Advertisement

ಬರಿದಾಗುತ್ತಿವೆ ಕಲ್ಲಿದ್ದಲು ಗಣಿಗಳು! ಮಿತವಾಗಿ ಬಳಸಿ ವಿದ್ಯುತ್‌; ಕಗ್ಗತ್ತಲಿನಿಂದ ಪಾರಾಗಿ

09:35 AM Oct 21, 2021 | Team Udayavani |

ವಿಶ್ವದ ಹಲವಾರು ದೇಶಗಳು ಕಲ್ಲಿದ್ದಲು ಕೊರತೆಯಿಂದಾಗಿ ವಿದ್ಯುತ್‌ ಅಭಾವವನ್ನು ಎದುರಿಸು ತ್ತಿವೆ. ಇದು ಕೇವಲ ವಿದೇಶಗಳ ಸಮಸ್ಯೆಯಾಗಿರದೆ ಭಾರತದಲ್ಲೂ ಕಲ್ಲಿದ್ದಲು ಕೊರತೆಯಿಂದಾಗಿ 16 ಸ್ಥಾವರಗಳು ವಿದ್ಯುತ್‌ ಉತ್ಪಾದನೆಯನ್ನು ಸ್ಥಗಿತಗೊಳಿಸಿವೆ. ದೇಶದ 137 ಕಲ್ಲಿದ್ದಲು ವಿದ್ಯುತ್‌ ಸ್ಥಾವರಗಳ ಪೈಕಿ 72ರಲ್ಲಿ 3 ದಿನ, 50 ಸ್ಥಾವರಗಳಲ್ಲಿ 4 ದಿನ ಮತ್ತು 30ರಲ್ಲಿ ಕೇವಲ 1 ದಿನಕ್ಕಾಗುವಷ್ಟು ಕಲ್ಲಿದ್ದಲು ದಾಸ್ತಾನು ಬಾಕಿ ಉಳಿದಿದೆ ಎಂದು ಇಂಡಿಯಾ ರೇಟಿಂಗ್ಸ್‌ ವರದಿ ಮಾಡಿದೆ. ಸಾಮಾನ್ಯವಾಗಿ ಈ ಸ್ಥಾವರಗಳಲ್ಲಿ  17 ದಿನಗಳಿಗಾಗುವಷ್ಟು ಕಲ್ಲಿದ್ದಲು ಮೀಸಲಾಗಿರುತ್ತದೆ.

Advertisement

ಜಗತ್ತಿನಲ್ಲಿ ಶೇ. 37ರಷ್ಟು  ಮತ್ತು ಭಾರತದಲ್ಲಿ ಶೇ. 55ರಷ್ಟು  ವಿದ್ಯುತ್‌ ಉತ್ಪಾದನೆ ಕಲ್ಲಿದ್ದಲಿನಿಂದಲೇ ಆಗುತ್ತಿದೆ. ಒಂದು ವೇಳೆ ಕಲ್ಲಿದ್ದಲು ಸಂಪೂರ್ಣ ಖಾಲಿಯಾದರೆ ವಿಶ್ವದ 10 ಮನೆಗಳ ಪೈಕಿ 3-4 ಮತ್ತು ಭಾರತದಲ್ಲಿ 10 ಮನೆಗಳ ಪೈಕಿ 5-6 ಮನೆಗಳಲ್ಲಿ ವಿದ್ಯುತ್‌ ದೀಪಗಳು ಉರಿಯಲಾರವು.

