Advertisement

ಕರಾವಳಿ ಆಡಳಿತ- ಅಭಿವೃದ್ಧಿಯ ಆದ್ಯತೆಗಳು

09:24 AM Jul 28, 2019 | keerthan |

ರಾಜ್ಯದಲ್ಲಿ ಬಿಜೆಪಿಯ ಹಸುರು ನೆಲ ಎಂದು ಪರಿಗಣಿತವಾಗಿರುವುದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ. ಇದಕ್ಕೆ ಅನ್ವರ್ಥವೆಂಬಂತೆ 2018ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡದ ಏಳು ಮತ್ತು ಉಡುಪಿ ಜಿಲ್ಲೆಯ ಎಲ್ಲ ಐದು ವಿಧಾನಸಭಾ ಕ್ಷೇತ್ರಗಳಿಂದ ಬಿಜೆಪಿ ನಾಯಕರನ್ನೇ ತಮ್ಮ ಪ್ರತಿನಿಧಿಗಳಾಗಿ ಜನತೆ ಆರಿಸಿಕಳುಹಿಸಿದ್ದಾರೆ. ತಮ್ಮ ನಾಯಕರ ಮೇಲೆ ಇರಿಸಿರುವ ಈ ಭರವಸೆಗೆ ಪ್ರತಿಯಾಗಿ ಮತದಾರರು ಉತ್ತಮ ಪಾರದರ್ಶಕ ಆಡಳಿತ, ಅಭಿವೃದ್ಧಿಯ ಕೊಡುಗೆಗಳನ್ನು ನಿರೀಕ್ಷಿಸುವುದು ಸಹಜ. ರಾಜ್ಯದಲ್ಲಿ ತಮ್ಮದೇ ಸರಕಾರ ಆಡಳಿತಕ್ಕೆ ಬರಲಿರುವ ಈ ಸಮಯದಲ್ಲಿ ಕರಾವಳಿಯ ಶಾಸಕರು ಮುಂದೆ ತಮ್ಮ ಕಾರ್ಯಾದ್ಯತೆಗಳೇನು ಎಂಬುದನ್ನು ಇಲ್ಲಿ ವಿವರಿಸಿದ್ದಾರೆ.

Advertisement

ಕಾಪು ಕ್ಷೇತ್ರದ ಜನತೆಯ ಬಹುಕಾಲದ ಕನಸಾಗಿರುವ ಹೆಜಮಾಡಿ ಬಂದರು ಅಭಿವೃದ್ಧಿ ಯೋಜನೆಯನ್ನು ಗುರಿ ಮುಟ್ಟಿಸಲಾಗುವುದು. ಐಟಿಐ, ಡಿಪ್ಲೋಮಾ ಪದವೀಧರರ ನಿರುದ್ಯೋಗ ನಿವಾರಣೆಗಾಗಿ ಪರಿಸರಸ್ನೇಹಿ ಸಣ್ಣ ಕೈಗಾರಿಕಾ ಘಟಕಗಳ ಸ್ಥಾಪನೆಗೆ ಪ್ರಯತ್ನಿಸಲಾಗುವುದು. ಕಾಪು ಬೀಚ್‌ನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡಿ, ಮಾದರಿಯಾಗಿ ಪರಿವರ್ತಿಸುವುದು. ಕಾಪು ಸರಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆರಿಸುವುದಕ್ಕೆ ನನ್ನ ಆದ್ಯತೆ.
ತಾಲೂಕಿಗೆ ಮಂಜೂರಾಗಿರುವ ಮಿನಿ ವಿಧಾನಸೌಧದ ಕಾಮಗಾರಿಯನ್ನು ಶೀಘ್ರ ಪ್ರಾರಂಭಿಸಿ, ಮೂಲ ಸೌಕರ್ಯಗಳ ಜೋಡಣೆಯೊಂದಿಗೆ ಅಗತ್ಯವಾದ ಎಲ್ಲ ಇಲಾಖೆಗಳನ್ನು ಜೋಡಿಸಿಕೊಂಡು ಸರಕಾರಿ ಇಲಾಖೆಗಳ ಹಬ್‌ ಆಗಿ ಪರಿವರ್ತಿಸುವ ಗುರಿ ಇದೆ. ಕಾಪು ಕ್ಷೇತ್ರದ ಹಲವು ಯೋಜನೆಗಳಿಗೆ ಆಡಳಿತಾತ್ಮಕ ಮಂಜೂರಾತಿ ದೊರಕಬೇಕಿದ್ದು, ಮೂಲ ಸೌಕರ್ಯಗಳ ಜೋಡಣೆಗೆ ಪೂರಕವಾಗಿ ಅನುದಾನ ಜೋಡಣೆ ಮತ್ತು ಶಾಸಕರ ನಿಧಿಯ ಸದ್ಬಳಕೆಗೆ ಒತ್ತು ನೀಡಲಾಗುವುದು.
-ಲಾಲಾಜಿ ಮೆಂಡನ್‌

