Advertisement

ಖಾತೆ ಹಂಚಿಕೆಯಲ್ಲೂ ಕರಾವಳಿ ಕಡೆಗಣನೆ

01:06 AM Aug 27, 2019 | Team Udayavani |

ಬೆಂಗಳೂರು: ಬಿಜೆಪಿ ಸರ್ಕಾರದ ಸಚಿವ ಸಂಪುಟದಲ್ಲಿ ಕರಾವಳಿಯ ಯಾವ ಶಾಸಕರಿಗೂ ಅವಕಾಶ ನೀಡಿರಲಿಲ್ಲ. ವಿಧಾನ ಪರಿಷತ್‌ ಸದಸ್ಯರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರನ್ನು ಸಚಿವರನ್ನಾಗಿ ಮಾಡಲಾಗಿತ್ತು. ಈಗ ಖಾತೆ ಹಂಚಿಕೆಯಲ್ಲೂ ಅದೇ ಅನ್ಯಾಯ ಮುಂದುವರಿದಿದೆ.

Advertisement

ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಮುಜರಾಯಿ ಖಾತೆ ನೀಡಲಾಗಿತ್ತು. ಈ ಬಾರಿಯೂ ಅದೇ ಖಾತೆಯನ್ನು ಮುನ್ನಡೆಸಲಿದ್ದಾರೆ. ಅದರ ಜತೆಗೆ ಬಂದರು, ಮೀನುಗಾರಿಕೆ, ಒಳನಾಡು ಸಾರಿಗೆಯನ್ನು ಸೇರಿಸಲಾಗಿದೆ. ಪ್ರಬಲ ಖಾತೆಗಳನ್ನೆಲ್ಲ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ಹಂಚಿಕೆ ಮಾಡಲಾಗಿದೆ.

ಸಚಿವ ಸಂಪುಟ ರಚನೆ ಸಂದರ್ಭದಲ್ಲಿ ಕರಾವಳಿಗೆ ಅನ್ಯಾಯವಾಗಿದ್ದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನವನ್ನು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ನೀಡಿ ಅದೇ ದಿನ ಆದೇಶ ಹೊರಡಿಸಲಾಗಿತ್ತು. ಆದರೀಗ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ ಸಂದರ್ಭದಲ್ಲೂ ಕರಾವಳಿಯನ್ನು ಮೂಲೆಗುಂಪು ಮಾಡಲಾಗಿದೆ ಎಂಬುದು ಕರಾವಳಿ ಬಿಜೆಪಿ ಕಾರ್ಯಕರ್ತರ ಆರೋಪ.

ದಕ್ಷಿಣ ಕನ್ನಡ ಮತ್ತು ಉಡುಪಿಯ 13 ವಿಧಾನಸಭಾ ಕ್ಷೇತ್ರದಲ್ಲಿ 12 ಬಿಜೆಪಿ ಶಾಸಕರಿದ್ದಾರೆ. ಕೊಡಗಿನ ಇಬ್ಬರು ಬಿಜೆಪಿ ಶಾಸಕರು ಹಾಗೂ ಉತ್ತರ ಕನ್ನಡದ ನಾಲ್ಕು ಬಿಜೆಪಿ ಶಾಸಕರು ಸೇರಿದಂತೆ 18 ಬಿಜೆಪಿ ಶಾಸಕರಿರುವ ಕರಾವಳಿಯ ನಾಲ್ಕು ಜಿಲ್ಲೆಯ ಏಕೈಕ ಸಚಿವರಿಗೆ ಸಮರ್ಥವಾದ ಖಾತೆಯನ್ನು ನೀಡದೇ ಇರುವುದು ಇನ್ನಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ಶಿರಸಿಯ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಸ್ಪೀಕರ್‌ ಮಾಡಿದ್ದಾರೆ ಎಂಬುದನ್ನು ಬಿಟ್ಟರೆ ಬೇರೇನೂ ಈ ನಾಲ್ಕು ಜಿಲ್ಲೆಗಳಿಗೆ ದೊರೆತಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಐದು ವರ್ಷದ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವರಾಗಿದ್ದ ಯು.ಟಿ.ಖಾದರ್‌ ಅವರಿಗೆ ಆರೋಗ್ಯ ಮತ್ತು ಆಹಾರ, ರಮಾನಾಥ ರೈ ಅವರಿಗೆ ಅರಣ್ಯ, ಅಭಯ್‌ಚಂದ್ರ ಜೈನ್‌ ಅವರಿಗೆ ಮೀನುಗಾರಿಕೆ, ಯುವ ಸಬಲೀಕರಣ ಮತ್ತು ಕ್ರೀಡೆ,

