Advertisement

ಪಲಾಯನವಾದವೇ ಸರಿಯೆನಿಸಿತೇ ರವಿಶಾಸ್ತ್ರಿಗೆ?

05:35 AM Nov 24, 2018 | Team Udayavani |

ಈಗಾಗಲೇ ಭಾರತ ಆಸ್ಟ್ರೇಲಿಯ ಪ್ರವಾಸದಲ್ಲಿದೆ. ನ.21ರಿಂದ 3 ಟಿ20 ಪಂದ್ಯಗಳನ್ನಾಡುವ ಭಾರತ ಡಿ.6ರಿಂದ 4 ಟೆಸ್ಟ್‌ಗಳ ಸರಣಿಯಲ್ಲಿ ಪಾಲ್ಗೊಳ್ಳುತ್ತಿದೆ. ಈ ಸಮಯದಲ್ಲಿ ಭಾರತದಿಂದ ಒಂದು ಆತ್ಮವಿಶ್ವಾಸದ ಹೇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ತಂಡದ ತರಬೇತುದಾರ ತೆಗೆದುಕೊಂಡ ನಿರೀಕ್ಷಣಾ ಜಾಮೀನು ತೀವ್ರ ನಿರಾಶೆಯನ್ನೇ ಮೂಡಿಸಿದೆ. “ಎಲ್ಲ ಟೆಸ್ಟ್‌ ತಂಡಗಳು ತಮ್ಮದೇ ನೆಲದಲ್ಲಿ ಹುಲಿಗಳೇ ಆಗಿರುತ್ತವೆ’ ಎಂಬ ರವಿಶಾಸ್ತ್ರಿ ನುಡಿಯ ಹಿಂದಿನ ಉದ್ದೇಶವೇನು ಎಂಬುದಿಲ್ಲಿ ಚರ್ಚೆಯ ವಿಷಯ. ಅಗ್ರ 3 ಆಟಗಾರರನ್ನು ಕಳೆದುಕೊಂಡು ತೀರಾ ದುರ್ಬಲವಾಗಿರುವ ಆಸ್ಟ್ರೇಲಿಯ ಪ್ರವಾಸದ ವೇಳೆ ರವಿಶಾಸ್ತ್ರಿ ಹೇಳಿದ ಈ ಮಾತುಗಳು ತೀರಾ ರಕ್ಷಣಾತ್ಮಕವಾಗಿವೆ. ಅದೇ ಹಿಂದಿನ ಪ್ರವಾಸಗಳಲ್ಲಿ ರವಿಶಾಸ್ತ್ರಿ ಆಡಿದ್ದ ಅತಿ ಉತ್ಸಾಹದ ಮಾತುಗಳಿಗೂ ಪ್ರಸ್ತುತ ಸನ್ನಿವೇಶಕ್ಕೂ ತಾಳೆ ಹಾಕಿದರೆ ಬೇರೆಯದ್ದೇ ಆದ ಲೆಕ್ಕಾಚಾರ ತೆರೆದುಕೊಳ್ಳುತ್ತದೆ. ಇದನ್ನು ವಾಸ್ತವದ ನೆಲೆಯ ವಿಶ್ಲೇಷಣೆ ಎನ್ನುವುದಕ್ಕಿಂತ ಪಲಾಯನವಾದ, ಆತ್ಮವಿಶ್ವಾಸದ ಕೊರತೆ ಎನ್ನುವುದೇ ಸೂಕ್ತ. ಪ್ರವಾಸಕ್ಕೂ ಮುನ್ನವೇ ತರಬೇತುದಾರ ನಿರೀಕ್ಷಣಾ ಜಾಮೀನು ತೆಗೆದುಕೊಂಡಿದ್ದಾರೆಂದರೆ ತಪ್ಪಾಗುವುದಿಲ್ಲ!