ಗ್ರಾ.ಪಂ.ಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ಹೆಚ್ಚಿನ ಅನುದಾನ ಕೊಡಿಸಲು ಪ್ರಯತ್ನಿಸಲಾಗುವುದು. ಗ್ರಾ.ಪಂ.ಗಳಿಗೆ ಈಗ ದೊರಕುವ 10-15 ಲ.ರೂ. ಅನುದಾನವನ್ನು 20-25 ಲ.ರೂ.ಗೆ ಏರಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು. ಗ್ರಾಮಾಂತರ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಸುಮಾರು 1 ಲಕ್ಷ ಸದಸ್ಯರಿಗೆ ವಿಶೇಷ ಸವಲತ್ತು ಕೊಡಿಸುವ ಗುರಿ ಇದೆ. ಉಡುಪಿಯಲ್ಲಿ ವಾರಾಹಿ ಯೋಜನೆ, ದ.ಕ.ದಲ್ಲಿ ಸೌಭಾಗ್ಯ ಸಂಜೀವಿನೀ ನೀರಾವರಿ ಯೋಜನೆ ಸಮರ್ಪಕವಾಗಿ ಕಾರ್ಯ ಗತಗೊಳಿಸಲು ಯತ್ನಿಸಿ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತೇವೆ. ಮರಳು ಸಮಸ್ಯೆ ನೀಗಿಸಲು ಕ್ರಮ ಕೈಗೊಳ್ಳಲಾಗುವುದು.
ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ ಕೊಡುವ ಮೂಲಕ ಬಲ ಕೊಡಬೇಕು. ಕಿಸಾನ್‌ ಸಮ್ಮಾನ್‌ ಯೋಜನೆಯಲ್ಲಿ ಸುಮಾರು 75 ಲಕ್ಷ ರೈತರು ಹೆಸರು ನೋಂದಾಯಿಸಿದ್ದು, ಇನ್ನೂ 30 ಲಕ್ಷ ರೈತರ ನೋಂದಣಿಗೆ ಬಾಕಿ ಇದೆ. ಇವರನ್ನೂ ನೋಂದಾಯಿಸಬೇಕಿದೆ. ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಾಲೆ ಆರಂಭಿಸಿದ್ದರೂ ಮೂಲ ಸೌಕರ್ಯಗಳ ಕೊರತೆ ಇದೆ, ಒದಗಿಸಲು ಪ್ರಯತ್ನಿಸುತ್ತೇನೆ.
– ಕೋಟ ಶ್ರೀನಿವಾಸ ಪೂಜಾರಿ

