Advertisement
ಈ ಬಾರಿ ಬಿಜೆಪಿಯಲ್ಲೂ ಕೆಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲವೆಡೆ ಪಕ್ಷದೊಳಗೆ ಅಸಮಾಧಾನ ಕಂಡು ಬರುತ್ತಿದೆ. ಕೆಲವೆಡೆ ಬಂಡಾಯದ ಸೂಚನೆಗಳೂ ಇವೆ. ಕಾಂಗ್ರೆಸ್‌ನಲ್ಲಿ ಈಗಾಗಲೇ ಘೋಷಣೆಯಾಗಿರುವ ಕೆಲವು ಕ್ಷೇತ್ರಗಳಲ್ಲಿಅಪಸ್ವರ, ವಿರೋಧದ ಅಲೆ ದಟ್ಟವಾಗಿದೆ. ಉಡುಪಿ ಕ್ಷೇತ್ರದಲ್ಲಿ ಈಗಾಗಲೇ ಘೋಷಿತ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಎದುರು ಕೃಷ್ಣಮೂರ್ತಿ ಆಚಾರ್ಯ ಬಂಡಾಯದ ಬಾವುಟ ಹಾರಿಸಿದ್ದಾರೆ. ಸುಳ್ಯದಲ್ಲೂ ಘೋಷಿತ ಅಭ್ಯರ್ಥಿ ಕೃಷ್ಣಪ್ಪ ಎದುರು ನಂದಕುಮಾರ್ ಬಂಡಾಯ ಏಳುವ ಲಕ್ಷಣ ತೋರಿದ್ದಾರೆ.
Related Articles
Advertisement
ಕರಾವಳಿಯ ಚುನಾವಣ ಇತಿಹಾಸವನ್ನು ಗಮನಿಸಿದರೆ, ಇಲ್ಲಿ ಬಂಡಾಯ ಅಥವಾ ಪಕ್ಷೇತರರಾಗಿ ಗೆದ್ದವರು ಅಪರೂಪವಾದರೂ ಈ ವಿರೋಧದ ಅಲೆ, ಬಂಡಾಯದ ಬಿಸಿ ಮಾತ್ರ ಪಕ್ಷಗಳನ್ನು ಹುಬ್ಬೇರಿಸುವಂತೆ ಮಾಡಿರುವ ಉದಾಹರಣೆಗಳಿವೆ. ಬ್ರಹ್ಮಾವರ ಕ್ಷೇತ್ರದಲ್ಲಿ ಜಯಪ್ರಕಾಶ್ ಶೆಟ್ಟಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದರೆ, ಕೆ. ಜಯಪ್ರಕಾಶ್ ಹೆಗ್ಡೆ ಪಕ್ಷೇತರರಾಗಿ ಸತತ 2 ಬಾರಿ ವಿಜಯದ ಮಾಲೆ ಧರಿಸಿರುವುದು ಇತಿಹಾಸ.
ಇದಲ್ಲದೆ ಕುಂದಾಪುರದಲ್ಲಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಪಕ್ಷೇತರರಾಗಿ ಗೆದ್ದಿದ್ದರು. ಪುತ್ತೂರಿನಲ್ಲಿ 2004ರಲ್ಲಿ ಬಿಜೆಪಿಯಿಂದ ಗೆದ್ದಿದ್ದ ಶಕುಂತಳಾ ಶೆಟ್ಟಿ 2008ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಸೋತಿದ್ದರು. ಆದರೆ ಈ ಚುನಾವಣೆಯಲ್ಲಿ 25,171 ಮತಗಳನ್ನು ಪಡೆಯುವ ಮೂಲಕ ಅವರು ತೃತೀಯ ಸ್ಥಾನದಲ್ಲಿದ್ದು, ಗೆದ್ದ ಅಭ್ಯರ್ಥಿಯ ಮತಗಳ ಅಂತರವನ್ನು ಕಡಿಮೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಅಂಥದ್ದೇ ಪರಿಸ್ಥಿತಿ ಈ ಬಾರಿ ಜಿಲ್ಲೆಯ ಕೆಲವು ಕ್ಷೇತ್ರಗಳಲ್ಲಿ ಕಂಡುಬರಲಿದೆಯೇ ಎಂಬ ಕುತೂಹಲ ಮೂಡಿದೆ.