Advertisement

ಕರಾವಳಿಯ ಬ್ಯಾಂಕ್‌ ವಿಲೀನ; ಪೂರ್ಣ ಅನುಷ್ಠಾನಕ್ಕೆ ಬೇಕಿದೆ ವರ್ಷ!

12:40 AM Sep 23, 2019 | Team Udayavani |

ಮಂಗಳೂರು: ಕರಾವಳಿಯ ಹೆಮ್ಮೆಯ ಸಿಂಡಿಕೇಟ್‌ ಮತ್ತು ಕಾರ್ಪೊರೇಶನ್‌ ಬ್ಯಾಂಕ್‌ಗಳು ಕೆನರಾ ಮತ್ತು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಜತೆ ವಿಲೀನವಾಗುವ ಘೋಷಣೆ ಆಗಿದ್ದರೂ ಈ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನೂ ಸುಮಾರು ಒಂದು ವರ್ಷ ಬೇಕಾಗಿದೆ.

Advertisement

ವಿಲೀನ ಘೋಷಣೆಯ ಬಳಿಕ ಈ ಬ್ಯಾಂಕ್‌ಗಳ ನಿರ್ದೇಶಕರ ಮಂಡಳಿಯ ಸಭೆ ನಡೆದಿದ್ದು, ವಿಲೀನ ನಿರ್ಣಯ ಕೈಗೆತ್ತಿಕೊಳ್ಳಲಾಗಿದೆ. ಅದರ ಪ್ರತಿಯನ್ನು ಸೆಬಿ ಮೂಲಕ ಆರ್‌ಬಿಐಗೆ ಸಲ್ಲಿಸುವ ಪ್ರಕ್ರಿಯೆ ಸದ್ಯ ನಡೆಯುತ್ತಿದೆ. ಬಳಿಕ ಇದು ಅಧಿಸೂಚನೆ ಆಗಲಿದೆ. ಈ ಆರ್ಥಿಕ ವರ್ಷ ಮುಗಿಯುವ ಮಾ. 31ರೊಳಗೆ ಇತರ ಪ್ರಕ್ರಿಯೆ ಪೂರ್ಣಗೊಳಿಸಿ ಎ. 1ರಿಂದ ಅಧಿಕೃತವಾಗಿ ಬ್ಯಾಂಕ್‌ ವಿಲೀನ ಪ್ರಕ್ರಿಯೆ ಆರಂಭವಾಗಲಿದೆ.

ಬ್ಯಾಂಕ್‌ಗಳ ವಾರ್ಷಿಕ ವಿತ್ತೀಯ ಫಲಿತಾಂಶ ಪರಿಶೀಲಿಸಿದ ಬಳಿಕವೇ ವಿಲೀನೀಕರಣದ ಅಧಿಕೃತ ಕಾರ್ಯ ಆರಂಭವಾಗಲಿವೆ. ಬ್ಯಾಂಕ್‌ಗಳು ಭಿನ್ನ ಮಾದರಿಯ ಸಾಫ್ಟ್‌ವೇರ್‌ ವ್ಯವಸ್ಥೆ ಹೊಂದಿರುವುದರಿಂದ ಅವುಗಳನ್ನು ವಿಲೀನವಾಗುವ ಬ್ಯಾಂಕ್‌ನ ಸಾಫ್ಟ್‌ವೇರ್‌ಗೆ ಅಪ್‌ಡೇಟ್‌ ಮಾಡಬೇಕಾಗುತ್ತದೆ. ಸಾಲ, ಉಳಿತಾಯ ಯೋಜನೆಗಳ ಹೊಂದಾಣಿಕೆ, ಸಾಲದ ಬಡ್ಡಿ ಮತ್ತಿತರ ಕೆಲವು ವಿಚಾರಗಳನ್ನೂ ಪರಿಹರಿಸಬೇಕಿದೆ. ಎಚ್‌ಆರ್‌ಎಂಎಸ್‌ ಸೇರಿದಂತೆ ಬ್ಯಾಂಕ್‌ಗಳ ದಾಖಲೆಗಳನ್ನು ವಿಲೀನ ಮಾಡುವ ಹಂತದಲ್ಲಿ ಅತ್ಯಂತ ಎಚ್ಚಕ ವಹಿಸುವುದು ಅಗತ್ಯ. ಇವೆಲ್ಲ ಸಮಯಾವಕಾಶ ಬೇಡುವ ಪ್ರಕ್ರಿಯೆಗಳು.

ಜತೆಗೆ, ವಿಲೀನವಾಗುತ್ತಿರುವ ಬ್ಯಾಂಕ್‌ಗಳ ಶಾಖೆಗಳ ಸಂಖ್ಯೆ ಕಡಿತ; ಹೆಸರು ಕೂಡ ಬದಲಾವಣೆ ಆಗುವ ಸಾಧ್ಯತೆಯಿದೆ. ಪಾಸ್‌ಪುಸ್ತಕ ಸೇರಿದಂತೆ ಎಲ್ಲ ಹಂತಗಳಲ್ಲಿಯೂ ಬದಲಾವಣೆಯಾಗಲಿದೆ. ಸಿಬಂದಿ ವರ್ಗವೂ ನಡೆಯಬಹುದು.

