Advertisement

ಪ್ರತಿ ಗ್ರಾಮದಲ್ಲೂ ಸಹಪಂಕ್ತಿ ಭೋಜನ ನಡೆಯಲಿ

09:02 PM May 08, 2019 | Team Udayavani |

ಹುಣಸೂರು: ಸಾಮಾಜಿಕ ಕ್ರಾಂತಿ ಹರಿಕಾರ ಬಸವಣ್ಣನ ಜಯಂತಿ ಅಂಗವಾಗಿ ತಾಲೂಕಿನ ಕಟ್ಟೆಮಳಲವಾಡಿಯಲ್ಲಿ ಸಹ ಪಂಕ್ತಿ ಭೋಜನ ನಡೆಯಿತು.

Advertisement

ಗ್ರಾಮದ ಆದಿಜಾಂಬವ ಸಮುದಾಯದ ಆಂಜನೇಯರ ಮನೆಯಲ್ಲಿ ದಸಂಸ ವತಿಯಿಂದ ಅಯೋಜಿಸಿದ್ದ ಬಸವಜಯಂತಿ ಹಾಗೂ ಸಹಪಂಕ್ತಿ ಭೋಜನದಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಮಾತನಾಡಿ, ದೇಶದಲ್ಲಿ ಅಸ್ಪೃಶ್ಯತೆ, ಅಸಮಾನತೆ, ಜಾತೀಯತೆ ತೊಲಗದ ಹೊರತು ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ.

ಈ ನಿಟ್ಟಿನಲ್ಲಿ ಕಟ್ಟೆಮಳಲವಾಡಿಯಲ್ಲಿ ಇಂತಹದ್ದೊಂದು ಅರ್ಥಪೂರ್ಣ ಕಾರ್ಯಕ್ರಮ ನಡೆದಿರುವುದು ಸ್ವಾಗತಾರ್ಹ. ಈ ರೀತಿಯ ಕಾರ್ಯಕ್ರಮ ಪ್ರತಿ ಗ್ರಾಮದಲ್ಲೂ ನಡೆದರೆ ಜಾತೀಯತೆ, ಅಸ್ಪೃಶ್ಯತೆ ತೊಲಗಲು ಸಾಧ್ಯ. ಇಂತಹ ಅನಿಷ್ಟ ಪದ್ಧಗಳ ವಿರುದ್ದ ಧ್ವನಿ ಎತ್ತ ಬೇಕಾದ್ದೂ ನಮ್ಮೆಲ್ಲರ ಆದ್ಯತೆಯಾಗಬೇಕು ಎಂದರು.

ಅಸ್ಪೃಶ್ಯತೆ ವಿರುದ್ಧ ಧ್ವನಿ: ಬ್ರಾಹ್ಮಣ ಸಮಾಜದಲ್ಲಿ ಹುಟ್ಟಿದ ಬಸವಣ್ಣ ಅಂದೇ ಅಸ್ಪೃಶ್ಯತೆ ವಿರುದ್ಧ ತನ್ನದೇ ಆದ ರೀತಿಯಲ್ಲಿ ದೊಡ್ಡ ಸಾಮಾಜಿಕ ಕ್ರಾಂತಿ ನಡೆಸುವ ಮೂಲಕ ಶೋಷಿತರ ಹಾಗೂ ದಲಿತರ ಸಮುದಾಯಗಳ ಜನರ ಬಾಳಿನಲ್ಲಿ ಬೆಳಕು ಚೆಲ್ಲಿದರು ಎಂದು ಸ್ಮರಿಸಿದರು.

ಕಟ್ಟೆಮಳಲವಾಡಿಯ ಬ್ರಾಹ್ಮಣ ಸಮಾಜದ ಯಜಮಾನರಾದ ಕೇಶವಮೂರ್ತಿ, ರಾಮಮೂರ್ತಿ ಮಾತನಾಡಿ, ಅಸ್ಪೃಶ್ಯತೆ ನಿರ್ಮೂಲನೆ ಆಗಬೇಕು. ಎಲ್ಲರೂ ಸಮಾನತೆಯಿಂದ, ಸೋದರತೆಯಿಂದ ಗ್ರಾಮಗಳಲ್ಲಿ ಬದುಕುವ ವಾತಾವರಣ ನಿರ್ಮಾಣವಾಗಬೇಕು ಎಂದರು.

