Advertisement

ಕರಾವಳಿಗರ ಕೊಡುಗೆ ಸ್ಮರಣೀಯ: ಸಚಿವ ಕೋಟ

12:08 PM May 29, 2022 | Team Udayavani |

ಕುಂದಾಪುರ/ಬಸ್ರೂರು: ಸ್ವಾತಂತ್ರ್ಯ ಹೋರಾಟದಲ್ಲಿ ಕಾರ್ನಾಡ್‌ ಸದಾಶಿವ ರಾಯರ ಪಾತ್ರ ಪ್ರಮುಖವಾದುದು. ಅವರ ಪತ್ನಿ ತನ್ನ ಧಾರೆ ಸೀರೆ, ಮಾಂಗಲ್ಯ ಸರವನ್ನೇ ಹೋರಾಟಕ್ಕಾಗಿ ಸಮರ್ಪಿಸಿದ ಮಹಾತಾಯಿ. ಅವರಂತಹ ಅನೇಕ ಮಹನೀಯರ ತ್ಯಾಗ, ಬಲಿದಾನದ ಫಲವನ್ನು ನಾವಿಂದು ಅನುಭವಿಸುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಬಸ್ರೂರಿನ ಅನೇಕರು ಸೇರಿದಂತೆ ಕರಾವಳಿಗರ ಪಾತ್ರ ಮಹತ್ತರವಾದುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

Advertisement

ಅವರು ಶನಿವಾರ ಬಸ್ರೂರಿನ ಶ್ರೀ ಶಾರದಾ ಮಹಾವಿದ್ಯಾಲಯದ ಆವರಣದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲಾಡಳಿತ, ಜಿ.ಪಂ. ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ ‘ಅಮೃತಭಾರತಿಗೆ ಕನ್ನಡದಾರತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯಕ್ಕಾಗಿ ದುಡಿದವರು, ಮಡಿದವರನ್ನು ಸ್ಮರಿಸುವ, ಗೌರವಿಸುವ, ಅವರ ತ್ಯಾಗ, ಪರಿಶ್ರಮ, ಬಲಿದಾನವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಇದೊಂದು ಔಚಿತ್ಯಪೂರ್ಣ ಕಾರ್ಯಕ್ರಮವಾಗಿದೆ. ಬಲಿಷ್ಠ, ಶಕ್ತಿಶಾಲಿ, ಸಮೃದ್ಧ ಭಾರತದ ಕಲ್ಪನೆ ಸಾಕಾರಗೊಳ್ಳುತ್ತಿದೆ ಎಂದ ಅವರು, ಹಿಂದೆ ನಾನು ಒಂದನೇ ತರಗತಿಯಲ್ಲಿ ಓದಿದ್ದ ಪಠ್ಯ ಈಗಿಲ್ಲ. ಅದರಂತೆ ಕಾಲಕಾಲಕ್ಕೆ ಎಲ್ಲ ವಿಚಾರದಲ್ಲೂ ಬದಲಾವಣೆ ಸಹಜ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇತಿಹಾಸದ ಸತ್ಯಾನ್ವೇಷಣೆ ಆಗಬೇಕು ಎಂದವರು ಮಾರ್ಮಿಕವಾಗಿ ನುಡಿದರು.

ಹೆತ್ತ ತಾಯಿಯಂತೆ…

ಧಾರ್ಮಿಕ ಮುಂದಾಳು, ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ ಮಾತನಾಡಿ, ನಾನು ಮೊದಲ ಸ್ವಾತಂತ್ರ್ಯ ದಿನಾಚರಣೆಯನ್ನು ಕಂಡಿದ್ದೇನೆ. ಈಗ 75ನೇ ಸ್ವಾತಂತ್ರೋತ್ಸವದ ಸಂಭ್ರಮವನ್ನು ಕಾಣುತ್ತಿದ್ದೇನೆ. ಪರಕೀಯರ ದಾಸ್ಯದಿಂದ ದೇಶವನ್ನು ಮುಕ್ತಿಗೊಳಿಸಿದ ಮಹನೀಯರ ಸೇವೆ, ಶ್ರಮವನ್ನು ನೆನಪಿಸುವ ಅರ್ಥಪೂರ್ಣ ಕಾರ್ಯಕ್ರಮ ಇದಾಗಿದೆ. ಶತಮಾನೋತ್ಸವ ಕಾರ್ಯಕ್ರಮ ಇನ್ನಷ್ಟು ವಿಜೃಂಭಣೆಯಿಂದ ನಡೆಯುವಂತಾಗಲಿ. ನಮಗೆಲ್ಲರಿಗೂ ತಾಯ್ನಾಡು ಸಹ ಹೆತ್ತ ತಾಯಿಯಂತೆ ಶ್ರೇಷ್ಠವಾದುದು. ಅನೇಕ ಹೋರಾಟಗಾರರ ತ್ಯಾಗವನ್ನು ಇಂದಿನ ಯುವಕರು ಮರೆಯಬಾರದು ಎಂದರು. ಬೆಂಗಳೂರಿನ ಕೆಂಪೇಗೌಡ ಮೆಡಿಕಲ್‌ ಕಾಲೇಜಿನ ಪ್ರಾಧ್ಯಾಪಕ ಡಾ| ಗಿರಿಧರ ಉಪಾಧ್ಯಾಯ ವಿಶೇಷ ಉಪನ್ಯಾಸ ನೀಡಿದರು.

