Advertisement
2019-20ನೇ ವರ್ಷದ ಕರಾವಳಿ ಉತ್ಸವ ವಿಜೃಂಭಣೆಯಿಂದ ನಡೆದಿತ್ತು. ಆದರೆ ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳಿಂದ ಕರಾವಳಿ ಉತ್ಸವವನ್ನು ರದ್ದುಗೊಳಿಸಲಾಗಿತ್ತು.
Related Articles
Advertisement
ಕರಾವಳಿ ಉತ್ಸವ ಆರಂಭವಾದರೆ ಸ್ಥಳೀಯ ವ್ಯಾಪಾರ ವಹಿವಾಟಿಗೆ ಉತ್ತೇಜನ ಸಿಗುವ ನಿರೀಕ್ಷೆ ಇದೆ. ಒಂಬತ್ತು ದಿನಗಳ ಕಾಲ ಕರಾವಳಿ ಉತ್ಸವ ನಡೆಯುತ್ತದೆ. ಸಾಮಾನ್ಯವಾಗಿ ಸುಮಾರು ಒಂದು ತಿಂಗಳಿಗೂ ಹೆಚ್ಚು ದಿನ ವಸ್ತು ಪ್ರದರ್ಶನ ನಡೆಯುತ್ತದೆ.
ಕರಾವಳಿ ಉತ್ಸವ ಮೈದಾನದಲ್ಲಿ ಪ್ರತೀ ವರ್ಷ ನಡೆಯುವ ವಸ್ತು ಪ್ರದರ್ಶನದಲ್ಲಿ ವಿವಿಧ ಜಿಲ್ಲೆ/ ರಾಜ್ಯಗಳ ಹತ್ತಾರು ಮಳಿಗೆಗಳು ಇರುತ್ತದೆ. ಇದನ್ನು ವೀಕ್ಷಿಸಲೆಂದು ಪ್ರತೀ ದಿನ ಸಾವಿರಾರು ಮಂದಿ ಉತ್ಸವ ಮೈದಾನಕ್ಕೆ ಆಗಮಿಸುತ್ತಾರೆ. ಆಗಮಿಸಿದವರು ಮಳಿಗೆಗಳಿಗೆ ಭೇಟಿ ನೀಡುತ್ತಾರೆ. ಆರ್ಥಿಕ ಚೇತರಿಕೆಯ ನಿಟ್ಟಿನಲ್ಲಿ ಕರಾವಳಿ ಉತ್ಸವ ವೇದಿಕೆಯಾಗುವ ಸಾಧ್ಯತೆ ಇದೆ.
ಜನವರಿಯಲ್ಲಿ ಫಲಪುಷ್ಪ ಪ್ರದರ್ಶನ
ಕರಾವಳಿ ಉತ್ಸವದಂತೆಯೇ ಆಕರ್ಷಣೆ ಪಡೆದ ಫಲ ಪುಷ್ಪ ಪ್ರದರ್ಶನ ವನ್ನು ನಡೆಸಲು ತೋಟಗಾರಿಕೆ ಇಲಾಖೆ ನಿರ್ಧರಿಸಿದೆ.
ನಗರದ ಕದ್ರಿ ಪಾರ್ಕ್‌ನಲ್ಲಿ ಜನವರಿ ತಿಂಗಳಿನಲ್ಲಿ ಫಲ ಪುಷ್ಪ ಪ್ರದರ್ಶನ ನಡೆಯಲಿದೆ. ಈ ನಿಟ್ಟಿನಲ್ಲಿ ಈಗಾಗಲೇ ಪ್ರಥಮ ಹಂತದ ಸಭೆ ನಡೆದಿದ್ದು, ಪ್ರದರ್ಶನ ಆಯೋಜನೆಗೆ ನಿರ್ಧರಿಸಲಾಗಿದೆ.
ನದಿ ಉತ್ಸವ ಆಕರ್ಷಣೆ
ಎರಡು ವರ್ಷಗಳ ಹಿಂದೆ ಮಂಗಳೂರಿನ ಕೂಳೂರು, ಬಂಗ್ರಕೂಳೂರು ಮತ್ತು ಸುಲ್ತಾನ್ ಬತ್ತೇರಿಯ ಫಲ್ಗುಣಿ ನದಿ ತೀರದಲ್ಲಿ ಆಯೋಜಿಸಿ ಆಕರ್ಷಣೆ ಪಡೆದುಕೊಂಡಿತ್ತು. ಕಯಾಕಿಂಗ್ ದೋಣಿ ಸ್ಪರ್ಧೆ, ಬೋಟ್ ರೇಸ್, ಫೆರ್ರಿ, ವಿಂಡ್ ಸರ್ಫಿಂಗ್ ಕಾರ್ಯಕ್ರಮ ನಡೆದಿತ್ತು. ಅದೇ ರೀತಿ ಈ ಬಾರಿಯೂ ನದಿ ಉತ್ಸವ ಆಯೋಜಿಸುವ ನಿಟ್ಟಿನಲ್ಲಿ ಮಾತುಕತೆ ನಡೆಯುತ್ತಿದೆ. ನದಿಗಳತ್ತ ಜನರನ್ನು ಆಕರ್ಷಿಸಲು, ನದಿ ಪ್ರೀತಿ ಹೆಚ್ಚಿಸುವುದು ಈ ಉತ್ಸವದ ಮುಖ್ಯ ಉದ್ದೇಶ.
ವಿಜೃಂಭಣೆಯಿಂದ ನಡೆಸಲು ನಿರ್ಧಾರ: ಈ ಬಾರಿ ಡಿಸೆಂಬರ್ ಅಂತ್ಯಕ್ಕೆ ಕರಾವಳಿ ಉತ್ಸವ ನಡೆಯಲಿದೆ. ಜತೆಗೆ ನದಿ ಉತ್ಸವವನ್ನೂ ಆಯೋಜನೆ ಮಾಡಲು ಮಾತುಕತೆ ನಡೆಯುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷ ಕರಾವಳಿ ಉತ್ಸವ ನಡೆದಿರಲಿಲ್ಲ. ಆದರೆ ಈ ವರ್ಷ ವಿಜೃಂಭಣೆಯಿಂದ ನಡೆಸಲು ನಿರ್ಧರಿಸಿದ್ದೇವೆ. ಉತ್ಸವಕ್ಕೆ ಸಂಬಂಧಪಟ್ಟಂತೆ ಸದ್ಯದಲ್ಲೇ ರೂಪರೇಖೆಗಳು ತಯಾರಾಗಲಿವೆ. –ಡಿ. ವೇದವ್ಯಾಸ ಕಾಮತ್, ಶಾಸಕರು