ಕಲ್ಲಿದ್ದಲಿನ ಪ್ರಸ್ತುತ ಸ್ಥಿತಿಗತಿ
ಪ್ರಪಂಚದಲ್ಲಿ ಶೇ. 65ರಷ್ಟು ಕಲ್ಲಿದ್ದಲನ್ನು ವಿದ್ಯುತ್‌ ಉತ್ಪಾದನೆಗೆ ಬಳಕೆ ಮಾಡಲಾಗುತ್ತದೆ. ಪ್ರತೀ ವರ್ಷ ಸರಾಸರಿ 16 ಸಾವಿರ ಮಿಲಿಯನ್‌ ಟನ್‌ ಕಲ್ಲಿದ್ದಲನ್ನು ಗಣಿಗಳಿಂದ ತೆಗೆಯಲಾಗುತ್ತಿದೆ. 2019 ರಲ್ಲಿ 16,731 ಮಿಲಿಯನ್‌ ಟನ್‌ ಕಲ್ಲಿದ್ದಲನ್ನು ತೆಗೆಯಲಾಯಿತು. 2020ರಲ್ಲಿ 15,767 ಮಿಲಿಯನ್‌ ಟನ್‌ ಕಲ್ಲಿದ್ದಲು ಉತ್ಪಾದನೆಯಾಗಿತ್ತು. ಇದರಲ್ಲಿ ಶೇ. 60-65ರಷ್ಟು ಕಲ್ಲಿ ದ್ದಲನ್ನು ವಿದ್ಯುತ್‌ ಉತ್ಪಾದನೆಗಾಗಿ  . ಬಳಸಲಾಗುತ್ತಿದೆ.

ಕಲ್ಲಿದ್ದಲು ಗಣಿಗಾರಿಕೆಯಲ್ಲಿ ವಿಶ್ವದಲ್ಲಿಯೇ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಸುಮಾರು ಶೇ. 72ರಷ್ಟು ಕಲ್ಲಿದ್ದಲನ್ನು ವಿದ್ಯುತ್‌ ಉತ್ಪಾದನೆಗೆ ಬಳಸಲಾಗುತ್ತಿದೆ. ದೇಶದಲ್ಲಿ ವರ್ಷಕ್ಕೆ ಸರಾಸರಿ 760 ಮಿಲಿಯನ್‌ ಟನ್‌ ಕಲ್ಲಿದ್ದಲು ಉತ್ಪಾದಿಸಲಾಗುತ್ತದೆ. ಈ ಪೈಕಿ ಶೇ. 70-75ರಷ್ಟು ಕಲ್ಲಿದ್ದಲನ್ನು ವಿದ್ಯುತ್‌ ಉತ್ಪಾದನೆಗಾಗಿ ಬಳಕೆ ಮಾಡಲಾಗುತ್ತಿದೆ. 2020ರಲ್ಲಿ ದೇಶದಲ್ಲಿ ಉತ್ಪಾದನೆಯಾದ ಕಲ್ಲಿದ್ದಲಿನಲ್ಲಿ ಶೇ. 72ರಷ್ಟನ್ನು ವಿದ್ಯುತ್‌ ಉತ್ಪಾದನೆಗಾಗಿ ಬಳಕೆ ಮಾಡಲಾಗಿತ್ತು.

ಜಗತ್ತಿನಲ್ಲಿ ಮತ್ತು ಭಾರತದಲ್ಲಿ ಕಲ್ಲಿದ್ದಲು ಎಷ್ಟಿದೆ?
ವಿಶ್ವದಲ್ಲಿರುವ ಕಲ್ಲಿದ್ದಲಿನ ಪ್ರಮಾಣವನ್ನು 2016ರಲ್ಲಿ ಅಳೆಯಲಾಗಿದ್ದು,  ಕಲ್ಲಿದ್ದಲು ಗಣಿಗಳಲ್ಲಿ ಒಟ್ಟು 1,144 ಬಿಲಿಯನ್‌ ಟನ್‌ ಕಲ್ಲಿದ್ದಲು ಉಳಿದಿತ್ತು. ಪ್ರಪಂಚದಲ್ಲಿ ಪ್ರತೀ ವರ್ಷ ಸುಮಾರು 8.5 ಬಿಲಿಯನ್‌ ಟನ್‌ ಕಲ್ಲಿದ್ದಲು ಬಳಕೆಯಾಗುತ್ತದೆ. ಇದೇ ವೇಗದಲ್ಲಿ ಮುಂದುವರಿದರೆ ಮುಂದಿನ 134-135 ವರ್ಷಗಳಲ್ಲಿ  ಕಲ್ಲಿದ್ದಲು ಸಂಪೂರ್ಣ ಖಾಲಿಯಾಗಲಿದೆ ಎಂದು ಅಂದಾಜಿಸಲಾಗಿದೆ.