Advertisement

ಸತ್ಯ ಶ್ರೀಲಂಕಾದಲ್ಲಿದೆ!
ಇತ್ತ ರಕ್ಷಣಾತ್ಮಕ ಆಟ ಆಡಲು ರವಿಶಾಸ್ತ್ರಿ ಸಿದ್ಧತೆ ನಡೆಸುತ್ತಿರುವಾಗಲೇ ಪಕ್ಕದ ದೇಶ ಶ್ರೀಲಂಕಾದಲ್ಲಿ ನಡೆಯುತ್ತಿರುವ ಟೆಸ್ಟ್‌ ಸರಣಿಯ ಫ‌ಲಿತಾಂಶ ಸ್ವದೇಶಿ ವಾದವನ್ನು ಸ್ಪಷ್ಟವಾಗಿ ಅಲ್ಲಗಳೆಯುತ್ತಿತ್ತು. ಅಲ್ಲಿ ಪ್ರವಾಸಿ ಇಂಗ್ಲೆಂಡಿಗರು ಮೂರು ಟೆಸ್ಟ್‌ಗಳ ಸರಣಿಯಲ್ಲಿ ಎರಡನೇ ಪಂದ್ಯದ ವೇಳೆಗೇ 2-0 ಮುನ್ನಡೆ ಪಡೆದು ಸರಣಿಯನ್ನು ಗೆದ್ದಾಗಿತ್ತು. ಸ್ವತಃ ಶ್ರೀಲಂಕಾ ಸ್ವದೇಶಿ ನೆಲದ ಲಾಭ ಪಡೆಯಲು ದ್ವಿತೀಯ ಟೆಸ್ಟ್‌ ನಡೆದ ಪಲ್ಲೆಕೆಲೆಯಲ್ಲಿ ಸ್ಪಿನ್ನರ್‌ಗಳ ಸ್ವರ್ಗ ಸೃಷ್ಟಿಸಿತ್ತು. ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಒಂದು ಟೆಸ್ಟ್‌ನ 40ರಲ್ಲಿ 38 ವಿಕೆಟ್‌ ಸ್ಪಿನ್ನರ್‌ ಪಾಲಾಗಿತ್ತು. ಗಮನಿಸಲೇಬೇಕಾದುದೆಂದರೆ, ಶ್ರೀಲಂಕಾದ ಸ್ಪಿನ್ನರ್‌ಗಳೆದುರು ಹೆಚ್ಚು ಸಮರ್ಥವಾಗಿ ಆಡಿದ ಇಂಗ್ಲೆಂಡಿಗರು ಟೆಸ್ಟ್‌ ಗೆದ್ದರು!

ನಿಜ, ಭಾರತಕ್ಕೆ ಬಡಪಾಯಿ ಪ್ರವಾಸಿಗರು ಎಂಬ ವಿಶೇಷಣ ತಗುಲಿಹಾಕಿಕೊಂಡಿದೆ. ಮೊನ್ನೆ ಮೊನ್ನೆ 2018ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಹೋದರೆ ಅಲ್ಲಿ 1-2ರಿಂದ ಸರಣಿ ಸೋಲು. ಅತ್ತ ಇಂಗ್ಲೆಂಡ್‌ಗೆ ಹೋದಾಗಲಂತೂ 1-4ರ ತೀವ್ರ ಮುಖಭಂಗ. ಈ ಹಿನ್ನೆಲೆಯಲ್ಲಿ ನಾಳೆ ಬರಬಹುದಾದ ಟೀಕೆಗಳ ಹಿನ್ನೆಲೆಯಲ್ಲಿ ರವಿಶಾಸ್ತ್ರಿ ತಮ್ಮ “ಸ್ಥಾನ ಉಳಿಸಿಕೊಳ್ಳುವ ಹೇಳಿಕೆಯನ್ನು ಉರುಳಿಸಿದರೇ? ಕಾಂಗರೂ ಪಡೆ ಸ್ಟೀವ್‌ ಸ್ಮಿತ್‌, ಡೇವಿಡ್‌ ವಾರ್ನರ್‌ ಹಾಗೂ ಕ್ಯಾಮೆರಾನ್‌ನ್‌ ಬ್ಯಾನ್‌ಕ್ರಾಫ್ಟ್ರಂತಹ ಮೂರು ಅಗ್ರ ಆಟಗಾರರನ್ನು ನಿಷೇಧದ ಹಿನ್ನೆಲೆಯಲ್ಲಿ ಕಳೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ಸ್ಥೈರ್ಯದ ಕೊರತೆಯಲ್ಲಿರುವ ಆಸೀಸ್‌ಗೆ ಟಾನಿಕ್‌ ನೀಡುವಂತಹ ಹೇಳಿಕೆ ನೀಡುವ ಮೂಲಕ ರವಿಶಾಸ್ತ್ರಿ ಸಾಧಿಸಿದ್ದಾದರೂ ಏನು ಎಂಬ ಪ್ರಶ್ನೆ ಭಾರತೀಯರಲ್ಲಿ ಮೂಡಿದೆ.