Advertisement

ಬಸ್ರೂರು ಗ್ರಾ.ಪಂ. ಅಧ್ಯಕ್ಷೆ ಇಂದಿರಾ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್‌ಪಿ ಶ್ರೀಕಾಂತ್‌ ಕೆ., ತಹಶೀಲ್ದಾರ್‌ ಗಳಾದ ಬೈಂದೂರಿನ ಶೋಭಾಲಕ್ಷ್ಮೀ, ಬ್ರಹ್ಮಾವರದ ರಾಜಶೇಖರ್‌ ಮೂರ್ತಿ, ಇಒ ಇಬ್ರಾಹಿಂಪುರ್‌, ಕುಂದಾಪುರ ಇಒ ಶ್ವೇತಾ, ಬಸ್ರೂರು ಶಾರದಾ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ| ಚಂದ್ರಾವತಿ ಶೆಡ್ತಿ ಮತ್ತಿತರರು ಉಪಸ್ಥಿತರಿದ್ದರು.

ಜನಸಮೂಹ

ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಬಸ್ರೂರಿನದ್ದು ಮಹತ್ತರ ಪಾತ್ರವಿದ್ದು, ಇಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಸೇರಿದಂತೆ ಸಹಸ್ರಾರು ಮಂದಿ ಭಾಗವಹಿಸಿದ್ದರು. ಕುಂದಾಪುರ ಎಸಿ ಕೆ. ರಾಜು ಸ್ವಾಗತಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್‌ ಕುಮಾರ್‌ ಶೆಟ್ಟಿ ವಂದಿಸಿದರು. ಕುಂದಾಪುರ ತಹಶೀಲ್ದಾರ್‌ ಕಿರಣ್‌ ಗೌರಯ್ಯ ಸಂಕಲ್ಪ ಬೋಧಿಸಿದರು. ನಿವೃತ್ತ ಮುಖ್ಯೋಪಾಧ್ಯಾಯ ದಿನಕರ ಆರ್‌. ಶೆಟ್ಟಿ ಹಾಗೂ ಶಿಕ್ಷಕಿ ಸಾರಿಕಾ ಅಶೋಕ್‌ ಕೆರೆಕಟ್ಟೆ ನಿರೂಪಿಸಿದರು. ಸ್ವಾತಂತ್ರ್ಯ ಯೋಧರ ಮನೆಯವರಿಗೆ ಸಮ್ಮಾನ ಸ್ವಾತಂತ್ರ್ಯ ಹೋರಾಟಗಾರರಾದ ಬಳ್ಕೂರು ಗಾಂಧಿ ರಾಮಣ್ಣ ಶೆಟ್ಟಿ ಅಳಿಯ ಪ್ರೊ| ಗಣಪಯ್ಯ ಶೆಟ್ಟಿ, ಬಸ್ರೂರು ಗೋಪಾಲಕೃಷ್ಣ ಶೆಣೈ ಪುತ್ರಿ ಮಹಾಲಕ್ಷ್ಮೀ ಕಾಮತ್‌, ಕೊಳ್ಕೆಬೈಲು ಮಹಾಬಲ ಶೆಟ್ಟಿ ಪುತ್ರ ಪ್ರಕಾಶ್ಚಂದ್ರ ಶೆಟ್ಟಿ ಹಾಗೂ ಕಳಿಂಜೆ ರಾಮಕೃಷ್ಣ ಭಟ್‌ ಪುತ್ರ ಶ್ರೀಧರ ಭಟ್‌ ಅವರನ್ನು ಸಮ್ಮಾನಿಸಲಾಯಿತು.

ಹೆಮ್ಮೆಯ ಕ್ಷಣ..  

ಸ್ವಾತಂತ್ರ್ಯ ದಿನಾಚರಣೆಯ ಸುವರ್ಣ ಮಹೋತ್ಸವದ ದಿನ ನಾನು ಸೇನೆಯಲ್ಲಿದ್ದು, ಪದಕ ತೆಗೆದುಕೊಂಡಿದ್ದೆ. ಈಗ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಪುಣ್ಯಭೂಮಿ ಬಸ್ರೂರಲ್ಲಿ ಆಯೋಜಿಸುವಲ್ಲಿ ಒಬ್ಬನಾಗಿರುವುದು ನನ್ನ ಪಾಲಿನ ಹೆಮ್ಮೆಯ ಕ್ಷಣ. ಕೆ. ರಾಜು, ಸಹಾಯಕ ಆಯುಕ್ತರು, ಕುಂದಾಪುರ ಉಪ ವಿಭಾಗ

Advertisement

Udayavani is now on Telegram. Click here to join our channel and stay updated with the latest news.

Next