Advertisement

ಕೃಷ್ಣಾ ತೀರದ ರೈತರಿಂದ ನೀರು, ವಿದ್ಯುತ್‌ ಸದ್ಬಳಕೆ

03:45 AM Feb 01, 2017 | Team Udayavani |

ಬಾಗಲಕೋಟೆ: ಶ್ರಮದಾನದ ಮೂಲಕ ಕೃಷ್ಣಾ ನದಿಗೆ ಅಡ್ಡಲಾಗಿ ಬ್ಯಾರೇಜ್‌ ಕಟ್ಟಿ, ಇಡೀ ದೇಶದ ಗಮನ ಸೆಳೆದಿದ್ದ ಕೃಷ್ಣಾ ತೀರದ ರೈತರು, ಇದೀಗ ನೀರು ಮತ್ತು ವಿದ್ಯುತ್‌ ಸದ್ಬಳಕೆಗೆ ಮುಂದಾಗಿ ಮಾದರಿಯಾಗಿದ್ದಾರೆ.

Advertisement

ಜಮಖಂಡಿ ತಾಲೂಕು ಚಿಕ್ಕಪಡಸಲಗಿ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ರೈತರು ನಿರ್ಮಿಸಿರುವ ಶ್ರಮಬಿಂದು ಸಾಗರ
ತುಂಬಿಸುವ ಕಾರ್ಯ ಯಶಸ್ವಿಯಾಗಿದೆ. ರೈತರೇ 90 ಲಕ್ಷ ದೇಣಿಗೆ ಸಂಗ್ರಹಿಸಿ ಬ್ಯಾರೇಜ್‌ ತುಂಬಿಸಿದ್ದು, ಸದ್ಯ 4 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಈ ನೀರನ್ನು ಮಿತವಾಗಿ ಬಳಸುವ ಜತೆಗೆ ಬೇಸಿಗೆಯಲ್ಲಿ ನೀರಿನ ತೀವ್ರ ಸಮಸ್ಯೆ ಬಾರದಂತೆ ಎಚ್ಚರಿಕೆ ವಹಿಸುತ್ತಿದ್ದಾರೆ.

ವರವಾದ ಶ್ರಮಬಿಂದು ಸಾಗರ: ಈ ಬಾರಿ ರೈತರು ಶ್ರಮಬಿಂದು ಸಾಗರ ತುಂಬುವ ಯೋಜನೆ ಕೈಗೊಂಡಿದ್ದಾರೆ. ಕೃಷ್ಣಾ ತೀರದ ರೈತರ ಸಂಘದಡಿ ಹಣ ಸಂಗ್ರಹಿಸಿ, 30 ದಿನಗಳಲ್ಲಿ ಒಟ್ಟು 1.50 ಟಿಎಂಸಿ ಅಡಿ ನೀರನ್ನು ಶ್ರಮಬಿಂದು ಸಾಗರಕ್ಕೆ (ಆಲಮಟ್ಟಿ ಹಿನ್ನೀರು) ತುಂಬಿಸಲಾಗಿದೆ. ಸದ್ಯ ಬ್ಯಾರೇಜ್‌ನಲ್ಲಿ 4 ಟಿಎಂಸಿ ನೀರಿದ್ದು, ಏಪ್ರಿಲ್‌ವರೆಗೆ ಬರಲಿದೆ. ಇದೇ ಬ್ಯಾರೇಜ್‌ನಿಂದ ಜಮಖಂಡಿ, ರಬಕವಿ- ಬನಹಟ್ಟಿ, ಅಥಣಿ ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದ್ದು, ಜಮಖಂಡಿ ತಾಲೂಕಿನ 26 ಹಳ್ಳಿ, ಅಥಣಿ ತಾಲೂಕಿನ 20 ಹಳ್ಳಿಗಳು ಸೇರಿ ಒಟ್ಟು 6 ಲಕ್ಷ ಜನರಿಗೆ ಕುಡಿಯುವ ನೀರಿಗೂ ಯಾವುದೇ ಸಮಸ್ಯೆ ಆಗುವುದಿಲ್ಲ.

ಕೊಯ್ನಾ ನೀರು ಬೇಕಿಲ್ಲ: ಟಿಎಂಸಿಗೆ 2 ಕೋಟಿ ರೂ. ಪಾವತಿಸಿ, ಮಹಾರಾಷ್ಟ್ರದ ಕೊಯ್ನಾ ನೀರು ಬಿಡಿಸಿಕೊಳ್ಳುವ
ಪ್ರಮೇಯವೂ ಈ ಬಾರಿ ಇಲ್ಲ. ಕಳೆದ 12 ವರ್ಷಗಳಲ್ಲಿ ಒಟ್ಟು 8 ಬಾರಿ ಮಹಾರಾಷ್ಟ್ರದಿಂದ ನೀರು ಪಡೆಯಲು ರಾಜ್ಯ ಸರ್ಕಾರ ಅಂದಾಜು 25 ಕೋಟಿ ಕೊಟ್ಟಿದೆ. ರೈತರೇ ಕಟ್ಟಿ, ನೀರು ತುಂಬುವ ಯೋಜನೆ ಕೈಗೊಂಡಿದ್ದರಿಂದ ಈ ಬಾರಿ ಸರ್ಕಾರದ ಬೊಕ್ಕಸಕ್ಕೆ 2 ಕೋಟಿ ಉಳಿಯಲಿದೆ. ಜೊತೆಗೆ ಬರದಿಂದಲೂ ಪಾರಾಗಲು ರೈತರ ಈ ಯತ್ನ ವರವಾಗಿದೆ. 

ಉಳಿತಾಯ ಹೇಗೆ?
ಚಿಕ್ಕಪಡಸಲಗಿಯ ಶ್ರಮಬಿಂದು ಸಾಗರದ ಹಿನ್ನೀರು ವ್ಯಾಪ್ತಿಯಲ್ಲಿ ಸದ್ಯ 70 ಸಾವಿರ ಎಕರೆ ನೀರಾವರಿ ಪ್ರದೇಶವಿದೆ. ಇಲ್ಲಿ 4200 ವಿದ್ಯುತ್‌ ಪಂಪ್‌ಸೆಟ್‌ ಗಳಿವೆ. ಇವು ನಿತ್ಯವೂ ಚಾಲ್ತಿ ಇದ್ದರೆ, 3 ತಿಂಗಳಲ್ಲಿ ನೀರು ಖಾಲಿಯಾಗುತ್ತದೆ. ಹೀಗಾಗಿ ವಾರದಲ್ಲಿ ಒಂದು ದಿನ(ಪ್ರತಿ ಭಾನುವಾರ) ವಿದ್ಯುತ್‌ ಪಂಪ್‌ ಸೆಟ್‌ ಸ್ಥಗಿತಗೊಳಿಸಿ, ನೀರು, ವಿದ್ಯುತ್‌ ಉಳಿಸುವ
ಕೆಲಸವನ್ನು 4 ವಾರಗಳಿಂದ ರೈತರು ಮಾಡುತ್ತಿದ್ದಾರೆ. ಈ ಅವಧಿಯಲ್ಲಿ ಅಂದಾಜು 0.9 ಟಿಎಂಸಿ ನೀರು ಉಳಿತಾಯವಾಗಿದೆ. ತಿಂಗಳಿಗೆ ಬರೋಬ್ಬರಿ 8.82 ಲಕ್ಷ ಯೂನಿಟ್‌ ವಿದ್ಯುತ್‌ ಉಳಿತಾಯವಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next