಸಿದರೆ ಇಂಧನದ ದರವೂ ಕಡಿಮೆಯಾಗಲಿದೆ.
– ಆನಂದ ಕಾರ್ನಾಡ್‌, ಕಾರ್ಯದರ್ಶಿ, ಸ್ಟೇಟ್‌ ಪೆಟ್ರೋಲಿಯಂ ಡೀಲರ್ಸ್‌ ಫೆಡರೇಶನ್‌

Advertisement

Udayavani is now on Telegram. Click here to join our channel and stay updated with the latest news.

Next