ನನ್ನ ಕ್ಷೇತ್ರದಲ್ಲಿ ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡುತ್ತೇನೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆ, ಗುಣಮಟ್ಟದ ಶಿಕ್ಷಣಕ್ಕಾಗಿ ಶಾಲೆಗಳ ಅಭಿವೃದ್ಧಿ, ಆರೋಗ್ಯ ಕ್ಷೇತ್ರದ ಅಭಿವೃದ್ಧಿ, ಮೂಲ ಸೌಕರ್ಯಗಳ ಅಭಿವೃದ್ಧಿಗೆ ನನ್ನದು ಮೊದಲ ಆದ್ಯತೆ. ಸರಕಾರಕ್ಕೆ ಸಂಬಂಧಿಸಿದ ವಿವಿಧ ಇಲಾಖೆಗಳ ಕೊರತೆ ನೋಡಿಕೊಂಡು ಪರಿಶೀಲಿಸಿ ಜನರ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸುತ್ತೇನೆ.
-ಹಾಲಾಡಿ ಶ್ರೀನಿವಾಸ ಶೆಟ್ಟಿ

ಸುರತ್ಕಲ್‌ ವ್ಯಾಪ್ತಿಯಲ್ಲಿ ಡ್ರೈನೇಜ್‌ ಸಮಸ್ಯೆ ದೊಡ್ಡ ಮಟ್ಟದಲ್ಲಿ ಕಾಡುತ್ತಿದ್ದು, ಇದನ್ನು ನಿವಾರಿಸುವುದು ನನ್ನ ಆದ್ಯತೆ. ಗ್ರಾಮಾಂತರ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇತ್ಯರ್ಥಕ್ಕೆ ವಿಶೇಷ ಒತ್ತು ನೀಡಲಾಗುವುದು. ಮಂಗಳೂರು ಉತ್ತರ ವಿ.ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನ್ಪೋರ್ಟ್ಸ್ ಯುನಿಟ್‌ ಆರಂಭಿಸಿ ಆ ಮೂಲಕ ವಿವಿಧ ಕ್ರೀಡಾಪಟುಗಳಿಗೆ ಭವಿಷ್ಯ ರೂಪಿಸುವ ಸಂಕೀರ್ಣ ನಿರ್ಮಿಸಲು ಆದ್ಯತೆ ನೀಡಲಾಗುವುದು. ಜತೆಗೆ ಸಮುದಾಯ ಆರೋಗ್ಯ ಕೇಂದ್ರವನ್ನು ಕ್ಷೇತ್ರದ ವಿವಿಧ ಭಾಗಗಳಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆ ಇದ್ದು, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ಇದನ್ನು ಈಡೇರಿಸಲು ಒತ್ತು ನೀಡಲಾಗುವುದು.
ಡಾ| ವೈ. ಭರತ್‌ ಶೆಟ್ಟಿ

Advertisement

ಮೂಡುಬಿದಿರೆ ತಾಲೂಕಾಗಿ ಈಗಾಗಲೇ ಘೋಷಣೆಯಾಗಿದ್ದು, ಅದರ ಅನುಷ್ಠಾನದ ನಿಟ್ಟಿನಲ್ಲಿ ತಾಲೂಕು ಕೇಂದ್ರ ನಿರ್ಮಾಣ ಅತ್ಯಂತ ಜರೂರಾಗಿ ಆಗಬೇಕಿದೆ. ಈ ಮೂಲಕ ಮೂಡುಬಿದಿರೆ ಕ್ಷೇತ್ರ ವ್ಯಾಪ್ತಿಯ ಜನರಿಗೆ ಅತ್ಯಂತ ಆಪ್ತವಾಗಿ ಎಲ್ಲ ಸರಕಾರಿ ಸೇವೆಗಳು ತಾಲೂಕು ಕೇಂದ್ರದಲ್ಲಿ ದೊರೆಯುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡಲಾಗುವುದು. ಕ್ಷೇತ್ರ ವ್ಯಾಪ್ತಿಯಲ್ಲಿ ಡ್ರೈನೇಜ್‌ ಸಮಸ್ಯೆ ಬಹಳಷ್ಟಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ವಿಶೇಷ ಯೋಜನೆ ರೂಪಿಸಬೇಕಿದೆ. ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಮೂಲಕ ಆರೋಗ್ಯ ಸೇವೆಗೆ ಮುಖ್ಯ ಆದ್ಯತೆ ನೀಡಲಾಗುವುದು.
  - ಉಮಾನಾಥ ಕೋಟ್ಯಾನ್‌