Advertisement

ಇದನ್ನೂ ಓದಿ:ಉತ್ತರಾಖಂಡ ಪ್ರವಾಹ : ರಾಜ್ಯದ 92 ಮಂದಿ ರಕ್ಷಣೆ, ಸಂಪರ್ಕ ಸಮಸ್ಯೆಯಿಂದ ಸಿಕ್ಕಿಲ್ಲ ನಾಲ್ವರು

ಕಲ್ಲಿದ್ದಲು ಸಚಿವಾಲಯದ ಪ್ರಕಾರ ಭಾರತದಲ್ಲಿ  ಪ್ರಸ್ತುತ 319 ಬಿಲಿಯನ್‌ ಟನ್‌ ಕಲ್ಲಿದ್ದಲು ಇದೆ. ಆದರೆ ಯುರೋಪ್‌ ಮತ್ತು ಅಮೆರಿಕದ ಏಜೆನ್ಸಿಗಳ ಪ್ರಕಾರ ಕೇವಲ 107 ಬಿಲಿಯನ್‌ ಟನ್‌ಗಳಷ್ಟು ಕಲ್ಲಿದ್ದಲು  ಮಾತ್ರವೇ ಬಾಕಿ ಉಳಿದಿದೆ. ಕಲ್ಲಿದ್ದಲು ಬಳಕೆಯಲ್ಲಿಯೂ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತ ವಾರ್ಷಿಕ ಸರಾಸರಿ 1 ಬಿಲಿಯನ್‌ ಟನ್‌ ಕಲ್ಲಿದ್ದಲನ್ನು ಬಳಸುತ್ತದೆ. ಭಾರತ ಸರಕಾರದ ಅಂಕಿಅಂಶಗಳ ಪ್ರಕಾರ ದೇಶದಲ್ಲಿ 319 ವರ್ಷಗಳ ಕಾಲ ಬಳಸುವಷ್ಟು ಕಲ್ಲಿದ್ದಲು ಇದ್ದರೆ ಅಂತಾರಾಷ್ಟ್ರೀಯ ಸಂಸ್ಥೆಗಳ ಪ್ರಕಾರ 107 ವರ್ಷಗಳಿಗಾಗುವಷ್ಟು ಮಾತ್ರವೇ ಕಲ್ಲಿದ್ದಲು ಉಳಿದಿದೆ.

