Advertisement

ಕರಾವಳಿಯ 5 ಟೋಲ್‌ ಪ್ಲಾಝಾ: ಕೊರತೆಗಳ ನಡುವೆ ಫಾಸ್ಟಾಗ್‌ ಅನುಷ್ಠಾನಕ್ಕೆ ಸಿದ್ಧತೆ

09:50 AM Nov 28, 2019 | sudhir |

ಡಿ.1ರಿಂದ ಟೋಲ್‌ಗೇಟ್‌ಗಳಲ್ಲಿ ಫಾಸ್ಟಾಗ್‌ ಕಡ್ಡಾಯ. ಕರಾವಳಿಯಲ್ಲಿ ಹಾದುಹೋಗುವ 2 ಪ್ರಮುಖ ಹೆದ್ದಾರಿಗಳಲ್ಲಿ ಐದು ಟೋಲ್‌ ಪ್ಲಾಝಾಗಳಿದ್ದು, ಫಾಸ್ಟಾಗ್‌ ಸ್ಟಿಕ್ಕರ್‌ ವಿತರಣೆ ಸಹಿತ ಸಿದ್ಧತೆ, ಸವಾರರಿಗೆ ಮಾಹಿತಿ ನೀಡಿಕೆ, ಸ್ಥಳೀಯರಿಗೆ ಉಚಿತ ಪ್ರಯಾಣ ಅವಕಾಶ ಮುಂದುವರಿಯಲಿದೆಯೇ ಇತ್ಯಾದಿ ವಾಸ್ತವಾಂಶಗಳ ವರದಿ ಇಲ್ಲಿದೆ.

Advertisement

ಬ್ರಹ್ಮರಕೂಟ್ಲು: ಫಾಸ್ಟಾಗ್‌ ವಿತರಣೆ ಆರಂಭ
ಬಂಟ್ವಾಳ: ಮಂಗಳೂರು-ಬೆಂಗಳೂರು ರಾ. ಹೆದ್ದಾರಿಯ ಬ್ರಹ್ಮರಕೂಟ್ಲು ಟೋಲ್‌ ಫ್ಲಾಝಾದಲ್ಲಿ ನ. 23ರಿಂದಲೇ ಪ್ರತ್ಯೇಕ ಕೌಂಟರ್‌ ಮೂಲಕ ಫಾಸ್ಟಾಗ್‌ ವಿತರಣೆ ನಡೆಯುತ್ತಿದೆ. ಸುಮಾರು 35ರಷ್ಟು ವಾಹನಗಳಿಗೆ ಫಾಸ್ಟಾಗ್‌ ಅಳವಡಿಸಲಾಗಿದೆ ಎಂದು ಫ್ಲಾಝಾದ ಮೂಲಗಳು ಮಾಹಿತಿ ನೀಡಿವೆ.

ಡಿ. 1ರಿಂದ ಫಾಸ್ಟಾಗ್‌ ಕಡ್ಡಾಯವಾಗಿ ರುವುದರಿಂದ ಟೋಲ್‌ ಪ್ಲಾಝಾದಲ್ಲೇ ಪ್ರತ್ಯೇಕ ಕೌಂಟರ್‌ ತೆರೆದು ವಿತರಣೆ ನಡೆಯುತ್ತಿದೆ. ನ. 30ರ ವರೆಗೆ ವಿತರಣೆ ಉಚಿತವಾಗಿದ್ದು, ಬಳಿಕ ಶುಲ್ಕ ಪಡೆಯುವ ಕುರಿತು ಮಾಹಿತಿ ಬಂದಿದೆ ಎನ್ನುತ್ತಾರೆ ಟೋಲ್‌ ಸಿಬಂದಿ.

ಇಲ್ಲಿ ಹಿಂದೆ 825 ರೂ.ನ ತಿಂಗಳ ಪಾಸನ್ನು ಸ್ಥಳೀಯ ಕಾರುಗಳಿಗೆ 265 ರೂ.ಗಳಿಗೆ ನೀಡಲಾಗುತ್ತಿತ್ತು. ಇದರ ಜತೆಗೆ ಇತರ ಸೇರಿದಂತೆ ಸುಮಾರು 350 ಪಾಸ್‌ಗಳನ್ನು ವಿತರಣೆ ಮಾಡಲಾಗಿದೆ. ಆದರೆ ಡಿ. 1ರ ಬಳಿಕ ಇದರ ಕುರಿತು ಮಾಹಿತಿ ಇಲ್ಲ.