ಹಲವು ವರ್ಷಗಳ ಹಿಂದೆ ಮಂಜೂರುಗೊಂಡು ಅರಣ್ಯ ಭೂಮಿ ಸಮಸ್ಯೆ, ಆಕ್ಷೇಪಣೆಗಳಿಂದಾಗಿ ಅನುಷ್ಠಾನಕ್ಕೆ ವಿಳಂಬವಾಗಿರುವ 110 ಕೆ.ವಿ. ಸಬ್‌ಸ್ಟೇಷನ್‌ ನಿರ್ಮಾಣಕ್ಕೆ ಆದ್ಯತೆ ನನ್ನದು. ಈಗಾಗಲೇ ಈ ಬಗೆಗಿನ ಹಲವು ಕೆಲಸ ಕಾರ್ಯ ಪೂರ್ಣಗೊಳಿಸಿದ್ದು, ಅನುಷ್ಠಾನಕ್ಕೆ ಇರುವ ಸಮಸ್ಯೆ ನಿವಾರಿಸಿ ತ್ವರಿತಗತವಾಗಿ ಕಾರ್ಯರೂಪಕ್ಕೆ ತರಲಾಗುವುದು. ಇದರಿಂದ ತಾಲೂಕಿನ ವಿದ್ಯುತ್‌ ಸಮಸ್ಯೆಗೆ ಪರಿಹಾರ ದೊರೆಯಲು ಸಾಧ್ಯವಿದೆ.
ತಾಲೂಕಿನಲ್ಲಿ ಬೇಸಗೆ ಕಾಲದಲ್ಲಿ ನೀರಿನ ಸಮಸ್ಯೆ ಉಂಟಾಗುತ್ತಿದ್ದು, ಇದಕ್ಕಾಗಿ ಪಯಸ್ವಿನಿ ನದಿ ಸೇರಿದಂತೆ ವಿವಿಧೆಡೆ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಆದ್ಯತೆ ನೀಡುತ್ತೇನೆ. ಈಗಾಗಲೇ ಹಲವು ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದಕ್ಕೆ ಶೀಘ್ರ ಅನುದಾನ ಬಿಡುಗಡೆಗೊಳಿಸಲು ಪ್ರಥಮ ಪ್ರಾಶಸ್ತ್ಯ ನೀಡುತ್ತೇನೆ. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಶಾಶ್ವತ ಕುಡಿಯುವ ನೀರಿನ ಒದಗಣೆಗೆ ಪ್ರಯತ್ನ ಮಾಡುತ್ತೇನೆ. ಅರಣ್ಯಾವೃತ ತಾಲೂಕು ಸುಳ್ಯ. ಹಲವೆಡೆ ಸಂಪರ್ಕ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಅಗತ್ಯವಿದೆ. ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಅನುದಾನ ಬಿಡುಗಡೆಗೆ ಆದ್ಯತೆ ನೀಡುತ್ತೇನೆ. ರಸ್ತೆ, ಸೇತುವೆ ಮೊದಲಾದ ಬೇಡಿಕೆಗಳ ಈಡೇರಿಕೆಗೆ ಒತ್ತು ನೀಡುತ್ತೇನೆ.
  - ಎಸ್‌. ಅಂಗಾರ

