Advertisement

Mumbai Indians ನಾಯಕತ್ವ ಬದಲಾವಣೆಗೆ ಕಾರಣ ಹೇಳಿದ ಕೋಚ್; ಇದು ತಪ್ಪು ಎಂದ ರೋಹಿತ್ ಪತ್ನಿ

02:40 PM Feb 06, 2024 | Team Udayavani |

ಮುಂಬೈ: 2024ರ ಐಪಿಎಲ್ ಗೆ ತಯಾರಿ ನಡೆಸುತ್ತಿರುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಕೆಲ ತಿಂಗಳ ಹಿಂದೆ ಅಚಾನಕ್ ಆಗಿ ನಾಯಕತ್ವ ಬದಲಾವಣೆ ಮಾಡಿತ್ತು. ದಶಕಗಳ ಕಾಲ ನಾಯಕತ್ವ ವಹಿಸಿದ್ದ ಮತ್ತು ಐದು ಪ್ರಶಸ್ತಿ ಗೆದ್ದಿದ್ದ ರೋಹಿತ್ ಶರ್ಮಾ ಅವರ ಬದಲಿಗೆ ಹಾರ್ದಿಕ್ ಪಾಂಡ್ಯ ಅವರಿಗೆ ಪಟ್ಟ ಕಟ್ಟಿದೆ. ಇದರಿಂದ ಬಹಳಷ್ಟು ಮುಂಬೈ ಇಂಡಿಯನ್ಸ್ ಅಭಿಮಾನಿಗಳು ನಿರಾಸೆಗೊಂಡಿದ್ದರು.

Advertisement

ಈ ನಾಯಕತ್ವ ಬದಲಾವಣೆ ಬಗ್ಗೆ ಫ್ರಾಂಚೈಸಿ ಅಥವಾ ಸಂಬಂಧಪಟ್ಟ ಯಾರೂ ಇದುವರೆಗೆ ತುಟಿ ಪಿಟಿಕ್ ಎಂದಿರಲಿಲ್ಲ. ಆದರೆ ಇದೀಗ ಮುಂಬೈ ಹೆಡ್ ಕೋಚ್ ಮಾರ್ಕ್ ಬೌಚರ್ ಅವರು ಮೊದಲ ಬಾರಿಗೆ ಇದೀಗ ಮಾತನಾಡಿದ್ದಾರೆ. ಪಾಡ್ ಕಾಸ್ಟ್ ಒಂದರಲ್ಲಿ ಮಾತನಾಡಿದ ಬೌಚರ್, ನಾಯಕತ್ವ ಬದಲಾವಣೆಯು ಸಂಪೂರ್ಣವಾಗಿ ಕ್ರಿಕೆಟಿಂಗ್ ನಿರ್ಧಾರ ಎಂದಿದ್ದಾರೆ.

“ಇದು ಸಂಪೂರ್ಣವಾಗಿ ಕ್ರಿಕೆಟ್ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಹಾರ್ದಿಕ್ ಅವರನ್ನು ಆಟಗಾರನಾಗಿ ಮರಳಿ ಪಡೆಯಲು ನಾವು ವಿಂಡೋ ಅವಧಿಯನ್ನು ನೋಡಿದ್ದೇವೆ. ನನಗೆ ಇದು ಪರಿವರ್ತನೆಯ ಹಂತವಾಗಿದೆ. ಭಾರತದಲ್ಲಿ ಬಹಳಷ್ಟು ಜನರಿಗೆ ಅರ್ಥವಾಗುತ್ತಿಲ್ಲ, ಜನರು ಸಾಕಷ್ಟು ಭಾವೋದ್ರಿಕ್ತರಾಗುತ್ತಾರೆ. ಇದರಿಂದ ಭಾವನೆಗಳನ್ನು ದೂರವಿಡಿ. ಇದು ಕೇವಲ ಕ್ರಿಕೆಟ್‌ ಗೆ ಸಂಬಂಧಿಸಿದ ನಿರ್ಧಾರವಾಗಿದೆ ಎಂದು ನಾನು ಭಾವಿಸುತ್ತೇನೆ” ಎಂದರು.

