Advertisement

ಕೋಚ್‌ ಹುದ್ದೆ: ರವಿಶಾಸ್ತ್ರಿ  ಆಯ್ಕೆ ಸುಗಮ?

03:35 AM Jun 29, 2017 | |

ಮಂಗಳೂರು: ರವಿಶಾಸ್ತ್ರಿ ಅವರು ಭಾರತೀಯ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಗಿ ಆಯ್ಕೆಯಾಗಲಿದ್ದಾರೆಯೇ ? ಬುಧವಾರದ ಕೆಲವು ಬೆಳವಣಿಗೆಗಳನ್ನು ಗಮನಿಸಿದರೆ ಶಾಸ್ತ್ರಿ ಅವರ ಆಯ್ಕೆಯ ಅವಕಾಶಗಳು ಹೆಚ್ಚಾಗಿವೆ ಎಂಬ ತೀರ್ಮಾನಕ್ಕೆ ಬರಬಹುದಾಗಿದೆ.

Advertisement

ರವಿಶಾಸ್ತ್ರಿ ಅವರು ಕಳೆದ ಮಾರ್ಚ್‌ 1ರಂದು ಕಾರ್ಕಳ ಕರ್ವಾಲು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಸತತ ಏಳನೇ ವರ್ಷದಲ್ಲಿ ವಿಶೇಷ ಪೂಜೆ ಸಲ್ಲಿಸಲು ಆಗಮಿಸಿದ್ದರು. ಆ ಸಂದರ್ಭದಲ್ಲಿ ಲೋಕಾಭಿರಾಮವಾಗಿ ಮಾತನಾಡುತ್ತಾ “ಭಾರತೀಯ ಕ್ರಿಕೆಟ್‌ ತಂಡಕ್ಕೆ ಸೇವೆ ಸಲ್ಲಿಸುವ ಯಾವುದೇ ಅವಕಾಶಗಳನ್ನು ನಾನು ಸ್ವೀಕರಿಸುತ್ತೇನೆ’ ಎಂದು ಹೇಳಿದ್ದರು. ಮುಂದಿನ ದಿನಗಳಲ್ಲಿ ಈ ಅವಕಾಶ ಬರಬಹುದು ಎಂದು ನಿರೀಕ್ಷೆ ಅವರ ಮಾತಿನಲ್ಲಿತ್ತು.

2014ರಿಂದ 2016ರ ಜೂನ್‌ವರೆಗೆ ಅವರು ಟೀಂ ಇಂಡಿಯಾದ ಡೈರೆಕ್ಟರ್‌ ಆಗಿದ್ದರು. ಈ ಅವಧಿಯಲ್ಲಿ ಭಾರತೀಯ ಕ್ರಿಕೆಟ್‌ ತಂಡ ಟೆಸ್ಟ್‌ ಏಕದಿನ ಟಿ-20 ಸರಣಿಗಳಲ್ಲಿ ಗಮನಾರ್ಹ ಸಾಧನೆ ಮಾಡಿತ್ತು. ವಿಶೇಷವಾಗಿ, ಟೀಂ ಇಂಡಿಯಾದ ಆತ್ಮಸ್ಥೈರ್ಯ ಹೆಚ್ಚಳಕ್ಕೆ ಶಾಸ್ತ್ರಿ ಸ್ಫೂರ್ತಿಯಾಗಿದ್ದರು. ಮಾಧ್ಯಮಗಳೆಲ್ಲ ಈಗಾಗಲೇ ವಿಶ್ಲೇಷಿಸಿದಂತೆ, ವಿರಾಟ್‌ ಕೊಹ್ಲಿ ಅವರ ಅತ್ಯಪೂರ್ವ ವಿಕಸನಕ್ಕೆ ಶಾಸ್ತ್ರಿ ಬೆಂಬಲವಾಗಿದ್ದರು.

ಇಂಗ್ಲೆಂಡಿನಲ್ಲಿ  ಶಾಸ್ತ್ರಿ
ರವಿಶಾಸ್ತ್ರಿ ಅವರನ್ನು ಕ್ರಿಕೆಟ್‌ ಸಲಹಾ ಸಮಿತಿ ಸದಸ್ಯ ಸಚಿನ್‌ ತೆಂಡುಲ್ಕರ್‌ ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ಈ ಹಿಂದೆ ಅನಿಲ್‌ ಕುಂಬ್ಳೆ ಅವರು ಕೋಚ್‌ ಆಗಿ ಆಯ್ಕೆಯಾದಾಗಲೂ ಸಚಿನ್‌ ಬೆಂಬಲ ಶಾಸ್ತ್ರಿಗಿತ್ತು. ಆದರೆ, ಗಂಗೂಲಿ ಬೆಂಬಲ ನೀಡಿರಲಿಲ್ಲ. (2016ರಲ್ಲಿ ಕೋಚ್‌ ಆಗಿ ಆಯ್ಕೆಯಾದ ಕುಂಬ್ಳೆ ಅವರು ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರೂ- ಕೊಹ್ಲಿ ಸಹಿತ ಕೆಲವು ಆಟಗಾರರ ಮುನಿಸಿನಿಂದಾಗಿ ರಾಜೀನಾಮೆ ನೀಡಿದ ಪ್ರಸಂಗ ಸಂಭವಿಸಿತ್ತು.

ಶಾಸ್ತ್ರಿ ಅವರು ಚಾಂಪಿಯನ್ಸ್‌ ಟ್ರೋಫಿ ಪಂದ್ಯಾವಳಿಯಲ್ಲಿ ವೀಕ್ಷಕ ವಿವರಣೆಗಾರರಾಗಿದ್ದರು. ಈಗ ಅವರು ಇಂಗ್ಲೆಂಡಿನಲ್ಲಿ “ರಜಾದಿನ’ಗಳಲ್ಲಿದ್ದಾರೆ. ಕ್ರಿಕೆಟ್‌ ತಜ್ಞರಿಂದ, ವಿಶೇಷವಾಗಿ ಸಚಿನ್‌ರ ಒತ್ತಡದಿಂದಾಗಿ ಅವರು ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅರ್ಜಿ ಸಲ್ಲಿಸುವ ಅವಧಿಯನ್ನು ಬಿಸಿಸಿಐ ಜು. 9ಕ್ಕೆ ವಿಸ್ತರಿಸಿದೆೆ.

Advertisement

ತಂಡದ ಹಿತ ಮುಖ್ಯ
ಭಾರತೀಯ ತಂಡದ ಸಮಗ್ರ ಹಿತಾಸಕ್ತಿಯೇ ಮುಖ್ಯ ಎಂದಿರುವ ಶಾಸ್ತ್ರಿ ಅವರು 2019ರ ಏಕದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾವೇ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಹಿನ್ನೆಲೆಗಳನ್ನು ಗಮನಿಸಿದರೆ; ಶಾಸ್ತ್ರಿ ಅವರು ಕೋಚ್‌ ಹುದ್ದೆಗೆ ಅರ್ಜಿ ಸಲ್ಲಿಸುತ್ತಾರೆ. ಅವರ ಆಯ್ಕೆಯ ಹಾದಿ ವಸ್ತುಶಃ ಸುಗಮವಾಗಿದೆ.

ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next