Advertisement

ಮಹಿಳಾ ಸ್ವಾವಲಂಬನೆಗೆ ಸಹಕಾರಿ ಕ್ಷೇತ್ರ ಕೊಡುಗ

12:03 PM Nov 20, 2017 | |

ಕೆಂಗೇರಿ: ಮಹಿಳೆಯರು ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ಸಹಕಾರಿ ಕ್ಷೇತ್ರ ಮಹತ್ವದ ಕೊಡುಗೆ ನೀಡುವ ಮೂಲಕ ಆರ್ಥಿಕ, ಸಾಮಾಜಿಕ ಪ್ರಗತಿಗೆ ಸಹಕಾರಿಯಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ ಅಭಿಪ್ರಾಯಪಟ್ಟರು.

Advertisement

ಕೆಂಗೇರಿ ಉಪನಗರ ಬಂಡೇಮಠದಲ್ಲಿ ಭಾನುವಾರ ನಡೆದ 64ನೇ ಅಖೀಲ ಭಾರತ ಸಹಕಾರ ಸಪ್ತಾಹ ಹಾಗು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಪುರುಷ ಪ್ರಧಾನ ಸಮಾಜ ದಲ್ಲಿ ಮಹಿಳೆ ಮನೆಗೆ ಮಾತ್ರ ಸೀಮಿತ
ವಾಗದೇ ಸಮಾಜದ ಅಭಿವೃದ್ಧಿಗೂ ದುಡಿಯುತ್ತಾಳೆ, ಅಧಿಕಾರವನ್ನೂ ನಡೆಸುತ್ತಾಳೆ ಎಂದು ವಿಶ್ವಕ್ಕೆ ಸಾರಿದ ದಿಟ್ಟ ಮಹಿಳೆ ಇಂದಿರಾ ಗಾಂಧಿಯವರ ಕಾರ್ಯವೈಖರಿ ಇಂದಿಗೂ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಶ್ಚಿಮಾತ್ಯ ದೇಶಗಳಲ್ಲಿ ಮಹಿಳೆಯರಿಗೆ ಸಮಾನತೆಬೇಕೆಂದು ಪ್ರತಿಪಾದಿಸುತ್ತಾರೆ. ಆದರೆ ಅನುಷ್ಠಾನಗೊಂಡಿಲ್ಲ. ಭಾರತದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ರಷ್ಟು ಮೀಸಲಾತಿಯನ್ನು ನೀಡುವ ಮೂಲಕ ಸಮಾನತೆ ದೊರಕಿಸಿಕೊಡಲು ಪ್ರಯತ್ನ ನಡೆಸಲಾಗಿದೆ. ಕಾಂಗ್ರೆಸ್‌ ಸರ್ಕಾರ ಎಲ್ಲಾ ಹಂತದಲ್ಲಿಯೂ ಸ್ತ್ರೀಯರ ಅಭ್ಯುದಯಕ್ಕಾಗಿ ಅನೇಕ ಯೋಜನೆ ಗಳನ್ನು ರೂಪಿಸುವ ಮೂಲಕ ಸ್ತ್ರೀ ಶಕ್ತಿ ಸಂಘಗಳನ್ನು ಸ್ಥಾಪಿಸಿ ಮಹಿಳೆಯರು ಸ್ವಾವಲಂಬಿಗಳಾಗಲು ಉತ್ತೇಜನ ನೀಡಿದೆ. ಇದರಿಂದ ಸಹಕಾರ ಸಂಘಗಳ ಮೂಲಕ ಮಹಿಳೆ ಸೇರಿದಂತೆ ಇಡೀ ಸಮಾಜದ ಸುಧಾರಣೆಯಾಗುತ್ತಿದೆ ಎಂದರು.

ಮಹಿಳೆಯರು ಸದಸ್ಯರಾಗಿರುವ ಯಾವುದೇ ಬ್ಯಾಂಕ್‌ಗಳು ನಷ್ಟ ಅನುಭವಿಸಿಲ್ಲ. ಮಹಿಳೆಯರು ಪಡೆದ ಸಾಲವನ್ನುಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡು ಪ್ರಾಮಾಣಿಕವಾಗಿ ಸಾಲ ಮರುಪಾವತಿ ಮಾಡುವ ಮೂಲಕ ಬ್ಯಾಂಕ್‌ನ ಅಭಿವೃದ್ಧಿಗೆ ಕೊಡುಗೆ ನೀಡಿ ಆರ್ಥಿಕವಾಗಿ ಸದೃಢರಾಗುತ್ತಿರುವುದಲ್ಲದೆ ಇತರರಿಗೂ ಮಾದರಿಯಾಗಿದ್ದಾರೆ ಎಂದರು.

