ಬೆಂಗಳೂರು: ರಾಜ್ಯಕ್ಕೆ ಕಲ್ಲಿದ್ದಲು ಹಂಚಿಕೆ ಮಾಡುವ ವಿಚಾರದಲ್ಲಿ ಕೇಂದ್ರ ಸರಕಾರ ಸುಳ್ಳು ಹೇಳುತ್ತಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಶುಕ್ರವಾರ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್ ಕಲ್ಲಿದ್ದಲು ಹಂಚಿಕೆಗೆ ಕರ್ನಾಟಕ ಸರಕಾರ ಯಾವುದೇ ಮನವಿ ಮಾಡಿಲ್ಲ ಎಂದು ಸಂಸತ್ತಿನಲ್ಲಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಜತೆಗೆ ಪಿಯೂಷ್ ಗೋಯಲ್ ಅವರನ್ನು ಭೇಟಿ ಮಾಡಲು ಹೋಗಿ ಅವರ ಕಚೇರಿ ಬಾಗಿಲು ಕಾದು ಬಂದಿದ್ದೇವೆ. ಅಲ್ಲದೇ ತಮ್ಮ ಭೇಟಿಗೆ ಅವಕಾಶ ನೀಡುವಂತೆ ಐದು ಬಾರಿ ಪತ್ರ ಬರೆದಿದ್ದೇನೆ. ಇಂಧನ ಇಲಾಖೆಯಿಂದ 55 ಬಾರಿ ಪತ್ರ ಬರೆದಿದ್ದೇವೆ. ಪಿಯೂಷ್ ಗೋಯಲ್ ಸಮಯ ನೀಡಿದರೆ ಯಾವುದೇ ಪ್ರತಿಷ್ಠೆ ಇಲ್ಲದೇ ಅವರನ್ನು ಭೇಟಿ ಮಾಡಿ, ಕಲ್ಲಿದ್ದಲು ನೀಡುವಂತೆ ಮನವಿ ಮಾಡುವುದಾಗಿ ಹೇಳಿದರು.
10 ಲಕ್ಷ ಮೆ.ಟನ್. ವಿದೇಶಿ ಕಲ್ಲಿದ್ದಲು: ರಾಜ್ಯ ಸರಕಾರ ಕಲ್ಲಿದ್ದಲು ಸಮಸ್ಯೆ ನೀಗಿಸಲು ವಿದೇಶದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳಲು ಸಿದ್ಧªತೆ ಮಾಡಿಕೊಂಡಿದೆ. ಈಗಾಗಲೇ 10 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಖರೀದಿಗೆ ಟೆಂಡರ್ ಕರೆಯಲಾಗಿದೆ. ಶೀಘ್ರವೇ ವಿದೇಶದಿಂದ ಕಲ್ಲಿದ್ದಲು ಆಮದು ಮಾಡಿಕೊಳ್ಳುತ್ತೇವೆ. ನೇರವಾಗಿ ರಾಜ್ಯ ಸರಕಾರವೇ ಆಮದು ಮಾಡಿಕೊಳ್ಳಲು ಯಾವುದೇ ಕಾನೂನಿನ ತೊಡಕಿಲ್ಲ ಎಂದರು.
ಲೋಡ್ ಶೆಡ್ಡಿಂಗ್ ಇಲ್ಲ: ಬೇಸಿಗೆಯಲ್ಲಿಯೂ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಲೋಡ್ ಶೆಡ್ಡಿಂಗ್ ಮಾಡುವುದಿಲ್ಲ.
ಸದ್ಯ 10,133 ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಇದೆ.ಅದರಲ್ಲಿ ರಾಜ್ಯ ಸರಕಾರ ಇನ್ನೂ 284 ಮೆಗಾ ವ್ಯಾಟ್ ವಿದ್ಯುತ್ ಉಳಿತಾಯ ಮಾಡಿದೆ. ಖಾಸಗಿಯವರಿಂದ 900 ಮೆಗಾ ವ್ಯಾಟ್ ವಿದ್ಯುತ್ ಖರೀದಿ ಮಾಡಲಾಗುತ್ತಿದೆ ಎಂದರು.