ಈ ಹಿಂದೆ ಫಾಸ್ಟಾಗ್‌ ಪಡೆದಿರುವವರು ಅದನ್ನೇ ಮುಂದುವರಿಸಬಹುದಾಗಿದೆ ಎಂದು ಟೋಲ್‌ ಫ್ಲಾಝಾ ಮ್ಯಾನೇಜರ್‌ ನವೀನ್‌ ಶೆಟ್ಟಿ ಮಾಹಿತಿ ನೀಡಿದ್ದಾರೆ.

Advertisement

3ನೇ ಕೌಂಟರ್‌ಗೆ ವಿಸ್ತರಣೆ
ಇಲ್ಲಿ ಪ್ರಸ್ತುತ ಹೋಗುವ ಮತ್ತು ಬರುವ ವಾಹನಗಳಿಗೆ ಎರಡೆರಡು ಪ್ರತ್ಯೇಕ ಕೌಂಟರ್‌ಗಳಿದ್ದು, ಅದನ್ನು ತಲಾ ಮೂರಕ್ಕೆ ವಿಸ್ತರಿಸುವ ಪ್ರಸ್ತಾವನೆ ಬಹುಕಾಲದಿಂದ ಇದೆ. ಸದ್ಯದ ಮಾಹಿತಿಯ ಪ್ರಕಾರ ಅದರ ಶೇ.90ರಷ್ಟು ಕಾಮಗಾರಿ ಮುಗಿದಿದೆ.

ತುಂಬೆ ಡ್ಯಾಮ್‌ಗೆ ವಿದ್ಯುತ್‌ ಲೈನ್‌ ಹಾದುಹೋಗಿರುವ ಕಾರಣ ತೊಂದರೆಯಾಗಿದ್ದು, ಪ್ರಸ್ತುತ ಅದನ್ನು ಮಣ್ಣಿನಡಿಗೆ ಹಾಕುವ ಕಾಮಗಾರಿ ಪ್ರಗತಿಯಲ್ಲಿದೆ. ಮುಂದೆ ವಿಸ್ತೃತ ಹೆದ್ದಾರಿಗೆ ಡಾಮರು ಹಾಕಿದ ಬಳಿಕ ಮೂರನೇ ಕೌಂಟರ್‌ ತೆರೆಯಲಿದೆ ಎಂದು ಟೋಲ್‌ ಫ್ಲಾಝಾದ ಮೂಲಗಳು ತಿಳಿಸಿವೆ.

ಸೌಲಭ್ಯಗಳಿಲ್ಲದ ಸುರತ್ಕಲ್‌ ಟೋಲ್‌ಗೇಟ್‌ನಲ್ಲೂ ಅಳವಡಿಕೆ
ಸುರತ್ಕಲ್‌: ಹೆದ್ದಾರಿ ಟೋಲ್‌ಗೇಟ್‌ಗಳಲ್ಲಿ ಇರಬೇಕಾದ ಯಾವುದೇ ಮೂಲಸೌಕರ್ಯಗಳು ಇಲ್ಲದಿದ್ದರೂ ಫಾಸ್ಟಾಗ್‌ ಮೂಲಕ ಟೋಲ್‌ ವಸೂಲಿ ವ್ಯವಸ್ಥೆಗೆ ಸುರತ್ಕಲ್‌ ಎನ್‌ಐಟಿಕೆ ಟೋಲ್‌ ಸಿದ್ಧಗೊಂಡಿದೆ. ಫಾಸ್ಟಾಗ್‌ ಅಳವಡಿಸಿರುವ ವಾಹನಗಳನ್ನು ತಡೆದು ಮುಂದಕ್ಕೆ ಬಿಡುವ ಪ್ರಕ್ರಿಯೆಗೆ ಇಲ್ಲಿ ಈಗಾಗಲೇ ಸಮಯ ತೆಗೆದುಕೊಳ್ಳುತ್ತಿದ್ದು, ಡಿ.1ರ ಬಳಿಕ ಹೇಗೋ ಎಂಬ ಅಭಿಪ್ರಾಯ ಕೇಳಿಬಂದಿದೆ. ಆರಂಭಿಕ ಹಂತವಾಗಿರುವುದರಿಂದ ಫಾಸ್ಟಾಗ್‌ ರೀಡಿಂಗ್‌ ವಿಳಂಬವಾಗು ತ್ತಿದ್ದು, ವಾಹನಗಳ ಉದ್ದ ಸಾಲು ಕಂಡುಬರುತ್ತಿದೆ.