ವಿದೇಶ ಈಗ ಹೊಸದಲ್ಲ, ದೂರವಿಲ್ಲ!
ಇವತ್ತಿಗೂ ಟೆನಿಸ್‌ ಕೂಟ ಡೇವಿಸ್‌ ಕಪ್‌ನಲ್ಲಿ ಸ್ವದೇಶದಲ್ಲಿನ ಆಟ ಫ‌ಲಿತಾಂಶವನ್ನು ಪ್ರಭಾವಿಸುವ ವಿಷಯ. ಇಲ್ಲಿ ಆತಿಥೇಯ ತಂಡ ಆಡುವ ಅಂಕಣವನ್ನು ನಿರ್ಧರಿಸುತ್ತದೆ. ವರ್ಷವಿಡೀ ಕ್ಲೇ ಕೋರ್ಟ್‌ನಲ್ಲಿ ಆಡುವ ಯುರೋಪ್‌ ಆಟಗಾರರನ್ನು ಚಿತ್‌ ಮಾಡಲು ಭಾರತದಂತಹ ದೇಶ ಹುಲ್ಲಿನ ಅಂಕಣ ಸಿದ್ಧಪಡಿಸುವುದಕ್ಕೆ ಡೇವಿಸ್‌ ಕಪ್‌ನಲ್ಲಿ ಅವಕಾಶವಿದೆ!  

ಐಸಿಸಿ ಕ್ರಿಕೆಟ್‌ ವ್ಯವಸ್ಥೆ ಬದಲಾಗಿದೆ. ಇಂದು ಟೆಸ್ಟ್‌ ಕ್ರಿಕೆಟ್‌ನಲ್ಲಿ ಸ್ವದೇಶಿ ಅಂಪೈರ್‌ಗಳಿಗೆ‌ ಅವಕಾಶವಿಲ್ಲ. ತಟಸ್ಥ ಅಂಪೈರ್‌ಗಳ ಜೊತೆಗೆ ಡಿಆರ್‌ಎಸ್‌ ತರಹದ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಿದೆ. ಇಲ್ಲಿ ಅಂಪೈರ್‌ ತೀರ್ಪಿನ ವಿರುದ್ಧ ಆಕ್ಷೇಪ ವ್ಯಕ್ತಪಡಿಸಲು ಸಾಧ್ಯ. ಹಿಂದಿನಂತೆ ಹಡಗಿನಲ್ಲಿ ತೆರಳಿ ತಿಂಗಳುಗಟ್ಟಲೆ ಮನೆಯವರನ್ನು ಬಿಟ್ಟು ಆಟಗಾರರು ಆಟ ಆಡುತ್ತಿಲ್ಲ. ಬಿಸಿಸಿಐನಂತಹ ಮಡಿವಂತಿಕೆಯ ವ್ಯವಸ್ಥೆ ಕೂಡ ಆಟಗಾರರ ಪತ್ನಿ ಬಿಡಿ, ಗೆಳತಿಗೂ ಜೊತೆಯಲ್ಲಿರುವ ಅವಕಾಶ ಕಲ್ಪಿಸಿದೆ. ಐಪಿಎಲ್‌ನಂತಹ ಸ್ವದೇಶದ ಟೂರ್ನಿಯನ್ನು ನಾವು ದಕ್ಷಿಣ ಆಫ್ರಿಕಾದಲ್ಲೂ ಆಡಬಲ್ಲೆವು. ಒಂದು ಕಾಲದಲ್ಲಿ ಭಾರತದ ವಾತಾವರಣಕ್ಕೆ ವೇಗದ ಪಿಚ್‌ ತಯಾರಿಸಲೇ ಸಾಧ್ಯವಿಲ್ಲ ಎಂಬ ವಾದವನ್ನು ಈಗ ವಿಜ್ಞಾನ ತಳ್ಳಿಹಾಕಿದೆ. ಈ ಕಾಲದಲ್ಲಿ ವಿದೇಶಿ ಸರಣಿ ಗೆಲುವು ಆಟಗಾರರ ವೃತ್ತಿಪರ ಪ್ರದರ್ಶನವನ್ನು ಅವಲಂಬಿಸಿದೆ. 