ಬೈಂದೂರನ್ನು ಮಾದರಿ ಕ್ಷೇತ್ರವಾಗಿ ರೂಪಿಸಲು ಸಮಗ್ರ ಯೋಜನೆ ರೂಪಿಸಲಾಗುವುದು. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಪಕ್ಷ ಅಧಿಕಾರದಲ್ಲಿ ಇರುವುದರಿಂದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ನಮಗೆ ಪೂರಕವಾದ ವಾತಾವರಣ ಇದೆ.
ಕ್ಷೇತ್ರದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಪ್ರಯತ್ನ ಪಡುತ್ತೇನೆ. ಒತ್ತಿನೆಣೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಬಹಳ ಹಿಂದಿನ ಯೋಜನೆ. ಇದನ್ನು ಶೀಘ್ರವಾಗಿ ಅನುಷ್ಠಾನಗೊಳಿಸಲು ಪ್ರಾಮಾಣಿಕವಾಗಿ ಪ್ರಯತ್ನ ಪಡುತ್ತೇನೆ.
ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಇರುವ ಕೊಲ್ಲೂರು ದೇವಸ್ಥಾನ ಸಾವಿರಾರು ಶ್ರದ್ಧಾಳುಗಳ ಭಕ್ತಿಯ ಕೇಂದ್ರ. ಶ್ರೀಲಂಕಾ ಪ್ರಧಾನಿ ರಣಿಲ್‌ ವಿಕ್ರಮ ಸಿಂಘೆ ಅವರೂ ಭೇಟಿ ನೀಡಿರುವುದು ಇದರ ಮಹಣ್ತೀಕ್ಕೆ ಸಾಕ್ಷಿ. ಭಕ್ತ ಸಂದೋಹದ ಆಗಮನ ಕಾರಣ ದೇವಸ್ಥಾನದ ಸುತ್ತಲೂ ಒಳಚರಂಡಿ ವ್ಯವಸ್ಥೆಗೆ ಯೋಜನೆ ರೂಪಿಸಿ ಅನುಷ್ಠಾನಕ್ಕೆ ಆದ್ಯತೆ ನೀಡುತ್ತೇನೆ.
  - ಬಿ.ಎಂ. ಸುಕುಮಾರ್‌ ಶೆಟ್ಟಿ

ಮಂಗಳೂರು ನಗರದಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಮಾಡಬೇಕಿದೆ. ನೀರು ಪೂರೈಕೆಯಲ್ಲಿ ಲೋಪವಾಗದಂತೆ ಎಚ್ಚರಿಕೆ ವಹಿಸಲು ಕ್ರಮ ಕೈಗೊಳ್ಳುವುದಕ್ಕೆ ನಾನು ಆದ್ಯತೆ ನೀಡಲಿದ್ದೇನೆ. ಜತೆಗೆ ನಗರದಲ್ಲಿ ಡ್ರೈನೇಜ್‌ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಅದನ್ನು ಸುಸ್ಥಿತಿಗೆ ತರುವ ವಿಶೇಷ ಕಾರ್ಯ ಕೈಗೆತ್ತಿಕೊಳ್ಳುವೆ.
ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಫುಟ್‌ಪಾತ್‌ ವ್ಯವಸ್ಥೆಯನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಕುದುರುಗಳ ಅಭಿವೃದ್ಧಿ ಮಾಡುವ ಮೂಲಕ ನಗರ ವ್ಯಾಪ್ತಿಯಲ್ಲಿ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗುವುದು. ಮಂಗಳೂರಿಗೆ ನೀರು ಒದಗಿಸುವ ತುಂಬೆ ಅಣೆಕಟ್ಟಿ ನಲ್ಲಿ ಹೆಚ್ಚುವರಿ ನೀರು ನಿಲ್ಲಿಸುವುದರಿಂದ ಭೂಮಿ ಕಳೆದು ಕೊಂಡವರಿಗೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು.
  - ವೇದವ್ಯಾಸ ಕಾಮತ್‌

