Advertisement

ಕರಾವಳಿಯ ಎಲ್ಲಾ Bank ವಿಲೀನ; ಮನೆ, ಮನೆ ಅಕ್ಕಿ ಸಂಗ್ರಹಿಸಿ ಕೆನರಾ ಬ್ಯಾಂಕ್ ಸ್ಥಾಪಿಸಿದ್ರು

09:50 AM Sep 01, 2019 | Nagendra Trasi |

ಮಂಗಳೂರು/ಉಡುಪಿ: ದೇಶದ ಆರ್ಥಿಕ ಚೇತರಿಕೆಗಾಗಿ ದೇಶದ ಪ್ರಮುಖ ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಗಳನ್ನು ವಿಲೀನಗೊಳಿಸುವ ಮಹತ್ವದ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಘೋಷಿಸಿದ್ದು, ಇದರಲ್ಲಿನ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್ ಕರಾವಳಿ ಮೂಲದ್ದಾಗಿವೆ ಎಂಬುದು ಗಮನಾರ್ಹ.

Advertisement

ಈಗಾಗಲೇ ಕರಾವಳಿ ಮೂಲದ ವಿಜಯ್ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾ ಮತ್ತು ದೇನಾ ಬ್ಯಾಂಕ್ ಜತೆ ವಿಲೀನಗೊಂಡಿದೆ. ವಿಜಯ್ ಬ್ಯಾಂಕ್ ವಿಲೀನದ ಪ್ರಸ್ತಾಪವಾದಾಗ ಈ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಆದರೆ ಕೊನೆಗೆ ಕರಾವಳಿಯ ಪ್ರತಿಷ್ಠಿತ ಬ್ಯಾಂಕ್ ಎಲ್ಲಾ ವಿರೋಧದ ನಡುವೆಯೂ ವಿಲೀನವಾಗಿತ್ತು.

ಸಹಕಾರಿ ಕ್ಷೇತ್ರ ಹಾಗೂ ಬ್ಯಾಂಕಿಂಗ್ ವ್ಯವಸ್ಥೆಗೆ ಮೂಲವಾಗಿ, ಕರಾವಳಿಯ ನೆಲದಲ್ಲಿ ಜನ್ಮತಳೆದ ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಶನ್ ಹಾಗೂ ವಿಜಯ್ ಬ್ಯಾಂಕ್ ವಿಲೀನದೊಂದಿಗೆ ತಮ್ಮ ನೂರಾರು ವರ್ಷಗಳ ಇತಿಹಾಸವೂ ಇತಿಹಾಸದ ಪುಟ ಸೇರಲಿದೆ. ಸದ್ಯದ ಸಮಾಧಾನದ ಸಂಗತಿ ಎಂದರೆ ಕರಾವಳಿಯ ಸಿಂಡಿಕೇಟ್, ಕೆನರಾ ಬ್ಯಾಂಕ್ ಜತೆ ವಿಲೀನವಾಗಲಿದ್ದು, ಕಾರ್ಪೋರೇಶನ್ ಯಾವ ಬ್ಯಾಂಕ್ ನೊಂದಿಗೆ ವಿಲೀನವಾಗಲಿದೆ ಎಂಬುದು ಕಾದುನೋಡಬೇಕು. ಇಲ್ಲಿ ನಾಲ್ಕು ಬ್ಯಾಂಕ್ ಗಳ ಕಿರು ಪರಿಚಯ ಇಲ್ಲಿದೆ..

1906ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು ಕೆನರಾ ಬ್ಯಾಂಕ್:

ಅಂದು ಅಮ್ಮೆಂಬಳ ಸುಬ್ಬಾ ರಾವ್ ಪೈ ಅವರು ಪ್ರತಿ ಮನೆ, ಮನೆಗೆ ಹೋಗಿ ಅಕ್ಕಿಯನ್ನು ಸಂಗ್ರಹಿಸಿ, ಅದನ್ನು ಮಾರಾಟ ಮಾಡಿ ಬಂದ ಹಣ ಸಂಗ್ರಹಿಸುವ ಮೂಲಕ 1906 ಜುಲೈ 1ರಂದು ಕೆನರಾ ಬ್ಯಾಂಕ್ ಹಿಂದೂ ಪರ್ಮನೆಂಟ್ ಫಂಡ್ ಎಂಬುದಾಗಿ ಸ್ಥಾಪನೆ ಮಾಡಿದ್ದರು. ಹೀಗೆ ನಿಧಾನಕ್ಕೆ ಬೆಳೆಯುತ್ತಾ ಬಂದ ಕೆನರಾ ಬ್ಯಾಂಕ್ ಇದೀಗ ದೇಶಾದ್ಯಂತ 2542 ಶಾಖೆಗಳನ್ನು ಹೊಂದಿದೆ. ಲಂಡನ್ ನಲ್ಲಿಯೂ ಒಂದು ಶಾಖೆ ಇದೆ. 1910ರಲ್ಲಿ ಕೆನರಾ ಬ್ಯಾಂಕ್ ಹೆಸರು ಬದಲಾಗಿತ್ತು.