ಮತ್ತೂಂದೆಡೆ ದೇಶದಲ್ಲಿ ಇಂದಿಗೂ ಅಸಮಾನತೆ ಹಾಗೂ ಶೋಷಣೆ ಜೀವಂತವಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ. ಈ ಸಾಮಾಜಿಕ ಪಿಡುಗುಗಳ ಸಮಾಜದ ಅಭಿವೃದ್ಧಿಗೆ ಮಾರಕವಾಗಿವೆ. ಹೀಗಾಗಿ ವಿವಿಧ ರಂಗಗಳಲ್ಲಿರುವ ಅಸಮಾನತೆ ಹಾಗೂ ಶೋಷಣೆಯನ್ನು
ಹೋಗಲಾಡಿಸುವ ಅನಿವಾರ್ಯತೆಯಿದ್ದು, ಹಲವು ಬದಲಾವಣೆಯ ಯೋಜನೆಗಳನ್ನು ಜಾರಿಗೊಳಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

Advertisement

ವಸತಿ ಮಹಾಮಂಡಲ ಅಧ್ಯಕ್ಷ ಹಾಗೂ ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌ ಮಾತನಾಡಿ, ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದೆ. ಹೀಗಾಗಿ ಸ್ವ ಉದ್ಯೋಗ ಕೈಗೊಳ್ಳುವ ಮಹಿಳೆಯರಿಗೆ ವ್ಯವಸಾಯ ಸೇವಾ ಸಹಕಾರ ಬ್ಯಾಂಕ್‌ ಮತ್ತು ಜಿಲ್ಲಾ
ಕೇಂದ್ರ ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ ನೀಡಿ ಮಹಿಳೆಯರ ಜೀವನ ಮಟ್ಟ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ. ಜೊತೆಗೆ ಅವಕಾಶ ವಂಚಿತ ಆರ್ಥಿಕ ದುರ್ಬಲ ವರ್ಗದವರ ಸೂರಿನ ಕನಸಿಗೆ ರಾಜ್ಯ ವಸತಿ ಮಹಾಮಂಡಲ ಆಸರೆ ಒದಗಿಸುತ್ತಿದೆ ಎಂದು ತಿಳಿಸಿದರು.

ಹಿರಿಯ ನಟಿ ಡಾ. ಬಿ ಸರೋಜಾದೇವಿ ಮಾತನಾಡಿ, ಮಾಜಿ ಪ್ರಧಾನಿಗಳಾದ ನೆಹರೂ ಮತ್ತು ಇಂದಿರಾಗಾಂಧಿಯ ಬಗ್ಗೆ ನನಗೆ ಹೆಮ್ಮೆಯಿದೆ. ಇಂದಿರಾಗಾಂಧಿ ಜನ್ಮ ಶತಮಾನೋತ್ಸವ ಆಚರಣೆಯ ಜೊತೆಗೆ, ಮಹಿಳೆಯರಿಗೆ ಅನುಕೂಲವಾಗುವಂತಹ ಕೆಲಸ ಮಾಡಬೇಕು. ಸಾಧನೆ ಮಾಡಿದ ಗಣ್ಯರಿಗೆ ಪ್ರಶಸ್ತಿ ನೀಡುವ ಬದಲು ನಗದು ಬಹುಮಾನ ನೀಡಿದರೆ ಅದು ಅವರಿಗೆ ಉಪಯೋಗವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಈಗಿನ ಕೆಲ ರಾಜಕಾರಣಿಗಳು ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳು ಜನರನ್ನು ಮನವೊಲಿಸಿ ಮತ ಪಡೆದು ಗೆಲ್ಲುತ್ತಾರೆ. ನಂತರ ಜನರ ಕಷ್ಟಗಳಿಗೆ ಸ್ಪಂದಿಸುವ ಗೋಜಿಗೆ ಹೋಗುವುದಿಲ್ಲ. ಜನರ ಸಮಸ್ಯೆಗಳನ್ನು ಆಲಿಸುವುದಿಲ್ಲ. ಇನ್ನು ಮುಂದಾದರೂ ರಾಜಕರಾಣಿಗಳು ಮಾನವೀಯ ಮೌಲ್ಯಗಳನ್ನು ಬೆಳಸಿಕೊಳ್ಳಬೇಕು. ರಾಜಕಾರಣಿಗಳು ಜನರ ನೋವು ನಲಿವುಗಳನ್ನು ಅರ್ಥಮಾಡಿಕೊಂಡು ಸಕಾಲಕ್ಕೆ ಸ್ಪಂದಿಸಬೇಕು ಎಂದರು.