ಟೋಲ್‌ಗೇಟ್‌ ಬಳಿ ಹೆದ್ದಾರಿ ಪ್ರಾ ಧಿಕಾರ ಕೌಂಟರ್‌ ತೆರೆದಿದ್ದು, ದಿನಕ್ಕೆ 15 ಸ್ಟಿಕ್ಕರ್‌ಗಳನ್ನು ಉಚಿತವಾಗಿ ವಿತರಿಸು ತ್ತಿದೆ. ಸ್ಥಳೀಯ ವಾಹನಗಳಿಗೆ ರಿಯಾಯಿತಿ ರದ್ದುಪಡಿಸಿ ಫಾಸ್ಟಾಗ್‌ ಅನಿವಾರ್ಯವಾದರೆ ಟೋಲ್‌ ವಿರೋಧಿ ಹೋರಾಟ ಸಮಿತಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದ್ದು, ಈ ಹಿಂದಿನಂತೆಯೇ ಉಚಿತವಾಗಿ ಓಡಾಡುವ ಗೇಟ್‌ನಲ್ಲಿ ಸ್ಥಳೀಯರಿಗೆ ಉಚಿತ ಓಡಾಟ ಅವಕಾಶವನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದೆ.

ಗುತ್ತಿಗೆ ಬದಲು
ಈ ನಡುವೆ ಸುರತ್ಕಲ್‌ ಟೋಲ್‌ ಗೇಟ್‌ ಗುತ್ತಿಗೆ ನವೀಕರಣ ಗೊಂಡಿದೆ. ರಾಜಸ್ಥಾನ ಮೂಲದ ರಿತಿಸಿದ್ಧಿ ಸಂಸ್ಥೆ ಗುತ್ತಿಗೆ ಪಡೆದುಕೊಂಡಿದೆ. ನ.26ರಿಂದ ಇದು ಅಧಿಕೃತವಾಗಿ ಕಾರ್ಯ ನಿರ್ವಹಿಸಲಿದೆ. ಸಂಸ್ಥೆ ಈಗಾಗಲೇ ಸಿಬಂದಿಯನ್ನು ನೇಮಿಸಿಕೊಂಡಿದ್ದು, ಫಾಸ್ಟಾಗ್‌ಗೆ ಸಿದ್ಧತೆ ಮಾಡಿಕೊಂಡಿದೆ. ಸ್ಥಳೀಯ ವಾಹನಗಳು ಓಡಾಡುವ ಗೇಟ್‌ನಲ್ಲಿಯೂ ಅಳವಡಿಸಿರುವುದು ಕಂಡುಬಂದಿದ್ದು ಡಿ.1ರಿಂದ ಉಚಿತ ಓಡಾಟಕ್ಕೆ ಕತ್ತರಿ ಬೀಳುವ ಸಾಧ್ಯತೆಯಿದೆ.

ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಫಾಸ್ಟಾಗ್‌ ಸ್ಟಿಕ್ಕರ್‌ ಖಾಲಿ!
ಪಡುಬಿದ್ರಿ: ಹೆಜಮಾಡಿಯ ಟೋಲ್‌ಗೇಟ್‌ ಸನಿಹ ಪೇಟಿಎಂ, ಆ್ಯಕ್ಸಿಸ್‌ ಬ್ಯಾಂಕ್‌ ಮತ್ತು ಎನ್‌ಎಚ್‌ಎಐ ವತಿಯಿಂದ ಫಾಸ್ಟಾಗ್‌ ನೀಡಿಕೆ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲ ಕೌಂಟರ್‌ಗಳಲ್ಲಿ ವಾಹನದ ಆರ್‌ಸಿ, ಆಧಾರ್‌ ಕಾರ್ಡ್‌ ಅಥವಾ ಚಾಲನ ಪರವಾನಿಗೆ ದಾಖಲೆಗಳೊಂದಿಗೆ ವಾಹನದ ವಿವರ ನೀಡಿದರೆ ಸದ್ಯ ಉಚಿತವಾಗಿ ಫಾಸ್ಟಾಗ್‌ ಒದಗಿಸಲಾಗುತ್ತದೆ. ಈ ಖಾತೆಯನ್ನು ನಿಯಮಿತವಾಗಿ ರೀಚಾರ್ಜ್‌ ಮಾಡಿಸಬೇಕು. 200 ರೂ. ಕನಿಷ್ಠ ಮಿತಿ ಎಂದು ನವಯುಗ ಟೋಲ್‌ ಪ್ರಬಂಧಕ ಶಿವಪ್ರಸಾದ್‌ ರೈ ಮಾಹಿತಿ ನೀಡಿದ್ದಾರೆ.