Advertisement

ಗಮನ ಕೊಡಿ, ರವಿಶಾಸ್ತ್ರಿ!
ಭಾರತದ ವಿದೇಶಿ ನೆಲದ ಟೆಸ್ಟ್‌ ದಾಖಲೆ ಕಳಪೆಯಾಗಿದೆ ಎಂಬುದು ನಿಜವೇ. ಒಬ್ಬ ಕೋಚ್‌ ಆಗಿ ರವಿಶಾಸ್ತ್ರಿ ಗಮನ ಕೊಡಬೇಕಾದ ಅಂಶಗಳು ಬೇರೆಯಿವೆ. 2011ರ ನಂತರ ಆಸೀಸ್‌, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಹಾಗೂ ನ್ಯೂಜಿಲೆಂಡ್‌ಗಳ ಕೆಳ ಹಂತದ ಬ್ಯಾಟ್ಸ್‌ಮನ್‌ಗಳು ಭಾರತದ ವಿರುದ್ಧ ಸರಾಸರಿ 42.9 ರನ್‌ಗಳನ್ನು ಕೂಡಿಸಿದ್ದಾರೆ. ಅದೇ ದಕ್ಷಿಣ ಆಫ್ರಿಕಾ ಹಾಗೂ ಆಸೀಸ್‌ ಬೌಲರ್‌ಗಳು ಎದುರಾಳಿ ತಂಡದ ಬಾಲಂಗೋಚಿಗಳಿಗೆ ಅನುಕ್ರಮವಾಗಿ 21.6 ಮತ್ತು 19.4 ರನ್‌ ಗಳಿಸಲು ಅವಕಾಶ ನೀಡಿದ್ದಾರೆ. ಏಳು ಅಥವಾ ಅದಕ್ಕಿಂತ ಕೆಳಗಿನ ವಿಕೆಟ್‌ಗೆ ಭಾರತ 9 ಶತಕ ಹಾಗೂ 18 ಅರ್ಧ ಶತಕದ ಜೊತೆಯಾಟ ಬಿಟ್ಟುಕೊಟ್ಟಿರುವುದು ಗಮನಾರ್ಹ. ಬೌಲಿಂಗ್‌ ಸುಧಾರಣೆ ಎಲ್ಲಿ ಆಗಬೇಕು ಎಂಬುದು ರವಿಶಾಸ್ತ್ರಿಗೆ ಗೊತ್ತಾಗಬೇಕು!

