Advertisement

 ಸರ್ಕಾರಿ ಪಿಯು ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್‌

06:30 AM Jul 13, 2018 | |

ಬೆಂಗಳೂರು : ಸರ್ಕಾರಿ ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸರ್ಕಾರದಿಂದಲೇ ತರಬೇತಿ ಒದಗಿಸಲು ಚಿಂತನೆ ನಡೆಯುತ್ತಿದೆ.

Advertisement

ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ವಿದ್ಯಾರ್ಥಿಗಳಿಗೆ ಈ ವಿಶೇಷ ತರಬೇತಿ ನೀಡುವ ನಿಟ್ಟಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜಂಟಿಯಾಗಿ ಪ್ರಸ್ತಾವನೆ ಸಿದ್ಧಪಡಿಸುತ್ತಿವೆ. ಶೀಘ್ರದಲ್ಲೇ ಈ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ. ಸರ್ಕಾರದಿಂದ ಒಪ್ಪಿಗೆ ಸಿಕ್ಕ ಕೂಡಲೇ ತರಬೇತಿ ಆರಂಭವಾಗಲಿದೆ.

ವೈದ್ಯಕೀಯ, ದಂತವೈದ್ಯಕೀಯ, ಇಂಜಿನಿಯರಿಂಗ್‌, ಆರ್ಕಿಟೆಕ್ಚರ್‌ ಮೊದಲಾದ ವೃತ್ತಿಪರ ಕೋರ್ಸ್‌ಗಳು, ಎಂಬಿಎ, ಲೆಕ್ಕಪರಿಶೋಧನೆ, ಐಐಟಿ, ಐಐಎಂ ಹೀಗೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು ಬೇಕಾದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಟಿಇ), ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ನೀಟ್‌),  ಜೆಇಇ, ಜೆಇಇ ಅಡ್ವಾನ್ಸ್‌, ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಅರ್ಹತೆ ಪಡೆಯಲು ಬೇಕಾದ ಕ್ಲಾéಟ್‌ ಮೊದಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯನ್ನು ಸರ್ಕಾರಿ ಕಾಲೇಜಿನ ಮಕ್ಕಳಿಗೆ ನೀಡಲು ಉದ್ದೇಶಿಸಲಾಗಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಈ ಯೋಜನೆ ರೂಪಿಸಲಾಗುತ್ತಿದೆ.

ಸರ್ಕಾರಿ ಕಾಲೇಜುಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೆಚ್ಚಿರುತ್ತಾರೆ. ಅಧಿಕ ಹಣ ನೀಡಿ ಖಾಸಗಿ ಟ್ಯೂಷನ್‌ ಅಥವಾ ಕೋಚಿಂಗ್‌ ಕೇಂದ್ರಗಳಿಗೆ ಹೋಗಲು ಅವರಿಂದ ಸಾಧ್ಯವಾಗುವುದಿಲ್ಲ ಎಂಬುದನ್ನು ಅರ್ಥೈಸಿಕೊಂಡಿರುವ ಇಲಾಖೆ, ಸ್ಪರ್ಧಾತ್ಮಕ ಪರೀಕ್ಷೆ ಪ್ರಸ್ತಾವನೆ ತಯಾರಿಸುತ್ತಿದೆ.

2017-18ನೇ ಸಾಲಿನಲ್ಲಿ ಇಂಗ್ಲಿಷ್‌ ವ್ಯಾಕರಣ ಮತ್ತು ಭಾಷಾ ಶುದ್ಧಿಗಾಗಿ ಭಾನುವಾರದ ವಿಶೇಷ ತರಗತಿ ಏರ್ಪಡಿಸಲಾಗಿತ್ತು. ಅದೇ ಮಾದರಿಯಲ್ಲಿ ವಿಜ್ಞಾನ,  ವಾಣಿಜ್ಯ ಹಾಗೂ ಕಲಾ ವಿಭಾಗದ ಪಿಯು ವಿದ್ಯಾರ್ಥಿಗಳಿಗೆ ಅವರ ಆಸಕ್ತಿಗೆ ಅನುಸಾರವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೋಚಿಂಗ್‌ ನೀಡಲು ಇಲಾಖೆ ಸಿದ್ಧತೆ ನಡೆಸುತ್ತಿದೆ ಎಂದು ಇಲಾಖೆಯ ಉನ್ನತ ಮೂಲ “ಉದಯವಾಣಿ’ಗೆ ಖಚಿತಪಡಿಸಿದೆ.

Advertisement

ತರಬೇತಿ ಹೇಗೆ?
ತಾಲೂಕು ಕೇಂದ್ರಗಳಿಗೆ ಈಗಾಗಲೇ ಇಲಾಖೆಯಿಂದ ಲ್ಯಾಪ್‌ಟಾಪ್‌ ಮತ್ತು ಪ್ರೊಜೆಕ್ಟರ್‌ ನೀಡಲಾಗಿದೆ. ಇದನ್ನು ಬಳಸಿಕೊಂಡು, ಪರೀಕ್ಷಾ ಪ್ರಾಧಿಕಾರದ ನೆರವಿನೊಂದಿಗೆ ತಜ್ಞರ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿಯ ವಿಡಿಯೋ ಕ್ಲಿಪ್ಪಿಂಗ್‌ ಸಿದ್ಧಪಡಿಸಿ, ಆ ಮೂಲಕ ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತದೆ. ಆ ವೇಳೆ ವಿದ್ಯಾರ್ಥಿಗಳಿಗೆ ಯಾವುದೇ ಪ್ರಶ್ನೆ ಅಥವಾ ಸಂಶಯಗಳಿದ್ದರೂ ತರಬೇತುದಾರರಲ್ಲಿ ಕೇಳಿ ಪರಿಹರಿಸಿಕೊಳ್ಳಬಹುದಾದ ವ್ಯವಸ್ಥೆ ಮಾಡುವ ಚಿಂತನೆಯೂ ಇದೆ. ಇದರ ಜತೆಗೆ ಪಿಯು ಇಲಾಖೆಯು, ಪ್ರಾಧ್ಯಾಪಕರಿಗೆ ವಸತಿ ಸಹಿತ ತರಬೇತಿ ನೀಡಿ, ಸ್ಪರ್ಧಾತ್ಮಕ ಪರೀಕ್ಷೆ ಪಠ್ಯಕ್ರಮ, ಅಗತ್ಯ ಸಾಮಗ್ರಿಗಳ ಮಾಹಿತಿ ಒದಗಿಸುವ ಯೋಜನೆ ಹೊಂದಿದೆ. ತರಬೇತಿ ಪಡೆದ ಪ್ರಾಧ್ಯಾಪಕರ ಮೂಲಕ ವಿದ್ಯಾರ್ಥಿಗಳಿಗೆ ಕೋಚಿಂಗ್‌ ನೀಡಲಾಗುತ್ತದೆ.

ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ನೀಡಲು ಬೇಕಾದ ಪ್ರಸ್ತಾವನೆ ಸಲ್ಲಿಸಲು ಸರ್ಕಾರದಿಂದ ನಿರ್ದೇಶನ ಬಂದಿದೆ. ಅದರಂತೆ, ಪ್ರಾಧಿಕಾರದ ಅಧಿಕಾರಿಗಳ ಜತೆಗೆ ಚರ್ಚಿಸಿ ಪ್ರಸ್ತಾವನೆ ಸಿದ್ಧಪಡಿಸುತ್ತಿದ್ದೇವೆ.
– ಸಿ.ಶಿಖಾ, ನಿರ್ದೇಶಕಿ, ಪಿಯು ಇಲಾಖೆ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next