ಸರಕಾರಿ ಇಲಾಖೆಗಳ ವಾಹನಗಳಿಗೆ ಆಯಾ ಇಲಾಖೆಯ ಮೂಲಕವೇ ಅಳವಡಿಸಲಾಗುತ್ತದೆ. 265 ರೂ. ಪಾಸ್‌ ಹೊಂದಿರುವ ವಾಹನ ಮಾಲಕರು ಟೋಲ್‌ ಕಚೇರಿ ಸಂಪರ್ಕಿಸಿದಲ್ಲಿ ಫಾಸ್ಟಾಗ್‌ ಸಕ್ರಿಯಗೊಳಿಸಲಾಗುವುದೆಂದು ರೈ ಹೇಳಿದ್ದಾರೆ.

ಪಡುಬಿದ್ರಿ ಠಾಣೆಯಲ್ಲಿ ಸಭೆ
ಫಾಸ್ಟಾಗ್‌ ಅಳವಡಿಕೆಯ ಕುರಿತಾದ ಪೊಲೀಸ್‌ ಮಾಹಿತಿ ಸಭೆಯು ಕಾಪು ವೃತ್ತ ನಿರೀಕ್ಷಕ ಮಹೇಶ್‌ಪ್ರಸಾದ್‌ ನೇತೃತ್ವದಲ್ಲಿ ಸೋಮವಾರ ಪಡುಬಿದ್ರಿ ಠಾಣೆಯಲ್ಲಿ ನಡೆಯಿತು.

ಡಿ.1ರಿಂದ ಫಾಸ್ಟಾಗ್‌ ಇಲ್ಲದಿದ್ದಲ್ಲಿ ನಗದು ದುಪ್ಪಟ್ಟು ಶುಲ್ಕ ಪಾವತಿಸಿ ಪ್ರಯಾಣಿಸುವ ಅವಕಾಶ ಒಂದು ಗೇಟ್‌ನಲ್ಲಿ ಮಾತ್ರ ಇರುತ್ತದೆ ಎಂದು ಸಭೆಯಲ್ಲಿ ರಾ.ಹೆ. ಪ್ರಾಧಿಕಾರದ ಪ್ರತಿನಿಧಿ ನವೀನ್‌ ಹೇಳಿದರು.
ಹೆಜಮಾಡಿಯಲ್ಲಿ ಫಾಸ್ಟಾಗ್‌ ಸ್ಟಿಕ್ಕರ್‌ ಸಂಗ್ರಹ ಮುಗಿದಿದ್ದು, ರಾ.ಹೆ. ಪ್ರಾಧಿಕಾರ ಏಕೆ ಕ್ರಮ ಕೈಗೊಂಡಿಲ್ಲ ಎಂಬ ಸ್ಥಳೀಯರ ಪ್ರಶ್ನೆಗೆ ಉತ್ತರಿಸಿ, ಮೂರು ದಿನಗಳಲ್ಲಿ ಸ್ಟಿಕ್ಕರ್‌ಗಳು ಬರುವ ನಿರೀಕ್ಷೆ ಇದ್ದು, ಕೂಡಲೇ ವಿತರಣೆ ಮಾಡುತ್ತೇವೆ. ಮತ್ತೂ ವಿಳಂಬವಾದಲ್ಲಿ ಅಥವಾ ಸಾಕಷ್ಟು ಸಂಗ್ರಹ ಲಭ್ಯವಾಗದಿದ್ದಲ್ಲಿ ಎಲ್ಲ ಟೋಲ್‌ ಕೇಂದ್ರಗಳ ಪರಿಸ್ಥಿತಿಯನ್ನು ಅವಲೋಕಿಸಿ ಎನ್‌ಎಚ್‌ಎಐ ಫಾಸ್ಟಾಗ್‌ ಕಡ್ಡಾಯ ಕ್ರಮವನ್ನು ಕೇಂದ್ರ ಸರಕಾರದ ಅನುಮತಿಯೊಂದಿಗೆ ಮುಂದೂಡಬಹುದಾಗಿದೆ ಎಂದು ನವೀನ್‌ ವಿವರಿಸಿದರು.