ಕಲ್ಲಿದ್ದಲು ಖಾಲಿಯಾದರೆ?
ಜಗತ್ತಿನಲ್ಲಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್‌ನಲ್ಲಿ ಶೇ. 37ರಷ್ಟನ್ನು ಮಾತ್ರವೇ ಕಲ್ಲಿದ್ದಲಿನಿಂದ ಉತ್ಪಾದಿಸಲಾಗುತ್ತಿದೆ. ಉಳಿದ ಶೇ. 63ರಷ್ಟು ವಿದ್ಯುತ್‌ ಅನ್ನು ಬೇರೆ ಬೇರೆ ಮೂಲಗಳಿಂದ ಉತ್ಪಾದಿಸಲಾಗುತ್ತಿದೆ. ಯುಎಸ್‌ ತನ್ನ ಶೇ. 73ರಷ್ಟು ವಿದ್ಯುತ್‌ ಅನ್ನು ನವೀಕರಿಸಬಹುದಾದ ಸಂಪನ್ಮೂಲಗಳಾದ ಗಾಳಿ, ಸೌರ ಶಕ್ತಿಯನ್ನು ಬಳಸಿಕೊಂಡು ಉತ್ಪಾದಿಸುತ್ತಿದೆ. ಹೀಗಾಗಿ ಅಲ್ಲಿ ಒಂದು ವೇಳೆ ಕಲ್ಲಿದ್ದಲು ಸಂಪೂರ್ಣವಾಗಿ ಖಾಲಿಯಾದರೂ ಬಹುದೊಡ್ಡ ಸಮಸ್ಯೆಯೇನೂ ಸೃಷ್ಟಿಯಾಗದು. 2040ರ ವೇಳೆಗೆ ಅಮೆರಿಕ ವಿದ್ಯುತ್‌ ಉತ್ಪಾದನೆಯಲ್ಲಿ ಕಲ್ಲಿದ್ದಲಿನ ಅವಲಂಬನೆಯನ್ನು ಶೇ. 20ರಷ್ಟು  ಕಡಿಮೆ ಮಾಡಲಿದೆ. ಆದರೆ ಭಾರತದಲ್ಲಿ ಇದು ಕಷ್ಟಸಾಧ್ಯ. ಯಾಕೆಂದರೆ ಇಲ್ಲಿ ಒಟ್ಟಾರೆ ಉತ್ಪಾದಿಸಲಾಗುವ ವಿದ್ಯುತ್‌ನಲ್ಲಿ ಶೇ. 12ರಷ್ಟು ಜಲ ವಿದ್ಯುತ್‌ ಸ್ಥಾವರಗಳ ಮೂಲಕ, ಶೇ. 55ರಷ್ಟು ಕಲ್ಲಿದ್ದಲಿನಿಂದ  ಉತ್ಪಾದನೆಯಾಗುತ್ತಿದೆ. 2022ರ ವೇಳೆಗೆ ನವೀಕರಿಸಬಹುದಾದ ಇಂಧನದಿಂದ ಭಾರತ 1,75,000 ಮೆಗಾವ್ಯಾಟ್‌ ವಿದ್ಯುತ್‌ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಒಟ್ಟು 3,84,115 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆಯ ಶೇ. 45ರಷ್ಟಾಗಿದೆ. ಆದರೆ 2020ರ ವರದಿ ಪ್ರಕಾರ ಶೇ.25ರಷ್ಟು ನವೀಕರಿಸಬಹುದಾದ ಸಂಪನ್ಮೂಲಗಳು ಮಾತ್ರ ಭಾರತದಲ್ಲಿ ವಿದ್ಯುತ್‌ ಉತ್ಪಾದಿಸಲು ಸಮರ್ಥವಾಗಿವೆ. 1774ರಲ್ಲಿ ಈಸ್ಟ್‌ ಇಂಡಿಯಾ ಕಂಪೆನಿಯು ದೇಶದಲ್ಲಿ ಮೊದಲ ಬಾರಿಗೆ ಪಶ್ಚಿಮ ಬಂಗಾಲದ ರಾಣಿಗಂಜ್‌ನಲ್ಲಿ ಕಲ್ಲಿದ್ದಲಿನ ಗಣಿಗಾರಿಕೆ ಮಾಡಿತ್ತು. ಅದಕ್ಕಿಂತ ಮೊದಲು ಕಲ್ಲಿದ್ದಲಿನ ಬಗೆಗೆ ಜನರಿಗೆ ಅರಿವೇ ಇರಲಿಲ್ಲ. ಆ ಬಳಿಕ ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಭಾರತ ವಿಶ್ವದಲ್ಲಿಯೇ ಮುಂಚೂಣಿಯಲ್ಲಿದ್ದರೂ ಇದೀಗ ಕಲ್ಲಿದ್ದಲಿನ ತೀವ್ರ ಅಭಾವಕ್ಕೆ  ತುತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next