ಹೊಸದಿಲ್ಲಿ : ‘ಬಾಕ್ಸರ್ ನರೇಂದ್ರ ಮೋದಿ ಅವರು 2014ರಲ್ಲಿ ದೇಶದಲ್ಲಿನ ನಿರುದ್ಯೋಗ ಮತ್ತು ಭ್ರಷ್ಟಾಚಾರವನ್ನು ತೊಲಗಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದಿದ್ದರು. ಆದರೆ ಅವರು ಆ ಕೆಲಸ ಮಾಡುವ ಬದಲು ತಮ್ಮ ಕೋಚ್ ಎಲ್ ಕೆ ಆಡ್ವಾಣಿ ಅವರಿಗೆ ಮುಖಕ್ಕೆ ಪಂಚ್ ಕೊಟ್ಟರು’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟಾಂಗ್ ನೀಡಿದ್ದಾರೆ.
ಹಿರಿಯ ಬಿಜೆಪಿ ನಾಯಕ ಆಡ್ವಾಣಿ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗಿದೆ ಎಂದು ಆರೋಪಿಸಿ ರಾಹುಲ್ ಈ ಹಿಂದೆಯೂ ಹಲವಾರು ಬಾರಿ ಪ್ರಧಾನಿ ಮೋದಿ ವಿರುದ್ಧ ವಾಕ್ ದಾಳಿ ನಡೆಸಿದ್ದರು.
ಹರಿಯಾಣದ ಭಿವಾನಿಯಲ್ಲಿ ಚುನಾವಣಾ ರಾಲಿಯಲ್ಲಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, “2014ರಲ್ಲಿ ಭ್ರಷ್ಟಾಚಾರ ಮತ್ತು ನಿರುದ್ಯೋಗದ ವಿರುದ್ಧ ಹೋರಾಡಲು ಅಖಾಡಕ್ಕೆ ಇಳಿದು ಅಧಿಕಾರಕ್ಕೆ ಬಂದಿದ್ದ ಮೋದಿ ಮೊದಲು ತಮ್ಮ ಕೋಚ್ ಆಡ್ವಾಣಿ ಅವರ ಮುಖಕ್ಕೆ, ಅನಂತರ ಗಡ್ಕರೀ ಜೀ ಮತ್ತು ಜೇಟ್ಲೀ ಜಿ ಅವರಿಗೂ ಪಂಚ್ ನೀಡಿ ಬಳಿಕ ಜನಸಮೂಹಕ್ಕೆ ನುಗ್ಗಿ ರೈತರಿಗೆ ಮತ್ತು ಸಣ್ಣ ವರ್ತಕರಿಗೆ ಪಂಚ್ ನೀಡಿದರು” ಎಂದು ವ್ಯಂಗ್ಯವಾಡಿದರು.
ಬಿಜೆಪಿಯಲ್ಲಿ ಹಿರಿಯ ನಾಯಕ ಆಡ್ವಾಣಿ ಅವರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಟೀಕಿಸುತ್ತಲೇ ಬಂದಿರುವ ರಾಹುಲ್ ಗಾಂಧಿ, ಕಳೆದ ಎಪ್ರಿಲ್ ನಲ್ಲಿ ಉತ್ತರಾಖಂಡದ ರಾಲಿಯಲ್ಲಿ “ಮೋದಿ ತಮ್ಮ ರಾಜಕೀಯ ಗುರು ಆಡ್ವಾಣಿಗೆ ಅಖಾಡೆಯಲ್ಲೇ ಪಂಚ್ ನೀಡಿದ್ದಾರೆ’ ಎಂದು ಹೇಳಿದ್ದರು.