ಫಾಸ್ಟಾಗ್‌ ಇದ್ದರೂ ಈಗಾಗಲೇ ಆಗುತ್ತಿರುವ ವಿಳಂಬ, ಸ್ಥಳೀಯ ವಾಹನಗಳು- ಹೆಜಮಾಡಿ ಒಳ ರಸ್ತೆಗಳಲ್ಲಿ ಸಂಚರಿಸುವ 20 ಸ್ಥಳೀಯ ಬಸ್‌ಗಳಿಗೆ ನೀಡಬಹುದಾದ ರಿಯಾಯಿತಿ, 5 ಕಿ.ಮೀ. ಒಳಗಿನ ಟೂರಿಸ್ಟ್‌ ಕಾರುಗಳು ಮತ್ತು ಖಾಸಗಿ ವಾಹನಗಳಿಗೆ ಲಭ್ಯವಾಗಬಹುದಾದ ರಿಯಾಯಿತಿಗಳ ಬಗ್ಗೆ ಜಿಲ್ಲಾಡಳಿತ ಮಟ್ಟದಲ್ಲಿ ಚರ್ಚಿಸಲಾಗುವುದು. ಆದರೆ ಯಾವುದೇ ತೀರ್ಮಾನ ಕೇಂದ್ರ ಸರಕಾರದ ನೀತಿ ನಿಯಮಗಳಿಗೆ ಒಳಪಟ್ಟಿರುತ್ತವೆ ಎಂದು ಕಾಪು ವೃತ್ತ ನಿರೀಕ್ಷಕ ಮಹೇಶ್‌ ಪ್ರಸಾದ್‌ ಸಭೆಯಲ್ಲಿ ತಿಳಿಸಿದರು.

ಪಡುಬಿದ್ರಿ ಠಾಣಾಧಿಕಾರಿ ಸುಬ್ಬಣ್ಣ, ಪ್ರೊಬೆಶನರಿ ಪಿಎಸ್‌ಐ ಸದಾಶಿವ ಗವರೋಜಿ, ನವಯುಗ ಹೆಜಮಾಡಿ ಟೋಲ್‌ಗೇಟ್‌ ಪ್ರಬಂಧಕ ಶಿವಪ್ರಸಾದ್‌ ರೈ ಉಪಸ್ಥಿತರಿದ್ದರು.

ಸಾಸ್ತಾನ: ಪ್ರತ್ಯೇಕ ಸ್ಟಾಲ್‌ ಮೂಲಕ ಸ್ಟಿಕ್ಕರ್‌ ವಿತರಣೆ
ಕೋಟ: ಸಾಸ್ತಾನ ಟೋಲ್‌ನಲ್ಲಿಯೂ ಫಾಸ್ಟಾಗ್‌ ಅನುಷ್ಠಾನಕ್ಕೆ ಸಿದ್ಧತೆ ನಡೆದಿವೆ. ರಾ.ಹೆ. ಪ್ರಾಧಿಕಾರದ ವತಿಯಿಂದ ಉಚಿತ ಫಾಸ್ಟಾಗ್‌ ನೀಡಲಾಗುತ್ತಿದ್ದು, ಇದಕ್ಕಾಗಿ ಪ್ರತ್ಯೇಕ ಸ್ಟಾಲ್‌ ವ್ಯವಸ್ಥೆ ಮಾಡಲಾಗಿದೆ.
ಸೂಚನ ಫಲಕ ಅಳವಡಿಸಿ ಮತ್ತು ವಾಹನ ಸವಾರರಿಗೆ ಕರಪತ್ರಗಳನ್ನು ನೀಡುವುದರ ಮೂಲಕ, ಧ್ವನಿ ಪ್ರಸಾರದ ಮೂಲಕ ಮಾಹಿತಿ ನೀಡಲಾಗುತ್ತಿದೆ. ಈಗಾಗಲೇ 10 ಗೇಟ್‌ಗಳಿಗೆ ಫಾಸ್ಟಾಗ್‌ ಸ್ಕಾನರ್‌ಅಳವಡಿಸಲಾಗಿದ್ದು ಡಿ.1ರಿಂದ ಎರಡು ಗೇಟ್‌ಗಳು ಮಾತ್ರ ಸಾಮಾನ್ಯ ನಗದು ವ್ಯವಹಾರ ನಡೆಸಲಿವೆ.