ಕಾರ್ಪ್‌ ಬ್ಯಾಂಕ್‌; ಕೇಂದ್ರ ಕಚೇರಿಯ ಭವಿಷ್ಯವೇನು?
ಕಾರ್ಪೊರೇಶನ್‌ ಬ್ಯಾಂಕ್‌ ಕೇಂದ್ರ ಕಚೇರಿಯು ಮಂಗಳೂರಿನ ಪಾಂಡೇಶ್ವರದಲ್ಲಿದ್ದು, ಅದರ ಭವಿಷ್ಯ ಏನು ಎಂಬ ಪ್ರಶ್ನೆ ಎದುರಾಗಿದೆ. ಈ ಹಿಂದೆ ಈ ಕೇಂದ್ರ ಕಚೇರಿಯನ್ನು ಮುಂಬಯಿ ಅಥವಾ ಬೆಂಗಳೂರಿಗೆ ಸ್ಥಳಾಂತರ ಮಾಡುವ ಬಗ್ಗೆ 3 ಬಾರಿ ಪ್ರಯತ್ನ ನಡೆದಿತ್ತು. ಆದರೆ ಸ್ಥಳೀಯರು, ಹೋರಾಟಗಾರರು ಮತ್ತು ಜನಪ್ರತಿನಿಧಿ ಗಳ ಕಾರಣದಿಂದ ಈ ನಿರ್ಧಾರ ಕೈ ಬಿಡ ಲಾಗಿತ್ತು. ಆದರೆ ಈಗ ಕಾರ್ಪ್‌ ಬ್ಯಾಂಕ್‌ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದ್ದು, ಕೇಂದ್ರ ಕಚೇರಿಯ ಭವಿಷ್ಯವೂ ಅತಂತ್ರವಾಗಿದೆ.

Advertisement

ವಿಜಯ ಬ್ಯಾಂಕ್‌ ವಿಲೀನ ಚಾಲ್ತಿಯಲ್ಲಿ
ಬ್ಯಾಂಕ್‌ ಆಫ್ ಬರೋಡಾದೊಂದಿಗೆ ವಿಜಯ ಬ್ಯಾಂಕ್‌ ವಿಲೀನ ಘೋಷಣೆ ಈ ಹಿಂದೆಯೇ ಆಗಿದ್ದರೂ ಪೂರ್ಣ ಅನುಷ್ಠಾನ ಆಗಿಲ್ಲ. ಯಾವುದೇ ಶಾಖೆ ಮುಚ್ಚಿರುವ ಮಾಹಿತಿಯಿಲ್ಲ. ಬರೋಡಾ ಬ್ಯಾಂಕ್‌ ಆಗಿ ಬದಲಾದ ಬಳಿಕ ಸಿಬಂದಿಗೆ ಬರೋಡಾ, ಮುಂಬಯಿ, ಬೆಂಗಳೂರುಗಳಲ್ಲಿ ತರಬೇತಿ ನೀಡಲಾಗುತ್ತಿದೆ. ಬೋರ್ಡ್‌ಗಳಲ್ಲಿ ವಿಜಯ ಬ್ಯಾಂಕ್‌ ಲಾಂಛನ ಇನ್ನೂ ಇದೆ. ವಿಜಯ ಬ್ಯಾಂಕ್‌ ಫ‌ಲಕದ ಕೆಳಗೆ “ನೌ ಬ್ಯಾಂಕ್‌ ಆಫ್ ಬರೋಡಾ’ ಎಂಬ ಚಿಕ್ಕ ಅಕ್ಷರದ ಒಕ್ಕಣೆ ಮಾತ್ರ ಸೇರಿಕೊಂಡಿದೆ. ಇದು ಎಷ್ಟು ಸಮಯದವರೆಗೆ ಇರಲಿದೆ ಎಂಬುದಕ್ಕೆ ಉತ್ತರ ಯಾರಲ್ಲೂ ಇಲ್ಲ.

ಅಧಿಕಾರಿಗಳಿಗೆ ಮಾಹಿತಿ ಇಲ್ಲ;
ಜನಪ್ರತಿನಿಧಿಗಳು ಮೌನ!
ಬ್ಯಾಂಕ್‌ ವಿಲೀನ ಘೋಷಣೆಯಾದ ಬಳಿಕ ಆಗುವ ಯಾವುದೇ ಬೆಳವಣಿಗೆಗಳ ಬಗ್ಗೆ ಜಿಲ್ಲೆಯ ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಮಾತ್ರವಲ್ಲದೇ ಕರಾವಳಿಯ ಜನಪ್ರತಿನಿಧಿಗಳು ಈ ಸಂಬಂಧ ಯಾವುದೇ ಪ್ರತಿಕ್ರಿಯೆ ನೀಡದಿರುವುದೂ ಕುತೂಹಲ ತರಿಸಿದೆ.

ಈ ಮಧ್ಯೆ ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿ ಮಾಡಿ ಕರಾವಳಿಯ ಎರಡು ಅಸ್ಮಿತೆಯಾಗಿರುವ ಕಾರ್ಪೊರೇಶನ್‌ ಹಾಗೂ ಸಿಂಡಿಕೇಟ್‌ ಬ್ಯಾಂಕ್‌ಗಳನ್ನು ಬೇರೆ ಬ್ಯಾಂಕ್‌ಗಳ ಜತೆಗೆ ವಿಲೀನಗೊಳಿಸದಿರಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ಕೇಂದ್ರ ಸರಕಾರವು ಯಾವ ರೀತಿ ಸ್ಪಂದಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next