Advertisement

ಕೋಸ್ಟಲ್ ಬರ್ತ್‌ ಯೋಜನೆ: ಭೂಮಿ ತೆರವಾಗದೆ ಪ್ರಗತಿ ವಿಳಂಬ‌

01:14 PM Nov 06, 2022 | Team Udayavani |

ಮಹಾನಗರ: ಕೇಂದ್ರ ನೆರವಿನ ಸಾಗರಮಾಲಾ ಯೋಜನೆಯಡಿ ಸರಕು ಸಾಗಾಟ ಸೌಲಭ್ಯ ಸುಧಾರಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಬೆಂಗ್ರೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಯೋಜನೆಗೆ ಶಂಕುಸ್ಥಾಪನೆ ನಡೆದು 2 ವರ್ಷಗಳೇ ಆಗಿದ್ದರೂ ಭೂ ಅತಿಕ್ರಮಣ ತೆರವು ಕಾರ್ಯ ಮುಂದುವರಿದಿಲ್ಲ.

Advertisement

ಮಂಗಳೂರಿನ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಯೋಜನೆ ಮಹತ್ವದ್ದು. ಈಗ ಇರುವ ಹಳೇ ಬಂದರು ಜೆಟ್ಟಿಯ ಮೇಲೆ ಹೆಚ್ಚಿನ ಅವಲಂಬನೆ ಇದೆ. ಅದನ್ನು ತಪ್ಪಿಸಿ ಸರಕು ಸಾಗಾಟಕ್ಕೆ ಪೂರಕವಾಗಿ ಕೋಸ್ಟಲ್‌ ಬರ್ತ್‌ ಯೋಜನೆ ರೂಪಿಸಿದ್ದು ಕೇಂದ್ರ ಸರಕಾರವೂ ಸಾಗರಮಾಲಾ ಯೋಜನೆಯಡಿ ಈ ಯೋಜನೆಗೆ ಅನುಮೋದಿಸಿತ್ತು.

2020ರ ಡಿಸೆಂಬರ್‌ನಲ್ಲೇ ಸಂಸದ ನಳಿನ್‌ ಕುಮಾರ್‌ ನೇತೃತ್ವದಲ್ಲಿ ಈ ಯೋಜನೆಗೆ ಶಿಲಾನ್ಯಾಸ ನೆರವೇರಿಸ ಲಾಗಿತ್ತು. ಒಟ್ಟು 65 ಕೋಟಿ ರೂ. ವೆಚ್ಚದ ಯೋಜನೆಗೆ ಪ್ರಾರಂಭದಲ್ಲೇ ಭೂಸ್ವಾಧೀನದ ಅಡ್ಡಿ ಉಂಟಾಯಿತು. ಯೋಜನೆಗಾಗಿ ಗುರುತಿಸಲಾಗಿರುವ ಜಾಗದಲ್ಲಿ ಕೆಲವು ಕುಟುಂಬಗಳು ವಾಸಿಸುತ್ತಿದ್ದು, ಜಾಗ ಬಿಟ್ಟು ಕೊಡಲು ಒಪ್ಪುತ್ತಿಲ್ಲ. ವಾಸ್ತವವಾಗಿ ಈ ಜಾಗ ಬಂದರು ಇಲಾಖೆಗೆ ಸೇರಿದ್ದು. ಆದರೂ ಹಲವು ವರ್ಷಗಳಿಂದ ಕುಟುಂಬಗಳು ಅಲ್ಲಿಯೇ ವಾಸಿಸುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಅಲ್ಲಿ ಕೆಲವು ಮೀನು ಒಣಗಿಸುವ, ಸಂಗ್ರಹಿಸುವ ಶೆಡ್‌ಗಳಿರುವುದರಿಂದ ಅವರನ್ನು ಒಕ್ಕಲೆಬ್ಬಿಸಬಾರದು ಎಂದು ಕೆಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.

ಈ ಕುಟುಂಬಗಳಿಗೆ ಬೇರೆ ಕಡೆ ಜಾಗ ಗುರುತಿಸುವುದು ಸಾಧ್ಯವಾದರೆ, ಅವರ ಪ್ರಕರಣ ನ್ಯಾಯುಯುತವಿದ್ದಲ್ಲಿ ಅವರಿಗೆ ಬೇರೆ ಕಡೆ ಮನೆ ನಿರ್ಮಾಣಕ್ಕೆ ಯಾವುದಾದರೂ ವಸತಿ ಯೋಜನೆ ಮೂಲಕ ನೆರವು ನೀಡಬಹುದು ಎಂದು ಡಿಸಿ ಭರವಸೆ ನೀಡಿದ್ದಾರೆ. ಆದರೂ ಸದ್ಯಕ್ಕೆ ಈ ಪ್ರಕರಣ ಬಗೆಹರಿ ಯುವಂತೆ ಕಾಣುತ್ತಿಲ್ಲ.

ಒಟ್ಟು ಯೋಜನೆಗೆ ಸುಮಾರು 9 ಎಕ್ರೆಯಷ್ಟು ಜಾಗ ಬೇಕಾಗಿದೆ. ಜಾಗ ವೆಲ್ಲವೂ ಬಂದರು ಇಲಾಖೆಯ ಅಧೀ ನವೇ ಇದ್ದರೂ ಅದರಲ್ಲಿ ಅತಿಕ್ರಮಣ ಮಾಡಿಕೊಂಡಿರುವವರ ತೆರವಷ್ಟೇ ಆಗಬೇಕಿದೆ.