ಸಂದರ್ಭಗಳನ್ನು ಕೈಬಿಟ್ಟರೆ ಗೆಲುವು ಸಿಗುವುದಿಲ್ಲ. 2011ರ ಮೆಲ್ಬರ್ನ್, 2011ರ ಟ್ರೆಂಟ್‌ಬ್ರಿಡ್ಜ್, 2013ರ ಜೊಹಾನ್ಸ್‌ಬರ್ಗ್‌, 2014ರ ವೆಲ್ಲಿಂಗ್ಟನ್‌ಗಳಲ್ಲಿ ಬೌಲರ್‌ಗಳು ಸಂಕಷ್ಟದಲ್ಲಿರುವ ಎದುರಾಳಿಗಳ ಮೇಲೆ ಒತ್ತಡ ಹೇರದೆ ವಿಫ‌ಲರಾದರೆ 2014ರ ಡರ್ಬನ್‌, ಅಡಿಲೇಡ್‌ ಟೆಸ್ಟ್‌ಗಳಲ್ಲಿ, 2018ರ ಸೆಂಚುರಿಯನ್‌, ಬರ್ಮಿಂಗ್‌ಹ್ಯಾಮ್‌ಗಳಲ್ಲಿ ಬ್ಯಾಟ್ಸ್‌ಮನ್‌ಗಳು ಕೈಕೊಟ್ಟರು. ಕೈಗೆ ಬಂದ ತುತ್ತನ್ನು ಬಾಯಿಗಿಟ್ಟುಕೊಳ್ಳುವ ಪಾಠವನ್ನೇ ರವಿಶಾಸ್ತ್ರಿ ಮಾಡಬೇಕಿರುವುದು.

ಭಾರತದ ಬದಲಿ ಆಟಗಾರರು ವಿಶ್ವಮಟ್ಟದಲ್ಲಿ ನಿರಾಸೆ ಮೂಡಿಸುತ್ತಿದ್ದಾರೆ. 2011ರಲ್ಲಿ ಜಹೀರ್‌ ಖಾನ್‌ ಗಾಯಗೊಂಡರೆ ಆರ್‌.ಪಿ.ಸಿಂಗ್‌ ಅವರ ಜಾಗ ತುಂಬುತ್ತಾರೆ. ಪ್ರದರ್ಶನ ನೀರಸ. ಇಶಾಂತ್‌ ಶರ್ಮ ಗಾಯಾಳುವಾದಾಗ ಒಳಬರುವ ವರುಣ್‌ ಏರಾನ್‌ ಎದುರಾಳಿಗೆ ಸವಾಲು ಎನ್ನಿಸುವುದೇ ಇಲ್ಲ. ಒಂದು ತಂಡದ ಬೆಂಚ್‌ ಸಾಮರ್ಥ್ಯ ಹೆಚ್ಚದಿದ್ದರೆ ಸ್ವದೇಶವೂ ಬಿಸಿ ತುಪ್ಪವಾಗುತ್ತದೆ. ವಿದೇಶ ನೆಲದಲ್ಲಿ ಅಭ್ಯಾಸ ಪಂದ್ಯಗಳನ್ನಾಡದಿದ್ದಾಗ ಆಗುವ ಅಪಾಯಗಳನ್ನು ನಾವು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌ನ‌ಲ್ಲಿ ಕಂಡಿದ್ದೇವೆ. ಬಿಸಿಸಿಐ ಅರ್ಥ ಮಾಡಿಕೊಂಡಿದೆಯೇ? ಕಾಂಗರೂ ವಿರುದ್ಧ 4 ಟೆಸ್ಟ್‌ ಆಡುವ ಮುನ್ನ ಭಾರತ ಅಭ್ಯಾಸಕ್ಕೆ ಮೂರು ಟಿ20 ಹಾಗೂ ಒಂದು ತ್ರಿದಿನ ಪಂದ್ಯಗಳನ್ನಾಡಲಿದೆ! ರವಿ ಶಾಸ್ತ್ರಿಯವರಿಂದ ಈ ನಿಟ್ಟಿನಲ್ಲಿ ಒಂದು ಒಳ್ಳೆಯ ಇನಿಂಗ್ಸ್‌ ಬರಬೇಕಿದೆ!

ಮಾ.ವೆಂ.ಸ.ಪ್ರಸಾದ್‌ 

Advertisement

Udayavani is now on Telegram. Click here to join our channel and stay updated with the latest news.

Next