ನನ್ನ ಕ್ಷೇತ್ರದಲ್ಲಿ ಮರಳು ಸಮಸ್ಯೆ ಮತ್ತು ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ 9/11, ಭೂ ಪರಿವರ್ತನೆ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ನನ್ನದು ಪ್ರಥಮ ಆದ್ಯತೆಯಾಗಿದೆ. ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಶುದ್ಧ ಕುಡಿಯುವ ನೀರಿನ ಪೂರೈಕೆಯೂ ಆದ್ಯತೆಯ ಯಾದಿಯಲ್ಲಿದೆ.
ಕಾರ್ಕಳದಲ್ಲಿ ಅನೇಕ ಪ್ರವಾಸೀ ಕ್ಷೇತ್ರಗಳಿವೆ. ಪ್ರವಾಸೋದ್ಯಮಕ್ಕೆ ವಿಶೇಷ ಒತ್ತು ನೀಡಿ ಕಾರ್ಕಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸುವುದು ಗುರಿಗಳಲ್ಲೊಂದು. ಅರಣ್ಯ ಇಲಾಖೆ ಮತ್ತು ಪಶ್ಚಿಮ ಘಟ್ಟ ಪ್ರದೇಶವೆಂದು ಪರಿಗಣಿಸಲಾದ ಜಾಗದಲ್ಲಿ ಮನೆ ಮಾಡಿಕೊಂಡಿರುವವರಿಗೆ ಹಕ್ಕುಪತ್ರ ಒದಗಿಸಿಕೊಡುವಲ್ಲೂ ಪ್ರಾಮಾಣಿಕ ಪ್ರಯತ್ನ ಮಾಡುವೆ.
 -ವಿ. ಸುನಿಲ್‌ ಕುಮಾರ್‌

ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ಇಲಾಖೆಗಳಲ್ಲಿ ಭ್ರಷ್ಟಾಚಾರ ಮುಕ್ತ ಮತ್ತು ಪಾರದರ್ಶಕ ಆಡಳಿತ ವ್ಯವಸ್ಥೆಗೆ ಪ್ರಥಮ ಆದ್ಯತೆ ನೀಡಲಾಗುವುದು.
ಜನತೆಗೆ 24×7 ವಿದ್ಯುತ್‌ ವ್ಯವಸ್ಥೆ ಮತ್ತು ಕುಡಿಯುವ ನೀರಿನ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು. ಈಗಾಗಲೇ ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ 24×7 ನೀರು ಸರಬರಾಜು ಮಾಡುವ 72 ಕೋಟಿ ರೂ. ವೆಚ್ಚದ ಜಲಸಿರಿ ಯೋಜನೆ ಅನುಷ್ಠಾನವಾಗುತ್ತಿದೆ. ಇದನ್ನು 3 ಗ್ರಾ.ಪಂ.ಗಳಿಗೂ ವಿಸ್ತರಿಸಲಾಗುವುದು. ಪುತ್ತೂರು -ಉಪ್ಪಿನಂಗಡಿ ರಸ್ತೆಯು ಚತುಷ್ಪಥವಾಗಿ ಪರಿವರ್ತನೆಗೊಳ್ಳುತ್ತಿದ್ದು, 34ನೇ ನೆಕ್ಕಿಲಾಡಿ ಗ್ರಾಮದ ರಾ.ಹೆ. ಜಂಕ್ಷನ್‌ವರೆಗೆ ಚತುಷ್ಪಥಗೊಳಿಸ ಲಾಗುವುದು. ಗ್ರಾಮೀಣ ರಸ್ತೆ ಅಭಿವೃದ್ಧಿಗೂ ಗಮನ ಹರಿಸಲಾಗುವುದು.
ಎಸ್‌ಪಿ ಕಚೇರಿಯನ್ನು ಪುತ್ತೂರಿಗೆ ಸ್ಥಳಾಂತರಿಸಲು ಪ್ರಯತ್ನಿಸುವೆ. ಇದಾದರೆ 5 ತಾಲೂಕುಗಳಿಗೆ ಪ್ರಯೋಜನ ವಾಗುತ್ತದೆ. ಕಳಪೆ ಗುಣಮಟ್ಟದ ಅಡಿಕೆ ಆಮದಾಗಿ ಸಮಸ್ಯೆಯಾಗಿದೆ. ಈ ಹಿನ್ನೆಲೆಯಲ್ಲಿ ಸಂಸದರು, ಶಾಸಕ ರೊಂದಿಗೆ ಕೇಂದ್ರ ಸರಕಾರಕ್ಕೆ ಒತ್ತಡ ತರಲಾಗುವುದು.
– ಸಂಜೀವ ಮಠಂದೂರು

