ರಾಯ್ಪುರ: ಅಕ್ರಮ ಹಣಕಾಸು ವರ್ಗಾವಣೆ ಆರೋಪಕ್ಕೆ ಸಂಬಂಧಿಸಿದಂತೆ ಛತ್ತೀಸ್ಘಡ ಸಿಎಂ ಭೂಪೇಶ್ ಭಗೇಲ್ ಅವರ ಉಪ ಕಾರ್ಯದರ್ಶಿ ಸೌಮ್ಯಾ ಚೌರಾಸಿಯಾ ಅವರನ್ನು ಬಂಧಿಸಲಾಗಿದೆ.
ರಾಜ್ಯದಲ್ಲಿ ಅತ್ಯಂತ ಪ್ರಭಾವಶಾಲಿ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಅವರ ವಿರುದ್ಧ ಕಲ್ಲಿದ್ದಲು ಗಣಿಗಳಿಗೆ ಲೆವಿ ವಿಧಿಸುವುದರಲ್ಲಿ ಅಕ್ರಮ ಎಸಗಿದ್ದರು ಎಂದು ಆರೋಪಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯ ಕೈಗೊಂಡು, ಅವರನ್ನು ಬಂಧಿಸಿದೆ. ಇದಕ್ಕಿಂತ ಮೊದಲು ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿತ್ತು.
ಬಳಿಕ ಅವರನ್ನು ರಾಯ್ಪುರದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಭದ್ರತಾ ದೃಷ್ಟಿಯಿಂದ ಸಿಆರ್ಪಿಎಫ್ ಅನ್ನು ನಿಯೋಜಿಸಲಾಗಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ಟೋಬರ್ನಲ್ಲಿ ಐಎಎಸ್ ಅಧಿಕಾರಿ ಸಮೀರ್ ವಿಷ್ಣೋಯ್ರನ್ನು ಬಂಧಿಸಲಾಗಿತ್ತು.