ಸ್ಥಳೀಯರಿಗೆ ಉಚಿತ: ಸ್ಪಷ್ಟತೆ ಇಲ್ಲ
ಸಾಸ್ತಾನದಲ್ಲಿ ಇದುವರೆಗೆ ಬಾಕೂìರು ಹೊರತುಪಡಿಸಿ ಕೋಟ ಜಿ.ಪಂ. ವ್ಯಾಪ್ತಿಯ ಎಲ್ಲ ವಾಹನಗಳಿಗೆ ಉಚಿತ ಪ್ರವೇಶ ಇತ್ತು. ಆದರೆ
ಫಾಸ್ಟಾಗ್‌ ಆರಂಭವಾದ ಮೇಲೆಯೂ ಇದು ಮುಂದುವರಿಯಲಿದೆಯೇ ಎನ್ನುವ ಕುರಿತು ಸ್ಪಷ್ಟತೆ ಇಲ್ಲ. ಉಚಿತ ಪ್ರವೇಶ ನೀಡುತ್ತಿರುವ ಕುರಿತು ಮತ್ತು ಸಾರ್ವಜನಿಕ ಬೇಡಿಕೆಯ ಕುರಿತು ಪ್ರಾಧಿಕಾರಕ್ಕೆ ತಿಳಿಸಿದ್ದೇವೆ, ಅವರ ಆದೇಶದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಟೋಲ್‌ ಮುಖ್ಯಸ್ಥರು ತಿಳಿಸಿದ್ದಾರೆ.

ಪ್ರತ್ಯೇಕ ವ್ಯವಸ್ಥೆಗೆ ಬೇಡಿಕೆ
ಡಿ. 1ರ ಬಳಿಕ ಸ್ಥಳೀಯರು ಮತ್ತು ಫಾಸ್ಟಾಗ್‌ ಇಲ್ಲದ ವಾಹನಗಳನ್ನು ಒಂದೇ ಗೇಟ್‌ನಲ್ಲಿ ಬಿಡಲಾಗುತ್ತದೆ. ಇದರಿಂದ ದಟ್ಟಣೆ ಹೆಚ್ಚಬಹುದು.ಆದ್ದರಿಂದ ಸ್ಥಳೀಯರಿಗೆ ಪ್ರತ್ಯೇಕ ಗೇಟ್‌ ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ತಲಪಾಡಿ: ಸರ್ವರ್‌ ಕೈಕೊಟ್ಟರೆ ಹ್ಯಾಂಡ್‌ ಸ್ಕಾನರ್‌
ಉಳ್ಳಾಲ: ರಾ. ಹೆದ್ದಾರಿ 66ರಲ್ಲಿ ಕರ್ನಾಟಕ -ಕೇರಳ ಗಡಿಭಾಗವಾದ ತಲಪಾಡಿ ಟೋಲ್‌ನ ಎಲ್ಲ 10 ಗೇಟ್‌ಗಳಲ್ಲಿ ಫಾಸ್ಟಾಗ್‌ ಅನುಷ್ಠಾನ ಗೊಂಡಿದೆ.