ಬಂಟ್ವಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕುರಿತು ಈಗಾಗಲೇ ಯೋಜನೆಯನ್ನು ರೂಪಿಸಲಾಗಿದೆ. ಇದಕ್ಕಾಗಿ ತಜ್ಞರ ಸಮಿತಿಯ ರಚನೆಯ ಪ್ರಯತ್ನವನ್ನೂ ಮಾಡಲಾಗಿದೆ. ಈಗ ಇದಕ್ಕೆ ಅನುದಾನ ಒದಗಿಸಲು ಪೂರಕ ವಾತಾವರಣ ನಿರ್ಮಾಣವಾಗಿದೆ. ಮುಖ್ಯಮಂತ್ರಿಗಳ-ಸಚಿವರ ವಿಶ್ವಾಸ ಗಳಿಸಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಪಡೆಯಬಹುದು.
ಬಿ.ಸಿ. ರೋಡ್‌ ನಗರ ಸುಂದರಗೊಳಿಸುವ ಯೋಜನೆ ಯನ್ನು ಈಗಾಗಲೇ ಕೈಗೆತ್ತಿಕೊಳ್ಳಲಾಗಿದ್ದು, 15 ಕೋ.ರೂ. ಯೋಜನೆಯನ್ನು ಸಿದ್ಧಪಡಿಸಲಾಗಿದೆ. ವಿವಿಧ ಸಂಸ್ಥೆಗಳ ಸಿಎಸ್‌ಆರ್‌ ಅನುದಾನ ಜೋಡಿಸಲಾಗಿದೆ. ಪ್ರಸ್ತುತ ನಮ್ಮದೇ ಸರಕಾರ ಇರುವುದರಿಂದ ಇದು ಕೂಡ ವೇಗ ಪಡೆಯಲಿದೆ. ಬಂಟ್ವಾಳ ಪುರಸಭಾ ವ್ಯಾಪ್ತಿಯಲ್ಲಿ ವ್ಯವಸ್ಥಿತ ಒಳಚರಂಡಿ ವ್ಯವಸ್ಥೆ ಇಲ್ಲ. ಇನ್ನೀಗ ಇದು ಕೂಡ ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆ. ಬಂಟ್ವಾಳ ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣದ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಬಂಟ್ವಾಳ ಕ್ಷೇತ್ರದ ರಸ್ತೆಗಳ ಮೇಲ್ದರ್ಜೆಯ ಪ್ರಸ್ತಾಪಕ್ಕೂ ರಾಜ್ಯ ಸರಕಾರದಿಂದ ಪೂರಕ ಸ್ಪಂದನೆ ದೊರೆಯುವ ವಿಶ್ವಾಸವಿದೆ.
– ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು

ಉಡುಪಿ, ಮಣಿಪಾಲ, ಸಂತೆಕಟ್ಟೆ, ಮಲ್ಪೆ ಭಾಗಗಳಲ್ಲಿ ಸುಸಜ್ಜಿತ ಒಳಚರಂಡಿ ವ್ಯವಸ್ಥೆ ಅಗತ್ಯವಿದೆ. ಇದಕ್ಕೆ ಸುಮಾರು 400-500 ಕೋ.ರೂ. ಅಗತ್ಯ. ವಾರಾಹಿ ಕುಡಿಯುವ ನೀರಿನ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಬೇಕಾಗಿದೆ. ಇದು ಹಾದುಬರುವ ಗ್ರಾ.ಪಂ. ಪ್ರದೇಶಗಳಲ್ಲದೆ ಇತರ ಗ್ರಾ.ಪಂ.ಗಳಿಗೂ ಶುದ್ಧ ಕುಡಿಯುವ ನೀರು ಪೂರೈಕೆ ಸಾಧ್ಯವಿದೆ. ಆದರೆ ಹೆಚ್ಚಿನ ಅನುದಾನ ಬೇಕು.
ಮಲ್ಪೆ ಸೈಂಟ್‌ ಮೇರೀಸ್‌ ದ್ವೀಪಕ್ಕೆ ಜೆಟ್ಟಿ ಮಂಜೂರಾಗಿದ್ದು, ಪ್ರವಾಸಿಗರನ್ನು ಆಕರ್ಷಿಸಲು ಯೋಜನೆ ರೂಪಿಸಬೇಕಾಗಿದೆ. ಪಡುಕೆರೆ ಬೀಚ್‌ ಅಭಿವೃದ್ಧಿಪಡಿಸಬೇಕು. ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸುವ ಯುವ ಸಮುದಾಯಕ್ಕಾಗಿ ಸುಮಾರು 100 ಎಕ್ರೆ ವಿಸ್ತಾರದ ಭೂ ಪ್ರದೇಶವನ್ನು ಕೈಗಾರಿಕಾ ಪ್ರಾಂಗಣವಾಗಿ ರೂಪಿಸಬೇಕಿದೆ. ಗ್ರಾಮಾಂತರ ಪ್ರದೇಶದ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬೇಕು. ಉಡುಪಿಯಲ್ಲಿಯೂ ಸ್ಮಾರ್ಟ್‌ ಟ್ರಾಫಿಕ್‌, ಸ್ಮಾರ್ಟ್‌ ಪೋಲ್‌ಗ‌ಳನ್ನು ಅಳವಡಿಸುವ ಸ್ಮಾರ್ಟ್‌ ಸಿಟಿ ಮಾದರಿ ಯೋಜನೆಯನ್ನು ಅಳವಡಿಸಬೇಕು. ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಮಹಾವಿದ್ಯಾಲಯ ಯೋಜನೆಯನ್ನು ಮತ್ತೆ ಆರಂಭಿಸಬೇಕಾಗಿದೆ. ಮುಖ್ಯವಾಗಿ ಮರಳು ಸಮಸ್ಯೆಯನ್ನು ನೀಗಿಸಬೇಕಿದೆ.
– ಕೆ. ರಘುಪತಿ ಭಟ್‌

ರಾಜ್ಯದ ಸಮಗ್ರ ಅಭಿವೃದ್ಧಿಗೆ ಯಡಿಯೂರಪ್ಪನವರು ನಿರೀಕ್ಷೆಗೂ ಮೀರಿದ ಪ್ರಯತ್ನ ಮಾಡುತ್ತಾರೆ ಎಂಬ ಭರವಸೆ ಇದೆ. ರಾಜ್ಯದ ರೈತರ ಪರವಾಗಿ ಮತ್ತು ಎಲ್ಲ ಕ್ಷೇತ್ರಗಳ ಅಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ರಾಜಕೀಯ ರಹಿತವಾಗಿ ಅನುದಾನ ಒದಗಿಸುವ ನಿರೀಕ್ಷೆ ಇದೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಗ್ರಾಮೀಣ ರಸ್ತೆ ಸಂಪರ್ಕ ಅಭಿವೃದ್ಧಿ ಸೇರಿದಂತೆ ಪ್ರಮುಖ ಅಭಿವೃದ್ಧಿಗೆ ಪ್ರಾಶಸ್ತ್ಯ ದೊರಕಿಸುವ ಪ್ರಯತ್ನ ಮಾಡುತ್ತೇನೆ.  ಬೆಳ್ತಂಗಡಿ ಕ್ಷೇತ್ರವು ಬಹುಪಾಲು ಅರಣ್ಯ ಪ್ರದೇಶವನ್ನು ಹೊಂದಿದೆ. ಇಲ್ಲಿಯ ನಿವಾಸಿಗಳ ಮೂಲಸೌಕರ್ಯ ಕೊರತೆಗಳನ್ನು ಈಡೇರಿಸಲು ಪ್ರಾಶಸ್ತ್ಯ ನೀಡುತ್ತೇನೆ. ಕ್ಷೇತ್ರದ ಎಲ್ಲ ಆಗುಹೋಗುಗಳ ಕುರಿತು ಚರ್ಚಿಸಿ ಅನುದಾನ ಪಡೆಯಲು ಶ್ರಮಿಸುತ್ತೇನೆ.
-ಹರೀಶ್‌ ಪೂಂಜಾ

Advertisement

Udayavani is now on Telegram. Click here to join our channel and stay updated with the latest news.

Next