ಕಾರವಾರ: ಕಳೆದ ನಾಲ್ಕುದಿನಗಳಿಂದ ಅರಬ್ಬಿ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಗೋವಾ ಮೂಲದ ಮೀನುಗಾರಿಕಾ ಯಾಂತ್ರಿಕೃತ ಬೋಟ್ ನ್ನು 27 ಜನ ಮೀನುಗಾರರ ಸಹಿತ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿ ರಕ್ಷಿಸಿ, ಕಾರವಾರ ಬಂದರಿಗೆ ಕರೆ ತಂದಿದೆ.
ಅರಬ್ಬೀ ಸಮುದ್ರದ ಸುಮಾರು 30 ನಾಟಿಕಲ್ ಮೈಲ್ ದೂರಲ್ಲಿ ನಾಪತ್ತೆಯಾಗಿದ್ದ ಫಿಶರೀಸ್ ಬೋಟ್ ಪತ್ತೆಯಾಗಿದೆ. ಸತತ 9 ಗಂಟೆಗಳ ಕಾರ್ಯಾಚರಣೆ ಮಾಡಿ ಪ್ರಕ್ಷುಬ್ಧವಾಗಿದ್ದ ಸಮುದ್ರದ ತೆರೆಗಳ ನಡುವೆಯೂ ಕಾರ್ಮಿಕ ಮೀನುಗಾರರನ್ನು ರಕ್ಷಿಸಲಾಗಿದೆ.
ಫಿಶರೀಸ್ ಬೋಟ್ ನಲ್ಲಿದ್ದ 27ಮೀನುಗಾರರು ಸುರಕ್ಷಿತವಾಗಿ ಕಾರವಾರ ಮೀನುಗಾರಿಕಾ ಬಂದರನ್ನು ರಾತ್ರಿ ತಲುಪಿದರು.
ಅರಬ್ಬೀ ಸಮುದ್ರದ ತೆರೆಗೆ ಕಾಣೆಯಾಗಿದ್ದ ಬೋಟ್ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಲಿನ ಬೇಲಿಕೇರಿ ಬಂದರಿನಿಂದ ಸರಿಸುಮಾರು 30 ನಾಟಿಕಲ್ ಮೈಲ್ ದೂರದಲ್ಲಿ ಕೋಸ್ಟ್ ಗಾರ್ಡ್ ಅತ್ಯಾಧುನಿಕ ನೌಕೆಯ ಸಂಪರ್ಕಕ್ಕೆ ಬಂತು. ಆಗ ಮಧ್ಯಾಹ್ನ ಒಂದು ಗಂಟೆಯಾಗಿತ್ತು. ಆ ಸಮಯದಿಂದ ದಡಕ್ಕೆ ಗೋವಾ ಫೀಶರೀಸ್ ಬೋಟ್ ಎಳೆದು ತರುವಾಗ ಮಂಗಳವಾರ ರಾತ್ರಿಯಾಗಿತ್ತು . ಪತ್ತೆಯಾದ ಯಾಂತ್ರಿಕ ಬೋಟ್ ಗೋವಾದ ಪಣಜಿ ಮೂಲದ ಕ್ರಿಸ್ಟೋ ರೇ ಹೆಸರಿನ ಮೀನುಗಾರಿಕಾ ಬೋಟ್ ಆಗಿದೆ.
ಅರಬೀ ಸಮುದ್ರದಲ್ಲಿನ ಹವಾಮಾನ ವೈಪರೀತ್ಯದಿಂದ ಕ್ರಿಸ್ಟೋ ರೇ ಫಿಶರೀಸ್ ಬೋಟ್ ಎಂಜಿನ್‌ನಲ್ಲಿ ಸಮಸ್ಯೆಯಾಗಿ ಸಮೀಪದ ಯಾವುದೇ ಬಂದರಿಗೂ ಬರಲಾಗದೆ ಸಮುದ್ರದಲ್ಲಿ ದಿಕ್ಕು ತಪ್ಪಿತ್ತು ಹಾಗೂ ಮೀನುಗಾರಿಕಾ ಇಲಾಖೆಯ ಸಂಪರ್ಕ ಕಡಿದು ಕೊಂಡಿತ್ತು . ಆಗ ಗೋವಾದ ಪೊಲೀಸ್ ಹಾಗೂ ಕರ್ನಾಟಕ ಪೊಲೀಸ್ ಇಲಾಖೆಗೆ ಮಾಹಿತಿ ರವಾನೆಯಾದ ಕಾರಣ ತಕ್ಷಣ ಕೋಸ್ಟ್ ಗಾರ್ಡ್ ಸಹಾಯ ಕೋರಲಾಯಿತು.
ಅತ್ತ ಭೂಮಿಯ ಸಂಪರ್ಕ ಕ್ರಿಸ್ಟೋ ರೇ ಬೋಟ್ ನಲ್ಲಿದ್ದವರಿಗೆ ತಪ್ಪಿತ್ತು. ವಯರ್ ಲೆಸ್ ಪೋನ್ ನೆಟವರ್ಕ್ ಸಂಪರ್ಕ ಸಹ ಸಿಗದೆ ಇದ್ದ ಕಾರಣ ಬೋಟ್ ಪತ್ತೆ ಮಾಡಲು ಪ್ರಾರಂಭದಲ್ಲಿ ಸಮಸ್ಯೆ ಉಂಟಾಗಿತ್ತು. ನಾಪತ್ತೆಯಾಗಿದ್ದ ಬೋಟ್‌ಗಾಗಿ ಕೋಸ್ಟ್ ಗಾರ್ಡ್ ಸಿಬ್ಬಂದಿ ಹುಡುಕಾಟ ನಡೆಸಿದ್ದು, 30 ನಾಟಿಕಲ್ ಮೈಲ್ ದೂರದಲ್ಲಿ ಬೋಟ್ ಪತ್ತೆಯಾಯಿತು.
ಪತ್ತೆಯಾಗಿರುವ ಬೋಟ್ ಹಾಗೂ 27ಮಂದಿ ಮೀನುಗಾರರನ್ನ ಇದೀಗ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ಅವರನ್ನ ಕಾರವಾರ ಬಂದರಿಗೆ ಕರೆತರಲಾಗಿದೆ. ಎಲ್ಲ ಮೀನುಗಾರರು ಸುರಕ್ಷಿತವಾಗಿದ್ದಾರೆಂದು ಕೋಸ್ಟ್ ಗಾರ್ಡ್ ಅಧಿಕಾರಿಗಳು ತಿಳಿಸಿದ್ದಾರೆ .