ಸಮಾರಂಭದಲ್ಲಿ ಹಿರಿಯ ನಟಿ ಪದ್ಮಭೂಷಣ ಡಾ.ಸರೋಜದೇವಿಯವರನ್ನು ಗೌರವಿಸಲಾಯಿತು. ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಜಿಲ್ಲಾವಾರು ಸಹಕಾರಿಗಳನ್ನು ಸನ್ಮಾನಿಸಲಾಯಿತು.ಅಷ್ಟೇ ಅಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಮಹಿಳೆಯರನ್ನ ವಿಶೇಷವಾಗಿ ಸನ್ಮಾನಿಸಲಾಯಿತು. ರಾಜ್ಯ ಸಹಕಾರ ವಸತಿ ಮಹಾಮಂಡಲ ಉಪಾಧ್ಯಕ್ಷರಾದ ಕಡ್ಲಿವೀರಣ್ಣ, ಹೆಚ್‌.ವಿ. ನಾಗರಾಜ್‌, ಸಹಕಾರ ಸಂಘಗಳ ನಿಬಂಧಕ ಎಂ.ಕೆ.ಅಯ್ಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. 

ಸೇರಿದವರಿಗೆ ಸೀರೆ,ತಟ್ಟೆ ಉಡುಗೊರೆ!
ಯಶವಂತಪುರ ಶಾಸಕ ಎಸ್‌.ಟಿ ಸೋಮಶೇಖರ್‌ ನೇತೃತ್ವದಲ್ಲಿ ನಡೆದ ಅಖೀಲ ಭಾರತ ಸಹಕಾರ ಸಪ್ತಾಹ ಸಮಾರಂಭದಲ್ಲಿ ಕ್ಷೇತ್ರದ ಜನ ಕಿಕ್ಕಿರಿದಿದ್ದರು. ಅದರಲ್ಲೂ  ವಿರಾರು ಮಂದಿ ಮಹಿಳೆಯರೂ ಪಾಲ್ಗೊಂಡಿದ್ದರು. ವೇದಿಕೆ ಭಾಷಣ ಮುಗಿಸಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ ಪರಮೇಶ್ವರ ತೆರಳುತ್ತಿದ್ದಂತೆ, ಶಾಸಕರಿಂದ ಮಹಿಳೆಯರಿಗೆ ಸೀರೆ ಹಾಗೂ ತಟ್ಟೆ ಸೇರಿದಂತೆ ಇನ್ನಿತರೆ ಗೃಹಪಯೋಗಿ ಉಡುಗೊರೆಗಳ ವಿತರಣೆ ಶುರುವಾಯಿತು. ಶಾಸಕರು ವಿತರಿಸಿದ ಉಚಿತ ಉಡುಗೊರೆ ಸ್ವೀಕರಿಸಲು ಜನ ಗುಂಪುಗುಂಪಾಗಿಬಿದ್ದರು. ಆಯಾ ವಾರ್ಡ್‌ನಂತೆ ಪ್ರತ್ಯೇಕವಾಗಿ ಕುಳ್ಳಿರಿಸಿ ಹಲವು ಮುಖಂಡರು ನೀಡುತ್ತಿದ್ದರೂ, ಮಹಿಳೆಯರು ನಾ ಮುಂದು, ತಾ ಮುಂದು ಎಂದು ಮುಗಿಬಿದ್ದಿದ್ದು ಉಡುಗೊರೆಗಳಿದ್ದ ಬ್ಯಾಗ್‌ಗಳನ್ನು ಪಡೆದುಕೊಂಡರು, ಕೆಲವರಿಗೆ ಸೀರೆ  ಭ್ಯವಾದರೇ, ಇನ್ನೂ ಕೆಲವರಿಗೆ ತಟ್ಟೆ ಸೇರಿದಂತೆ ಹಲವು ಗೃಹೋಪಯೋಗಿ ವಸ್ತುಗಳು ಲಭ್ಯವಾದವು.

ಯಶವಂತಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಎಸ್‌.ಟಿ. ಸೊಮ ಶೇಖರ್‌ ಗೆಲ್ಲುವುದು ಸೂರ್ಯ- ಚಂದ್ರ ಉದಯದಷ್ಟೇ ಸತ್ಯ. ಶಾಸಕರಾಗಿ ಗೆದ್ದ ಅವರನ್ನು ಕಾಂಗ್ರೆಸ್‌ ಸರ್ಕಾರದಲ್ಲಿ ಮಂತ್ರಿ ಮಾಡುವುದು ಖಚಿತವೆಂದು ಕೆಪಿಸಿಸಿ ಅಧ್ಯಕ್ಷನಾಗಿ ಭರವಸೆ ಕೊಡುತ್ತೇನೆ
 ●ಡಾ.ಜಿ.ಪರಮೇಶ್ವರ್‌ ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next