Advertisement

ಕಾರ್ಪೋರೇಶನ್ ಬ್ಯಾಂಕ್:

1906ರಲ್ಲಿ ದಾನಿಗಳ ಕೂಟದ ಮುಖ್ಯಸ್ಥರಾಗಿದ್ದ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಕಾಶಿಂ ಸಾಹೇಬ್ ಬಹದ್ದೂರ್ ಉಡುಪಿಯಲ್ಲಿ ದ ಕೆನರಾ ಬ್ಯಾಂಕಿಂಗ್ ಕಾರ್ಪೋರೇಶನ್(ಉಡುಪಿ) ಲಿಮಿಟೆಡ್ ಎಂದು ಸ್ಥಾಪಿಸಿದ್ದರು. 1972ರಲ್ಲಿ ಕಾರ್ಪೋರೇಶನ್ ಬ್ಯಾಂಕ್ ಎಂಬುದಾಗಿ ಮರುನಾಮಕರಣಗೊಂಡಿತ್ತು. 1980ರಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಆಗಿತ್ತು. ದೇಶಾದ್ಯಂತ 4,724 ಶಾಖೆಗಳನ್ನು ಹೊಂದಿದೆ. ಗ್ರಾಹಕರ ಅನುಕೂಲಕ್ಕಾಗಿ 3040 ಎಟಿಎಂಗಳನ್ನು ಸ್ಥಾಪಿಸಿದೆ.

ಸಿಂಡಿಕೇಟ್ ಬ್ಯಾಂಕ್:

1925ರಲ್ಲಿ ಉಪೇಂದ್ರ ಅನಂತ್ ಪೈ, ವಾಮನ್ ಕುಡ್ವ ಮತ್ತು ಡಾ.ಟಿಎಂಎ ಪೈ ಸೇರಿಕೊಂಡು 8 ಸಾವಿರ ರೂಪಾಯಿ ಅಸಲು ಬಂಡವಾಳದೊಂದಿಗೆ ಕೆನರಾ ಇಂಡಸ್ಟ್ರೀಯಲ್ ಮತ್ತು ಬ್ಯಾಂಕಿಂಗ್ ಸಿಂಡಿಕೇಟ್ ಲಿಮಿಟೆಡ್ ಅನ್ನು ಸ್ಥಾಪಿಸಿದ್ದರು. ಅಂದು ಕೈಮಗ್ಗದ ಇಂಡಸ್ಟ್ರೀ ಭಾರೀ ನಷ್ಟಕ್ಕೆ ಗುರಿಯಾದ ಹಿನ್ನೆಲೆಯಲ್ಲಿ ಸ್ಥಳೀಯ ನೇಕಾರರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಈ ಬ್ಯಾಂಕ್ ಸ್ಥಾಪಿಸಿದ್ದರು. 1963ರಲ್ಲಿ ಸಿಂಡಿಕೇಟ್ ಬ್ಯಾಂಕ್ ಎಂಬುದಾಗಿ ಮರುನಾಮಕರಣಗೊಂಡಿತ್ತು. ಪ್ರಸ್ತುತ ದೇಶಾದ್ಯಂತ 2125 ಶಾಖೆಗಳನ್ನು ಹೊಂದಿದೆ.

ವಿಜಯ್ ಬ್ಯಾಂಕ್;

ಮಂಗಳೂರಿನ ಎಬಿ ಶೆಟ್ಟಿ ಮತ್ತು ಇತರರು ಸೇರಿಕೊಂಡು 1931ರಲ್ಲಿ ರೈತಾಪಿ ವರ್ಗದ ನೆರವಿನೊಂದಿಗೆ ವಿಜಯ ಬ್ಯಾಂಕ್ ಅನ್ನು ಸ್ಥಾಪಿಸಿದ್ದರು. 1960ರ ದಶಕದಲ್ಲಿ ಬ್ಯಾಂಕ್ ಮುಲ್ಕಿ ಸುಂದರ್ ರಾಮ್ ಶೆಟ್ಟಿ ನೇತೃತ್ವದಲ್ಲಿ ಅಭಿವೃದ್ಧಿಯತ್ತ ಸಾಗಿತ್ತು. 1980ರಲ್ಲಿ ವಿಜಯ ಬ್ಯಾಂಕ್ ರಾಷ್ಟ್ರೀಕೃತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next