Advertisement

ಕಾರ್ಯಕ್ರಮದಲ್ಲಿ ಕಟ್ಟೆಮಳಲವಾಡಿ ಯಜಮಾನರಾದ ಕೃಷ್ಣಶೆಟ್ಟಿ, ಅಂಕಯ್ಯ, ಶಂಕ್ರಯ್ಯ, ಪರಸಯ್ಯ, ಗ್ರಾಪಂ ಸದಸ್ಯರಾದ ಆಂಜನೇಯ, ದೇವರಾಜು, ಶಿವು, ಗಾಯತ್ರಿ, ಮುಖಂಡರಾದ ಬಸವಲಿಂಗಯ್ಯ, ಪಿ.ಪುಟ್ಟರಾಜು, ಮುಸ್ಲಿಂ ಸಮಾಜದ ನಸ್ರುಲ್ಲಾಖಾನ್‌, ಅನ್ಸರ್‌, ಅಗ್ರಹಾರದ ಸಾಕಯ್ಯ, ಮುಖಂಡರಾದ ಸಂತೋಷ,

ದೇವೇಂದ್ರ, ಗಜೇಂದ್ರ, ವೆಂಕಟೇಶ, ನಟರಾಜು, ಕಿರಣ, ರಜನಿ, ಗಾರೆ ಕೆಲಸ ಸಂಘದ ಸೋಮಶೇಖರಮೂರ್ತಿ, ಮಹಿಳೆಯರು ಸೇರಿದಂತೆ ಹಲವರು ಸಹಪಂಕ್ತಿ ಭೋಜನ ಮಾಡಿದರು. ಹೊನ್ನೇನಹಳ್ಳಿ ವಸಂತ ಕಲಾ ತಂಡದವರು ಜಾಗೃತಿ ಹಾಡುಹಾಡಿದರು. ಇದೇ ವೇಳೆ 30 ನಿರ್ಗತಿಕ ಮಹಿಳೆಯರಿಗೆ ಬಟ್ಟೆ ವಿತರಿಸಲಾಯಿತು.

ದಲಿತರ ಮನೆಯಲ್ಲಿ ಬಸವ ಜಯಂತಿ: ಕಾರ್ಯಕ್ರಮದ ಆಯೋಜಕ ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ನಿಂಗರಾಜ್‌ ಮಲ್ಲಾಡಿ ಮಾತನಾಡಿ, ಬಸವಣ್ಣನ ಜಯಂತಿಯನ್ನು ದಲಿತರ ಮನೆಯಲ್ಲಿ ಆಚರಣೆ ಮಾಡುತ್ತಿರುವುದು ದಲಿತ ಸಮಾಜಕ್ಕೆ ಉತ್ತಮ ಸಂದೇಶ ನೀಡಿದಂತಾಗಿದೆ.

ಈ ನಿಟ್ಟಿನಲ್ಲಿ ಕಳೆದ ನಾಲ್ಕು ವರ್ಷಗಳಿಂದ ದಲಿತ ಸಂಘರ್ಷ ಸಮಿತಿಯು ತಾಲೂಕಿನ ಬಿಳಿಗೆರೆ, ಹುಣಸೂರು ನಗರ ಮತ್ತಿತರೆಡೆಗಳಲ್ಲಿ ಸಹ ಪಂಕ್ತಿ ಭೋಜನ ಆಯೋಜಿಸುತ್ತಿದೆ. ಅಸ್ಪೃಶ್ಯತೆಯನ್ನು ಕೇವಲ ಕಾನೂನಿಂದ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ.

ಸಮಾಜದ ಎಲ್ಲಾ ಜಾತಿಯ ಜನರಿಂದ ಈ ಅನಿಷ್ಟ ಪದ್ಧತಿ ತೊಲಗಿಸಲು ಸಾಧ್ಯವಿದೆ. ದಲಿತರು ಇಂದಿಗೂ ಕೆಲ ಗ್ರಾಮಗಳಲ್ಲಿ ದೇವಸ್ಥಾನಗಳಿಗೆ, ಹೋಟೆಲ್‌ಗ‌ಳಿಗೆ, ಕ್ಷೌರದ ಅಂಗಡಿಗಳಲ್ಲಿ ನಿರ್ಬಂಧ ಹೇರಲಾಗಿದೆ. ಇದರ ವಿರುದ್ಧ ಇತರೆ ಸಮಾಜದ ಜನರು ಧ್ವನಿ ಎತ್ತಿ ಸಾಮಾಜಿಕ ನ್ಯಾಯ ಕೊಡಿಸಬೇಕಿದೆ ಎಂದು ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next