ಮಂಗಳೂರು/ಉಡುಪಿ: ಕರಾವಳಿ ಭಾಗದಲ್ಲಿ ಮಳೆ ತುಸು ಬಿಡುವು ನೀಡಿದ್ದು, ರವಿವಾರ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಅಲ್ಲಲ್ಲಿ ಬಿಸಿಲು ಮೋಡ ಕವಿದ ವಾತಾವರಣದ ನಡುವೆ ಹನಿ ಮಳೆಯಾಗಿದೆ.
ಶನಿವಾರ ತಡರಾತ್ರಿ ಉಡುಪಿ, ಮಣಿಪಾಲ, ಮಲ್ಪೆ ಸುತ್ತಮುತ್ತ ಮಂಜಿನಂತೆ ಹನಿಹನಿ ಮಳೆ ತಡರಾತ್ರಿವರೆಗೂ ಸುರಿದಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಆ. 19ರಿಂದ 21ರ ವರೆಗೆ “ಎಲ್ಲೋ ಅಲರ್ಟ್’ ಘೊಷಿಸಲಾಗಿದೆ. ಈ ವೇಳೆ ಉತ್ತಮ ಮಳೆ ಸುರಿಯುವ ನಿರೀಕ್ಷೆ ಇದೆ. ಮಂಗಳೂರಿನಲ್ಲಿ 30.4 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.6 ಡಿ.ಸೆ. ಏರಿಕೆ ಮತ್ತು 23.7 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.7 ಡಿ.ಸೆ. ಏರಿಕೆ ಕಂಡುಬಂದಿತ್ತು.
ಕಡಿಮೆಯಾದ ಮಳೆ:
ಸಾಂಕ್ರಾಮಿಕ ರೋಗ ಸಾಧ್ಯತೆ;
ಮುಂಜಾಗ್ರತೆಗೆ ಸೂಚನೆ
ಉಡುಪಿ: ಕೆಲವು ದಿನಗಳಿಂದ ಮಳೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳ ಭೀತಿ ಹರಡುವ ಸಂಭವ ಹೆಚ್ಚಾಗಿದೆ. ಈ ನೆಲೆಯಲ್ಲಿ ನಗರಸಭೆ ವ್ಯಾಪ್ತಿಯ ಸಾರ್ವಜನಿಕರು ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು, ಗೂಡಂಗಡಿ ಮಾಲಕರು ಎಳನೀರು ಚಿಪ್ಪನ್ನು ಅಂದಂದೇ ವಿಲೇವಾರಿ ಮಾಡುವುದು, ಚರಂಡಿಗೆ ಕಸಕಡ್ಡಿ, ಪ್ಲಾಸ್ಟಿಕ್ ಮುಂತಾದ ಯಾವುದೇ ತ್ಯಾಜ್ಯಗಳನ್ನು ಎಸೆಯದಂತೆ ಸೂಚಿಸಲಾಗಿದೆ.
ಅಂಗಡಿ ಸುತ್ತಮುತ್ತಲಿರುವ ಕಸ ತ್ಯಾಜ್ಯಗಳನ್ನು ಸಂಗ್ರಹಿಸಿ ನಗರಸಭೆಗೆ ವಿಲೇ ಮಾಡಲು ಸೂಚಿಸಲಾಗಿದೆ. ಇದರ ಹೊರತಾಗಿಯೂ ಯಾವುದೇ ಉದ್ದಿಮೆ, ಹೊಟೇಲ್, ಫಾಸ್ಟ್‌ಫುಡ್ ಸ್ಟಾಲ್, ಗೂಡಂಗಡಿಗಳು ಮೇಲಿನ ಸೂಚನೆಯನ್ನು ಉಲ್ಲಂ ಸಿದಲ್ಲಿ ನೋಟಿಸ್ ನೀಡಿ 5,000 ರೂ. ದಂಡ ವಿಧಿಸಲಾಗುವುದು. ಜತೆಗೆ ಅಂತಹ ಉದ್ದಿಮೆಗಳ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಪೌರಾಯುಕ್ತರ ಕಚೇರಿ ಪ್ರಕಟನೆ ತಿಳಿಸಿದೆ.