ಈ ಹಿಂದೆ 2 ಗೇಟ್‌ಗಳಲ್ಲಿ ಮಾತ್ರ ಈ ವ್ಯವಸ್ಥೆ ಇತ್ತು. ಬಾಕಿ ಉಳಿದ 8ರಲ್ಲಿ ಅಳವಡಿಕೆ ವ್ಯವಸ್ಥೆ ತಿಂಗಳ ಹಿಂದೆಯೇ ಆಗಿದೆ. ಫಾಸ್ಟಾಗ್‌ ಸ್ಕ್ಯಾನಿಂಗ್‌ ಸಂದರ್ಭದಲ್ಲಿ ಸರ್ವರ್‌ ಕೈಕೊಟ್ಟರೆ ಬದಲಿಯಾಗಿ ಎರಡೂ ಬದಿಗಳಲ್ಲಿ ನಾಲ್ಕು ಹ್ಯಾಂಡ್‌ ರೀಡರ್‌ ವ್ಯವಸ್ಥೆ ಮಾಡಲಾಗಿದೆ.

ವಾಹನಗಳಿಗೆ ಫಾಸ್ಟಾಗ್‌ ಸ್ಟಿಕ್ಕರ್‌ ವಿತರಣೆ ಉಚಿತವಾಗಿ ನಡೆಯುತ್ತಿದೆ. ಪೇಟಿಎಂ, ಐಸಿಐಸಿಐ ಮತ್ತು ಆ್ಯಕ್ಸಿಸ್‌ ಬ್ಯಾಂಕ್‌ಗಳ ಕೌಂಟರ್‌ 2 ದಿನಗಳಿಂದ ಆರಂಭವಾಗಿದೆ.

ಟೋಲ್‌ಗೇಟ್‌ನಲ್ಲಿ ಸುಮಾರು 100 ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಇವರು ಕೆಲಸ ಕಳೆದುಕೊಳ್ಳುವುದಿಲ್ಲ ಎಂದು ಟೋಲ್‌ಗೇಟ್‌ ಮುಖ್ಯಸ್ಥ ಶಿವಪ್ರಸಾದ್‌ ರೈ ಮಾಹಿತಿ ನೀಡಿದ್ದಾರೆ.

ಉಚಿತ ಸಂಚಾರಕ್ಕೆ ಖೊಕ್‌?
ಹಿಂದೆ ಇಲ್ಲಿ ಮಂಜೇಶ್ವರ ವ್ಯಾಪ್ತಿ ಯಿಂದ ಬರುವ ವಾಹನಗಳಿಗೆ ಉಚಿತ ಸಂಚಾರ ಇತ್ತು. ಫಾಸ್ಟಾಗ್‌ ಅಳವಡಿಕೆಯಾದ ಬಳಿಕ ಇವುಗಳಿಂದಲೂ ಟೋಲ್‌ ಸಂಗ್ರಹಿಸಲು ಎನ್‌ಎಚ್‌ಎಐ ತೀರ್ಮಾನ ತೆಗೆದು ಕೊಂಡಿದೆ ಎನ್ನಲಾಗಿದೆ.

ಕರ್ನಾಟಕ ವ್ಯಾಪ್ತಿಯ ತಲಪಾಡಿ ಗ್ರಾ.ಪಂ. ಮತ್ತು ಸುತ್ತಲಿನ ಐದು ಕಿ.ಮೀ. ವ್ಯಾಪ್ತಿಯ ವಾಹನಗಳಿಗೆ ಈ ಹಿಂದೆ ಇದ್ದಂತೆ ಉಚಿತ ಸಂಚಾರಕ್ಕೆ ಎನ್‌ಎಚ್‌ಎಐ ಹಸಿರು ನಿಶಾನೆ ನೀಡಿದ್ದರೂ ಫಾಸ್ಟಾಗ್‌ ಅಳವಡಿಕೆ ಕಡ್ಡಾಯ.
ತಲಪಾಡಿಯಿಂದ ಮಂಗಳೂರು ಕಡೆ ಸಂಚರಿಸುವ ಖಾಸಗಿ ಮತ್ತು ಇತರ ಬಸ್‌ಗಳಿಗೆ ಉಚಿತ ಟೋಲ್‌ ಸಂಚಾರ ಬಂದ್‌ ಆಗಲಿದೆ.

ಶಾಲಾ ಮಕ್ಕಳನ್ನು ಕೊಂಡೊಯ್ಯುವ ವಾಹನಗಳಿಗೂ ಉಚಿತ ಟೋಲ್‌ ಕಡಿತವಾಗಲಿದ್ದು, ಡಿ. 1ರಿಂದ ಟೋಲ್‌ ಕಟ್ಟಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next