Advertisement

ಜಲಮುಖೀ ಕೆಲಸ ಪ್ರಗತಿಯಲ್ಲಿ ಕೋಸ್ಟಲ್‌ಬರ್ತ್‌ಗಾಗಿ ಗುರುತಿಸಿರುವ ಭೂಮಿಯಲ್ಲಿ ಆಗುವ ಕೆಲಸಗಳು ಯಾವುದೂ ಶುರುವಾಗಿಲ್ಲ, ಆದರೆ ಯೋಜನೆ ವಿಳಂಬವಾಗುವ ಭೀತಿಯಿಂದಾಗಿ ಗುತ್ತಿಗೆದಾರರಾದ ಎಂಜೆ ಕನ್‌ಸ್ಟ್ರ‌ಕ್ಷನ್ ಅವರು ಜಲಮುಖೀ ಕೆಲಸಗಳನ್ನು ಕೈಗೊಂಡಿದೆಯೆಂದರೆ ನದಿಯಲ್ಲಿ ಆಗಬೇಕಾದ ನಿರ್ಮಾಣ ಕೆಲಸಗಳಾದ ಪೈಲಿಂಗ್‌, ಬೀಮ್‌, ಡಯಫ್ರಂ ವಾಲ್‌ ನಿರ್ಮಾಣ ನಡೆದಿದೆ.

ಪ್ರಸ್ತುತ ಶೇ.30ರಷ್ಟು ಜಲಮುಖೀ ಕೆಲಸ ಪೂರ್ಣಗೊಂಡಿದೆ. ಒಟ್ಟು 350 ಮೀಟರ್‌ ಉದ್ದದ ಜೆಟ್ಟಿಯಲ್ಲಿ ಸುಮಾರು 70 ಮೀಟರ್‌ನಷ್ಟು ಪೂರ್ಣಗೊಂಡಿದೆ. ಸುಮಾರು 150 ಮೀಟರ್‌ ವರೆಗೆ ಕೆಲಸ ಮಾಡಬಹುದು, ಆ ಬಳಿಕ ಮನೆಗಳು ಹತ್ತಿರ ಇರುವುದರಿಂದ ಕೆಲಸ ಮಾಡುವುದು ಕಷ್ಟ. ಮನೆಯ ತ್ಯಾಜ್ಯವನ್ನು ಅವರೆಲ್ಲ ನದಿಗೆ ಬಿಡುತ್ತಿದ್ದು, ಆ ಪೈಪ್‌ಲೈನ್‌ ತೆರವು ಮಾಡಬೇಕಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಪ್ರಸ್ತುತ ಯೋಜನೆಯ ಸುಗಮ ಮುಂದುವರಿಕೆ ದೃಷ್ಟಿಯಿಂದ ಈ ಮನೆಗಳಿಗಾಗಿ ಪ್ರತ್ಯೇಕ ಸೆಪ್ಟಿಕ್‌ಟ್ಯಾಂಕ್‌ ನಿರ್ಮಿಸಿ, ತ್ಯಾಜ್ಯವನ್ನು ಅದಕ್ಕೆ ಬಿಡುವ 5 ಲಕ್ಷ ರೂ. ನ ಪರ್ಯಾಯ ಯೋಜನೆ ರೂಪಿಸಲಾಗಿದೆ. ಅದಕ್ಕೆ ಇಲಾಖೆ ಹಿರಿಯ ಅಧಿಕಾರಿಗಳಿಂದ ಅನುಮೋದನೆಗಾಗಿ ಕಾಯಲಾಗುತ್ತಿದೆ.

ಕೋಸ್ಟಲ್‌ ಬರ್ತ್‌ ಯೋಜನೆ ಮುಖ್ಯಾಂಶ ವಾಣಿಜ್ಯ ಜೆಟ್ಟಿ ಗೋದಾಮುಗಳು 5,000 ಟನ್‌ ವರೆಗಿನ ಸಾಮರ್ಥ್ಯದ 70 ನೌಕೆಗಳಿಗೆ ತಂಗಲು ಅವಕಾಶ ಒಟ್ಟು ವೆಚ್ಚ 65 ಕೋಟಿ ರೂ. ಕೇಂದ್ರದ ಪಾಲು 25 ಕೋಟಿ ರೂ, ರಾಜ್ಯದ್ದು 40 ಕೋಟಿ ರೂ ಈ ಯೋಜನೆ ಪೂರ್ಣಗೊಂಡ ಬಳಿಕ ಸುಗಮ ನೌಕಾ ಸಂಚಾರಕ್ಕಾಗಿ 7 ಮೀಟರ್‌ ವರೆಗೆ ಡ್ರೆಜ್ಜಿಂಗ್‌ ಮಾಡುವುದಕ್ಕೂ 29 ಕೋಟಿ ರೂ. ಕಾಮಗಾರಿ ನಿಗದಿಯಾಗಿದೆ.

ಜನತೆ ಸಹಕಾರ ಅಗತ್ಯ: ಸರಕಾರದ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದಾರೆ, ಹಿಂದೆ ಅದನ್ನು ತೆರವು ಮಾಡುವ ಪ್ರಯತ್ನ ಕೈಗೂಡಿರಲಿಲ್ಲ, ಇಷ್ಟು ಮಹತ್ವದ ಯೋಜನೆ ಮುಂದುವರಿಯಬೇಕಾದರೆ ಜನತೆ ಸಹಕಾರ ಕೊಡಲೇಬೇಕು, ಅದಕ್ಕೆ ಪೂರಕವಾದ ವ್ಯವಸ್ಥೆ ಮಾಡಲಾಗುವುದು, ಮುಂದಿನವಾರದಲ್ಲಿ ಸಭೆ ಕರೆದು ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು. -ವೇದವ್ಯಾಸ ಕಾಮತ್‌, ಶಾಸಕರು

Advertisement

Udayavani is now on Telegram. Click here to join our channel and stay updated with the latest news.

Next