“ಈ ನಿರ್ಧಾರವು ಒಬ್ಬ ಆಟಗಾರನಾಗಿ ರೋಹಿತ್‌ ಶರ್ಮಾರಿಂದ ಅತ್ಯುತ್ತಮವಾದದ್ದನ್ನು ಹೊರತರಲಿದೆ ಎಂದು ನಾನು ಭಾವಿಸುತ್ತೇನೆ. ಅವರು ಜವಾಬ್ದಾರಿಯಿಂದ ಹೊರಗೆ ಹೋಗಿ ತನ್ನ ಆಟವನ್ನು ಆನಂದಿಸಿ, ಉತ್ತಮ ಸ್ಕೋರ್ ಮಾಡಲಿ” ಎಂದು ಮಾರ್ಕ್ ಬೌಚರ್ ಅವರು ಸ್ಮ್ಯಾಶ್ ಸ್ಪೋರ್ಟ್ಸ್ ಪಾಡ್‌ ಕಾಸ್ಟ್‌ ನಲ್ಲಿ ಹೇಳಿದರು.

Advertisement

“ರೋಹಿತ್ ಅವರು ಅದ್ಭುತ ವ್ಯಕ್ತಿ. ನನ್ನ ಪ್ರಕಾರ ಅವನು ಹಲವು ಸಮಯದಿಂದ ನಾಯಕನಾಗಿದ್ದಾನೆ. ಮುಂಬೈ ಇಂಡಿಯನ್ಸ್‌ ಗಾಗಿ ಅವನು ನಿಜವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾನೆ. ಈಗ ಅವನು ಭಾರತ ತಂಡವನ್ನೂ ಸಹ ಮುನ್ನಡೆಸುತ್ತಾನೆ. ಆದರೆ ಬ್ಯಾಟಿಂಗ್ ನಲ್ಲಿ ಇತ್ತೀಚೆಗೆ ಕೆಲವು ಅತ್ಯುತ್ತಮ ಸೀಸನ್ ಗಳನ್ನು ಹೊಂದಿರಲಿಲ್ಲ, ಆದರೆ ಅವರು ನಾಯಕನಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ” ಎಂದಿದ್ದಾರೆ.

ಮಾರ್ಕ್ ಬೌಚರ್ ಅವರು ನೂತನ ನಾಯಕ ಹಾರ್ದಿಕ್ ಪಾಂಡ್ಯ ಬಗ್ಗೆಯೂ ಮಾತನಾಡಿದ್ದಾರೆ. “ಅವನು ಮುಂಬೈ ಇಂಡಿಯನ್ಸ್ ಹುಡುಗ. ಅವನು ಇತರ ಫ್ರಾಂಚೈಸಿಗೆ ಹೋದರು, ಮೊದಲ ವರ್ಷದಲ್ಲಿ ಪ್ರಶಸ್ತಿಯನ್ನು ಗೆದ್ದರು, ಅವರ ಎರಡನೇ ವರ್ಷದಲ್ಲಿ ರನ್ನರ್ ಅಪ್ ಆದರು. ಆದ್ದರಿಂದ ನಿಸ್ಸಂಶಯವಾಗಿ ಕೆಲವು ಉತ್ತಮ ನಾಯಕತ್ವದ ಕೌಶಲ್ಯಗಳಿವೆ,” ಬೌಚರ್ ಹೇಳಿದರು.

ರಿತಿಕಾ ಅಸಮಾಧಾನ: ಸ್ಮ್ಯಾಶ್ ಸ್ಪೋರ್ಟ್ಸ್ ಪಾಡ್‌ ಕಾಸ್ಟ್‌ ನ ಇನ್ಸ್ಟಾಗ್ರಾಂ ಪೋಸ್ಟ್ ಗೆ ರೋಹಿತ್ ಶರ್ಮಾ ಪತ್ನಿ ರಿತಿಕಾ ಪ್ರತಿಕ್ರಿಯೆ ನೀಡಿದ್ದಾರೆ. ಪೋಸ್ಟ್ ಗೆ ಕಮೆಂಟ್ ಮಾಡಿರುವ ರಿತಿಕಾ, “ಇದರಲ್ಲಿ ಅನೇಕ ವಿಷಯಗಳು ತಪ್ಪಾಗಿದೆ” ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next