Advertisement

ವಿನಯ್‌ ಕುಮಾರ್‌ ಸೊರಕೆಯವರಿಗೆ ನಗರಾಭಿವೃದ್ಧಿ ಮತ್ತು ಪ್ರಮೋದ್‌ ಮಧ್ವರಾಜ್‌ ಅವರಿಗೆ ಮೀನುಗಾರಿಕೆ ಹಾಗೂ ಕ್ರೀಡಾ ಇಲಾಖೆ ಹಂಚಿಕೆಯಾಗುವ ಮೂಲಕ ಪ್ರಮುಖ ಖಾತೆಗಳು ಕರಾವಳಿಗರ ಪಾಲಾಗಿದ್ದವು. ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಕಾಂಗ್ರೆಸ್‌ ಶಾಸಕ ಯು.ಟಿ.ಖಾದರ್‌ ಅವರಿಗೆ ನಗರಾಭಿವೃದ್ಧಿ ಖಾತೆ ಹಂಚಿಕೆ ಮಾಡಲಾಗಿತ್ತು.

ಆದರೆ, ಬಿಜೆಪಿ ಸರ್ಕಾರಕ್ಕೆ ಬಹುದೊಡ್ಡ ಶಕ್ತಿಯಾಗಿರುವ ಕರಾವಳಿಯ ನಾಲ್ಕು ಜಿಲ್ಲೆಗಳ ಪೈಕಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 13 ವಿಧಾನಸಭಾ ಕ್ಷೇತ್ರದಲ್ಲಿ 12 ಮಂದಿ ಬಿಜೆಪಿ ಶಾಸಕರಿದ್ದಾರೆ. ಈ ಎರಡು ಜಿಲ್ಲೆಯ 12 ಶಾಸಕರಲ್ಲಿ ಅನುಭವಿಗಳು ಇದ್ದರೂ, ಸಚಿವ ಸ್ಥಾನ ನೀಡಿಲ್ಲ. ವಿಧಾನ ಪರಿಷತ್‌ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸಚಿವ ಸ್ಥಾನ ಹಂಚಿಕೆ ಮಾಡಲಾಗಿತ್ತು.

ಖಾತೆ ಹಂಚಿಕೆ ಸಂದರ್ಭದಲ್ಲಿಯಾದರೂ ಪ್ರಮುಖ ಖಾತೆ ನೀಡುವ ಮೂಲಕ ಕರಾವಳಿಗೆ ಆಗಿದ್ದ ಅನ್ಯಾಯವನ್ನು ಸರಿಪಡಿಸಬಹುದಿತ್ತು. ಅದನ್ನು ಈಗ ಬಿಜೆಪಿ ಸರ್ಕಾರ ಮಾಡಿಲ್ಲ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರಿ ಯಾವ ಖಾತೆ ನಿಭಾಯಿಸಿದ್ದರೋ, ಅದೇ ಖಾತೆಯನ್ನು ಮತ್ತೂಮ್ಮೆ ನಿರ್ವಹಣೆ ಮಾಡಲಿದ್ದಾರೆ. ಒಟ್ಟಾರೆಯಾಗಿ ಬಿಜೆಪಿ ಶಕ್ತಿ ತುಂಬಿದ ಕರಾವಳಿಯನ್ನು ಹಂತ ಹಂತವಾಗಿ ಪಕ್ಷವೇ ಮೂಲೆಗುಂಪು ಮಾಡುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

* ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next